ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಈ ನಟಿ ಮತ್ತೆ ಕಿರುತೆರೆಗೆ ಬರುತ್ತಾರಾ? ಯಾವ್ಯಾವ ಚಿತ್ರಗಳಲ್ಲಿ ನಟಿಸಿದ್ದಾರೆ ಗೊತ್ತೇ?
ಕಿರುತೆರೆಯ ಮೂಲಕ ಬಣ್ಣದ ಲೋಕದ ನಂಟು ಬೆಳೆಸಿಕೊಂಡ ಅನೇಕರು ಮುಂದೆ ಹಿರಿತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ತೀರಾ ಅಪರೂಪವಾದ ಸಂಗತಿ. ಆ ಸಾಲಿಗೆ ಹೊಸದಾಗಿ ಸೇರಿದ ನಟಿಯ ಹೆಸರು ಸಮೀಕ್ಷಾ. ಸಮೀಕ್ಷಾ ಎಂದರೆ ಯಾರು ಎಂದು ಆಲೋಚಿಸುತ್ತಿದ್ದೀರಾ? ನಿಮಗೆ ಕೊಂಚ ಕನ್‌ಫ್ಯೂಸ್ ಆಗುವುದು ಸಹಜ. ಯಾಕೆಂದರೆ, ಕಿರುತೆರೆ ಲೋಕದಲ್ಲಿ ಆಕೆ ಶನಾಯ ಆಗಿ ಫೇಮಸ್ಸು ಆಗಿದ್ದಾಕೆ.
ವರ್ಷಗಳ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸುಬ್ಬಲಕ್ಷ್ಮಿ ಸಂಸಾರ' ಧಾರಾವಾಹಿಯಲ್ಲಿ ನಾಯಕ ಗುರುಮೂರ್ತಿಯ ಪ್ರೇಯಸಿ ಶನಾಯ ಆಗಿ ಅಭಿನಯಿಸಿದ್ದ ಈಕೆ ಆ ಪಾತ್ರದ ಮೂಲಕ ಜನಪ್ರಿಯತೆಯನ್ನು ಗಿಟ್ಟಿಸಿಕೊಂಡಿದ್ದರು. ಮೊದಲ ಬಾರಿಗೆ ನೆಗೆಟಿವ್ ಶೇಡ್ ಇರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸಮೀಕ್ಷಾ ತಮ್ಮ ಮುದ್ದಾದ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದರು.

ಮುಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮೂರು ಗಂಟು' ಧಾರಾವಾಹಿಯಲ್ಲಿ ನಾಯಕಿಯಾಗಿ ಕಮಾಲ್ ಮಾಡಿದ ಈಕೆ ಅದರಲ್ಲಿ ಶ್ರಾವಣಿ, ಪಾವನಿ ಎನ್ನುವ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮೀನಾಕ್ಷಿ ಮದುವೆ' ಧಾರಾವಾಹಿಯಲ್ಲಿ ನಾಯಕಿ ಮೀನಾಕ್ಷಿ ಆಗಿ ಅಭಿನಯಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ಸಮೀಕ್ಷಾಗೆ ಮೊದಲಿನಿಂದಲೂ ನಟಿಯಾಗಬೇಕು ಎಂಬ ಕನಸಿತ್ತು.
ಮೊದಲ ಆಡಿಶನ್‌ನಲ್ಲಿಯೇ ಪಾಸ್ ಆದ ಈಕೆ ಮೊದಲ ಧಾರಾವಾಹಿಯಲ್ಲಿಯೇ ನಾಯಕಿಯಾಗಿ ನಟಿಸುವ ಅವಕಾಶವನ್ನು ಪಡೆದ ಅದೃಷ್ಟವಂತೆ. ತದ ನಂತರ 'ಸುಬ್ಬಲಕ್ಷ್ಮಿ ಸಂಸಾರ' ಧಾರಾವಾಹಿಯ ಶನಾಯ ಆಗಿ ಕಾಣಿಸಿಕೊಂಡ ಸಮೀಕ್ಷಾಗೆ ಆರಂಭದ ದಿನಗಳಲ್ಲಿ ಖಳನಾಯಕಿಯಾಗಿ ನಟಿಸಲು ಭಯವಿತ್ತು. ನಿರ್ದೇಶಕಿ ಸ್ವಪ್ನಾ ಕೃಷ್ಣ ಅವರು ನೀಡಿದ ಪ್ರೋತ್ಸಾಹದಿಂದ ಶನಾಯಳಾಗಿ ನಟಿಸಿದ ಈಕೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು.

'ದಿ ಟೆರರಿಸ್ಟ್' ಸಿನಿಮಾದಲ್ಲಿ ರಾಗಿಣಿ ದ್ವಿವೇದಿ ತಂಗಿಯಾಗಿ ನಟಿಸುವ ಮೂಲಕ ಹಿರಿತೆರೆಗೆ ಪಾದಾ ಮಾಡಿದರು ಸಮೀಕ್ಷಾ. ಮುಂದೆ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ '96' ಸಿನಿಮಾದಲ್ಲಿ ಜೂನಿಯರ್ ಜಾನು ಪಾತ್ರದಲ್ಲಿ ಈಕೆ ಅಭಿನಯಿಸಿದ್ದರು. ದರ್ಶಿತ್ ಭಟ್ ನಿರ್ದೇಶನದ 'ಫ್ಯಾನ್' ಸಿನಿಮಾದಲ್ಲಿ ಬಣ್ಣ ಹಚ್ಚಿರುವ ಈಕೆ ವಸಿಷ್ಠ ಸಿಂಹ ನಟನೆಯ 'love ಲಿ' ಸಿನಿಮಾದಲ್ಲಿ ನಟಿಸಿದ್ದಾರೆ.
ಕಳೆದ ವಾರವಷ್ಟೇ ತೆರೆ ಕಂಡಿರುವ 'ರಾನಿ' ಸಿನಿಮಾದಲ್ಲಿಯೂ ಪ್ರಮುಖ ಪಾತ್ರದಲ್ಲಿ ಸಮೀಕ್ಷಾ ಕಾಣಿಸಿಕೊಂಡಿದ್ದಾರೆ. 'ರಾನಿ' ಸಿನಿಮಾದಲ್ಲಿ ಮುಗ್ಧ ಹುಡುಗಿಯಾಗಿ ಮಿಂಚಿರುವ ಈಕೆ ಆ ಪಾತ್ರಕ್ಕಾಗಿ ಕೊಂಚ ತಯಾರಿಯನ್ನು ಕೂಡಾ ಮಾಡಿಕೊಂಡಿದ್ದರು. ಮಾತ್ರವಲ್ಲದೇ ಒಂದೆರಡು ಫೈಟ್ ಸೀನ್‌ಗಳಲ್ಲಿಯೂ ಆಕೆ ಕಾಣಿಸಿಕೊಂಡಿದ್ದರು.
ಈಗಾಗಲೇ ಕಿರುತೆರೆಯಲ್ಲಿ ನಾಯಕಿ, ಖಳನಾಯಕಿ ಹಾಗೂ ದ್ವಿಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಸಮೀಕ್ಷಾ ಅವರಿಗೂ ಸಿನಿಮಾದಲ್ಲಿಯೂ ವಿಭಿನ್ನ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮಹಾದಾಸೆ. ಒಟ್ಟಿನಲ್ಲಿ ಸದ್ಯ ಸಿನಿಮಾದಲ್ಲಿ ಮೋಡಿ ಮಾಡುತ್ತಿರುವ ಸಮೀಕ್ಷಾ ಮತ್ತೆ ಕಿರುತೆರೆಗೆ ಬರುತ್ತಾರಾ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.


Click it and Unblock the Notifications











