'ಮಿಥುನ ರಾಶಿ' ಧಾರಾವಾಹಿ ನಟಿಯನ್ನು ಕೈಬೀಸಿ ಕರೆದ 'ಕರಾವಳಿ'; ಸಂಪದಾ ಹಿನ್ನೆಲೆಯೇನು?
ಸೀರಿಯಲ್ ಮೂಲಕ ನಟನೆಗೆ ಕಾಲಿಟ್ಟ ಅನೇಕ ನಟ ನಟಿಯರು ಮುಂದೆ ಹಿರಿತೆರೆಯಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ಸುದೀಪ್, ದರ್ಶನ್, ಡಾರ್ಲಿಂಗ್ ಕೃಷ್ಣ ಯಶ್ ಮುಂತಾದ ನಟರು ಕಿರುತೆರೆ ಮೂಲಕವೇ ನಮ್ಮ ನಟನಾ ಪಯಣ ಶುರು ಮಾಡಿದರು. ಇನ್ನು ನಟಿಯರಾದ ರಾಧಿಕಾ ಪಂಡಿತ್, ಅದಿತಿ ಪ್ರಭುದೇವ, ನಿತ್ಯಾ ರಾಮ್ ಮುಂತಾದ ಹಿರಿತೆರೆ ನಟಿಯರ ಬಣ್ಣದ ಪಯಣ ಶುರುವಾಗಿದ್ದು ಕೂಡಾ ಕಿರುತೆರೆಯಿಂದ.
ಅಂದ ಹಾಗೇ ಕಿರುತೆರೆಯ ಮತ್ತೋರ್ವ ನಟಿ ಇದೀಗ ಹಿರಿತೆರೆಯಲ್ಲಿ ಕಮಾಲ್ ಮಾಡುತ್ತಿದ್ದಾರೆ. ಕೇವಲ ಒಂದೇ ಒಂದು ಧಾರಾವಾಹಿಯಲ್ಲಿ, ಅದೂ ಪೋಷಕ ಪಾತ್ರದ ಮೂಲಕ ಗಮನ ಸೆಳೆದಿದ್ದ ಈ ಚೆಂದುಳ್ಳಿ ಚೆಲುವೆ ಇದೀಗ ನಟಿಯಾಗಿ ಭಡ್ತಿ ಪಡೆದು ಹಿರಿತೆರೆಯಲ್ಲಿ ನಟನಾ ಛಾಪನ್ನು ಪಸರಿಸುತ್ತಿದ್ದಾರೆ. ಆಕೆ ಬೇರಾರೂ ಅಲ್ಲ, ಸಂಪದ.

'ಮಿಥುನ ರಾಶಿ' ಧಾರಾವಾಹಿಯಲ್ಲಿ ನಟಿಸಿರುವ ನಟಿ ಸಂಪದಾ ಹೊಸ ಸಿನಿಮಾ ಕಡೆಗೆ ತಿರುಗುತ್ತಿದ್ದಾರೆ. ಈಗಾಗಲೇ ಕನ್ನಡದ ಜೊತೆಗೆ ತೆಲುಗು ಸಿನಿಮಾಗಳಲ್ಲಿ ಅಭಿನಯಿಸಿರುವ ಇವರು ಸದ್ಯಕ್ಕೆ 'ಕರಾವಳಿ' ಸಿನಿಮಾದ ಬಗ್ಗೆ ಫೋಕಸ್ ಮಾಡಿದ್ದಾರೆ. ಸ್ಯಾಂಡಲ್‌ವುಡ್‌ನ ಡೈನಾಮಿಕ್ ಪ್ರಿನ್ಸ್ ನಟ ಪ್ರಜ್ವಲ್ ದೇವರಾಜ್ ಅವರ ನಾಯಕತ್ವದಲ್ಲಿ ಮೂಡಿಬರುತ್ತಿರುವ 'ಕರಾವಳಿ' ಸಿನಿಮಾ ನಾಯಕಿಯಾಗಿ ನಟಿ ಸಂಪದಾ ಆಯ್ಕೆಯಾಗಿದ್ದಾರೆ.
ಅಂದ ಹಾಗೆ 'ಕರಾವಳಿ' ಸಿನಿಮಾ ಕರಾವಳಿಯ ಕಥೆಯನ್ನು ಹೊಂದಿದ್ದು ಇದರಲ್ಲಿ ಕಂಬಳ ಒಂದು ಪ್ರಮುಖ ಆಕರ್ಷಣೆಯಾಗಿದೆ. ಈ ಸಿನಿಮಾದಲ್ಲಿ ಪಶು ವೈದ್ಯ ಆಗಿ ಕಾಣಿಸಿಕೊಳ್ಳುತ್ತಿರುವ ನಟಿ ಸಂಪದಾ ಕ್ಯೂಟ್ ಆಗಿ ಅಷ್ಟೇ ಅಲ್ಲದೇ ಮುಖ್ಯ ಪಾತ್ರ ಒಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. "ಕಂಬಳ ನಡೆಯುತ್ತದೆ ಎಂದರೆ ಪ್ರಾಣಿಗಳು ಇರುತ್ತವೆ. ಎತ್ತು ಹಾಗೂ ಇತರ ಪ್ರಾಣಿಗಳು ಇದ್ದಲ್ಲಿ ಪಶು ವೈದ್ಯರು ಇರಲೇಬೇಕು" ಎಂದು ತಮ್ಮ ಪಾತ್ರದ ಬಗ್ಗೆ ಸಂಕ್ಷಿಪ್ತವಾಗಿ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ನಟಿ ಸಂಪದಾ ಹೇಳಿದ್ದಾರೆ .

ನಿರ್ದೇಶಕ ಗುರುದತ್ ಗಾಣಿಗ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಕರಾವಳಿ ಚಿತ್ರಕ್ಕೆ ಇದೇ ಫೆಬ್ರವರಿ 20 ರಿಂದ ಚಿತ್ರೀಕರಣ ಆರಂಭವೂ ಆಗಿದೆ. ಈ ಚಿತ್ರ ಈಗಾಗಲೇ ಬಹಳಷ್ಟು ಕುತೂಹಲ ಹಾಗೂ ಸಂಚಲನ ಮೂಡಿಸಿದೆ. ಈಗಾಗಲೇ ಚಿತ್ರ ತಂಡ ನಟಿ ಸಂಪದಾ ಅವರ ಫಸ್ಟ್ ಲುಕ್ ರಿಲೀಸ್ ಮಾಡಿದ್ದು, ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಂಪದಾ ಅವರ ಲುಕ್ ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ.
ಅಂದಹಾಗೆ ಈಕೆ ಈ ಮೊದಲು ನಿಖಿಲ್ ಕುಮಾರಸ್ವಾಮಿ ಅಭಿನಯದಲ್ಲಿ ಮೂಡಿ ಬಂದ 'ರೈಡರ್' ಸಿನಿಮಾದಲ್ಲಿಯೂ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಿಥುನರಾಶಿ' ಧಾರಾವಾಹಿಯಲ್ಲಿ ನಾಯಕಿ ರಾಶಿಯ ತಂಗಿ ಸುರಕ್ಷಾ ಆಗಿ ನಟಿಸುವ ಮೂಲಕ ಕಿರುತೆರೆಗೆ ನಟಿ ಸಂಪದಾ ಕಾಲಿಟ್ಟಿದ್ದರು.
'ಮಿಥುನರಾಶಿ' ಧಾರಾವಾಹಿಯಲ್ಲಿ ನೆಗೆಟಿವ್ ರೋಲ್ ಮೂಲಕ ಗಮನ ಸೆಳೆದಿದ್ದ ಈಕೆ ಮೊದಲ ಧಾರಾವಾಹಿಯಲ್ಲಿಯೇ ವೀಕ್ಷಕರ ಗಮನ ಸೆಳೆದಿದ್ದರು. ಮುಂದೆ 'ರೈಡರ್' ಸಿನಿಮಾ ಮೂಲಕ ಹಿರಿತೆರೆಗೆ ಪಾದಾರ್ಪಣೆ ಮಾಡಿದ ಈಕೆ ತೆಲುಗು ಸಿನಿಮಾದಲ್ಲಿಯೂ ಮಿಂಚಿದ್ದರು. ಮಾಡೆಲಿಂಗ್ ಮೂಲಕ ಬಣ್ಣದ ಲೋಕದ ನಂಟು ಬೆಳೆಸಿಕೊಂಡಿರುವ ಈಕೆ ನಾಗತಿಹಳ್ಳಿ ಚಂದ್ರಶೇಖರ್ ಟೆಂಟ್ ಸಿನಿಮಾ ಸಂಸ್ಥೆಗೆ ಸೇರಿ ನಟನೆಯ ಆಗುಹೋಗುಗಳನ್ನು ತಿಳಿದುಕೊಂಡರು. ಇದೀಗ ಹಿರಿತೆರೆಯಲ್ಲಿ ಮೋಡಿ ಮಾಡಲಿರುವ ಈಕೆ ಮತ್ತೆ ಕಿರುತೆರೆಗೆ ಬರುತ್ತಾರಾ ಎಂದು ಕಾದುನೋಡಬೇಕಾಗಿದೆ.


Click it and Unblock the Notifications











