Sangeetha Bhat: 'ಲೈಫ್ ಸೂಪರ್ ಗುರು' ಅಂತ 'ಕಿಸ್ಮತ್' ಹುಡುಕಿ ಸಿನಿಮಾಗೆ ಬಂದ ಸಂಗೀತಾ ಜರ್ನಿ ಹೇಗಿದೆ?
ಕಸ್ತೂರಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪಂಜರದ ಗಿಳಿ' ಧಾರಾವಾಹಿಯಲ್ಲಿ ನಟಿಸುವ ಮೂಲಕ ಬಣ್ಣದ ಲೋಕದ ನಂಟು ಬೆಳೆಸಿಕೊಂಡಿರುವ ಸಂಗೀತಾ ಭಟ್ ಸದ್ಯ ಹಿರಿತೆರೆಯಲ್ಲಿ ಬ್ಯುಸಿ. ಅದ್ಭುತ ನಟನೆಯ ಮೂಲಕ ಕಿರುತೆರೆಯ ಜೊತೆಗೆ ಹಿರಿತೆರೆಯಲ್ಲಿಯೂ ನಟನಾ ಕಂಪನ್ನು ಪಸರಿಸುತ್ತಿರುವ ಸಂಗೀತಾ ಭಟ್ ಇತ್ತೀಚೆಗಷ್ಟೇ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಯಡಿಯೂರು ಶ್ರೀ ಸಿದ್ಧಲಿಂಗೇಶ್ವರ' ಧಾರಾವಾಹಿಯಲ್ಲಿ ನಾಗಿಣಿಯಾಗಿ ಕಾಣಿಸಿಕೊಂಡಿದ್ದರು.
ಅಂದ ಹಾಗೇ ಸಂಗೀತಾ ಭಟ್ ಅವರಿಗೂ ಸ್ಟಾರ್ ಸುವರ್ಣಗೂ ಇದು ಹೊಸ ಭಾಂದವ್ಯವೇನಲ್ಲ.. ಬದಲಿಗೆ ತುಂಬಾ ಹಳೆಯ ನಂಟು ಇದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಭಾಗ್ಯವಂತರು' ಧಾರಾವಾಹಿಯಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು ಸಂಗೀತಾ ಭಟ್. ತದ ನಂತರ ಹಿಂತಿರುಗಿ ನೋಡದ ಈಕೆ ಮುಂದೆ ಉದಯ ಟಿವಿಯ 'ಚಂದ್ರಚಕೋರಿ', ಸುವರ್ಣ ವಾಹಿನಿಯ 'ನೀಲಿ', ಕಸ್ತೂರಿ ವಾಹಿನಿಯ 'ಚಂದ್ರಮುಖಿ' ಧಾರಾವಾಹಿಗಳಲ್ಲಿ ಅಭಿನಯಿಸಿದರು.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಲೈಫ್ ಸೂಪರ್ ಗುರು' ಎನ್ನುವ ರಿಯಾಲಿಟಿ ಶೋವಿನಲ್ಲಿಯೂ ಗುರುತಿಸಿಕೊಂಡಿದ್ದರು. ಆ ಬಳಿಕ ತಮಿಳಿನ 'ಧೂ' ಸಿನಿಮಾ ಮೂಲಕ ಹಿರಿತೆರೆಗೆ ಪಾದಾರ್ಪಣೆ ಮಾಡಿದ ಸಂಗೀತಾ ಭಟ್ ಮುಂದೆ 'ಪ್ರೀತಿ ಗೀತಿ ಇತ್ಯಾದಿ' ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಸಖತ್ ಸದ್ದು ಮಾಡಿದರು.
ಮುಂದೆ 'ಮಾಮು ಟೀ ಅಂಗಡಿ', 'ಎರಡನೇ ಸಲ', 'ದಯವಿಟ್ಟು ಗಮನಿಸಿ', 'ಕಿಸ್ಮತ್', 'ಅನುಕ್ತ', 'ಕಪಟ ನಾಟಕ ಪಾತ್ರಧಾರಿ', 'ಅಳಿದು ಉಳಿದವರು', 'ಆದ್ಯ', 'ರೂಪಾಂತರ' ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರು. ಇದರ ಜೊತೆಗೆ ವೈಭವ್ ಪ್ರಶಾಂತ್ ನಿರ್ದೇಶನದ 'ಕ್ಲಾಂತ' ಸಿನಿಮಾದಲ್ಲಿಯೂ ಈಕೆ ಅಭಿನಯಿಸಿದ್ದು ಸಿನಿಮಾದ ಟೀಸರ್ ಇತ್ತೀಚೆಗೆ ರಿಲೀಸ್ ಆಗಿದ್ದು ಮೆಚ್ಚುಗೆಯ ಮಹಾಪೂರವೇ ಹರಿದುಬಂದಿತ್ತು.

ಸದ್ಯ ಹಿರಿತೆರೆಯಲ್ಲಿ ಒಂದಾದ ಮೇಲೆ ಒಂದರಂತೆ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಸಂಗೀತಾ ಭಟ್ ಅವರ ಪತಿ ಕೂಡಾ ಇದೀಗ ಕಿರುತೆರೆಯಲ್ಲಿ ಫೇಮಸ್ಸು! ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಭಾಗ್ಯಲಕ್ಷ್ಮಿ' ಧಾರಾವಾಹಿಯಲ್ಲಿ ನಾಯಕ ತಾಂಡವ್ ಸೂರ್ಯವಂಶಿ ಆಗಿ ಅಭಿನಯಿಸುತ್ತಿರುವ ಸುದರ್ಶನ್ ರಂಗಪ್ರಸಾದ್ ಏಕಕಾಲಕ್ಕೆ ಪಾಸಿಟಿವ್ ಹಾಗೂ ನೆಗೆಟಿವ್ ಪಾತ್ರದಲ್ಲಿ ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. ಉತ್ತಮ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಇವರು ಈ ವರ್ಷದ ಕಲರ್ಸ್ ಕನ್ನಡ ಅನುಬಂಧ ಅವಾರ್ಡ್ಸ್ ನಲ್ಲಿ 'ಜನ ಮೆಚ್ಚಿದ ಶಕುನಿ' ಪ್ರಶಸ್ತಿ ಪಡೆದಿದ್ದಾರೆ.


Click it and Unblock the Notifications











