ಧಾರಾವಾಹಿಯಿಂದ ಹೊರಬಂದ ಮತ್ತೊಬ್ಬ ನಟಿ: 'ಜನನಿ' ಸೀರಿಯಲ್‌ಗೆ ಶಿಲ್ಪಾ ಅಯ್ಯರ್ ಗುಡ್‌ಬೈ
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಜನನಿ' ಧಾರಾವಾಹಿಯಲ್ಲಿ ಅನಘಾ ಆಗಿ ಶಿಲ್ಪಾ ಅಯ್ಯರ್ ಅಭಿನಯಿಸುತ್ತಿದ್ದರು. ಇದೀಗ ಕಾರಣಾಂತರಗಳಿಂದ ತಮ್ಮ ಪಾತ್ರಕ್ಕೆ ವಿದಾಯ ಹೇಳಿದ್ದಾರೆ. ಇತ್ತೀಚೆಗಷ್ಟೇ ಸಚಿನ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದ ನಟಿ ಶಿಲ್ಪಾ ಅಯ್ಯರ್ ಇಷ್ಟು ದಿನಗಳ ಕಾಲ ಅನಘಾ ಪಾತ್ರದ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದರು. ಈಗ ಅನಘಾ ಪಾತ್ರದಿಂದ ಹೊರಬಂದಿದ್ದಾರೆ.
ಅಂದ ಹಾಗೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಒಲವಿನ ನಿಲ್ದಾಣ' ಧಾರಾವಾಹಿಯಲ್ಲಿ ನಾಯಕ ಸಿದ್ಧಾಂತ್ ಅತ್ತಿಗೆ ಸಂಗೀತಾ ಆಗಿಯೂ ಶಿಲ್ಪಾ ಅಯ್ಯರ್ ಅಭಿನಯಿಸುತ್ತಿದ್ದರು. ಇದೀಗ ಅವರ ಸಂಗೀತಾ ಪಾತ್ರಕ್ಕೂ ವಿದಾಯ ಹೇಳಿದ್ದರು.

ನಿರೂಪಕಿಯಾಗಿ ಕಿರುತೆರೆಗೆ ಎಂಟ್ರಿ
ಪದವಿ ವಿದ್ಯಾಭ್ಯಾಸದ ಬಳಿಕ ಖಾಸಗಿ ನ್ಯೂಸ್ ಚಾನೆಲ್‌ನಲ್ಲಿ ಸಿನಿಮಾ ಕಾರ್ಯಕ್ರಮದ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದರು. ಆ ಬಳಿಕ ಕಿರುತೆರೆಗೆ ಕಾಲಿಟ್ಟ ಶಿಲ್ಪಾ ಅಯ್ಯರ್ ವಾರ್ತಾವಾಚಕಿಯಾಗಿ ವೃತ್ತಿ ಜೀವನ ಶುರು ಮಾಡಿದರು. 'ಶಾಂತಂ ಪಾಪಂ' ಧಾರಾವಾಹಿಯ ಮೂಲಕ ನಟನಾ ಪಯಣ ಶುರು ಮಾಡಿದ ಶಿಲ್ಪಾ ಅಯ್ಯರ್ ನಂತರ ಹಿಂತಿರುಗಿ ನೋಡಿದ್ದಿಲ್ಲ.
ಸಾಲು ಸಾಲು ಧಾರಾವಾಹಿಗಳಲ್ಲಿ ನಟನೆ
'ಬ್ರಹ್ಮಗಂಟು', 'ನಾಗಮಂಡಲ', ಮಹಾದೇವಿ ಧಾರಾವಾಹಿಗಳಲ್ಲಿ ನಟಿಸಿದ್ದ ಈಕೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕಸ್ತೂರಿ ನಿವಾಸ' ಧಾರಾವಾಹಿಯಲ್ಲಿ ಕಿರಿಸೊಸೆ ನಾಗವೇಣಿಯಾಗಿ ಅಭಿನಯಿಸಿ ವೀಕ್ಷಕರ ಮನ ಸೆಳೆದಿದ್ದಾರೆ. ಇದರ ಜೊತೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಜೊತೆಜೊತೆಯಲಿ' ಧಾರಾವಾಹಿಯಲ್ಲಿಯೂ ನಟಿಸಿದ್ದರು.
ಕಿರುತೆರೆ ವೀಕ್ಷಕರ ಮನ ಸೆಳೆದ ಬೆಡಗಿ
'ಜೊತೆಜೊತೆಯಲಿ' ಧಾರಾವಾಹಿಯಲ್ಲಿ ಮಾನ್ಸಿ ಪಾತ್ರಕ್ಕೆ ಜೀವ ತುಂಬಿದ್ದ ಶಿಲ್ಪ ಅಯ್ಯರ್ ಆ ಪಾತ್ರದ ಮೂಲಕ ಕರುನಾಡಿನಾದ್ಯಂತ ಗುರುತಿಸಿಕೊಂಡಿದ್ದರು. ಮಾತ್ರವಲ್ಲದೇ ಆ ಧಾರಾವಾಹಿಯಲ್ಲಿ ಅವರು ಹೇಳುತ್ತಿದ್ದ 'ಬ್ರೋ ಇನ್ ಲಾ' ಡೈಲಾಗ್ ಕೂಡಾ ಕಿರುತೆರೆ ಜಗತ್ತಿನಲ್ಲಿ ಹೊಸ ಹವಾ ಸೃಷ್ಟಿ ಮಾಡಿತ್ತು.

ಗಾಯಕಿಯೂ ಹೌದು!
'ಮೈಲಾಪುರಿ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಹಿರಿತೆರೆಗೆ ಪಾದಾರ್ಪಣೆ ಮಾಡಿದ ಶಿಲ್ಪ ಅಯ್ಯರ್ ಸಣ್ಣ ವಯಸ್ಸಿನಿಂದಲೂ ಕರ್ನಾಟಕ ಸಂಗೀತದತ್ತ ವಿಶೇಷ ಒಲವು ಹೊಂದಿದ್ದರು. ಗಾಯಕಿಯಾಗಬೇಕು ಎಂಬ ಆಸೆ ಕಂಡಿದ್ದ ಶಿಲ್ಪ ಅಯ್ಯರ್ ವಿದ್ವಾನ್ ಮಾರುತಿ ಪ್ರಸಾದ್ ಅವರ ಬಳಿಯಿಂದ ಶಾಸ್ತ್ರೋಕ್ತವಾಗಿ ಸಂಗೀತ ಕಲಿತಿದ್ದಾರೆ.


Click it and Unblock the Notifications











