ಧಾರಾವಾಹಿಯಿಂದ ಕಿರುತೆರೆ ನಟಿ ಹರ್ಷಿತಾ ಔಟ್.. ಶಿಲ್ಪಾ ಎಂಟ್ರಿ; ಯಾವ ಸೀರಿಯಲ್? ಯಾವ ಪಾತ್ರ?
'ಶ್ರಾವಣಿ ಸುಬ್ರಮಣ್ಯ' ಧಾರವಾಹಿಯಲ್ಲಿ ಪ್ರಮುಖ ಪಾತ್ರಧಾರಿಯ ಬದಲಾವಣೆಯಾಗಿದೆ. ಹೌದು, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಶ್ರಾವಣಿ ಸುಬ್ರಮಣ್ಯ' ಧಾರಾವಾಹಿಯೂ ವಿಭಿನ್ನ ಕಥಾ ಹಂದರದಿಂದ ಜನಮನ ಗೆದ್ದಿದೆ. ಇತ್ತೀಚಿಗಷ್ಟೇ ನಾಯಕಿ ಶ್ರಾವಣಿ ನಾಯಕ ಸುಬ್ರಮಣ್ಯನನ್ನು ಮದುವೆಯಾಗಿ ಸುಬ್ಬು ಮನೆ ಸೇರಿದ್ದಾಳೆ.
ಆಕೆ ಗಂಡನ ಮನೆಗೆ ಕಾಲಿಟ್ಟಾಗಿನಿಂದ ಅವನ ಮನೆಯಲ್ಲಿ ಒಂದಲ್ಲ ಒಂದು ರೀತಿಯ ಜಗಳ ಮನಸ್ತಾಪಗಳು ನಡೆಯುತ್ತಲೇ ಇದೆ. ಆದರೆ, ಈ ಎಲ್ಲಾ ಮನಸ್ತಾಪವನ್ನು ಶ್ರಾವಣಿ ಬಹಳ ಬುದ್ಧಿವಂತಿಕೆಯಿಂದ ಸರಿ ಮಾಡುವ ಪಣತೊಟ್ಟಿದ್ದಾಳೆ. ಅಂತೆಯೇ ಒಂದೊಂದಾಗಿ ಸಂಬಂಧಗಳನ್ನು ಸರಿಪಡಿಸುತ್ತಾ ಸುಬ್ಬು ಮನೆಯವರಿಗೆ ಹತ್ತಿರವಾಗುತ್ತಿದ್ದಾಳೆ.

ಇತ್ತೀಚೆಗೆ ತನ್ನ ಗಂಡ ಸುಬ್ಬು ಹಾಗೂ ಅತ್ತೆ ವಿಶಾಲಾಕ್ಷಿಯನ್ನು ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಕಳುಹಿಸಿ ತಾಯಿ ಮಗನನ್ನು ಒಂದು ಮಾಡಿರುವ ಸಂಭ್ರಮದಲ್ಲಿದ್ದಾಳೆ ಶ್ರಾವಣಿ. ಈ ರೀತಿ ಬಹಳ ಇಂಟರೆಸ್ಟಿಂಗ್ ಟ್ವಿಸ್ಟ್‌ಗಳನ್ನು ಹೊಂದಿರುವ ಈ ಸೀರಿಯಲ್, ಇತರೆ ಧಾರಾವಾಹಿಯೊಂದಿಗೆ ಒಳ್ಳೆಯ ಪೈಪೋಟಿ ನಡೆಸುತ್ತಿದೆ. ಹೀಗಿರುವಾಗಲೇ ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯಲ್ಲಿ ಅಚ್ಚರಿಯನ್ನುವಂತೆ ಪ್ರಮುಖ ಪಾತ್ರಧಾರಿಯ ಬದಲಾವಣೆಯಾಗಿದೆ.
ಹೌದು, 'ಶ್ರಾವಣಿ ಸುಬ್ರಮಣ್ಯ' ಧಾರಾವಾಹಿಯಲ್ಲಿ ಸುಬ್ಬು ಅಕ್ಕ ಧನಲಕ್ಷ್ಮಿಯಾಗಿ ಪಾತ್ರ ನಿರ್ವಹಿಸುತ್ತಿದ್ದ ನಟಿ ಹರ್ಷಿತಾ ಅವರು ಧಾರಾವಾಹಿಯಿಂದ ಹೊರ ನಡೆದಿದ್ದಾರೆ. ತಾಯಿ ಮಗ ಇಬ್ಬರೂ ತಮ್ಮ ಮನಸ್ತಾಪಗಳನ್ನು ಬದಿಗಿಟ್ಟು ಕುಕ್ಕೆ ಸುಬ್ರಮಣ್ಯ ದೇವಸ್ಥಾನದಲ್ಲಿ ಒಂದಾಗಿ ಮನೆಗೆ ಹಿಂತಿರುಗುವ ಸಂಚಿಕೆ ವೀಕ್ಷಕರಿಗೆ ಬಹಳ ಖುಷಿ ನೀಡಿತ್ತು. ಇದೇ ಸಂಚಿಕೆಯಲ್ಲಿ ಧನಲಕ್ಷ್ಮಿ ಪಾತ್ರಧಾರಿ ಬದಲಾಗಿದ್ದು ಕಂಡುಬಂದಿದೆ.

ನಟಿ ಹರ್ಷಿತಾ ಅವರು ಧಾರಾವಾಹಿ ಇಂದ ಹೊರನಡೆದದ್ದು ಯಾಕೆ ಎಂಬ ವಿಚಾರವಾಗಿ ಇನ್ನು ಯಾವುದೇ ರೀತಿಯ ಮಾಹಿತಿ ಹೊರ ಬಂದಿಲ್ಲ. ನಟಿ ಹರ್ಷಿತಾ ಅವರು ಈ ಹಿಂದೆ 'ಲಕ್ಷ್ಮೀ ಬಾರಮ್ಮ' ಹಾಗೂ 'ರಾಧಿಕಾ' ಎಂಬ ಧಾರಾವಾಹಿಗಳಲ್ಲಿ ನಟಿಸುತ್ತಿದ್ದರು. ನಂತರ 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಿಂದ ಹೊರಬಂದು 'ಶ್ರಾವಣಿ ಸುಬ್ರಮಣ್ಯ' ಹಾಗೂ 'ರಾಧಿಕಾ' ಧಾರಾವಾಹಿಗೆ ಹೆಚ್ಚಿನ ಸಮಯ ನೀಡಿದರು.
ಆಗ ಅವರು 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಿಂದ ಜಗಳವಾಡಿ ಹೊರಬಂದಿದ್ದಾರೆ ಎಂಬ ಸುದ್ದಿ ಹರಡಿತ್ತು. ನಂತರ ಅದರ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಪಷ್ಟನೆ ನೀಡಿದ್ದರು ನಟಿ ಹರ್ಷಿತಾ. ಇದೀಗ 'ಶ್ರಾವಣಿ ಸುಬ್ರಮಣ್ಯ' ಧಾರಾವಾಹಿಯಿಂದಲೂ ಹೊರ ನಡೆದಿರುವುದು ನಟಿ ಹರ್ಷಿತಾ ಅಭಿಮಾನಿಗಳಿಗಂತೂ ಬೇಸರ ತಂದಿದೆ. ಯಾಕೆಂದರೆ ಸುಬ್ಬುವಿನ ಅಕ್ಕ ಧನಲಕ್ಷ್ಮಿಯ ಪಾತ್ರದಲ್ಲಿ ಬಹಳ ಅಚ್ಚುಕಟ್ಟಾಗಿ ನಟಿಸುತ್ತಿದ್ದರು ಹರ್ಷಿತಾ.
ಅತ್ತ ತಾಯಿ ಮಗನನ್ನು ಒಂದು ಮಾಡಿರುವ ಸಂಭ್ರಮದಲ್ಲಿ ಶ್ರಾವಣಿ ಇದ್ದಾಳೆ. ಮಗ ನನಗೆ ಸಿಕ್ಕಿದ್ದಾನೆ. ಆದರೆ ನಾನು ಯಾರನ್ನೂ ಸೊಸೆ ಎಂದು ಒಪ್ಪಿಕೊಳ್ಳುವುದಿಲ್ಲ ಎಂಬ ವಿಶಾಲಾಕ್ಷಿಯ ಮಾತಿಗೆ ಬೇಸರವಾದರೂ ಕಾಲಾಯ ತಸ್ಮೈ ನಮಃ ಎಂದು ಮೌನ ತಾಳಿದ್ದಾಳೆ ಶ್ರಾವಣಿ. ಇತ್ತ ತನ್ನ ತಂದೆ ಆಸ್ತಿ ವಿಚಾರವಾಗಿ ಮನೆಗೆ ಕರೆದಿರುವುದರ ಬಗ್ಗೆ ಸಂಭ್ರಮವೂ ಇದೆ. ಈ ರೀತಿ ಬಹಳ ಇಂಟ್ರೆಸ್ಟಿಂಗ್ ಟ್ವಿಸ್ಟ್‌ಗಳನ್ನು ಹೊಂದಿರುವ ಈ ಧಾರಾವಾಹಿ ಇತ್ತೀಚಿಗಂತೂ ಪ್ರೇಕ್ಷಕರ ಫೇವರೆಟ್ ಆಗುತ್ತಿದೆ.
ಇನ್ನು ಮುಂದೆ ಧನಲಕ್ಷ್ಮಿಯಾಗಿ ಯಾರು ಅಭಿನಯಿಸುತ್ತಾರೆ ಎಂಬ ಕುತೂಹಲ ವೀಕ್ಷಕರಿಗಿದ್ದು ಅದಕ್ಕೂ ವಾಹಿನಿಯೇ ಫುಲ್ ಸ್ಟಾಪ್ ಇಟ್ಟಿದೆ. 'ನನ್ನಮ್ಮ ಸೂಪರ್ ಸ್ಟಾರ್' ಸೀಸನ್ 3 ಸ್ಪರ್ಧಿಯಾಗಿದ್ದ ಶಿಲ್ಪಾ ಅವರು ಧನಲಕ್ಷ್ಮಿಯಾಗಿ ನಟಿಸುತ್ತಿದ್ದಾರೆ. ಈ ಹಿಂದೆ 'ಪಂಚರಂಗಿ ಪೋಂ ಪೋಂ' ಧಾರಾವಾಹಿಯಲ್ಲಿ ಶಿಲ್ಪಾ ನಟಿಸಿದ್ದು ಆ ಧಾರಾವಾಹಿಯ ಪಾತ್ರ ಆಕೆಗೆ ಜನಪ್ರಿಯತೆ ನೀಡಿತ್ತು.


Click it and Unblock the Notifications











