ಕಾಫಿ ವಿತ್ ಕರಣ್ ಅಲ್ಲ.. 'ಕಾಫಿ ವಿತ್ ಶೋಭಾ ಶೆಟ್ಟಿ'; ಬಿಗ್‌ಬಾಸ್ ಶೋಭಾ ಶೆಟ್ಟಿ ಈಗ ನಿರೂಪಕಿ
ಕನ್ನಡ ಕಿರುತೆರೆಯ ನಿರೂಪಕರು ಎಂದ ಕೂಡಲೇ ಕಣ್ಣ ಮುಂದೆ ಒಂದಷ್ಟು ಹೆಸರುಗಳು ಹಾದು ಹೋಗುತ್ತದೆ. ಅನುಶ್ರೀ, ಅಕುಲ್ ಬಾಲಾಜಿ, ಸೃಜನ್ ಲೋಕೇಶ್, ಮಾಸ್ಟರ್ ಆನಂದ್, ಶ್ವೇತಾ ಚೆಂಗಪ್ಪ, ಶಾಲಿನಿ ಸತ್ಯನಾರಾಯಣ, ಸುಷ್ಮಾ ರಾವ್, ನಿರಂಜನ್ ದೇಶಪಾಂಡೆ ಇವರುಗಳು ಅರಳು ಹುರಿದಂತೆ ಪಟಪಟನೆ ಮಾತನಾಡುತ್ತಾ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದಾರೆ. ಇದರ ಹೊರತಾಗಿ ಕನ್ನಡ ಕಿರುತೆರೆಯ ನಟಿ ನಟಿಯರು ಕೂಡಾ ನಿರೂಪಣೆಯ ಕ್ಷೇತ್ರಕ್ಕೆ ಕಾಲಿಟ್ಟರುವುದು ಕೂಡಾ ಕಿರುತೆರೆ ವೀಕ್ಷಕರಿಗೆ ತಿಳಿದಿರುವ ವಿಚಾರ.
ಹೌದು, ಅನುಪಮಾ ಗೌಡ, ಚಂದನಾ ಅನಂತಕೃಷ್ಣ, ಅಂಕಿತಾ ಅಮರ್, ಭೂಮಿ ಶೆಟ್ಟಿ, ಚಂದು ಗೌಡ ನಟನೆಯ ಹೊರತಾಗಿ ನಿರೂಪಣೆಯ ಮೂಲಕ ಮನ ಸೆಳೆದ ಕಿರುತೆರೆ ಕಲಾವಿದರುಗಳು. ಇದೀಗ ಆ ಸಾಲಿಗೆ ಹೊಸ ನಟಿಯ ಸೇರ್ಪಡೆಯಾಗಿದೆ. ಇಷ್ಟು ದಿನಗಳ ಕಾಲ ಸಹಜ ನಟನೆಯ ಮೂಲಕ ವೀಕ್ಷಕರ ಮನ ಸೆಳೆದ ಈ ನಟಿ ಇದೀಗ ನಿರೂಪಕಿಯಾಗಿ ಭಡ್ತಿ ಪಡೆದಿದ್ದಾರೆ. ಆಕೆ ಬೇರಾರೂ ಅಲ್ಲ, ಶೋಭಾ ಶೆಟ್ಟಿ.

ಕನ್ನಡ ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟು ಇಂದು ಪರಭಾಷೆಯ ಕಿರುತೆರೆಯಲ್ಲಿ ಸಕ್ರಿಯರಾಗಿರುವ ಬೆಡಗಿ ಶೋಭಾ ಶೆಟ್ಟಿ. ಇದೀಗ ನಟನೆಯಿಂದ ನಿರೂಪಕಿಯಾಗಿ ಭಡ್ತಿ ಪಡೆದಿರುವ ಈಕೆ "ಕಾಫಿ ವಿತ್ ಶೋಭಾ ಶೆಟ್ಟಿ" ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದಾರೆ. ತೆಲುಗಿನ ಸುಮನ್ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಈ ಶೋವಿನ ಮೂಲಕ ವೀಕ್ಷಕರ ಮನ ಸೆಳೆಯುತ್ತಿದ್ದಾರೆ ಶೋಭಾ ಶೆಟ್ಟಿ.
'ಕಾಫಿ ವಿತ್ ಶೋಭಾ ಶೆಟ್ಟಿ' ಕಾರ್ಯಕ್ರಮದ ಪ್ರೋಮೋವನ್ನು ತಮ್ಮ ವಾಡ್ಸಾಪ್ ಹಾಗೂ ಇನ್‌ಸ್ಟಾಗ್ರಾಂ ಸ್ಟೇಟಸ್ ಹಾಕಿದ್ದ ಶೋಭಾ ಶೆಟ್ಟಿ ತಮ್ಮ ಹೊಸ ಪಯಣದ ಬಗ್ಗೆ ಹಂಚಿಕೊಂಡಿದ್ದರು. ನಟನೆಯ ಬಳಿಕ ಇದೀಗ ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಿರುವ ಸಂತಸದ ವಿಚಾರವನ್ನು ಹೇಳಿಕೊಂಡಿದ್ದರು. ಜೊತೆಗೆ "ಕಾರ್ತಿಕ ದೀಪಂ ಧಾರಾವಾಹಿಯಲ್ಲಿ ಮೋನಿತಾ ಆಗಿ ನೋಡಿದ್ದೀರಿ. ಬಿಗ್ ಬಾಸ್‌ನಲ್ಲಿ ಶೋಭಾ ಶೆಟ್ಟಿಯಾಗಿ ಕಂಡಿದ್ದೀರಿ. ಮೊದಲ ಬಾರಿಗೆ ನಾನು ಒಂದು ಶೋವಿನ ಆ್ಯಂಕರ್ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ" ಎಂದು ಆಕೆ ಹೇಳಿಕೊಂಡಿದ್ದರು.

ಇತ್ತೀಚೆಗಷ್ಟೇ ತಮ್ಮ ಪ್ರಿಯಕರ ಯಶವಂತ್ ರೆಡ್ಡಿಯವರೊಂದಿಗೆ ನಿಶ್ಚಿತಾರ್ಥ ಶೋಭಾ ಶೆಟ್ಟಿ ಮಾಡಿಕೊಂಡಿದ್ದರು. ಇನ್ನು ತೆಲುಗು ಬಿಗ್ ಬಾಸ್ ಸೀಸನ್ 7ರ ಸ್ಪರ್ಧಿಯಾಗಿ ದೊಡ್ಮನೆಯೊಳಗೆ ಕಾಲಿಟ್ಟಿದ್ದ ಶೋಭಾ ಶೆಟ್ಟಿ ಅಲ್ಲಿ ಅದ್ಭುತವಾಗಿ ಸ್ಪರ್ಧಿಸಿದ್ದಲ್ಲದೇ ಉಳಿದ ಸ್ಪರ್ಧಿಗಳಿಗೆ ಟಫ್ ಕಾಂಪಿಟೀಶನ್ ಕೊಟ್ಟಿದ್ದರು. ಟಾಪ್ ಏಳು ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ಶೋಭಾ ಶೆಟ್ಟಿ ಫಿನಾಲೆಗೆ ಕೇವಲ ಒಂದು ವಾರ ಇದೆ ಎನ್ನುವಷ್ಟರಲ್ಲಿ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದರು.
'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ನಾಯಕಿ ಸನ್ನಿಧಿ ತಂಗಿ ತನು ಪಾತ್ರದಲ್ಲಿ ಅಭಿನಯಿಸಿದ್ದ ಈ ನಟಿ ಮುಂದೆ ಪರಭಾಷೆಯ ಕಿರುತೆರೆಯಲ್ಲಿ ನಾಯಕಿಯಾಗಿ ಮೋಡಿ ಮಾಡಿದ್ದರು. 'ರುಕ್ಕು' ಧಾರಾವಾಹಿಯಲ್ಲಿ ನಾಯಕಿ ರುಕ್ಕು ಪಾತ್ರದಲ್ಲಿ ನಟಿಸಿದ್ದ ಈ ನಟಿ ತೆಲುಗಿನ ಒಂದೆರಡು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ತೆಲುಗಿನ 'ಕಾರ್ತಿಕ ದೀಪಂ'ನಲ್ಲೂ ನಾಯಕಿ ಮೋನಿತಾ ಪಾತ್ರದಲ್ಲಿ ಬಣ್ಣ ಹಚ್ಚಿದ ಈಕೆ ಆ ಧಾರಾವಾಹಿಯ ಪಾತ್ರಕ್ಕೆ ರಾಷ್ಟ್ರೀಯ ಗೌರವ ಪ್ರಶಸ್ತಿ ಪಡೆದಿದ್ದಾರೆ.


Click it and Unblock the Notifications











