ಶಿವಮೊಗ್ಗದಲ್ಲಿ ಗಿಡ ನೆಟ್ಟು ಭೂಕುಸಿತಕ್ಕೆ ಕಡಿವಾಣ ಹಾಕಲು ಮುಂದಾದ ಶ್ವೇತಾ ಪ್ರಸಾದ್; ಮಾಡಿದ್ದೇನು ಗೊತ್ತಾ?
ಕಿರುತೆರೆ ನಟಿ ಶ್ವೇತಾ ಪ್ರಸಾದ್ ಅವರು ನಟನೆಯ ಹೊರತಾಗಿ ಸಾಮಾಜಿಕ ಕಾರ್ಯಗಳ ಮೂಲಕ ಸದ್ದು ಮಾಡಿರುವ ಬೆಡಗಿ. ಹೌದು, ತಮ್ಮ ನಟನೆಯ ಮೂಲಕ ವೀಕ್ಷಕರ ಮನ ಸೆಳೆದಿರುವ ಶ್ವೇತಾ ಪ್ರಸಾದ್ ಇತ್ತೀಚೆಗೆ ಮಹತ್ಕಾರ್ಯವೊಂದಕ್ಕೆ ಕೈ ಜೋಡಿಸಿದ್ದು ಅದನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಶ್ವೇತಾ ಪ್ರಸಾದ್ ಅವರು ತಮ್ಮ ಪ್ರಸಾದ್ ಫೌಂಡೇಶನ್ ಮೂಲಕ ಮಲೆನಾಡಿನಲ್ಲಿ ಗಿಡ ನೆಡುವ ಅಭಿಯಾನವನ್ನು ಇತ್ತೀಚೆಗೆ ನಡೆಸಿದ್ದಾರೆ. ಆ ಮೂಲಕ ಪರಿಸರವನ್ನು ಉಳಿಸುವ ಕಳಕಳಿಯನ್ನು ಕೂಡಾ ವ್ಯಕ್ತಪಡಿಸಿದ್ದಾರೆ. ಪರಿಸರದಲ್ಲಿರುವ ಮರಗಳ ನಾಶದಿಂದಾಗಿ ಭೂಕುಸಿತಗಳು ಆಗುತ್ತಿದ್ದು, ಅದರಿಂದ ಸಾಕಷ್ಟು ಅನಾಹುತಗಳು ಆಗುತ್ತಿರುವುದನ್ನು ನಾವು ಕಣ್ಣಾರೆ ಕಂಡಿದ್ದೇವೆ. ಮುಂದಿನ ದಿನಗಳಲ್ಲಿ ಭೂಕುಸಿತದ ಪ್ರಮಾಣ ಕಡಿಮೆ ಮಾಡುವ ಸಲುವಾಗಿ ಪ್ರಸಾದ್ ಫೌಂಡೇಶನ್ ಮಹತ್ತರವಾದ ಕಾರ್ಯಕ್ಕೆ ಮುಂದಾಗಿತ್ತು.

ಶಿವಮೊಗ್ಗದ ಸುದೂರಿನಲ್ಲಿ ಗಿಡ ನೆಡುವ ಅಭಿಯಾನವನ್ನು ಪ್ರಸಾದ್ ಫೌಂಡೇಶನ್ ಆಯೋಜಿಸಿತ್ತು. ಅಭಿಯಾನದಲ್ಲಿ ಹಲಸು, ಮಾವು ಸೇರಿದಂತೆ ಕೆಲವು ಜಾತಿಯ ಮರಗಳನ್ನು ನೆಡಲಾಯಿತು. ಗಿಡ ನೆಡುತ್ತಿರುವ ಫೋಟೋಗಳನ್ನು ಸ್ವತಃ ಶ್ವೇತಾ ಪ್ರಸಾದ್ ಅವರೇ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
"ಈ ಅಭಿಯಾನದುದ್ದಕ್ಕೂ ನಮಗೆ ಮಾರ್ಗದರ್ಶನ ನೀಡಿದ ಸ್ನೇಹಿತ, RFO ರಾಜೇಂದ್ರ ಪ್ರಸಾದ್ ಅವರಿಗೆ ನನ್ನ ಧನ್ಯವಾದಗಳು. ಎಲ್ಲವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ ಕೌಶಿಕ್ ಜೋಯಿಸ್ ಅವರಿಗೂ ಧನ್ಯವಾದಗಳು" ಎಂದು ಹೇಳಿದ್ದಾರೆ. ಮಾತ್ರವಲ್ಲದೇ "ಉತ್ಸಾಹದಿಂದ ಗಿಡಗಳನ್ನು ನೆಟ್ಟ ಸ್ವಯಂಸೇವಕರಿಗೂ ನನ್ನ ಕಡೆಯಿಂದ ವಿಶೇಷವಾದ ಧನ್ಯವಾದಗಳು. ಅವರ ಸಹಾಯದಿಂದ ಹಾಗೂ ಅವರು ಹಾಕಿರುವಂತಹ ಕಠಿಣ ಪರಿಶ್ರಮದಿಂದ ಈ ಕಾರ್ಯಕ್ರಮ ಯಶಸ್ವಿಯಾಗಿ ನೇರವೇರಿತು" ಎಂದು ಬರೆದುಕೊಂಡಿದ್ದಾರೆ.
"ಇದರ ಜೊತೆಗೆ ಹತ್ತು ಗಿಡಗಳನ್ನು ನೀಡಿದ ದಿಲೀಪ್ ಅವರಿಗೆ ಧನ್ಯವಾದಗಳು. ಯಾವತ್ತೂ ಏನೂ ಕೇಳದೇ, ನಾನು ಮಾಡುತ್ತಿರುವ ಎಲ್ಲಾ ಕೆಲಸಗಳಿಗೆ ಕಿಂಚಿತ್ತೂ ಕೊಡುಗೆ ನೀಡುವ ಕೈ ಜೋಡಿಸುವ ಅವರ ಪ್ರೀತಿಗೆ ನಾನು ಆಭಾರಿ" ಎಂದು ಬರೆದುಕೊಂಡಿದ್ದಾರೆ ಶ್ವೇತಾ ಚೆಂಗಪ್ಪ.

ಒಟ್ಟಿನಲ್ಲಿ ನಟಿಯಾಗಿ ಗುರುತಿಸಿಕೊಂಡಿರುವ ಶ್ವೇತಾ ಪ್ರಸಾದ್ ಅವರು ಈ ಅಭಿಯಾನದ ಮೂಲಕ ಪರಿಸರವನ್ನು ಉಳಿಸಿ, ಬೆಳೆಸಿ ಎಂಬ ಸಂದೇಶವನ್ನು ನೀಡಿದ್ದಾರೆ. ಅವರ ಈ ಸಂದೇಶದಿಂದ ಕಿರುತೆರೆ ವೀಕ್ಷಕರು ಪ್ರೇರಿತರಾಗಿ ಒಬ್ಬೊಬ್ಬರು ಒಂದೊಂದು ಗಿಡ ನೆಟ್ಟರೆ ಮತ್ತೊಮ್ಮೆ ಹಸಿರುಮಯ ಪರಿಸರವನ್ನು ಕಾಣುವುದರಲ್ಲಿ ಸಂಶಯವಿಲ್ಲ.


Click it and Unblock the Notifications











