ರೇಡಿಯೋ ಜಾಕಿಯಾಗಿದ್ದ ಸಿರಿ ರವಿಕುಮಾರ್ ಇದೀಗ ಸಿನಿಮಾ ನಟಿ; ಇವರ ಹಿನ್ನೆಲೆಯೇನು?
ನಟಿ ಸಿರಿ ರವಿಕುಮಾರ್ ಸದ್ಯಕ್ಕಂತೂ ಹಿರಿತೆರೆಯ ಬಹಳಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಜ್ ಬಿ ಶೆಟ್ಟಿ ಅವರ ನಿರ್ದೇಶನದಲ್ಲಿ ಮೂಡಿ ಬಂದ 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾದಲ್ಲಿ ಪ್ರೇರಣ ಪಾತ್ರವನ್ನು ಮಾಡಿ ನಟಿ ಸಿರಿ ರವಿಕುಮಾರ್ ಬಹಳ ಮೆಚ್ಚುಗೆ ಪಡೆದಿದ್ದಾರೆ.
ಓಟಿಟಿಯಲ್ಲಿ ಬಿಡುಗಡೆಯಾದ 'ಸ್ವಾತಿಮುತ್ತಿನ ಮಳೆ ಹನಿಯೇ' ಸಿನಿಮಾ ಬಹಳಷ್ಟು ಸಿನಿಪ್ರಿಯರಿಗೆ ಹಿಡಿಸಿದೆ. ಮೊದಲು ಓಟಿಟಿಯಲ್ಲಿ ಮಾತ್ರ ಬಿಡುಗಡೆಯಾಗುತ್ತದೆ ಎನ್ನಲಾಗಿದ್ದು, ಬಳಿಕ ಥಿಯೇಟರ್‌ನಲ್ಲಿ ರಿಲೀಸ್ ಆಯ್ತು. ಅದಾದ ಮೇಲೆ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾದ ನಂತರ ಇದಕ್ಕೆ ಇನ್ನೂ ಹೆಚ್ಚಿನ ಮನ್ನಣೆ ಸಿಕ್ಕಿತು.

'ಸ್ವಾತಿ ಮುತ್ತಿನ ಮಳೆ ಹನಿಯೇ' ಬಗ್ಗೆ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ನಟಿ ಸಿರಿ ರವಿಕುಮಾರ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. "ಸ್ವಾತಿ ಮುತ್ತಿನ ಮಳೆ ಹನಿಯೇ ಬಹಳ ವಿಶೇಷವಾದ ಕಥೆಯನ್ನು ಉಳ್ಳ ಸಿನಿಮಾ. ಆದರೆ ಈ ಕಥೆ ಕಮರ್ಷಿಯಲಿ ಹಿಟ್ಟಾಗುವಂತಹ ಕಥೆಯಲ್ಲ. ಹಾಗಾಗಿ ಈ ಕಥೆಯನ್ನು ಒಪ್ಪಿಕೊಳ್ಳುವಾಗಲೇ ನನಗೆ ಗೊತ್ತಿತ್ತು. ಇದು ಕಮರ್ಷಿಯಲ್ ಯಶಸ್ಸನ್ನು ತಂದು ಕೊಡುವುದಿಲ್ಲ. ಆದರೆ ಸಿನಿಪ್ರಿಯರಿಗೆ, ಸಾಹಿತ್ಯ ಆಸಕ್ತರಿಗೆ ಇಷ್ಟವಾಗುತ್ತದೆ ಎಂದು. ಅಂತೆಯೇ ಥಿಯೇಟರ್ ನಲ್ಲಿ ಬಿಡುಗಡೆಯಾದಾಗ ಹೆಚ್ಚಿನ ರೆಸ್ಪಾನ್ಸ್ ಸಿಗದಿದ್ದರೂ ಓಟಿಟಿ ನಂತರ ತುಂಬಾ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತು"ಎಂದಿದ್ದರು ನಟಿ ಸಿರಿ ರವಿಕುಮಾರ್.
'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾ ಅಷ್ಟೇ ಅಲ್ಲದೆ 'ಬ್ಯಾಚುಲರ್ ಪಾರ್ಟಿ' ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಸದ್ಯಕ್ಕೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ನಟಿ ಸಿರಿ ರವಿಕುಮಾರ್. ಮೂಲತಃ ರೇಡಿಯೋ ಜಾಕಿಯಾಗಿ ವೃತ್ತಿ ಜೀವನವನ್ನು ಆರಂಭಿಸಿದ ಇವರು ಇದೀಗ ನಟನೆಯಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದು, ನಟನೆಯನ್ನೇ ವೃತ್ತಿಯಾಗಿಸಿಕೊಂಡಿದ್ದಾರೆ.

2010 ರಿಂದ ಥಿಯೇಟರ್‌ನಲ್ಲಿಯೂ ಬಹಳ ಆ್ಯಕ್ಟೀವ್ ಇರುವ ಈಕೆ ಬಹಳಷ್ಟು ನಾಟಕಗಳಲ್ಲಿಯೂ ನಟಿಸಿದ್ದಾರೆ. ಕನ್ನಡದ ಮೇರು ನಟ ಎಸ್ ಎಲ್ ಭೈರಪ್ಪ ಅವರ 'ಪರ್ವ' ಎಂಬ ಕಾದಂಬರಿಯೂ ನಾಟಕ ರೂಪಕ್ಕೆ ಬಂದು ಬಹಳ ವರ್ಷಗಳಾಗಿವೆ. ಆ ನಾಟಕವನ್ನು ಇಂಗ್ಲಿಷ್‌ಗೆ ನಟ ಪ್ರಕಾಶ್ ಬೆಳವಾಡಿ ಅವರು ನಿರ್ದೇಶನ ಮಾಡಿದ್ದು, ಅದರಲ್ಲಿ ಪ್ರಮುಖ ಪಾತ್ರ ಒಂದಾದ ದ್ರೌಪದಿಯ ಪಾತ್ರವನ್ನು ನಟಿ ಸಿರಿ ರವಿಕುಮಾರ್ ಅವರು ನಟಿಸಿಕೊಂಡು ಬಂದಿದ್ದಾರೆ.
ಅಂದಹಾಗೆ 'ಪರ್ವ' ಎಂಬ ಇಂಗ್ಲಿಷ್ ನಾಟಕ ಬರೋಬ್ಬರಿ ಎಂಟು ಗಂಟೆಗಳ ಸುದೀರ್ಘ ನಾಟಕವಾಗಿದ್ದು, ಇದರಲ್ಲಿ ದ್ರೌಪದಿಯದ್ದು ಬಹಳ ಪ್ರಮುಖವಾದ ಪಾತ್ರ. ಈ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಇದಕ್ಕೆ ಜೀವ ತುಂಬಿರುವ ನಟಿ ಸಿರಿ ರವಿಕುಮಾರ್ ಅವರು, ನಟನೆಯಲ್ಲಿನ ತಮ್ಮ ಟ್ಯಾಲೆಂಟ್ ಅನ್ನು ಈ ಪಾತ್ರದ ಮೂಲಕ ಹೊರ ಹಾಕಿದ್ದಾರೆ. ಈಗಾಗಲೇ ಒಂದು ಶೋವನ್ನು ಕೊಟ್ಟಿರುವ ಈ ಪಾತ್ರ ಎರಡನೇ ಷೋಗೆ ರೆಡಿ ಆಗುತ್ತಿದೆಯಂತೆ. ಸದ್ಯದಲ್ಲೇ ಅಮೆರಿಕದಲ್ಲಿ ಒಂದು ಶೋ ನಿರ್ಧಾರವಾಗಿದೆ ಎಂದು ಹೇಳಿಕೊಂಡಿದ್ದಾರೆ ನಟಿ ಸಿರಿ ರವಿಕುಮಾರ್.
ಥಿಯೇಟರ್ ನಲ್ಲಿ ಬಹಳ ಆ್ಯಕ್ಟೀವ್ ಇರುವ ಈಕೆ ಇದೀಗ ಸಿನಿಮಾರಂಗಕ್ಕೆ ಕಾಲಿಟ್ಟಿದ್ದು ಮಾಡುವ ಪ್ರತಿ ಪಾತ್ರಕ್ಕೂ ಜೀವ ತುಂಬುವ ಕಲೆಯನ್ನು ಹೊಂದಿದ್ದಾರೆ ಎಂದರೆ ತಪ್ಪಾಗಲ್ಲ. "ರಂಗಭೂಮಿಯಲ್ಲಿ ಬಹಳಷ್ಟು ವರ್ಷಗಳಿಂದ ಕೆಲಸ ಮಾಡಿ ಇರುವುದರಿಂದಲೇ ಸಿನಿಮಾದಲ್ಲಿ ಮಾಡುವ ಪ್ರತಿ ಪಾತ್ರಕ್ಕೂ ಜೀವ ತುಂಬಲು ಸಾಧ್ಯವಾಗಿದೆ" ಎಂದು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ನಟಿ ಸಿರಿ ರವಿಕುಮಾರ್.
ನಟಿ ಸಿರಿ ರವಿಕುಮಾರ್ ಅವರು, ಸೋಶಿಯಲ್ ಮೀಡಿಯಾದಲ್ಲಿ ಅಷ್ಟೇನೂ ಆ್ಯಕ್ಟಿವ್ ಇಲ್ಲವಂತೆ. "ನನಗೆ ಸೋಶಿಯಲ್ ಮೀಡಿಯಾ ತುಂಬಾ ಸುಸ್ತು ಎನಿಸುತ್ತದೆ. ತುಂಬಾ ಸಮಯವನ್ನು ಹಾಳುಮಾಡುತ್ತದೆ. ಹಾಗಾಗಿ ನಾನು ಅದರಲ್ಲಿ ಅಷ್ಟೇನೂ ಆ್ಯಕ್ಟಿವ್ ಇಲ್ಲ. ನೆನಪಾದಾಗ ಮನಸ್ಸಿಗೆ ಅನಿಸಿದಾಗ ಮಾತ್ರ ಕೆಲವು ಪೋಸ್ಟ್‌ಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತೇನೆ ಅಷ್ಟೇ" ಎಂದಿದ್ದಾರೆ.
ಇದರ ಜೊತೆಗೆ "ಸೋಶಿಯಲ್ ಮೀಡಿಯಾದಲ್ಲಿ ಎಲ್ಲರೂ ತಾವು ಏನನ್ನು ಮಾಡುತ್ತಿದ್ದಾರೆ ಎಂಬುದನ್ನೇ ಹಾಕಿಕೊಳ್ಳುತ್ತಿರುತ್ತಾರೆ. ಎಷ್ಟೋ ಬಾರಿ ನಟರಿಗೆ ಯಾವುದೇ ಕೆಲಸವಿಲ್ಲದೆ ಮನೆಯಲ್ಲಿ ಖಾಲಿ ಕೂರುವ ಸಂದರ್ಭಗಳು ಬರುತ್ತವೆ. ಆಗಿಲ್ಲ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಇದ್ದರೆ ನಮಗೂ ಹಿಂಸೆ. ಮನಸ್ಸು ಬೇರೆಯವರ ಜೀವನದಲ್ಲಿ ಏನಾಗುತ್ತಿದೆ ಎಂಬುದನ್ನು ನೋಡಿ ನಮ್ಮ ಜೀವನದ ಜೊತೆಗೆ ಹೋಲಿಸಿಕೊಳ್ಳಲು ಶುರುಮಾಡುತ್ತದೆ. ಈ ಕಾರಣಕ್ಕೆ ನನಗೆ ಸೋಶಿಯಲ್ ಮೀಡಿಯಾ ಅಷ್ಟೊಂದು ಆರೋಗ್ಯಕರ ಎಂದೆನಿಸುವುದಿಲ್ಲ" ಎಂದಿದ್ದಾರೆ ನಟಿ ಸಿರಿ ರವಿಕುಮಾರ್.
ಸದ್ಯಕ್ಕಂತೂ ಒಳ್ಳೊಳ್ಳೆಯ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಈಕೆ ನಟನೆಯನ್ನು ತನ್ನ ಫುಲ್ ಟೈಮ್ ವೃತ್ತಿಯನ್ನಾಗಿಸಿಕೊಂಡಿರುವುದು ಇವರ ಅಭಿಮಾನಿಗಳಿಗೆ ಹಾಗೂ ಪ್ರೇಕ್ಷಕರಿಗೆ ಬಹಳ ಸಂತಸ ತಂದಿದೆ.


Click it and Unblock the Notifications











