ಸುಧಾ ಬೆಳವಾಡಿ 'ಭೂತಯ್ಯನ ಮಗ ಅಯ್ಯು' ಸಿನಿಮಾದಲ್ಲಿ ನಟಿಸಿದ್ದರು; ಪಾತ್ರ ಯಾವುದು ಗೊತ್ತೇ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿಯ ಹೆಸರು 'ವಧು'. ಡಿವೋರ್ಸ್ ಲಾಯರ್‌ನ ಮದುವೆ ಕಥೆ ಇದಾಗಿದ್ದು ಇದರಲ್ಲಿ ನಾಯಕಿ ವಧುವಿನ ಅಮ್ಮನಾಗಿ ನಟಿಸುತ್ತಿದ್ದಾರೆ ಸುಧಾ ಬೆಳವಾಡಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಲಕ್ಷಣ' ಧಾರಾವಾಹಿಯಲ್ಲಿ ನಾಯಕ ಭೂಪತಿ ಅಮ್ಮ ಶಕುಂತಲಾ ದೇವಿಯಾಗಿ ನಟಿಸಿದ್ದರು ಸುಧಾ ಬೆಳವಾಡಿ. ಇದೀಗ 'ವಧು' ಧಾರಾವಾಹಿಯಲ್ಲಿ ನಾಯಕಿಯ ತಾಯಿ ಆಗಿ ಅಭಿನಯಿಸುತ್ತಿರುವ ಸುಧಾ ಬೆಳವಾಡಿ ರಂಗಭೂಮಿ ಕಲಾವಿದೆ ಹೌದು.
ಮೇಕಪ್ ನಾಣಿ ಮತ್ತು ಭಾರ್ಗವಿ ನಾರಾಯಣ್ ದಂಪತಿಗಳ ಮಗಳಾಗಿರುವ ಸುಧಾ ಬೆಳವಾಡಿ ಎಂ.ಜಿ. ಸತ್ಯ ರಾವ್ ಅವರ ಪತ್ನಿ. ಕಿರುತೆರೆಯ ಹೊರತಾಗಿ ಬೆಳ್ಳಿತೆರೆಯಲ್ಲಿಯೂ ನಟನಾ ಕಂಪನ್ನು ಪಸರಿಸುತ್ತಿರುವ ಸುಧಾ ಬೆಳವಾಡಿ ಅವರಿಗೆ ನಟನೆ ರಕ್ತಗತವಾಗಿ ಬಂದಿದೆ ಎಂದರೆ ತಪ್ಪಾಗಲಾರದು.

ನಾಟಕಗಳಲ್ಲಿ ನಟಿಸುವ ಮೂಲಕ ನಟನೆಯ ನಂಟು ಬೆಳೆಸಿಕೊಂಡಿರುವ ಸುಧಾ ಬೆಳವಾಡಿ ಇಲ್ಲಿಯವರೆಗೆ ಮುನ್ನೂರು ನಾನ್ನೂರು ನಾಟಕಗಳಲ್ಲಿ ಬಣ್ಣ ಹಚ್ಚಿದ್ದಾರೆ. ಬಾಲನಟಿಯಾಗಿ ಹಿರಿತೆರೆಗೆ ಕಾಲಿಟ್ಟ ಈ ನಟಿ ಮೊದಲು ಬಣ್ಣ ಹಚ್ಚಿದ್ದು 'ಕಾಡು' ಸಿನಿಮಾದಲ್ಲಿ. ನಂತರ 'ಭೂತಯ್ಯನ ಮಗ ಅಯ್ಯು' ಸಿನಿಮಾದಲ್ಲಿ ಅಯ್ಯು ಮಗಳಾಗಿ ನಟಿಸಿರುವ ಸುಧಾ ಬೆಳವಾಡಿ ಅವರು ಪಿ.ಲಂಕೇಶ್ ಅವರ 'ಪಲ್ಲವಿ' ಸಿನಿಮಾದಲ್ಲೂ ಅಭಿನಯಿಸಿದ್ದಾರೆ.
ವಿದ್ಯಾಭ್ಯಾಸ, ಮದುವೆ, ಮಕ್ಕಳು ಎಂದು ಮುಂದೆ ಎಂಟು ವರುಷಗಳ ಕಾಲ ನಟನಾ ಲೋಕದಿಂದ ದೂರವಿದ್ದ ಸುಧಾ ಬೆಳವಾಡಿ ಮತ್ತೆ ನಟನೆಗೆ ಮರಳಿದ್ದು ತಾಯಿ ಸಾಹೇಬ ಸಿನಿಮಾ ಮೂಲಕ. ಟಿ.ಎನ್.ಸೀತಾರಾಮ್ ನಿರ್ದೇಶನದ 'ಮತದಾನ'ದಲ್ಲೂ ನಟಿಸಿರುವ ಇವರು ಮುಂದೆ 'ಗರ್ವ', 'ಮನ್ವಂತರ', 'ಮಂಥನ', 'ಮನೆಯೊಂದು ಮೂರು ಬಾಗಿಲು', 'ಶುಭಮಂಗಳ', 'ಯಾವ ಜನ್ಮದ ಮೈತ್ರಿ', 'ಮಹಾಪರ್ವ', 'ಶ್ರೀರಸ್ತು ಶುಭಮಸ್ತು' ಧಾರಾವಾಹಿಗಳಲ್ಲಿ
ನಟಿಸಿದ್ದರು.

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಮುಂಗಾರುಮಳೆ' ಸಿನಿಮಾದಲ್ಲಿ ನಟಿಸಿರುವ ಸುಧಾ ಬೆಳವಾಡಿ ಅವರು 'ಜೋಕ್ ಫಾಲ್ಸ್', 'ಮೀರಾ ಮಾಧವ ರಾಘವ', 'ಯುಗ', 'ಗಾಳಿಪಟ', 'ಮೊಗ್ಗಿನ ಮನಸ್ಸು', 'ಪ್ರೇಮ್ ಕಹಾನಿ', 'ತಮಸ್ಸು', 'ಬಚ್ಚನ್', 'ಗೂಗ್ಲಿ', 'ವಾಸ್ತು ಪ್ರಕಾರ', 'ಕಾಫಿ ತೋಟ', 'ಗಾಳಿಪಟ 2', 'ಆಚಾರ್ ಆ್ಯಂಡ್ ಕೋ', 'ಕಾಸಿನ ಸರ', 'ಫಾರ್ ರಿಜಿಸ್ಟರ್' ಸೇರಿ ಐವತ್ತಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.
ಕಿಚ್ಚ ಸುದೀಪ್ ನಟನೆಯ ಸೂಪರ್ ಹಿಟ್ ಸಿನಿಮಾ 'ಮ್ಯಾಕ್ಸ್'ನಲ್ಲಿ ಸುಧಾ ಬೆಳವಾಡಿ ನಟಿಸಿದ್ದಾರೆ. ನಟನೆಯ ಜೊತೆಗೆ ಜಾಹೀರಾತಿನಲ್ಲಿ ರೂಪದರ್ಶಿಯಾಗಿ ಮಿಂಚಿದ್ದಾರೆ. ಕೆನರಾ ಬ್ಯಾಂಕ್, ಸಿಂಥಾಲ್ ಸೋಪು, ಜಿ.ಆರ್.ಟಿ ರಸಗುಲ್ಲಾ, ಜಿ.ಆರ್.ಟಿ ಜ್ಯೂವೆಲರ್ಸ್ ಹೀಗೆ ಒಂದಷ್ಟು ಜಾಹೀರಾತುಗಳಲ್ಲಿ ಸುಧಾ ಕಾಣಿಸಿಕೊಂಡಿದ್ದಾರೆ.
ಕಲರ್ಸ್ ಸೂಪರ್ ವಾಹಿನಿಯಲ್ಲಿ ಟಿ.ಎನ್. ಸೀತಾರಾಮ್ ನಿರ್ದೇಶನದಡಿಯಲ್ಲಿ ಪ್ರಸಾರವಾಗುತ್ತಿದ್ದ 'ಮಗಳು ಜಾನಕಿ' ಧಾರಾವಾಹಿಯಲ್ಲಿ ಶ್ಯಾಮಲತ್ತೆಯಾಗಿ ಅಭಿನಯಿಸಿದ್ದರು ಸುಧಾ ಬೆಳವಾಡಿ. ಮುಂದೆ 'ಲಕ್ಷಣ' ಧಾರಾವಾಹಿಯಲ್ಲಿ ಶಕುಂತಲಾ ಆಗಿ ನಟಿಸಿದ್ದ ಈಕೆ ಮೊದಲ ಬಾರಿಗೆ ಖಡಕ್ ಹೆಣ್ಣುಮಗಳಾಗಿ ತೆರೆಯ ಮೇಲೆ ಕಾಣಿಸಿಕೊಂಡಿದ್ದರು. ಇದೀಗ 'ವಧು' ಧಾರಾವಾಹಿಯ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ಸುಧಾ ಬೆಳವಾಡಿ ಕಿರುತೆರೆ, ಹಿರಿತೆರೆ ಎರಡರಲ್ಲೂ ನಟನಾ ಕಂಪನ್ನು ಪಸರಿಸಿದ್ದಾರೆ.


Click it and Unblock the Notifications











