'ಭರ್ಜರಿ ಬ್ಯಾಚುಲರ್ಸ್' ಜೊತೆ ಸೇರಿದ ಸುಕೃತಾ ನಾಗ್! ಮನರಂಜನೆ ಇನ್ನು ಗ್ಯಾರೆಂಟಿ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ರಿಯಾಲಿಟಿ ಶೋ 'ಭರ್ಜರಿ ಬ್ಯಾಚುಲರ್ಸ್' ಸೀಸನ್ 1 ಮುಕ್ತಾಯಗೊಂಡಿರುವುದು ಕಿರುತೆರೆ ವೀಕ್ಷಕರಿಗೆ ತಿಳಿದೇ ಇದೆ. ವಿಭಿನ್ನ ರೀತಿಯ ಈ ರಿಯಾಲಿಟಿ ಶೋ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯೂ ಆಗಿತ್ತು. ಇದೀಗ ಅದರ ಯಶಸ್ಸಿನ ಬೆನ್ನಲ್ಲೇ ಸೀಸನ್ 2 ಶುರುವಾಗಿದೆ. ಇದೇ ವಾರಾಂತ್ಯದಿಂದ ಶುರುವಾಗಲಿರುವ ಈ ಶೋವಿನಲ್ಲಿ ಹತ್ತು ಜನ ಬ್ಯಾಚುಲರ್ಸ್ ಗಳು ಸ್ಪರ್ಧಿಗಳಾಗಿ ಕಾಣಿಸಿಕೊಂಡಿದ್ದಾರೆ.
ಇನ್ನು ಈ ಹತ್ತು ಜನ ಸ್ಪರ್ಧಿಗಳಿಗೆ ಹತ್ತು ಜನ ಮೆಂಟರ್ ಗಳು ಇದ್ದು ಅವರಲ್ಲಿ ಹೆಚ್ಚಿನವರು ಕಿರುತೆರೆ ಕಲಾವಿದರುಗಳು ಹೌದು. ಇನ್ನು ಸಂತೋಷದ ವಿಚಾರವೆಂದರೆ ಕಿರುತೆರೆ ನಟಿ ಸುಕೃತಾ ನಾಗ್ ಅವರು ಕೂಡಾ ಈ ಶೋವಿನಲ್ಲಿ ಮೆಂಟರ್ ಆಗಿ ಕಾಣಿಸಿಕೊಂಡಿದ್ದಾರೆ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿತ್ತಿದ್ದ 'ಕಾವೇರಿ ಕನ್ನಡ ಮೀಡಿಯಂ' ಧಾರಾವಾಹಿಯಲ್ಲಿ ವೃಂದಾ ಪಾತ್ರದಲ್ಲಿ ಈ ನಟಿ ನಟಿಸಿದ್ದರು. ಹಠಮಾರಿ ಹೆಣ್ಣು ಮಗಳು ವೃಂದಾಳಾಗಿ ತೆರೆಯ ಮೇಲೆ ಮೋಡಿ ಮಾಡಿದ್ದ ಸುಕೃತಾ ನಾಗ್ ತದ ನಂತರ ಕಾರಣಾಂತರಗಳಿಂದ ವೃಂದಾ ಪಾತ್ರಕ್ಕೆ ವಿದಾಯ ಹೇಳಿದ್ದರು.
ನಂತರ ಕೊಂಚ ಸಮಯ ಕಿರುತೆರೆಯಲ್ಲಿ ಕಾಣಿಸಿಕೊಂಡಿರದ ಈಕೆ ನಂತರ ಬದಲಾದುದು ಕನ್ನಿಕಾಳಾಗಿ. ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಭಾಗ್ಯಲಕ್ಷ್ಮಿ' ಧಾರಾವಾಹಿಯಲ್ಲಿ ಖಳನಾಯಕಿ ಶ್ರೇಷ್ಠಾ ಗೆಳತಿ ಕನ್ನಿಕಾ ಆಗಿ ನಟಿಸುತ್ತಿದ್ದ ಅಮೃತಾ ಉಪ್ಪೇರ ಇದ್ದಕ್ಕಿದ್ದಂತೆ ಪಾತ್ರದಿಂದ ಹೊರಬಂದರು. ಆಗ ಆ ಜಾಗಕ್ಕೆ ಕಾಲಿಟ್ಟವರೇ ಸುಕೃತಾ ನಾಗ್. ಒಂದು ತರಹ ನೆಗೆಟಿವ್ ರೋಲ್ ಎಂದೇ ಹೇಳಬಹುದಾದ ಕನ್ನಿಕಾ ಪಾತ್ರಕ್ಕೆ ಜೀವ ತುಂಬಿದ ಸುಕೃತಾ ನಟನೆಯ ಮೂಲಕ ಮನ ಸೆಳೆಯುತ್ತಿದ್ದಾರೆ.
ಇದೀಗ 'ಭರ್ಜರಿ ಬ್ಯಾಚುಲರ್ಸ್' ತಂಡ ಸೇರಿರುವ ಸುಕೃತಾ ಯಾರ ಮೆಂಟರ್ ಆಗಲಿದ್ದಾರೆ ಎಂಬ ವಿಚಾರ ಇನ್ನು ತಿಳಿಯಬೇಕಿದೆ. ಒಟ್ಟಿನಲ್ಲಿ ಧಾರಾವಾಹಿಗಳ ನಂತರ ಇದೀಗ ರಿಯಾಲಿಟಿ ಶೋವಿನಲ್ಲಿ ಮಿಂಚುತ್ತಿರುವ ಸುಕೃತಾ ನಾಗ್ ನಟನೆಯ ನಂಟು ಬೆಳೆಸಿಕೊಂಡಿದ್ದು ಬಾಲನಟಿಯಾಗಿ.

'ಕಾದಂಬರಿ' ಧಾರಾವಾಹಿಯಲ್ಲಿ ಬಾಲನಟಿಯಾಗಿ ನಟಿಸುವ ಮೂಲಕ ಬಣ್ಣದ ಲೋಕದ ನಂಟು ಬೆಳೆಸಿಕೊಂಡ ಸುಕೃತಾ ಮತ್ತೆ ಹಿಂತಿರುಗಿ ನೋಡಿದ್ದಿಲ್ಲ.'ಕಾದಂಬರಿ' ಯ ನಂತರ ಶಿವಲೀಲಾಮೃತ, ಪುರುಷೋತ್ತಮ, ಸರಸ್ವತಿ, ಮಹಾಭಾರತ ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ನಂತರ 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ಅಂಜಲಿಯಾಗಿ ಅಭಿನಯಿಸಿದ ಈಕೆ ಒಂದಲ್ಲ ಎರಡಲ್ಲ, ಬರೋಬ್ಬರಿ ಏಳು ವರ್ಷಗಳ ಕಾಲ ಆ ಪಾತ್ರದ ಮೂಲಕ ವೀಕ್ಷಕರ ಮನ ಸೆಳೆದರು. ಜೊತೆಗೆ 'ಅಗ್ನಿಸಾಕ್ಷಿ' ಧಾರಾವಾಹಿ ಮುಕ್ತಾಯಗೊಂಡು ನಾಲ್ಕು ವರ್ಷಗಳು ಕಳೆದಿದೆ. ಆದರೂ ಕೂಡಾ ಜನ ನನ್ನನ್ನು ಇಂದಿಗೂ ಅದೇ ಪಾತ್ರದ ಮೂಲಕ ಗುರುತಿಸುತ್ತಾರೆ. ಈಗಲೂ ಕಿರುತೆರೆ ವೀಕ್ಷಕರು ಅಂಜಲಿ ಪಾತ್ರದಿಂದ ನನ್ನನ್ನು ಗುರುತಿಸುವಾಗ, ಕರೆಯುವಾಗ ತುಂಬಾನೇ ಖುಷಿಯಾಗುತ್ತಿದೆ ಎಂದು ಈ ಹಿಂದೆ ಫಿಲ್ಮಿಬೀಟ್ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಸುಕೃತಾ ನಾಗ್ ಹೇಳಿಕೊಂಡಿದ್ದರು.
'ಅಗ್ನಿಸಾಕ್ಷಿ' ಧಾರಾವಾಹಿಯ ನಂತರ "ಲಕ್ಷಣ" ಧಾರಾವಾಹಿಯಲ್ಲಿ ನಟಿಸಿದ ಸುಕೃತಾ ನಾಗ್ ಪರಿಪೂರ್ಣವಾಗಿ ಖಳನಾಯಕಿಯಾಗಿ ಕಿರುತೆರೆಯ ಮೇಲೆ ಮಿಂಚಿದರು. ಶ್ವೇತಾ ಆಗಿ ಅಭಿನಯಿಸಿರುವ ಈಕೆ ನೆಗೆಟಿವ್ ಪಾತ್ರದ ಮೂಲಕ ವೀಕ್ಷಕರ ಮನ ಸೆಳೆದಿದ್ದರು. ಜೊತೆಗೆ ಸುಕೃತಾ ನಾಗ್ ಅವರಿಗೆ ಆರಂಭದಲ್ಲಿ 'ಲಕ್ಷಣ' ಧಾರಾವಾಹಿಯ ಶ್ವೇತಾ ಪಾತ್ರ ದೊರೆತಾಗ ಖುಷಿಗಿಂತಲೂ ಭಯವೇ ಜಾಸ್ತಿ ಆಗಿತ್ತಂತೆ. ಮೊದಲ ಬಾರಿಗೆ ಖಳನಾಯಕಿಯ ಪಾತ್ರ ಮಾಡುವ ಅವಕಾಶ ದೊರಕಿದೆ. ತನ್ನಿಂದ ಸಾಧ್ಯವೇ ಎಂಬ ಅಳುಕು ಮೂಡಿತ್ತಂತೆ. ಆದರೆ, ಮುಂದೆ ಜನ ಒಪ್ಪಿಕೊಂಡಾಗ ಶ್ವೇತಾ ಪಾತ್ರದಲ್ಲಿ ನಟಿಸಿದ್ದು ಸಾರ್ಥಕ ಎಂದೆನಿಸಿತು ಎಂದು ಲಕ್ಷಣ ಧಾರಾವಾಹಿ ಮುಕ್ತಾಯಗೊಂಡಾಗ ಫಿಲ್ಮಿಬೀಟ್ ಜೊತೆಗೆ ಹಂಚಿಕೊಂಡಿದ್ದರು ಈಕೆ.
ಒಟ್ಟಿನಲ್ಲಿ ತಮ್ಮ ಸಹಜ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಸುಕೃತಾ ನಾಗ್ ಅವರು ಇದೀಗ ರಿಯಾಲಿಟಿ ಶೋವಿನಲ್ಲಿ ಕಾಣಿಸಿಕೊಳ್ಳುತ್ತಿರುವುದು ಕಿರುತೆರೆ ವೀಕ್ಷಕರಿಗೆ ಖುಷಿ ತಂದಿದೆ.


Click it and Unblock the Notifications











