ಮರಳಿ ಬಂದರು 'ಕಲ್ಯಾಣ ಮಂಟಪ'ದ ಸುಮನ್ ನಗರ್ಕರ್
ಪೂರ್ಣಿಮಾ ಎಂಟರ್ ಪ್ರೈಸಸ್ ಮೂಲಕ ರಾಘವೇಂದ್ರ ರಾಜ್ ಕುಮಾರ್ ಅವರ 'ಕಲ್ಯಾಣ ಮಂಟಪ' ಸಿನಿಮಾದಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು ಸುಮನ್ ನಗರ್ಕರ್. ಈಗ ಅದೇ ಪೂರ್ಣಿಮಾ ಎಂಟರ್ ಪ್ರೈಸಸ್ ಮೂಲಕ ರಾಘವೇಂದ್ರ ರಾಜ್ ಕುಮಾರ್ ಅವರ ನಿರ್ಮಾಣದ 'ಮರಳಿ ಬಂದಳು ಸೀತೆ' ಧಾರಾವಾಹಿ ಮೂಲಕ ಮತ್ತೊಮ್ಮೆ ಕಿರುತೆರೆಗೆ ಮರಳಿ ಬಂದಿದ್ದಾರೆ.
"ನನ್ನ ಚಿತ್ರರಂಗದ ಡೆಬ್ಯೂ ಆಗಿದ್ದು ವಜ್ರೇಶ್ವರಿ ಕಂಬೈನ್ಸ್ ಮೂಲಕ, ಈಗ ಅದೇ ಸಂಸ್ಥೆ ಮೂಖಾಂತರ ಕಿರುತೆರೆಯಲ್ಲಿ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ನಾನು ಮಾಡುವ ಪಾತ್ರ ವಿಭಿನ್ನವಾಗಿರಬೇಕು ಅನ್ನೋದು ನನ್ನ ನಂಬಿಕೆ, ಅದೇ ರೀತಿ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ, ಇದೊಂದು ಸ್ಪೆಷೆಲ್ ಅಪಿಯರೆನ್ಸ್ ಎನ್ನಬಹುದು'' ಅಂತಾರೆ ಸುಮನ್ ನಗರ್ಕರ್.

ಸೀತೆ ಯಾರು ಎನ್ನುವ ಗೊಂದಲ ಬಿಡಿಸುವ ಅನುಷ್ಕಾ ರಾಥೋಡ್ ಎಂಬ ಮನಃಶಾಸ್ತ್ರಜ್ಞೆನೆಯ ಪಾತ್ರದಲ್ಲಿ ಸುಮನ್ ಕಾಣಿಸಿಕೊಳ್ಳಲಿದ್ದಾರೆ.
''25 ವರ್ಷದ ಹಿಂದೆ ಕಲ್ಯಾಣ ಮಂಟಪ ಸಿನಿಮಾದಲ್ಲಿ ನನ್ನ ತಂಗಿ ಪಾತ್ರದಲ್ಲಿ ಸುಮನ್ ನಗರ್ಕರ್ ನಟಿಸಿದ್ರು. ನಂತರ ಅನೇಕ ಸಿನಿಮಾಗಳನ್ನು ಮಾಡಿ ಯಶಸ್ಸುಗಳಿಸಿದರು, ಮನೆಮಾತಾದರು.ಈಗ ಅವರದೇ ಮನೆ ಧಾರಾವಾಹಿ ಎನ್ನುವಷ್ಟು ಪ್ರೀತಿಯಿಂದ ಮರಳಿ ಬಂದಳು ಸೀತೆಯಲ್ಲಿ ನಟಿಸುತ್ತಿದ್ದಾರೆ. ಅವರ ಪಾತ್ರ ಧಾರಾವಾಹಿಗೆ ದೊಡ್ಡ ತಿರುವು ನೀಡಲಿದೆ. ಅವರಿಗೆ ಒಳ್ಳೆಯದಾಗಲಿ, ಅವರಿಂದ ನಮ್ಮ ಧಾರಾವಾಹಿಗೆ ಉತ್ತಮ ಸ್ಪಂದನೆ ಸಹ ಮುಂದುವರೆಯಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ'' - ರಾಘವೇಂದ್ರ ರಾಜ್ ಕುಮಾರ್ - ನಟ, ನಿರ್ಮಾಪಕ

''ದೊಡ್ಡ ಕಲಾವಿದೆಯೊಬ್ಬರು ನಮ್ಮ ಧಾರಾವಾಹಿಯಲ್ಲಿ ನಟಿಸುತ್ತಿರುವುದು, ನಮಗೆಲ್ಲಾ ಖುಷಿ ತಂದಿದೆ. ಉತ್ತಮ ಕಥೆ, ಒಳ್ಳೆ ಬ್ಯಾನರ್ ಮತ್ತು ಒಳ್ಳೆ ಚ್ಯಾನಲ್ ಮೂಲಕ ಸುಮನ್ ನಗರ್ಕರ್ ಕಿರುತೆರೆಗೆ ಬಂದಿರುವುದು ಸಂತೋಷವಾಗಿದೆ'' ಎನ್ನುತ್ತಾರೆ ಮರಳಿ ಬಂದಳು ಸೀತೆ ಧಾರಾವಾಹಿಯ ನಿರ್ದೇಶಕ ಎಸ್.ಗೋವಿಂದ್.
ಸುಮನ್ ನಗರ್ಕರ್ ಅವರ ಪ್ರವೇಶದಿಂದ ಸೀತೆ ಪಾತ್ರ ಮತ್ತು ಧಾರಾವಾಹಿಯ ಕಥೆ ದೊಡ್ಡ ತಿರುವು ಪಡೆಯಲಿದೆ. ಮರಳಿ ಬಂದಳು ಸೀತೆ ಧಾರಾವಾಹಿ ಸೋಮವಾರದಿಂದ ಶನಿವಾರದವರೆಗೆ ಪ್ರತಿ ರಾತ್ರಿ 7ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.


Click it and Unblock the Notifications











