Bhagyalakshmi-Sushma: ನಟಿ ಸುಷ್ಮಾ ಅಂದು ಕಿರುತೆರೆ ಬೆಸ್ಟ್ ಮಗಳು.. ಇಂದು ಮನೆ ಮೆಚ್ಚಿದ ಸೊಸೆ!
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಭಾಗ್ಯಲಕ್ಷ್ಮಿ' ಧಾರಾವಾಹಿಯಲ್ಲಿ ನಾಯಕಿ ಭಾಗ್ಯಳಾಗಿ ನಟಿಸುತ್ತಿರುವ ಸುಷ್ಮಾ ರಾವ್ ಮನೆ ಮೆಚ್ಚಿದ ಮಗಳು ಮಾತ್ರವಲ್ಲ ಮನೆ ಮೆಚ್ಚಿದ ಸೊಸೆಯೂ ಹೌದು. ಕಲರ್ಸ್ ಕನ್ನಡ ಅನುಬಂಧ ಅವಾರ್ಡ್ಸ್ ಇತ್ತೀಚೆಗೆ ನಡೆದಿದ್ದು ಅದರಲ್ಲಿ ಮನೆ ಮೆಚ್ಚಿದ ಸೊಸೆ ಪ್ರಶಸ್ತಿ ಪಡೆದಿದ್ದಾರೆ ನಟಿ ಸುಷ್ಮಾ ರಾವ್.
ಭಾಗ್ಯಳಾಗಿ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಸುಷ್ಮಾ ರಾವ್ ಅವರ ಬಣ್ಣದ ಪಯಣ ಶುರುವಾಗಿದ್ದು ಎಸ್.ನಾರಾಯಣ್ ನಿರ್ದೇಶನದ 'ಭಾಗೀರಥಿ' ಧಾರಾವಾಹಿಯ ಮೂಲಕ. ತದ ನಂತರ 'ಸ್ವಾತಿಮುತ್ತು', 'ಬಿದಿಗೆ ಚಂದ್ರಮ' ಧಾರಾವಾಹಿಯಲ್ಲಿ ಅಭಿನಯಿಸಿದ ಸುಷ್ಮಾ ರಾವ್ 'ಯಾವ ಜನ್ಮದ ಮೈತ್ರಿ'ಯಲ್ಲಿ ತ್ರಿಪಾತ್ರದಲ್ಲಿ ಕಾಣಿಸಿಕೊಂಡು ಸೈ ಎನಿಸಿಕೊಂಡರು.

ಮುಂದೆ 'ಗುಪ್ತಗಾಮಿನಿ' ಧಾರಾವಾಹಿಯ ಭಾವನಾ ಆಗಿ ಬದಲಾದ ಸುಷ್ಮಾ ರಾವ್‌ಗೆ ಆ ಪಾತ್ರ ನೀಡಿದ ಜನಪ್ರಿಯತೆ ಅಷ್ಟಿಷ್ಟಲ್ಲ. ಧಾರಾವಾಹಿ ಮುಗಿದು ವರ್ಷ 18 ಕಳೆದರೂ ಇಂದಿಗೂ ಸುಷ್ಮಾ ಅವರು ಆ ಪಾತ್ರದ ಮೂಲಕ ಗುರುತಿಸಿಕೊಂಡಿದ್ದಾರೆ. ಅಷ್ಟರ ಮಟ್ಟಿಗೆ ಆ ಪಾತ್ರ ವೀಕ್ಷಕರ ಮನದಲ್ಲಿ ಅಚ್ಚೊತ್ತಿಬಿಟ್ಟಿದೆ. ಮಾತ್ರವಲ್ಲದೇ ಗುಪ್ತಗಾಮಿನಿಯ ಕರ್ನಾಟಕ ಟೆಲಿವಿಶನ್ ಅಸೋಸಿಯೇಷನ್ ಕೊಡುವ ಉತ್ತಮ ನಟಿ ಪ್ರಶಸ್ತಿಯನ್ನು ಈಕೆ ಪಡೆದುಕೊಂಡಿದ್ದಾರೆ.
'ಗುಪ್ತಗಾಮಿನಿ' ಧಾರಾವಾಹಿಯ ನಂತರ ಆರು ವರ್ಷಗಳ ಕಾಲ ನಟನೆಯಿಂದ ಬ್ರೇಕ್ ಪಡೆದುಕೊಂಡಿದ್ದ ಸುಷ್ಮಾ ಮತ್ತೆ ಬಣ್ಣ ಹಚ್ಚಿದ್ದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸೊಸೆ ತಂದ ಸೌಭಾಗ್ಯ' ಧಾರಾವಾಹಿಯಲ್ಲಿ. 'ಸೊಸೆ ತಂದ ಸೌಭಾಗ್ಯ' ಧಾರಾವಾಹಿಯಲ್ಲಿ ಕೀರ್ತಿ ಆಗಿ ನಟಿಸಿದ ಈಕೆ ಜೀ ಕುಟುಂಬ ಅವಾರ್ಡ್ಸ್ ನೀಡುವ ಬೆಸ್ಟ್ ಮಗಳು ಪ್ರಶಸ್ತಿ ಪಡೆದಿದ್ದಾರೆ.

ಸದ್ಯ 'ಭಾಗ್ಯಲಕ್ಷ್ಮಿ' ಧಾರಾವಾಹಿಯ ಭಾಗ್ಯಳಾಗಿ ಮೋಡಿ ಮಾಡುತ್ತಿರುವ ಇವರು ನಟನೆಯ ಹೊರತಾಗಿ ನಿರೂಪಕಿಯಾಗಿಯೂ ಗಮನ ಸೆಳೆದಿದ್ದಾರೆ. ಹೌದು, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ತರ್ಲೆ ನನ್ ಮಕ್ಳು' ಶೋ ನಿರೂಪಕಿಯಾಗಿ ಸೈ ಎನಿಸಿದ್ದ ಈಕೆ ಮುಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಜೀನ್ಸ್' ರಿಯಾಲಿಟಿ ಶೋ ವಿನ ಸಾರಥ್ಯವನ್ನು ವಹಿಸಿಕೊಂಡಿದ್ದರು. ಮುಂದೆ 'ಮನೆ ಮನೆ ಮಹಾಲಕ್ಷ್ಮಿ' ರಿಯಾಲಿಟಿ ಶೋವಿನ ನಿರೂಪಣೆ ಮಾಡಿದ್ದ ಸುಷ್ಮಾ 'ಸೀರಿಯಲ್ ಸಂತೆ', ಅವಾರ್ಡ್ ಕಾರ್ಯಕ್ರಮ, ಹಾಡು ಹರಟೆ ಕಾರ್ಯಕ್ರಮಗಳ ನಿರೂಪಕಿಯಾಗಿ ಮೋಡಿ ಮಾಡಿದ್ದಾರೆ.


Click it and Unblock the Notifications











