ಅದ್ಧೂರಿ ಮದುವೆ ಫೋಟೊಗಳನ್ನು ಹಂಚಿಕೊಂಡ 'ಸೀತಾರಾಮ' ನಟಿ ವೈಷ್ಣವಿ ಗೌಡ
ಉತ್ತರ ಪ್ರದೇಶ ಮೂಲದ ಆರ್ಮಿ ಆಫೀಸರ್ ಅನುಕೂಲ್ ಮಿಶ್ರಾ ಜೊತೆ ಕಿರುತೆರೆ ನಟಿ ವೈಷ್ಣವಿ ಗೌಡ ಮುದುವೆ ನೆರವೇರಿದೆ. ಇದೀಗ ಸ್ವತಃ ವೈಷ್ಣವಿ ಮದುವೆಯ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಕಳೆದ 3 ದಿನಗಳಿಂದ ಮದುವೆ ಶಾಸ್ತ್ರಗಳು ನಡೆದಿತ್ತು. ಜೂನ್ 5ರ ತಡರಾತ್ರಿ ಮಾಂಗಲ್ಯಧಾರಣೆ ನಡೆದಿದೆ ಎಂದು ವರದಿಯಾಗಿದೆ.
ಏಪ್ರಿಲ್ 14ರಂದು ಅನುಕೂಲ್ ಮಿಶ್ರಾ ಜೊತೆ ವೈಷ್ಣವಿ ಗೌಡ ಉಂಗುರ ಬದಲಿಸಿಕೊಂಡಿದ್ದರು. ಒಂದೂವರೆ ತಿಂಗಳ ಅಂತರದಲ್ಲಿ ಇದೀಗ ಹಸೆಮಣೆ ಏರಿದ್ದಾರೆ. 'ಅಗ್ನಿಸಾಕ್ಷಿ' ಹಾಗೂ 'ಸೀತಾರಾಮ' ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿ ವೈಷ್ಣವಿ ವೀಕ್ಷಕರ ಮನಗೆದ್ದಿದ್ದರು. ಬಿಗ್‌ಬಾಸ್ ಸೀಸನ್ 8ರ ಸ್ಪರ್ಧಿ ಕೂಡ ಆಗಿದ್ದರು. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಕೂಡ ಸಖತ್ ಆಕ್ಟೀವ್ ಆಗಿದ್ದಾರೆ.

ಇತ್ತೀಚೆಗಷ್ಟೆ ವೈಷ್ಣವಿ ನಟನೆಯ 'ಸೀತಾರಾಮ' ಧಾರಾವಾಹಿ ಮುಕ್ತಾಯವಾಗಿತ್ತು. ಅದರ ಬೆನ್ನಲ್ಲೇ ಇದೀಗ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ನಗರದ ಹೊರವಲಯದ ರೆಸಾರ್ಟ್‌ವೊಂದರಲ್ಲಿ ಮದುವೆ ಶಾಸ್ತ್ರಗಳು ನಡೆದಿವೆ. ಬಹಳ ಅದ್ಧೂರಿಯಾಗಿ ಮದುವೆ ಸಮಾರಂಭ ನಡೆದಿದೆ. ಸೀತಾರಾಮ ಧಾರಾವಾಹಿ ಕಲಾವಿದರು, ತಂತ್ರಜ್ಞರ ಜೊತೆಗೆ ವೈಷ್ಣವಿ ಆಪ್ತರಾಗಿರುವ ಹಲವರು ಕಲ್ಯಾಣೋತ್ಸವಕ್ಕೆ ಸಾಕ್ಷಿ ಆಗಿದ್ದರು.
ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ನಟಿ ಪದ್ಮಕಲಾ ಡಿ ಎಸ್, ಬಾಲ ನಟಿ ರಿತು ಸಿಂಗ್, ನಟಿ ಅಮೂಲ್ಯ, ನಟ ವಿಜಯ್ ಸೂರ್ಯ, ನಟಿ ನಿವೇದಿತಾ ಗೌಡ ಸೇರಿದಂತೆ ಹಲವರು ಈ ಸಂಭ್ರಮದಲ್ಲಿ ಭಾಗಿ ಆಗಿ ನವ ಜೋಡಿಗೆ ಶುಭಾಶಯ ಕೋರಿದ್ದಾರೆ. ಸಂಗೀತ್, ಮೆಹಂದಿ, ರೆಸೆಪ್ಷನ್ ಪಾರ್ಟಿ, ಮಾಂಗಲ್ಯಧಾರಣೆ ಹೀಗೆ ಬಹಳ ಅದ್ಧೂರಿಯಾಗಿ ಮದುವೆ ಶಾಸ್ತ್ರಗಳು ನಡೆದಿವೆ. ಕೆಂಪು, ಹಳದಿ ಮಿಶ್ರಿತ ಲೆಹಂಗಾದಲ್ಲಿ ವೈಷ್ಣವಿ ಮಿಂಚಿದ್ರೆ, ಬಿಳಿ ಬಣ್ಣದ ಶೇರ್ವಾಣಿಯಲ್ಲಿ ಮದುಮಗ ಕಂಗೊಳಿಸಿದ್ದಾರೆ.
ಏರ್‌ಫೋರ್ಸ್ ಆಫೀಸರ್ ಆಗಿ ಅನುಕೂಲ್ ಮಿಶ್ರಾ ಕೆಲಸ ಮಾಡುತ್ತಿದ್ದಾರೆ. ಎಂಗೇಜ್‌ಮೆಂಟ್ ಬೆನ್ನಲ್ಲೇ ತಮ್ಮ ಭಾವಿ ಪತಿಯ ಬಗ್ಗೆ ವೈಷ್ಣವಿ ತಮ್ಮ ಯೂಟ್ಯೂಬ್ ವೀಡಿಯೋದಲ್ಲಿ ಮಾಹಿತಿ ನೀಡಿದ್ದರು. ಇದಕ್ಕೂ ಮುನ್ನ ವಿದ್ಯಾಭರಣ್ ಎಂಬುವವರ ಜೊತೆ ವೈಷ್ಣವಿ ಮದುವೆ ಮಾತುಕತೆ ನಡೆದಿತ್ತು. ಬಳಿಕ ಕಾರಣಾಂತರಗಳಿಂದ ಅದು ಮುರಿದು ಬಿದ್ದಿತ್ತು. ಆ ನಂತರ ಅನುಕೂಲ್ ಮಿಶ್ರಾ ಪರಿಚಯವಾಗಿ ಅದು ಸ್ನೇಹಕ್ಕೆ ತಿರುಗಿ ಇದೀಗ ಮುದುವೆಯ ಮುದ್ರೆ ಬಿದ್ದಿದೆ.
ತಾಯಿಯೊಂದಿಗೆ ದೇವಸ್ಥಾನಕ್ಕೆ ಹೋಗಿದ್ದಾಗ ಸಹಾಯಕ ನಿರ್ದೇಶಕರೊಬ್ಬರು ವೈಷ್ಣವಿ ಅವರನ್ನು ನೋಡಿ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಕೊಟ್ಟಿದ್ದರು. ಜೀ ಕನ್ನಡದ 'ದೇವಿ' ಧಾರಾವಾಹಿಯಲ್ಲಿ ಮೊದಲಿಗೆ ನಟಿಸಿದ್ದರು. ಬಳಿಕ 'ಪುನರ್ ವಿವಾಹ' ಧಾರಾವಾಹಿಯಲ್ಲಿ ಕೂಡ ಪೋಷಕ ಪಾತ್ರದಲ್ಲಿ ಮಿಂಚಿದ್ದರು. ಬಳಿಕ 'ಅಗ್ನಿಸಾಕ್ಷಿ' ಧಾರಾವಾಹಿಯ ನಾಯಕಿ ಪಾತ್ರ ಸಿಕ್ಕಿತ್ತು. 'ಭರ್ಜರಿ ಕಾಮಿಡಿ' ಕಾರ್ಯಕ್ರಮ ನಿರೂಪಣೆ ಸಹ ಮಾಡಿದ್ದರು.
'ಡ್ರೆಸ್ ಕೋಡ್' ಹಾಗೂ 'ಗಿರಗಿಟ್ಲೆ' ಎಂಬ ಸಿನಿಮಾಗಳಲ್ಲಿ ಕೂಡ ವೈಷ್ಣವಿ ಗೌಡ ನಟಿಸಿದ್ದಾರೆ. ಭರತನಾಟ್ಯ, ಕುಚುಪುಡಿ ಹಾಗೂ ಬೆಲ್ಲಿ ಡ್ಯಾನ್ಸ್ ಕೂಡ ಅವರು ಅಭ್ಯಾಸ ಮಾಡಿದ್ದಾರೆ. ಬೆಂಗಳೂರಿನ ಜಯನಗರದ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ವೈಷ್ಣವಿಗೆ ಸುನೀಲ್ ಕುಮಾರ್ ಎಂಬ ಸಹೋದರ ಇದ್ದಾನೆ.
ಮದುವೆ ಬಳಿಕ ಕೂಡ ತಮ್ಮ ಬಣ್ಣದಲೋಕದ ಜರ್ನಿಯನ್ನು ವೈಷ್ಣವಿ ಗೌಡ ಮುಂದುವರೆಸಲಿದ್ದಾರೆ. ಇನ್ನು ಸಾಕಷ್ಟು ಉತ್ಪನ್ನಗಳ ಬಗ್ಗೆ ಪ್ರಚಾರವನ್ನು ಮಾಡುತ್ತಾರೆ. ವಿವಾದಾತ್ಮಕ ಜಂಗ್ಲಿ ರಮ್ಮಿ ಗೇಮ್ ಪ್ರಚಾರ ಮಾಡಿ ಟೀಕೆಗೂ ಗುರಿಯಾಗಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ 15 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ. ಯೂಟ್ಯೂಬ್ ವೀಡಿಯೋಗಳ ಮೂಲಕವೂ ಒಳ್ಳೆ ಆದಾಯ ಗಳಿಸುತ್ತಿದ್ದಾರೆ.
ನಟಿ ವೈಷ್ಣವಿ ಗೌಡ ಅವರನ್ನು ಮತ್ತೆ ಕಿರುತೆರೆಯಲ್ಲಿ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. 'ಸೀತಾರಾಮ' ಧಾರಾವಾಹಿ ಬೇಗ ಮುಗಿಸಿದ್ದು ಕೂಡ ಕೆಲವರಿಗೆ ಬೇಸರ ತಂದಿತ್ತು.


Click it and Unblock the Notifications











