5 ವರ್ಷಗಳಿಂದ ಆಡಿಷನ್ ಕೊಟ್ಟು ಸುಸ್ತಾಗಿದ್ದ 'ಲಕ್ಷಣ'ದ ಹುಡುಗಿ 'ಮೈನಾ' ಕಿರುತೆರೆಗೆ ಎಂಟ್ರಿ; ಈ ನಟಿಯ ಹಿನ್ನೆಲೆಯೇನು?
ನಾನಾ ನಮೂನೆಯ ಧಾರಾವಾಹಿಗಳ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿರುವ ವಾಹಿನಿಗಳ ಪೈಕಿ ಉದಯ ವಾಹಿನಿಯೂ ಒಂದು. ಹೀಗಿರುವಾಗ ಉದಯ ವಾಹಿನಿಯಲ್ಲಿ ಇದೀಗ ಹೊಸ ಧಾರಾವಾಹಿಯೊಂದು ಶುರುವಾಗಲಿದೆ. ಸ್ತ್ರೀ ಪ್ರಧಾನ ಕಥೆಯೊಂದು ಕಿರುತೆರೆ ವೀಕ್ಷಕರನ್ನು ರಂಜಿಸಲು ಬರುತ್ತಿದೆ. ಅದುವೇ 'ಮೈನಾ'. ಈ ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ವಿಜಯಲಕ್ಷ್ಮಿ ನಟಿಸುತ್ತಿದ್ದಾರೆ.
ಕಿರುತೆರೆ ನಟಿ ವಿಜಯಲಕ್ಷ್ಮಿ ಮೈನಾ ಪಾತ್ರದಲ್ಲಿ ನಿಮ್ಮನ್ನು ರಂಜಿಸಲಿದ್ದಾರೆ. ಹೌದು, ಈ ಹಿಂದೆ ನಕ್ಷತ್ರಳಾಗಿ ನಟಿಸಿ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ಮಹಾಪೂರವನ್ನೇ ಉಣಬಡಸಿದ್ದ ವಿಜಯಲಕ್ಷ್ಮಿ ಇದೀಗ ಮೈನಾ ಆಗಿ ಮತ್ತೊಮ್ಮೆ ತೆರೆಯ ಮೇಲೆ ಬರಲಿದ್ದಾರೆ. ಹಳ್ಳಿ ಹುಡುಗಿ ಮೈನಾಳಾಗಿ ಕಾಣಿಸಿಕೊಳ್ಳುತ್ತಿರುವ ವಿಜಯಲಕ್ಷ್ಮಿ ಅವರಿಗೆ ಇದು ಎರಡನೇ ಧಾರಾವಾಹಿ.

ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ವಿಜಯಲಕ್ಷ್ಮಿಗೆ ನಟನೆಯಲ್ಲಿ ಆಸಕ್ತಿ ಇತ್ತು. ನಟಿಯಾಗಿ ತೆರೆಯ ಮೇಲೆ ಕಾಣಿಸಿಕೊಳ್ಳುವ ಆಸೆಯೂ ಇತ್ತು. ಅದಕ್ಕಾಗಿ ಆಕೆ ಪ್ರಯತ್ನವನ್ನೂ ಕೂಡಾ ಮಾಡಿದ್ದರು. ಆದರೆ, ಯಾವುದೂ ಕೂಡಾ ಈಡೇರಲಿಲ್ಲ. ಕೊನೆಗೆ ಒಂದು ಧಾರಾವಾಹಿಯ ಆಡಿಶನ್‌ನಲ್ಲಿ ಕಪ್ಪಗಿದ್ದರೂ ಲಕ್ಷಣವಾಗಿರುವ ಹುಡುಗಿ ಬೇಕು ಎಂಬ ಪ್ರಕಟಣೆ ಕಂಡಿತು. ಏನಾದರಾಗಲೀ ಎಂದು ಆಡಿಶನ್‌ಗೆ ಹೋದ ಆಕೆ ಆಯ್ಕೆಯೂ ಆದರು.
ಮೊದಲ ಧಾರಾವಾಹಿಯಲ್ಲಿ ಆರ್ ಜೆ ಸಖಿಯಾಗಿ ಮೋಡಿ ಮಾಡಿದ್ದರು ವಿಜಯಲಕ್ಷ್ಮಿ. ಆಡಿಶನ್ ಸಮಯದಲ್ಲಿ ಸ್ಕ್ರಿಪ್ಟ್ ನೋಡುತ್ತಾ ಆರ್ ಜೆಯವರಂತೆ ಪಟಪಟನೆ ಮಾತನಾಡಲು ಆರಂಭದಲ್ಲಿ ಕಷ್ಟವಾಯಿತಂತೆ. ಅದಕ್ಕಾಗಿ ಅವರು ಎಫ್ ಎಂ ಕೇಳುತ್ತಾ ಅಭ್ಯಾಸವನ್ನು ಕೂಡಾ ಮಾಡಿದ್ದರಂತೆ. ಅದು ಆಕೆಗೆ ಸಹಾಯ ಮಾಡಿತಂತೆ. ನಕ್ಷತ್ರ ಆಗಿ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ವಿಜಯಲಕ್ಷ್ಮಿ ಬರೋಬ್ವರಿ ಐದು ವರ್ಷಗಳಿಂದ ಧಾರಾವಾಹಿಯ ಆಡಿಶನ್‌ನಲ್ಲಿ ಭಾಗವಹಿಸುತ್ತಿದ್ದರಂತೆ.
ಐದು ವರ್ಷಗಳಿಂದ ಸತತ ಆಡಿಶನ್‌ಗಳಲ್ಲಿ ಭಾಗವಹಿಸುತ್ತಿದ್ದ ವಿಜಯಲಕ್ಷ್ಮಿಗೆ ಆಯ್ಕೆಯಾಗದಿದ್ದಾಗ ಬೇಸರವಾಗಿತ್ತಂತೆ. ನಟಿಯಾಗ ಬೇಕು ಎಂಬುದೇ ಆಕೆಯ ಬಹು ದೊಡ್ಡ ಕನಸು. ಒಂದಲ್ಲ ಒಂದು ದಿನ ಅದು ಈಡೇರಬಹುದು ಎಂದು ಅನ್ನಿಸಿದ್ದರೂ ಕೊಂಚ ಭಯವೂ ಇತ್ತಂತೆ. ಅವಕಾಶಗಳು ಸಿಗದಿದ್ದಾಗ ಅಧ್ಯಾಪಕ ವೃತ್ತಿಗೂ ಪ್ರಯತ್ನ ಮಾಡುತ್ತಿದ್ದರಂತೆ. ಆದರೆ, ಅಧ್ಯಾಪಕಿಯಾಗಲೂ ಆಕೆಗೆ ಕೊಂಚವೂ ಇಷ್ಟವಿರಲಿಲ್ಲವಂತೆ. ಆ ಸಮಯದಲ್ಲಿ 'ಲಕ್ಷಣ' ಧಾರಾವಾಹಿಯಲ್ಲಿ ನಟಿಸುವ ಅವಕಾಶ ದೊರಕಿತಂತೆ.

ನಕ್ಷತ್ರ ಆಗಿ ಆಯ್ಕೆಯಾದಾಗ ತೆರೆಯ ಮೇಲೆ ಮೊದಲ ಬಾರಿ ಕಂಡಾಗ ವಿಜಯಲಕ್ಷ್ಮಿಗೆ ಬಹಳ ಖುಷಿಯಾಗಿತ್ತಂತೆ. ವೀಕ್ಷಕರು ಮೆಚ್ಚಿಕೊಂಡಾಗ ನಟನೆಗೆ ಬಂದು ಕೂಡಾ ಸಾರ್ಥಕವಾಯಿತು ಎಂದು ಆಕೆಗೆ ಅನ್ನಿಸಿದೆಯಂತೆ. ಇನ್ನು ಬಹುದಿನಗಳ ಕನಸು ನನಸಾದ ಸಂತಸದಲ್ಲಿರುವ ವಿಜಯಲಕ್ಷ್ಮಿ, ಇದೀಗ ಮೈನಾ ಆಗಿ ಕಿರುತೆರೆಯಲ್ಲಿ ಸೆಕೆಂಡ್ ಇನ್ಸಿಂಗ್ಸ್ ಶುರು ಮಾಡಲಿದ್ದಾರೆ. ಇದರ ಜೊತೆಗೆ ಗಣಿತದಲ್ಲಿ ಪಿಎಚ್ ಡಿ ಮಾಡುವ ಹಂಬಲವಿರುವ ಈಕೆ ಮತ್ತೊಮ್ಮೆ ಕಿರುತೆರೆ ವೀಕ್ಷಕರನ್ನು ರಂಜಿಸಲಿದ್ದಾರೆ.


Click it and Unblock the Notifications











