ಅಕುಲ್ ಬಾಲಾಜಿ ಕ್ಷಮೆ ಕೇಳಲೇಬೇಕು ಎಂದು ಪಟ್ಟು ಹಿಡಿದ ಆದಂ ಪಾಶಾ.!
'ಬಿಗ್ ಬಾಸ್' ಮನೆಯಿಂದ ಹೊರಗೆ ಬಂದ್ಮೇಲೆ ಆದಂ ಪಾಶಾ ಕಾಣಿಸಿಕೊಂಡಿದ್ದು 'ತಕಧಿಮಿತ' ಶೋನಲ್ಲಿ. ಡ್ಯಾನ್ಸ್ ರಿಯಾಲಿಟಿ ಶೋ ಆಗಿರುವ 'ತಕಧಿಮಿತ' ಶುರುವಾಗಿ ಇನ್ನೂ ಎರಡು ವಾರ ಕಳೆದಿಲ್ಲ. ಅಷ್ಟು ಬೇಗ ಈ ಕಾರ್ಯಕ್ರಮ ವಿವಾದಕ್ಕೀಡಾಗಿದೆ.
'ತಕಧಿಮಿತ' ವೇದಿಕೆ ಮೇಲೆ ಆದಂ ಪಾಶಾಗೆ ಅಕುಲ್ ಬಾಲಾಜಿ ಅವಮಾನ ಮಾಡಿದ್ರಂತೆ. ಇನ್ನೂ ಕಾರ್ಯಕ್ರಮದ ನಿರ್ದೇಶಕಿ ಶ್ರದ್ಧಾ ಕೂಡ ಧಮ್ಕಿ ಹಾಕಿದ್ದಾರೆ ಎಂದು ಆದಂ ಪಾಶಾ ಆರೋಪಿಸಿದ್ದಾರೆ.
ತಮ್ಮ ಜೆಂಡರ್ ಬಗ್ಗೆ ಅಕುಲ್ ಬಾಲಾಜಿ ಅವಹೇಳನ ಮಾಡಿರುವ ಕಾರಣ ''ನನಗೆ ಹಾಗೂ ನನ್ನ ಸಮುದಾಯಕ್ಕೆ ಅಕುಲ್ ಕ್ಷಮೆ ಕೇಳಲೇಬೇಕು'' ಎಂದು ಆದಂ ಪಾಶಾ ಪಟ್ಟು ಹಿಡಿದಿದ್ದಾರೆ. ಅಲ್ಲದೇ, ಇನ್ಮುಂದೆ 'ತಕಧಿಮಿತ' ಶೋನಲ್ಲಿ ಭಾಗವಹಿಸುವುದಿಲ್ಲ ಎಂದು ಕಡ್ಡಿ ತುಂಡು ಮಾಡಿದ ಹಾಗೆ ಆದಂ ಪಾಶಾ ಹೇಳಿದ್ದಾರೆ. ಮುಂದೆ ಓದಿರಿ....

ಎಲ್ಲವೂ ಪರಮೇಶ್ವರ್ ಗುಂಡ್ಕಲ್ ಕೈಯಲ್ಲಿದೆ
''ಪರಮೇಶ್ವರ್ ಗುಂಡ್ಕಲ್ ನನಗೆ ಫೋನ್ ಮಾಡಿ ಭೇಟಿ ಆಗುವಂತೆ ಹೇಳಿದರು. ಈಗಷ್ಟೇ ಅವರೊಂದಿಗೆ ಮಾತನಾಡಿದೆ. ಎಲ್ಲವನ್ನೂ ಸದ್ಯ ಪರಮೇಶ್ವರ್ ಗುಂಡ್ಕಲ್ ಸರ್ ಕೈಯಲ್ಲಿ ಬಿಟ್ಟಿದ್ದೇನೆ. ನನ್ನ ನೋವನ್ನ ಅವರ ಮುಂದೆ ಹೇಳಿಕೊಂಡಿದ್ದೇನೆ'' - ಆದಂ ಪಾಶಾ.

ಅಕುಲ್ ಕ್ಷಮೆ ಕೇಳಬೇಕು
''ಇನ್ಮೇಲೆ ನಾನು 'ತಕಧಿಮಿತ' ಶೋ ಮಾಡಲ್ಲ. ಅದಂತೂ ಖಚಿತ. ಅಕುಲ್ ಬಾಲಾಜಿ ನನ್ನ ಬಳಿ ಕ್ಷಮೆ ಕೇಳಲೇಬೇಕು. ಯಾಕಂದ್ರೆ, ಶೋ ಪ್ರಾರಂಭ ಆಗುವಾಗ ನನ್ನ ಸಮುದಾಯದ ಮುಖ್ಯಸ್ಥರು ಪಾಲ್ಗೊಂಡಿದ್ದರು. ಇಂಥದ್ದು ಮುಂದುವರೆಯಬಾರದು. ಹೀಗಾಗಿ ಅಕುಲ್ ಬಾಲಾಜಿ ಕ್ಷಮೆ ಕೇಳಲೇಬೇಕು'' ಎನ್ನುತ್ತಾರೆ ಆದಂ ಪಾಶಾ.

ಘಟನೆ ಬಗ್ಗೆ ಬೇಸರ ಇದೆ
''ಪರಮೇಶ್ವರ್ ಗುಂಡ್ಕಲ್ ಈಗಾಗಲೇ ಅಕುಲ್ ಮತ್ತು ಶ್ರದ್ಧಾ ಜೊತೆಗೆ ಮಾತನಾಡಿದ್ದಾರೆ. ಅವರೇನು ಮಾತನಾಡಿದ್ದಾರೆ ಅಂತ ನನಗೆ ಗೊತ್ತಿಲ್ಲ. ಕಲರ್ಸ್ ಚಾನೆಲ್ ನನಗೆ ವೇದಿಕೆ ಕಲ್ಪಿಸಿಕೊಟ್ಟಿತು. ಅದರ ಬಗ್ಗೆ ನನಗೆ ಹೆಮ್ಮೆ ಇದೆ. ಆದ್ರೆ, ನಡೆದಿರುವ ಘಟನೆ ಬಗ್ಗೆ ಬೇಸರ ಇದೆ'' - ಆದಂ ಪಾಶಾ.

ನನಗೆ ವೋಟ್ ಹಾಕಬೇಡಿ
''ಇನ್ಮೇಲೆ ನಾನು 'ತಕಧಿಮಿತ' ಶೋಗೆ ಹೋಗಲ್ಲ. ನನ್ನ ಫೋಟೋ ಇನ್ನೂ ವೋಟಿಂಗ್ ಲಿಸ್ಟ್ ನಲ್ಲಿದೆ. ದಯವಿಟ್ಟು ನನಗಾಗಿ ವೋಟ್ ಮಾಡಬೇಡಿ. ನಾನು ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ'' ಎಂದು ಜನರ ಬಳಿ ಆದಂ ಪಾಶಾ ಕೇಳಿಕೊಂಡಿದ್ದಾರೆ.


Click it and Unblock the Notifications











