Adi Lokesh: ಕಿರುತೆರೆಗೆ ಎಂಟ್ರಿ ಕೊಟ್ಟ ಸ್ಯಾಂಡಲ್‌ವುಡ್ 'ಪೂಜಾರಿ'.. ಆದಿ ಲೋಕೇಶ್‌ಗೆ ಸಿಕ್ಕಿತು 'ಒಲವಿನ ನಿಲ್ದಾಣ'
ನೆಗೆಟಿವ್ ಪಾತ್ರಗಳ ಮೂಲಕ ಬೆಳ್ಳಿತೆರೆಯಲ್ಲಿ ಗುರುತಿಸಿಕೊಂಡಿರುವ ಖಳನಾಯಕರುಗಳ ಪೈಕಿ ಆದಿ ಲೊಕೇಶ್ ಕೂಡಾ ಒಬ್ಬರು. ನಟಿಸಿರುವಂತಹ ಹೆಚ್ಚಿನ ಸಿನಿಮಾಗಳಲ್ಲಿ ಖಳನಾಯಕನಾಗಿ ಅಬ್ಬರಿಸಿ ಸೈ ಎನಿಸಿಕೊಂಡಿದ್ದ ಆದಿ ಲೋಕೇಶ್ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.
ಹೌದು, ಆದಿ ಲೋಕೇಶ್ ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶ್ರುತಿ ನಾಯ್ಡು ನಿರ್ದೇಶನದಡಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಒಲವಿನ ನಿಲ್ದಾಣ' ಧಾರಾವಾಹಿಯ ಮೂಲಕ ಕಿರುತೆರೆಗೆ ಎಂಟ್ರಿ ಕೊಡಲಿದ್ದಾರೆ ಆದಿ ಲೋಕೇಶ್.

ಪ್ರೇಕ್ಷಕರ ಮನ ಸೆಳೆಯಬಹುದು
'ಒಲವಿನ ನಿಲ್ದಾಣ' ಧಾರಾವಾಹಿಯಲ್ಲೊ ಆದಿ ಲೋಕೇಶ್ ಎಂಟ್ರಿ ಆಗಲಿದ್ದು ಯಾವ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಇನ್ನು ಕೂಡಾ ಸ್ಪಷ್ಟವಾಗಿ ಹೊರಬಿದ್ದಿಲ್ಲ. ಇತ್ತೀಚಿನ ದಿನಗಳಲ್ಲಿ ಸಿನಿಮಾದಿಂದಲೂ ಕೂಡಾ ದೂರವಿರುವ ಆದಿ ಲೋಕೇಶ್ ಇದೀಗ ಕಿರಿತೆರೆಯ ಮೂಲಕ ಮತ್ತೆ ನಟನೆಗೆ ಮರಳಿದ್ದಾರೆ. ಇಷ್ಟು ದಿನಗಳ ಕಾಲ ಹಿರಿತೆರೆಯ ಮೂಲಕ ವೀಕ್ಷಕರನ್ನು ರಂಜಿಸುತ್ತಿದ್ದ ಆದಿ ಲೋಕೇಶ್ ಇನ್ನು ಮುಂದೆ ಕಿರುತೆರೆಯ ಮೂಲಕ ಪ್ರೇಕ್ಷಕರ ಮನಸ್ಸು ಸೆಳೆಯಬಹುದು.
ಆದಿ ಲೋಕೇಶ್ ಎಂಟ್ರಿಯಿಂದ ಟ್ವಿಸ್ಟ್
ಮೂಲಗಳ ಪ್ರಕಾರ ಆದಿ ಲೋಕೇಶ್ ಪಾತ್ರ ಸುಮಾರು ಮೂರರಿಂದ ನಾಲ್ಕು ತಿಂಗಳುಗಳ ಕಾಲ ಪ್ರಸಾರವಾಗಲಿದ್ದು, ಪ್ರಭಾಶಾಲಿಯಾದ ಪಾತ್ರವೂ ಆದಾಗಿದೆ ಎಂದು ಹೇಳಲಾಗುತ್ತಿದೆ. ಧಾರಾವಾಹಿಗೆ ಅವರ ಎಂಟ್ರಿ ಆದ ಮೇಲೆ ಈಗಿನ ಕಥೆಗೆ ಟ್ವಿಸ್ಟ್ ದೊರೆತರೆ ಅದರಲ್ಲಿ ಆಶ್ಚರ್ಯಕರವೇನಿಲ್ಲ.
ಪೋಷಕ ಪಾತ್ರಗಳಲ್ಲಿ ಮೋಡಿ
ಪೋಷಕ ಪಾತ್ರಗಳ ಮೂಲಕ ಸಿನಿಮಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ ಆದಿ ಲೋಕೇಶ್ ತನ್ನ ಬಣ್ಣದ ಬದುಕಿನಲ್ಲಿ ಖಳನಾಯಕನಾಗಿ ನಟಿಸಿದ್ದೇ ಹೆಚ್ಚು. ಜೊತೆಗೆ 'ಜೋಗಿ' ಸಿನಿಮಾದ ಖಳನಾಯಕನ ಪಾತ್ರ ಅವರಿಗೆ ಸಾಕಷ್ಟು ಜನಪ್ರಿಯತೆಯನ್ನು ಕೂಡಾ ತಂದಿತ್ತು. ಶರಣ್ ಕುಮಾರ್ ಕಬ್ಬೂರ್ ನಿರ್ದೇಶನದ 'ಪೂಜಾರಿ' ಸಿನಿಮಾದಲ್ಲಿ ಆದಿ ಲೋಕೇಶ್ ನಾಯಕರಾಗಿ ಅಭಿನಯಿಸಿದ್ದರು.

300 ಸಂಚಿಕೆ ಪೂರೈಸಿದ ಒಲವಿನ ನಿಲ್ದಾಣ
ಶ್ರುತಿ ನಾಯ್ಡು ನಿರ್ದೇಶನದಲ್ಲಿ ಕಳೆದ ವರ್ಷ ಜುಲೈ 12 ರಂದು ಆರಂಭವಾದ 'ಒಲವಿನ ನಿಲ್ದಾಣ' ಧಾರಾವಾಹಿಯು ಇತ್ತೀಚೆಗಷ್ಟೇ ಯಶಸ್ವಿ 300 ಸಂಚಿಕೆ ಪೂರೈಸಿತ್ತು. ನವಿರಾದ ಪ್ರೇಮಕತೆಯನ್ನೊಳಗೊಂಡಿರುವ ಈ ಧಾರಾವಾಹಿಯಲ್ಲಿ ನಾಯಕ ಸಿದ್ಧಾಂತ್ ಆಗಿ ಅಕ್ಷಯ್ ನಟಿಸಿದ್ದರೆ ನಾಯಕಿ ತಾರಿಣಿಯಾಗಿ ಅಮಿತಾ ಕುಲಾಲ್ ಬಣ್ಣ ಹಚ್ಚಿದ್ದಾರೆ. ಉಳಿದಂತೆ ಅಶೋಕ್, ಮಂಡ್ಯ ರಮೇಶ್, ಪ್ರಥಮಾ ಪ್ರಸಾದ್, ಧರ್ಮೇಂದ್ರ ಅರಸ್, ವರಲಕ್ಷ್ಮಿ ಶ್ರೀನಿವಾಸ್, ಆರಾಧನಾ ರಘುರಾಮ್, ಚಂದ್ರಶೇಖರ್ ಮುಂತಾದವರು ತಾರಗಣದಲ್ಲಿದ್ದಾರೆ.


Click it and Unblock the Notifications











