ಗಲಾಟೆ ಬಳಿಕ ತಾಯಿ ನೋಡಲು ಬರುತ್ತಿರುವ ನಟ ಚಂದನ್; ಸಂಜೆ ಸುದ್ದಿಗೋಷ್ಠಿ
ತೆಲುಗು ಧಾರಾವಾಹಿ ಶೂಟಿಂಗ್ ಸೆಟ್ ಗಲಾಟೆ ನಂತರ ಕನ್ನಡ ನಟ ಚಂದನ್ ತಾಯಿಯನ್ನು ನೋಡಲು ಬರುತ್ತಿರುವುದಾಗಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಇನ್ನು ಸಂಜೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಗಲಾಟೆಯ ಸಂಪೂರ್ಣ ಮಾಹಿತಿ ನೀಡಲು ನಟ ಚಂದನ್ ಮುಂದಾಗಿದ್ದಾರೆ.
ನಿನ್ನೆ ಹೈದರಾಬಾದ್‌ನಲ್ಲಿ 'ಶ್ರೀಮತಿ ಶ್ರೀನಿವಾಸ್' ಧಾರಾವಾಹಿ ಶೂಟಿಂಗ್ ವೇಳೆ ಭಾರೀ ಹೈಡ್ರಾಮಾ ನಡೆದು ಹೋಗಿತ್ತು. ಈ ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಚಂದನ್ ಕ್ಷುಲ್ಲಕ ಕಾರಣಕ್ಕೆ ಶೂಟಿಂಗ್ ಸೆಟ್‌ನಲ್ಲಿ ಕಿರಿಕ್ ಮಾಡಿಕೊಂಡಿದ್ದರು. ಧಾರಾವಾಹಿಯ ಸಹ ನಿರ್ದೇಶಕನ ಮೇಲೆ ನಟ ಚಂದನ್ ಹಲ್ಲೆ ಮಾಡಿದ್ದರು ಎಂದು ಹೇಳಲಾಗುತ್ತಿದೆ. ನಂತರ ಮಾತಿಗೆ ಮಾತು ಬೆಳೆದು ಗಲಾಟೆ ವಿಕೋಪಕ್ಕೆ ತಿರುಗಿತ್ತು. ತಪ್ಪಿನ ಅರಿವಾಗಿ ಚಂದನ್ ಕ್ಷಮೆ ಕೇಳಿದರೂ ಪ್ರಯೋಜನವಾಗಿರಲಿಲ್ಲ. ತಂತ್ರಜ್ಞರ ಸಂಘದವರು ಅಲ್ಲಿಗೆ ಬಂದು ಭಾರೀ ರಾದ್ಧಾಂತವೇ ನಡೆದು ಹೋಗಿತ್ತು.
ಗಲಾಟೆಯ ವಿಡಿಯೋ ವೈರಲ್ ಆಗ್ತಿದ್ದಂತೆ ಚಂದನ್ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದರು. "ತಾಯಿಯ ಆರೋಗ್ಯದಲ್ಲಿ ಏರುಪೇರಾಗಿತ್ತು. ಆಸ್ಪತ್ರೆಯಿಂದ ಶೂಟಿಂಗ್‌ಗೆ ಹೋಗಿದ್ದೆ. ಅದೇ ಟೆನ್ಷನ್‌ನಲ್ಲಿ ನಾನು ಮಲಗಿದ್ದಾಗ ಸಹ ನಿರ್ದೇಶಕ ಬಂದು ಶೂಟಿಂಗ್ ಕರೆದ. ಆತನ ನನಗೆ ಆತ್ಮೀಯನೇ ಆಗಿದ್ದರಿಂದ ಸಲುಗೆಯಿಂದ ನೂಕಿದ್ದೆ. ಆದರೆ ಆತ ದೊಡ್ಡ ಡ್ರಾಮಾ ಮಾಡಿ ಅಷ್ಟೆಲ್ಲಾ ಆಯ್ತು. ಈ ಬಗ್ಗೆ ಫಿಲ್ಮಿಬೀಟ್‌ಗೂ ಚಂದನ್ ಸ್ಪಷ್ಟನೆ ನೀಡಿದ್ದರು. ಇದೀಗ ತಾಯಿಯನ್ನು ನೋಡಲು ಬರುತ್ತಿರುವುದಾಗಿ ಫೋಟೊ ಸಮೇತ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
'ಅಮ್ಮ, ನಿಮ್ಮನ್ನು ನೋಡಲು ಬರುತ್ತಿದ್ದೇನೆ'
ತಾಯಿ ಜೊತೆಗಿನ ಸೆಲ್ಫಿ ಫೋಟೊ ಶೇರ್ ಮಾಡಿರುವ ನಟ ಚಂದನ್ 'ಬೇಗ ಚೇತರಿಸಿಕೊಳ್ಳಿ ಅಮ್ಮ. ನೀವು ಬೇಗ ಗುಣಮುಖರಾಗಲೆಂದು ಹಾರೈಸುತ್ತೇನೆ. ನಾನು ನಿಮ್ಮನ್ನು ನೋಡಿಕೊಳ್ಳಲು ಅಲ್ಲಿರಬೇಕಿತ್ತು. ನಾನು ನಿಮ್ಮನ್ನು ನೋಡಲು ಹಿಂತಿರುಗಿ ಬರುತ್ತಿದ್ದೇನೆ. ಲವ್ ಯೂ ಸೋ ಮಚ್' ಎಂದು ಬರೆದುಕೊಂಡಿದ್ದಾರೆ.

ಚಂದನ್ ಬೆಂಬಲಿಸಿದ ಫ್ಯಾನ್ಸ್
ನಟ ಚಂದನ್ ಮಾಡಿರುವ ಪೋಸ್ಟ್‌ಗೆ ಸಾಕಷ್ಟು ಜನ ಕಾಮೆಂಟ್ ಮಾಡಿದ್ದಾರೆ. ಅಮ್ಮ ಆದಷ್ಟು ಬೇಗ ಗುಣ ಮುಖರಾಗಲಿ. ನಿಮ್ಮ ಜೊತೆ ನಾವಿದ್ದೇವೆ. ಆ ತೆಲುಗು ಧಾರಾವಾಹಿ ಬೇಡ. ಕನ್ನಡದಲ್ಲಿ ನಟಿಸಿ ಎಂದು ಸಲಹೆ ನೀಡಿದ್ದಾರೆ.

ಸಂಜೆ ನಟ ಚಂದನ್ ಸುದ್ದಿಗೋಷ್ಠಿ
ಬೆಂಗಳೂರಿಗೆ ವಾಪಸ್ ಆದ ಮೇಲೆ ಸಂಜೆ ನಾಗರಬಾವಿ ಬಳಿಯ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸುವುದಾಗಿ ನಟ ಚಂದನ್ ಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಕೆಲ ಕಿರುತೆರೆ ಕಲಾವಿದರು ನಟ ಚಂದನ್ ಜೊತೆ ಸುದ್ದಿಗೋಷ್ಠಿಯಲ್ಲಿ ಭಾಗವಹಿಸುವ ಸಾಧ್ಯತೆಯಿದೆ.

ನಟ ಚಂದನ್‌ಗೆ ಕಪಾಳ ಮೋಕ್ಷ
ಶೂಟಿಂಗ್ ವೇಳೆ ಗಲಾಟೆ ತಾರಕ್ಕೇರಿದ್ದು, ಬಳಿಕ ತೆಲುಗು ತಂತ್ರಜ್ಞರು ಒಟ್ಟಾಗಿ ಚಂದನ್‍ಗೆ ನಿಂದಿಸಿದ್ದಾರೆ. ಕ್ಷಮೆ ಕೇಳಿದರೂ ಬಿಡದೇ ಗಲಾಟೆ ಮಾಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಚಂದನ್‍ಗೆ ಒಬ್ಬರು ಕಪಾಳಮೋಕ್ಷ ಮಾಡಿರುವುದನ್ನು ವಿಡಿಯೋದಲ್ಲಿ ನೋಡಬಹುದು.


Click it and Unblock the Notifications











