ಬಿಗ್ ಬಾಸ್ ಕನ್ನಡ 11ರ ಬಳಿಕ ಮತ್ತೆ ಕಿರುತೆರೆಗೆ ಮರಳಿದ ಯಮುನಾ ಶ್ರೀನಿಧಿ; ಆ ಧಾರಾವಾಹಿ ಯಾವುದು?
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋಗಳ ಪೈಕಿ ಬಿಗ್ ಬಾಸ್ ಕೂಡಾ ಒಂದು. ಯಶಸ್ವಿ ಹತ್ತು ಸೀಸನ್ ಪೂರೈಸಿರುವ ಬಿಗ್ ಬಾಸ್‌ನ ಹೊಸ ಸೀಸನ್ ಈಗಾಗಲೇ ಶುರುವಾಗಿರುವುದು ಕಿರುತೆರೆ ವೀಕ್ಷಕರಿಗೆ ತಿಳಿದೇ ಇದೆ. ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಯಾಗಿ ಕಾಣಿಸಿಕೊಂಡವರಲ್ಲಿ ನಟಿ ಯಮುನಾ ಶ್ರೀನಿಧಿ ಕೂಡಾ ಒಬ್ಬರು. ದೊಡ್ಮನೆಗೆ ಸೇರಿದ ಒಂದೇ ವಾರದಲ್ಲಿ ಮನೆಯಿಂದ ಹೊರಬಂದ ಯಮುನಾ ಶ್ರೀನಿಧಿ ಇದೀಗ ಸೌಪರ್ಣಿಕಾ ಆಗಿ ಬದಲಾಗಿದ್ದಾರೆ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಅವನು ಮತ್ತೆ ಶ್ರಾವಣಿ' ಧಾರಾವಾಹಿಯಲ್ಲಿ ಸೌಪರ್ಣಿಕಾ ಆಗಿ ಕಾಣಿಸಿಕೊಂಡಿದ್ದಾರೆ ನಟಿ ಯಮುನಾ ಶ್ರೀನಿಧಿ. ಈಗಾಗಲೇ ಅವರ ಎಪಿಸೋಡ್ ಟೆಲಿಕಾಸ್ಟ್ ಆಗಿದ್ದು, ಯಮುನಾ ಶ್ರೀನಿಧಿ ಅವರ ಕಮ್ ಬ್ಯಾಕ್ ಕಿರುತೆರೆ ವೀಕ್ಷಕರಿಗೆ ಖುಷಿ ನೀಡಿದೆ. ಇನ್ನು ಯಮುನಾ ಶ್ರೀನಿಧಿ ಅವರು ಬಿಗ್ ಬಾಸ್ ಮನೆಯೊಳಗೆ ಹೋಗುವ ಮೊದಲು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನನ್ನ ದೇವ್ರು' ಧಾರಾವಾಹಿಯಲ್ಲಿ ನಟಿಸಿದ್ದು ಖಡಕ್ ಖಳನಾಯಕಿಯಾಗಿ ಕಿರುತೆರೆಯಲ್ಲಿ ಮೋಡಿ ಮಾಡಿದ್ದರು.

"ಎರಡು ವರ್ಷಗಳಿಂದ ವೈಯಕ್ತಿಕ ಕಾರಣಗಳಿಂದ ನಾನು ಕಿರುತೆರೆಯಿಂದ ದೂರವಿದ್ದೆ. ಮಗಳು ಲಾಸ್ಯಾ ಸಪೋರ್ಟ್ ಮಾಡುತ್ತಿರುವುದಿಂದ ನಟನೆಗೆ ಕಮ್ ಬ್ಯಾಕ್ ಆದೆ" ಎಂದು 'ನನ್ನ ದೇವ್ರು' ಧಾರಾವಾಹಿಯ ಮೂಲಕ ಕಿರುತೆರೆಗೆ ಮರಳಿದ ಯಮುನಾ ಶ್ರೀನಿಧಿ ಹೇಳಿಕೊಂಡಿದ್ದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಭಾಗ್ಯಲಕ್ಷ್ಮಿ' ಧಾರಾವಾಹಿಯಲ್ಲಿ ಭಾಗ್ಯಳ ಟೀಚರ್ ಆಗಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದ ಈಕೆ "ಇಂತಹ ವಿಶಿಷ್ಟ ಪಾತ್ರಗಳು ನಮಗೆ ಸಿಗುವುದು ತೀರಾ ಅಪರೂಪ" ಎಂದು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಮ್ಮ ಲಚ್ಚಿ' ಧಾರಾವಾಹಿಯಲ್ಲಿ ಇನ್ಸ್ಪೆಕ್ಟರ್ ಝಾನ್ಸಿಯಾಗಿ ಅಭಿನಯಿಸಿದ್ದ ಈಕೆ ಕಾಲೇಜು ದಿನಗಳಲ್ಲಿ ಏನ್ ಸಿ ಸಿ ಕೆಡೇಟ್ ಆಗಿದ್ದರು. ಹಾಗಾಗಿ ಪೊಲೀಸ್ ಯೂನಿಫಾರ್ಮ್ ಹಾಕುವುದೆಂದರೆ ಅವರಿಗೆ ಒಂದು ರೀತಿಯ ಖುಷಿಯಿತ್ತು. ಹಾಗಾಗಿ ಝಾನ್ಸಿ ಪಾತ್ರ ಸಿಕ್ಕಾಗ ಅವರು ಸಂತಸದಿಂದಲೇ ಒಪ್ಪಿಕೊಂಡಿದ್ದರು.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ 'ಕಮಲಿ'ಯಲ್ಲಿ ನಾಯಕಿ ಕಮಲಿಯ ಅಮ್ಮ ಗೌರಿಯಾಗಿ ಅಭಿನಯಿಸಿದ್ದ ಯಮುನಾ ಶ್ರೀನಿಧಿ ಆ ಪಾತ್ರದ ಮೂಲಕ ಕಿರುತೆರೆಯಲ್ಲಿ ಜನಪ್ರಿಯತೆಯನ್ನು ಗಿಟ್ಟಿಸಿಕೊಂಡಿದ್ದರು. 'ಅಶ್ವಿನಿ ನಕ್ಷತ್ರ' ಧಾರಾವಾಹಿಯಲ್ಲಿ ನಾಯಕಿ ಅಶ್ವಿನಿ ಅಮ್ಮ ಆಗಿ ನಟಿಸುವ ಮೂಲಕ ಕಿರುತೆರೆಗೆ ಕಾಲಿಟ್ಟ ಈಕೆ ಮುಂದೆ 'ಅಮೃತವರ್ಷಿಣಿ', 'ಒಂದೂರಲ್ಲಿ ರಾಜ ರಾಣಿ', 'ಮದುಮಗಳು', 'ಸಾಕ್ಷಿ', 'ಅರಮನೆ', 'ತ್ರಿವೇಣಿ ಸಂಗಮ', 'ಎರಡು ಕನಸು', 'ನಾಗಕನ್ನಿಕೆ', 'ಕಮಲಿ', 'ಮಾನಸ ಸರೋವರ', 'ಮನಸಾರೆ', 'ಕನ್ಯಾಕುಮಾರಿ' ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದರು.
ಅಂದ ಹಾಗೇ 'ಮಾನಸ ಸರೋವರ' ಧಾರಾವಾಹಿಯಲ್ಲಿ ಕೌಸಲ್ಯಾ ಮತ್ತು ವಾಸುಕಿ ಎನ್ನುವ ದ್ವಿಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಯಮುನಾ ಶ್ರೀನಿಧಿ ತೆಲುಗು ಕಿರುತೆರೆಯಲ್ಲಿ ನಟನಾ ಛಾಪನ್ನು ಪಸರಿಸಿದ್ದಾರೆ. ತೆಲುಗಿನ 'ಆನು ಆನೇ ನೇನು' ಧಾರಾವಾಹಿಗಳಲ್ಲಿ ನಟಿಸಿರುವ ಈಕೆ ಡಿಡಿ ಚಂದನ ಧಾರಾವಾಹಿಯಲ್ಲಿ ಪ್ರಸಾರವಾಗುತ್ತಿದ್ದ 'ಡ್ಯಾನ್ಸ್ ಸಮರ'ದ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು.
'ರಕ್ತಚಂದನ' ಮತ್ತು 'ಹಕೂನಾ ಮಟಾಟ' ವೆಬ್ ಸಿರೀಸ್‌ನಲ್ಲಿ ನಟಿಸಿರುವ ಈಕೆ 'ದಿಲ್ ರಂಗೀಲಾ' ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನತ್ತ ಮುಖ ಮಾಡಿದರು. ನಂತರ 'ರನ್ನ', 'ಚಕ್ರವ್ಯೂಹ', 'ತಾರಕ್', 'ಪ್ರೇಮಬರಹ', 'ರಾಂಧವ', 'ಒಡೆಯ', 'ಯುವರತ್ನ', 'ಸಪ್ತ ಸಾಗರದಾಚೆ ಎಲ್ಲೋ', 'ಕೌಸಲ್ಯ ಸುಪ್ರಜಾ ರಾಮ', 'ಲವ್ 360', 'ಘೋಸ್ಟ್' ಹೀಗೆ ಮೂವತ್ತಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಈಕೆ ಅಭಿನಯಿಸಿದ್ದಾರೆ.


Click it and Unblock the Notifications











