ಮಗು ವಿಚಾರದಲ್ಲಿ ಸಂಸಾರದಲ್ಲಿ ಬಿರುಕು ? ಬಿಗ್ ಬಾಸ್ ವಿನ್ನರ್ ದಾಂಪತ್ಯದಲ್ಲಿ ಅಲ್ಲೋಲ ಕಲ್ಲೋಲ ? ಹೇಳಿದ್ದೇನು ನಟಿ ?
ಬಣ್ಣದ ಪ್ರಪಂಚದಲ್ಲಿ ಬದುಕು ರೂಪಿಸಿಕೊಂಡವರ ಬಹುತೇಕರ ವ್ಯೆಯಕ್ತಿಕ ಜೀವನದಲ್ಲಿ ಪ್ರೀತಿ-ಪ್ರೇಮ-ಪ್ರಣಯ-ಮದುವೆ ಮತ್ತು ವಿಚ್ಛೇದನ ಮಾಮೂಲು. ಇಲ್ಲಿ ಮದುವೆಯಾದ ಆರಂಭದಲ್ಲಿ ಬದುಕು ತುಂಬಾನೇ ಸಂತೋಷಮಯವಾಗಿರುತ್ತೆ. ಆದರೆ ದಾಂಪತ್ಯ ಜೀವನ ನಡೆಸುತ್ತಾ ಒಬ್ಬರನ್ನೊಬ್ಬರು ಹುಚ್ಚರಂತೆ ಪ್ರೀತಿಸುವ ಅನೇಕರು ಆ ನಂತರ ತಮ್ಮ ಸಂಬಂಧಕ್ಕೆ ಗುಡ್ ಬೈ ಹೇಳಿ ಹೊರ ಬರುತ್ತಾರೆ.ಆದರ್ಶ ದಂಪತಿಗಳಂತೆ ಬದುಕುತ್ತೇವೆ ಎಂದು ಹೇಳಿ, ಮದುವೆಯಾದ ಕೆಲವೇ ದಿನ ಅಥವಾ ವರ್ಷಗಳಲ್ಲಿ ಅದ್ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಸಂಬಂಧ ಕಡಿದುಕೊಂಡೂ ಬಿಡುತ್ತಾರೆ.
ಒಂದೆರಡಲ್ಲ ಹಲವಾರು ವರ್ಷ ಜೊತೆಯಾಗಿ ಒಂದೇ ಮನೆಯಲ್ಲಿ ಕೂಡಿ ಬಾಳಿದರೂ ಕೂಡ ಆ ನಂತರ ಏಕಾಏಕಿ ಡಿವೋರ್ಸ್ ಘೋಷಿಸುತ್ತಾರೆ. ಅದರಲ್ಲಿಯೂ ಕಳೆದ ಎರಡು ಮೂರು ವರ್ಷಗಳಲ್ಲಿ ಚಿತ್ರರಂಗದಲ್ಲಿ ಮದುವೆ ಮತ್ತು ಪ್ರೀತಿಗೆ ಅರ್ಥವೇ ಇಲ್ಲದಂತಾಗಿದೆ. ಅನ್ಯೋನ್ಯತೆಯ ಕೊರತೆಯಿಂದ.. ಚಿಕ್ಕ ಚಿಕ್ಕ ಕಾರಣಗಳಿಂದ ಹಲವರು ಸಂಬಂಧ ಮುರಿದುಕೊಂಡು ಎದ್ದು ಬಂದಿದ್ದಾರೆ. ಈ ಸಾಲಿಗೆ ಗೌರವ್ ಖನ್ನಾ ಮತ್ತು ಆಕಾಂಕ್ಷಾ ಚಮೋಲಾ ಕೂಡ ಸೇರಿಕೊಳ್ಳಲಿದ್ದಾರಾ ಎನ್ನುವ ಆತಂಕ ಸದ್ಯ ಇವರ ಅಭಿಮಾನಿಗಳನ್ನು ಕಾಡುತ್ತಿದೆ.

ಹೌದು, ಗೌರವ್ ಖನ್ನಾ ಮತ್ತು ಆಕಾಂಕ್ಷಾ ಚಮೋಲಾ. ಹಿಂದಿ ಕಿರುತೆರೆಯ ಸ್ಟಾರ್ ಜೋಡಿ. 2006ರಲ್ಲಿ ''ಬಾಬಿ'' ಧಾರಾವಾಹಿಯ ಮೂಲಕ ಕಿರುತೆರೆಗೆ ಬಂದ ಗೌರವ್ ಖನ್ನಾ ''ಮೇರಿ ಡೋಲಿ ತೇರೆ ಅಂಗನಾ'' ಮೂಲಕ ಮನೆ ಮಾತಾದರು. 2001ರಲ್ಲಿ ಪ್ರಸಾರವಾದ ''ಅನುಪಮಾ'' ಧಾರಾವಾಹಿ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ಕೂಡ ಸಂಪಾದಿಸಿದರು.
''ಸಿಐಡಿ''.. ''ಪ್ರೇಮ್ ಯಾ ಪಹೇಲಿ-ಚಂದ್ರಕಾಂತ''.. ''ಯೇ ಪ್ಯಾರ್ ನಾ ಹೋಗಾ ಕಮ್''.. ''ತೇರೆ ಬಿನ್''.. ''ಲವ್ ನೇ ಮಿಲಾ ದಿ ಜೋಡಿ''.. ಹೀಗೆ ಹಲವು ಧಾರಾವಾಹಿ ಮೂಲಕ ಖ್ಯಾತಿಯ ಶಿಖರಕ್ಕೇರಿದ ಗೌರವ್ ಖನ್ನಾ ''ಸೆಲೆಬ್ರೆಟಿ ಮಾಸ್ಟರ್ ಶೆಫ್''ನ ವಿನ್ನರ್ ಕೂಡ ಹೌದು. ಕಳೆದ ಬಾರಿಯ ''ಬಿಗ್ ಬಾಸ್'' 19ರ ವಿಜೇತ ಕೂಡ ಹೌದು.
ಇನ್ನು ಆಕಾಂಕ್ಷಾ ಚಮೋಲಾ ಕೂಡ ನಟಿಯಾಗಿ ಹೆಸರು ಮಾಡಿದವರು. ''ಸ್ವರ್ಗಿಣಿ-ಜೋಡೇ ರಿಶ್ತೋ ಕಾ ಸುರ್''.. ''ಭಾಗ್ಯ ಲಕ್ಷ್ಮೀ''.. ''ಕೈಸೇ ಮುಝೇ ತುಮ್ ಮಿಲ್ ಗಯೇ''.. ಇವರು ಅಭಿನಯಿಸಿರುವ ಪ್ರಖ್ಯಾತ ಸೀರಿಯಲ್‌ಗಳು.
ಇಂಥಾ ಗೌರವ್ ಖನ್ನಾ ಮತ್ತು ಆಕಾಂಕ್ಷಾ 2015ರಲ್ಲಿ ಮೊದಲ ಬಾರಿ ಮುಖಾಮುಖಿಯಾಗಿದ್ದರು. ಅದಾಗಲೇ 15 ಧಾರಾವಾಹಿಗಳಲ್ಲಿ ಅಭಿನಯಿಸಿ ಖ್ಯಾತರಾಗಿದ್ದ ಗೌರವ್ ಖನ್ನಾ ತಾವೊಬ್ಬ ಅವಕಾಶಕ್ಕಾಗಿ ಸೈಕಲ್ ಹೊಡೆಯುತ್ತಿರುವ ಕಲಾವಿದ ಎಂದು ಆಕಾಂಕ್ಷಾ ಅವರನ್ನು ಪರಿಚಯ ಮಾಡಿಕೊಂಡಿದ್ದರು. ಗೌರವ್ ಹಿನ್ನೆಲೆ ಗೊತ್ತಿರದ, ಆಗಷ್ಟೇ ಅವಕಾಶವನ್ನು ಹುಡುಕಿಕೊಂಡು ಆಡಿಷನ್‌ಗಳನ್ನು ನೀಡುತ್ತಿದ್ದ ಆಕಾಂಕ್ಷಾ, ಗೌರವ್ ಮಾತುಗಳನ್ನು ನಿಜಾ ಎಂದುಕೊಂಡಿದ್ದರು. ಆಡಿಷನ್‌ನಲ್ಲಿ ಹೇಗೆ ಅಭಿನಯಿಸಬೇಕೆಂದು ಪಾಠ ಮಾಡಿದ್ದರು. ಆ ನಂತರ ಸತ್ಯ ಗೊತ್ತಾಗಿ ಭಾರೀ ಮುಜುಗರಕ್ಕೀಡಾಗಿದ್ದರು.

ಹೀಗೆ ಶುರುವಾದ ಇವರ ಸ್ನೇಹ ಆ ನಂತರ ಪ್ರೀತಿಯ ಸ್ವರೂಪ ಪಡೆಯಿತು. ಒಂದು ವರ್ಷ ಜೊತೆಯಲ್ಲಿ ಓಡಾಡಿದ ಇಬ್ಬರು ನವೆಂಬರ್ 24-2016ರಂದು ಕಾನ್ಪುರ್‌ನಲ್ಲಿ ಅದ್ಧೂರಿಯಾಗಿ ಮದುವೆಯಾದರು. ಕಳೆದ 9-10 ವರ್ಷ ಖುಷಿ ಖುಷಿಯಾಗಿ ಕಾಲವನ್ನು ಕಳೆದರು. ಗೌರವ್ ''ಬಿಗ್ ಬಾಸ್'' ಮನೆಯಲ್ಲಿದ್ದಾಗ ಫ್ಯಾಮಿಲಿ ವೀಕ್‌ನಲ್ಲಿ ಮನೆಗೆ ಬಂದಿದ್ದ ಆಕಾಂಕ್ಷಾ ತಮ್ಮ ಪತಿ ಗೌರವ್ ಗೇಮ್ ಪ್ಲ್ಯಾನ್‌ನ ಹಾಡಿ ಹೊಗಳಿದ್ದರು.
ಆದರೆ ಈಗ ಈ ಜೋಡಿಯ ದಾಂಪತ್ಯದಲ್ಲಿ ಬಿರುಕು ಮೂಡಿರುವ ಅನುಮಾನ ಹಲವರಲ್ಲಿ ಮೂಡಿದೆ. ಖುದ್ದು ಆಕಾಂಕ್ಷಾ ಚಮೋಲಾ ಅವರೇ ಇಂತಹದ್ದೊಂದು ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದ್ದಾರೆ. ಹೌದು, ಮೊನ್ನೆ ಆಕಾಂಕ್ಷಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಭಾವನಾತ್ಮಕವಾದ ಬರಹ ಹಂಚಿಕೊಂಡಿದ್ದರು. ಕೇವಲ ಅಗತ್ಯತೆಯ ಮೇಲೆ ಮಾತ್ರ ನಿಂತ ಸಂಬಂಧದಲ್ಲಿ ಹೃದಯ ಯಾವಾಗಲೂ ತ್ಯಾಗ ಮಾಡಬೇಕಾಗುತ್ತೆ ಎಂದು ಬರೆದುಕೊಂಡಿದ್ದ ಆಕಾಂಕ್ಷಾ ನಾನು ಸಿದ್ದಳಾಗಿದ್ದೇನೆ ಎಂದುಕೊಂಡಿದ್ದೆ, ಆದರೆ ವಾಸ್ತವದಲ್ಲಿ ನಾನು ಸಿದ್ಧವಾಗಿರಲಿಲ್ಲ ಎಂದು ಹೇಳಿದ್ದರು.
ಆಕಾಂಕ್ಷಾ ಬರೆದುಕೊಂಡ ಈ ಸಾಲುಗಳು ವಿಚ್ಛೇದನದ ವದಂತಿಯ ಕಿಡಿಯನ್ನೂ ಹಚ್ಚಿಸಿದವು. ಮಗು ವಿಚಾರದಲ್ಲಿ ಇಬ್ಬರ ನಡುವೆ ಬಿರುಕು ಮೂಡಿದೆ ಎನ್ನುವ ಮಾತುಗಳು ಬಲವಾಗಿ ಕೇಳಿ ಬರಲು ಶುರುವಾದವು. ಯಾಕೆಂದರೆ ಗೌರವ್ ಖನ್ನಾಗೆ ತಂದೆಯಾಗುವ ಆಸೆ ಇದೆ. ಹಲವು ಬಾರಿ ಖುದ್ದು ಗೌರವ್ ಖನ್ನಾ ಈ ಮಾತನ್ನು ಹೇಳಿದ್ದಾರೆ ಕೂಡ.
ಆದರೆ.. ಆಕಾಂಕ್ಷಾಗೆ ಮಗು ಬೇಡ. ''ಬಿಗ್ ಬಾಸ್'' ಮನೆಗೆ ಆಕಾಂಕ್ಷಾ ಬಂದ ಸಮಯದಲ್ಲಿ ಈ ಪ್ರಶ್ನೆಯನ್ನು ಅವರಿಗೆ ಕೇಳಲಾಗಿತ್ತು. ಆಗ ಮಗುಗೆ ಜನ್ಮ ನೀಡುವುದು ಅಂದರೆ ಹಲ್ವಾ ಮಾಡಿದಂತೆ ಅಲ್ಲ ಎಂದು ಆಕಾಂಕ್ಷಾ ಹೇಳಿದ್ದರು. ಅದೊಂದು ದೊಡ್ಡ ಜವಾಬ್ದಾರಿ ಎಂದು ಹೇಳಿದ್ದ ಆಕಾಂಕ್ಷಾ ಈಗ ಮಾತ್ರ ಅಲ್ಲ ಮುಂದೆಯೂ ಕೂಡ ಆ ಜವಾಬ್ಧಾರಿಯನ್ನು ನಾನು ಸಮರ್ಥವಾಗಿ ನಿರ್ವಹಿಸಲಾರೆ ಎಂದು ಹೇಳಿದ್ದರು.
ಇನ್ನೂ ಗೌರವ್ ಖನ್ನಾಗೆ ಈಗ 44ರ ಹರೆಯ. ಮತ್ತೊಂದು ಕಡೆ ಆಕಾಂಕ್ಷಾಗೆ 35 ವರ್ಷ. ಇಬ್ಬರ ನಡುವೆ 09 ವರ್ಷಗಳ ಅಂತರ ಮತ್ತು ಮಗು ವಿಚಾರದಲ್ಲಿನ ಈ ಭಿನ್ನಾಭಿಪ್ರಾಯಗಳಿಂದ ಇಬ್ಬರು ದೂರವಾಗುವ ನಿರ್ಧಾರ ಮಾಡಿದ್ದಾರೆ ಎಂಬ ವಾದವನ್ನು ಹಲವರು ಮಾಡಲು ಶುರು ಮಾಡಿದರು.
ಅದೃಷ್ಟವಶಾತ್ ಆಕಾಂಕ್ಷಾ ಚಮೋಲಾ ಮೌನಕ್ಕೆ ಶರಣಾಗಲಿಲ್ಲ. ಬದಲಿಗೆ ತಮ್ಮ ದಾಂಪತ್ಯ ಜೀವನಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಚರ್ಚೆಗಳನ್ನು ಗಮನಿಸಿ ಸ್ಪಷ್ಟೀಕರಣ ನೀಡಿದ್ದಾರೆ. ''ಟೈಮ್ಸ್ ಆಫ್ ಇಂಡಿಯಾ''.. ''ಬಾಂಬೆ ಟೈಮ್ಸ್''ಗೆ ಪ್ರತಿಕ್ರಿಯೆ ನೀಡಿರುವ ಆಕಾಂಕ್ಷಾ ನಾನು ಹೇಳಿದ್ದು ಮುಂಬರುವ ನನ್ನ ಸೀರಿಸ್ ಬಗ್ಗೆ ಎಂದಿದ್ದಾರೆ. ನಮ್ಮ ದಾಂಪತ್ಯ ಸುಖಕರವಾಗಿದೆ, ನಿಮ್ಮ ಇಷ್ಟಾನುಸಾರ ಕಲ್ಪನೆಗಳನ್ನು ಮಾಡಿಕೊಳ್ಳಬೇಡಿ ಎಂದು ಹೇಳಿದ್ದಾರೆ. ಈ ಹಿನ್ನೆಲೆ ಇವರ ಅಭಿಮಾನಿಗಳು ಸದ್ಯ ನಿಟ್ಟುಸಿರು ಬಿಟ್ಟಿದ್ದಾರೆ.


Click it and Unblock the Notifications











