'ನಾ ನಿನ್ನ ಬಿಡಲಾರೆ' ಎನ್ನುತ ಮತ್ತೆ ಬಂದ 'ಚುಕ್ಕಿತಾರೆ'ಯ ಪುಟಾಣಿ ಮಹಿತಾ
ಕನ್ನಡ ಕಿರುತೆರೆ ಹಾಗೂ ಹಿರಿತೆರೆ ಬಹಳಷ್ಟು ಅದ್ಭುತವಾದ ಬಾಲ ನಟ ನಟಿಯರನ್ನು ಕಂಡಿದೆ. ನಟ ಪುನೀತ್ ರಾಜಕುಮಾರ್ ಸೇರಿದಂತೆ ಹಲವು ಕಲಾವಿದರು ಬಾಲನಟರಾಗಿಯೇ ಮೊದಲು ಕಾಣಿಸಿಕೊಂಡಿದ್ದು. ಅದರಲ್ಲೂ ಕನ್ನಡ ಕಿರುತೆರೆಯಲ್ಲಿ ನೋಡುವುದಾದರೆ ನಟಿ ಅಂಕಿತಾ ಅಮರ್, ನಟಿ ನಮೃತಾ ಗೌಡ, ಸಾನ್ಯಾ ಅಯ್ಯರ್ ಸೇರಿದಂತೆ ಇಂದಿನ ಹಲವು ಜನಪ್ರಿಯ ನಟ ನಟಿಯರು ಬಾಲ ಕಲಾವಿದರಾಗಿಯೇ ಕಾಣಿಸಿಕೊಂಡಿದ್ದು.
ಅಂತೆಯೇ ಸದ್ಯಕ್ಕೆ ಕಿರುತೆರೆಯಲ್ಲಿ ಹಲವು ಬಾಲಕಲಾವಿದರು ಅದ್ಭುತ ನಟನೆಯ ಮೂಲಕ ಜನಮನ ಗೆಲ್ಲುತ್ತಿದ್ದಾರೆ. ಅದರಲ್ಲೂ ಬಾಲನಟಿ ಮಹಿತಾ ಎರಡು ರಿಯಾಲಿಟಿ ಶೋಗಳಲ್ಲದೆ ಇದೀಗ ಎರಡನೇ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ.

ಹೌದು, ಹೊಸ ಧಾರಾವಾಹಿ ಮೂಲಕ ಕಿರುತೆರೆ ಜನರನ್ನು ರಂಜಿಸಲು ಬರ್ತಿದ್ದಾಳೆ ಬಾಲನಟಿ ಮಹಿತ ವಿ. ಏಳು ವರ್ಷದ ಮುದ್ದು ಕನ್ನಡತಿ ಮಹಿತ ವಿ "ನಮ್ಮಮ್ಮ ಸೂಪರ್ ಸ್ಟಾರ್" ಎಂಬ ರಿಯಾಲಿಟಿ ಶೋ ಮೂಲಕ ಮೊದಲ ಬಾರಿಗೆ ಕಿರುತೆರೆ ಜನರ ಮುಂದೆ ಬಂದಳು.
ರಿಯಾಲಿಟಿ ಶೋ ನ ಉದ್ದಕ್ಕೂ ಬಹಳ ಆ್ಯಕ್ಟೀವ್ ಇದ್ದ ಈ ಬಾಲನಟಿ ತನ್ನ ತಾಯಿಯೊಂದಿಗೆ ಬಹಳಷ್ಟು ರೀಲ್ಸ್ ಹಾಗೂ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿರುತ್ತಾಳೆ.'ನಮ್ಮಮ್ಮ ಸೂಪರ್ ಸ್ಟಾರ್' ರಿಯಾಲಿಟಿ ಶೋ ನಂತರ ಬಹಳಷ್ಟು ಖ್ಯಾತಿಗಳಿಸಿದ ಈಕೆ, "ಗಿಚ್ಚಿ ಗಿಲಿ ಗಿಲಿ" ರಿಯಾಲಿಟಿ ಶೋನಲ್ಲೂ ಕಾಣಿಸಿಕೊಂಡಳು.

ನಂತರ 'ಚುಕ್ಕಿತಾರೆ' ಧಾರಾವಾಹಿಯಲ್ಲಿ ಚುಕ್ಕಿ ಎನ್ನುವ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡು, ಒಳ್ಳೆಯ ಕಲಾವಿದೆ ಎಂಬುದಾಗಿ ಕಿರುತೆರೆ ಪ್ರೇಕ್ಷಕರಿಂದ ಭೇಷ್ ಎನಿಸಿಕೊಂಡಳು. ನಟನೆ ಅಷ್ಟೇ ಅಲ್ಲದೆ ಕಾಮಿಡಿ ಜೊತೆ ಜೊತೆಗೆ ನೆಟ್ಟಿಗರ ಮನ ಸೆಳೆದಿದ್ದಾಳೆ. ಇನ್ನು ಹಲವಾರು ಹಾಡುಗಳನ್ನು ಹಾಡುವ ಮೂಲಕ ಎಲ್ಲರ ಫೇವರೆಟ್ ಪುಟಾಣಿ ನಟಿಯಾಗಿದ್ದಾಳೆ ಮಹಿತಾ.
ಇತ್ತೀಚೆಗೆ ಬಹಳ ಟ್ರೆಂಡ್‌ನಲ್ಲಿ ಇದ್ದ ನಾನು ನಂದಿನಿ, ಓನಲ್ಲ ನೀನಲ್ಲ ಮುಂತಾದ ಹಾಡುಗಳಿಗೆ ತನ್ನದೇ ಲಿರಿಕ್ಸ್ ಸೇರಿಸಿ ಹಾಡಿ ಬಹಳಷ್ಟು ಪಾಪ್ಯುಲಾರಿಟಿ ಗಳಿಸಿದ್ದಳು. ನಂತರ ಕನ್ನಡದ ಕ್ಲಾಸಿಕ್ ಧಾರಾವಾಹಿಗಳಲ್ಲಿ ಒಂದಾದ 'ಮೂಡಲ ಮನೆ' ಹಾಡನ್ನು ಹಾಡಿ ಆ ವಿಡಿಯೋ ಬಹಳ ವೈರಲ್ ಆಗಿತ್ತು. ಧಾರಾವಾಹಿ ಸೆಟ್‌ಗಳಲ್ಲಿ ನಡೆಯುವ ಕಾಮಿಡಿಯಿಂದ ಹಿಡಿದು ಹಲವಾರು ರೀಲ್ಸ್ ಮಾಡುವ ಮೂಲಕ ತನ್ನ ಫಾಲೋವರ್ಸ್ ಅನ್ನು ಸದಾ ರಂಜಿಸುತ್ತಿರುವ ಬಾಲನಟಿ ಮಹಿತಾಗೆ 187 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಎಳನೂರು ಐವತ್ತಕ್ಕೂ ಹೆಚ್ಚು ಪೋಸ್ಟ್‌ಗಳನ್ನು ಹೊಂದಿರುವ ಈ ಅಫಿಶಿಯಲ್ ಇನ್‌ಸ್ಟಾಗ್ರಾಂ ಪೇಜ್ ಅಲ್ಲದೆ ಮಹಿತಾ ಅಭಿಮಾನಿಗಳು ಹಲವಾರು ಫ್ಯಾನ್ ಪೇಜ್‌ಗಳನ್ನು ಕೂಡ ಸೃಷ್ಟಿಸಿದ್ದಾರೆ.
ಏಳು ವರ್ಷದ ಎಳೆಯ ವಯಸ್ಸಿಗೆ ಇಷ್ಟೆಲ್ಲ ಖ್ಯಾತಿಯನ್ನು ಗಳಿಸಿರುವುದು ಪುಟಾಣಿ ನಟಿ ಮಹಿತಾ ನಟನೆ ಹಾಗೂ ಕಲೆಯನ್ನು ಎತ್ತಿ ಹಿಡಿಯುತ್ತದೆ. ಪ್ರಸ್ತುತ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಧಾರಾವಾಹಿ 'ನಾ ನಿನ್ನ ಬಿಡಲಾರೆ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ ಬಾಲ ನಟಿ ಮಹಿತಾ. ಹೌದು 'ನಾ ನಿನ್ನ ಬಿಡಲಾರೆ' ಎಂಬ ಟೈಟಲ್ ಅಡಿಯಲ್ಲಿ ಹೊಸ ಧಾರಾವಾಹಿ ಆರಂಭವಾಗಿದ್ದು ಇದರಲ್ಲಿ ತಾಯಿ ಇಲ್ಲದ ಮಗುವಾಗಿ ಮಹಿತ ನಟಿಸುತ್ತಿದ್ದಾಳೆ. ಈಗಾಗಲೇ ತನ್ನ ಸೋಶಿಯಲ್ ಮೀಡಿಯಾ ಇನ್ಸ್ಟಾಗ್ರಾಮ್ ನಲ್ಲಿಯೂ ಈ ಧಾರಾವಾಹಿಗೆ ಸಂಬಂಧಪಟ್ಟ ಒಂದಷ್ಟು ರೀಲ್ಸ್ ಗಳನ್ನು ಹಂಚಿಕೊಂಡಿರುವ ಮಹಿತಾ ಧಾರಾವಾಹಿಯಲ್ಲಿಯೂ ಬಹಳ ಭಾವನಾತ್ಮಕವಾಗಿ ನಟಿಸಿ ಜನಮನ ಗೆಲ್ಲುತ್ತಿದ್ದಾಳೆ.
ಈ ಧಾರಾವಾಹಿಯ ಪ್ರೋಮೋ ಬಿಟ್ಟಾಗ, ವಿಭಿನ್ನ ಕಥಾಹಂದರ ಜನರಿಗೆ ಹಿಡಿಸಿದೆ ಧಾರಾವಾಹಿ ಕಥೆ ಯಾವ ರೀತಿ ಮುಂದುವರೆಯಲಿದೆ ಮತ್ತು ಮಹಿತಾ ಸೇರಿದಂತೆ ಇತರ ಪ್ರಮುಖ ನಟ ನಟಿಯರ ಅಭಿನಯ ಯಾವ ರೀತಿ ಜನರಿಗೆ ಹಿಡಿಸಲಿದೆ ಎಂಬುದನ್ನು ಮುಂದೆ ನೋಡಬೇಕಿದೆ.


Click it and Unblock the Notifications











