ಸಾರಾ ಅಣ್ಣಯ್ಯ ಆಯ್ತು.. ಈಗ ದಿಢೀರನೇ 'ರಾಧಿಕಾ' ಸೀರಿಯಲ್‌ನಿಂದ ಕಾವ್ಯಾ ಶಾಸ್ತ್ರಿ ಹೊರಬಂದಿದ್ದೇಕೆ?
ಕನ್ನಡ ಕಿರುತೆರೆ ನಟಿ ಕಾವ್ಯಾ ಶಾಸ್ತ್ರಿ ಹೆಚ್ಚು ಕಮ್ಮಿ ಒಂದೂವರೆ ವರ್ಷದ ನಂತರ ಮತ್ತೆ ಕಿರುತೆರೆಗೆ ವಾಪಸ್ ಆಗಿದ್ದರು. 'ರಾಧಿಕಾ' ಧಾರಾವಾಹಿಯಲ್ಲಿ ಅದೇ ಪಾತ್ರದ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದರು.
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ರಾಧಿಕಾ' ಧಾರಾವಾಹಿಯಲ್ಲಿ ನಾಯಕಿ ರಾಧಿಕಾ ಆಗಿ ಅಭಿನಯಿಸಿ ಸೈ ಎನಿಸಿಕೊಂಡಿದ್ದ ಕಾವ್ಯ ಶಾಸ್ತ್ರಿ ಇದೀಗ ಇದ್ದಕ್ಕಿದ್ದಂತೆ ದಿಢೀರನೇ ಧಾರಾವಾಹಿಯಿಂದ ಹೊರಬಂದಿದ್ದಾರೆ.

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಂದಿನಿ' ಧಾರಾವಾಹಿಯಲ್ಲಿ ಕೊನೆಯ ಬಾರಿ ಕಾಣಿಸಿಕೊಂಡಿದ್ದ ಕಾವ್ಯಾ ಶಾಸ್ತ್ರಿ 'ರಾಧಿಕಾ' ಅವತಾರವೆತ್ತಿ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದರು. ಈ ಸೀರಿಯಲ್ ಮೂಲಕ ಕಿರುತೆರೆಯಲ್ಲಿ ಮೋಡಿ ಮಾಡಿದ ಕಾವ್ಯಾ ಶಾಸ್ತ್ರಿ ಕಾರಣಾಂತರಗಳಿಂದ ಪಾತ್ರಕ್ಕೆ ವಿದಾಯ ಹೇಳಿದ್ದಾರೆ.
'ಶುಭ ವಿವಾಹ' ಮೂಲಕ ನಟನೆಗೆ ಪಾದಾರ್ಪಣೆ
ಪ್ರಪ್ರಥಮ ಬಾರಿಗೆ ಕನ್ನಡ ಕಿರುತೆರೆಯಲ್ಲಿ 'ಶುಭ ವಿವಾಹ' ಎಂಬ ಧಾರಾವಾಹಿಯಲ್ಲಿ ಕಾಣಿಸಿಕೊಂಡ ನಟಿ ಕಾವ್ಯಾ ಶಾಸ್ತ್ರಿ, ತದನಂತರ ನಿರೂಪಕಿಯಾಗಿ ಬಹಳಷ್ಟು ಕಾರ್ಯಕ್ರಮಗಳನ್ನು ಅದ್ಭುತವಾಗಿ ನಡೆಸಿಕೊಟ್ಟಿದ್ದಾರೆ. ಬೇರೆ ಬೇರೆ ಅವಾರ್ಡ್ ಫಂಕ್ಷನ್‌ಗಳಲ್ಲಿ ಹಾಗೂ ರಿಯಾಲಿಟಿ ಶೋಗಳಲ್ಲಿ ನಿರೂಪಕಿಯಾಗಿಯೂ ಸೈ ಎನಿಸಿಕೊಂಡವರು ಮತ್ತೆ ನಟನೆಯನ್ನು ಗಟ್ಟಿಯಾಗಿ ಹಿಡಿದರು.

ಸೀರಿಯಲ್ ಜೊತೆಗೆ ಸಿನಿಮಾದಲ್ಲಿಯೂ ಬ್ಯುಸಿ
ರಾಧಿಕಾ ಪಾತ್ರವು ಬಹಳಷ್ಟು ಹೆಣ್ಣು ಮಕ್ಕಳಿಗೆ ಸ್ಪೂರ್ತಿ ನೀಡುತ್ತದೆ ಎಂದು ನಂಬಿದ್ದೇನೆ ಎಂದು ಹೇಳುವ ಕಾವ್ಯಾ ಶಾಸ್ತ್ರಿ ಧಾರಾವಾಹಿಗಳಷ್ಟೇ ಅಲ್ಲದೆ ಕೆಲವು ಸಿನಿಮಾಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. 'ಮಾರ್ಟಿನ್' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಕಾವ್ಯಾ ಶಾಸ್ತ್ರಿ, ಅದಾದ ಮೇಲೆ ಅಪ್ಪು ನಟಿಸಿದ್ದ 'ಜೇಮ್ಸ್' ಸಿನಿಮಾದಲ್ಲೂ ನಟಿಸಿದ್ದಾರೆ.
ದ್ವಿಪಾತ್ರದಲ್ಲಿ ನಟನೆ
'ಶುಭವಿವಾಹ' ಧಾರಾವಾಹಿಯಲ್ಲಿ ಶ್ರದ್ಧಾ ಆಗಿ ಅಭಿನಯಿಸಿ ಸೈ ಎನಿಸಿಕೊಂಡಿದ್ದ ಕಾವ್ಯಾ ಶಾಸ್ತ್ರಿ ಮುಂದೆ ಬಣ್ಣ ಹಚ್ಚಿದ್ದು 'ನಂದಿನಿ' ಧಾರಾವಾಹಿಯಲ್ಲಿ. 'ನಂದಿನಿ' ಧಾರಾವಾಹಿಯಲ್ಲಿ ದೇವಸೇನಾಳಾಗಿ ನಟಿಸಿದ್ದ ಕಾವ್ಯಾ ಶಾಸ್ತ್ರಿ ಆ ಪಾತ್ರಕ್ಕೂ ವಿದಾಯ ಹೇಳಿದ್ದರು. ಮುಂದೆ ಅದೇ ಧಾರಾವಾಹಿಯಲ್ಲಿ ತ್ರಿಶಲಾ ಪಾತ್ರದ ಮೂಲಕ ಮರಳಿದ ಈಕೆ ದ್ವಿಪಾತ್ರದ ಮೂಲಕ ಗಮನ ಸೆಳೆದಿದ್ದರು.
ಪರಭಾಷೆಯಲ್ಲಿಯೂ ಮೋಡಿ
ತಮಿಳು ಧಾರಾವಾಹಿ 'ಮಹಾಲಕ್ಷ್ಮಿ'ಯಲ್ಲಿ ನಟಿಸುವ ಮೂಲಕ ಪರಭಾಷೆಯ ಕಿರುತೆರೆಗೂ ಕಾವ್ಯಾ ಶಾಸ್ತ್ರಿ ಕಾಲಿಟ್ಟಿದ್ದರು. ತದನಂತರ ತಮಿಳಿನ 'ಸೆಲ್ವಿ' ಧಾರಾವಾಹಿಯಲ್ಲೂ ನಟಿಸಿದ್ದರು. ಇದೀಗ 'ರಾಧಿಕಾ' ಧಾರಾವಾಹಿಯ ಮೂಲಕ ಕನ್ನಡ ಕಿರುತೆರೆಯಲ್ಲಿ ಮೋಡಿ ಮಾಡಿದ್ದ ಕಾವ್ಯಾ ಶಾಸ್ತ್ರಿ ಧಾರಾವಾಹಿಯಿಂದ ಹೊರಬಂದಿದ್ದು ಪ್ರೇಕ್ಷಕರಿಗೆ ಬೇಸರ ತಂದಿದೆ. ಆದರೆ, ದಿಢೀರನೇ ಈ ಧಾರಾವಾಹಿಯಿಂದ ಹೊರಬಂದಿದ್ದೇಕೆ? ಅನ್ನೋದು ಮಾತ್ರ ಇನ್ನೂ ರಿವೀಲ್ ಮಾಡಿಲ್ಲ.


Click it and Unblock the Notifications











