ಕಿರುತೆರೆಗೆ ಬಹಳ ಹಳಬರು 'ಶ್ರೀರಸ್ತು ಶುಭಮಸ್ತು' ಮಾಧವ
ವಯಸ್ಸಿಗೆ ಮೀರಿದ ನಟನೆಯನ್ನು ಮಾಡುವವರು ಕಿರುತೆರೆಯಲ್ಲಿ ಬಹಳಷ್ಟು ಮಂದಿ ಇದ್ದಾರೆ. ರೀಲ್ ಲೈಫ್‌ಗೂ ರಿಯಲ್ ಲೈಫ್‌ಗೂ ಸಂಬಂಧವೇ ಇರುವುದಿಲ್ಲ. ಅಂತಹ ಒಳ್ಳೊಳ್ಳೆಯ ಪಾತ್ರಗಳನ್ನು ಮಾಡಿ ಎಲ್ಲರನ್ನೂ ಮೆಚ್ಚಿಸುತ್ತಾರೆ.
ನಾಟಕ, ಸಿನಿಮಾ, ಧಾರಾವಾಹಿಗಳಲ್ಲಿ ತಂದೆ-ತಾಯಿ, ಅಜ್ಜ-ಅಜ್ಜಿ ಪಾತ್ರವನ್ನು ಮಾಡದವರೆಲ್ಲಾ ನಿಜ ಜೀವನದಲ್ಲೂ ಆಯಾ ವಯಸ್ಸಿನವರು ಎಂದುಕೊಳ್ಳುವುದು ತಪ್ಪಾಗುತ್ತದೆ. ಯಂಗ್ ಆಗಿರುವವರೇ ಎಲ್ಲಾ ಪಾತ್ರಗಳನ್ನು ನಿಭಾಯಿಸಬಲ್ಲರು.
ಜ್ಯೋತಿ ಕಿರಣ್, ಸ್ವಾತಿ ಸೇರಿದಂತೆ ಹಲವರು ಇನ್ನೂ ಯಂಗೇಜ್‌ನಲ್ಲಿ ಇರುವವರು. ಆದರೂ ಕೂಡ ವಯಸ್ಸಿಗೆ ಮೀರಿದ ತಾಯಿ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇವರ ಸಾಲಿಗೆ ಈಗ ಮತ್ತೊಬ್ಬ ನಟರೂ ಇದ್ದಾರೆ. ಅವರೇ ಅಜಿತ್ ಹಂದೆ.

ಮತ್ತೆ ಕಿರುತೆರೆಗೆ ಅಜಿತ್ ಎಂಟ್ರಿ
'ಶ್ರೀರಸ್ತು ಶುಭಮಸ್ತು' ಧಾರಾವಾಹಿ ಬಗ್ಗೆ ಯಾರೂ ಮಾತನಾಡುವಂತಿಲ್ಲ. ಸೀರಿಯಲ್ ಶುರುವಾಗಿ ಕೇವಲ ಮೂರು ತಿಂಗಳಾಗಿದೆ. ಆದರೆ, ಚಿಕ್ಕವರಿಂದ ದೊಡ್ಡವರು ಕೂಡ ಈ ಧಾರಾವಾಹಿಯನ್ನು ಮೆಚ್ಚಿಕೊಂಡಿದ್ದಾರೆ. ಪ್ರತಿಯೊಂದು ಪಾತ್ರಗಳಿಗೂ ವಿಶೇಷವಾದ ಗಮನವನ್ನು ಕೊಟ್ಟಿದ್ದು, ಎಲ್ಲರೂ ತಮ್ಮ ಮನೆಯಲ್ಲಿರುವವರಿಗೆ ಹೋಲಿಸಿಕೊಳ್ಳುವಂತಿದೆ. ಈ ಧಾರಾವಾಹಿಯಲ್ಲಿ ನಾಯಕನ ಪಾತ್ರದಲ್ಲಿ ಮಾಧವ್ ಕಾಣಿಸಿಕೊಂಡಿದ್ದು, ಮಾಧವ್ ಅವರ ನಿಜವಾದ ಹೆಸರು ಅಜಿತ್ ಹಂದೆ. ಈ ವ್ಯಕ್ತಿಯನ್ನು ಈ ಹಿಂದೆ ನೀವು ನೋಡಿರಬಹುದು. ಆದರೆ, ಮರೆತಿರುತ್ತೀರಿ ಅಷ್ಟೇ. ಕಳೆದ ಹಲವು ವರ್ಷಗಳ ಹಿಂದೆ ನಟಿಸಿದ್ದ ಇವರು, ಇದೀಗ ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ.

ಯುಎಸ್‌ನಲ್ಲಿ ಫಿಲ್ಮ್ ಮೇಕಿಂಗ್ ಕೋರ್ಸ್
ರಂಗಭೂಮಿಯಲ್ಲಿ ಸಕ್ರಿಯರಾಗಿರುವ ಅಜಿತ್ ಹಂದೆ ಅವರು, ಈ ಹಿಂದೆ 'ಬಿದಿಗೆ ಚಂದ್ರಮ', 'ಗರ್ವ', 'ಮುಕ್ತ' ಧಾರಾವಾಹಿಗಳಲ್ಲಿ ನಟಿಸಿದ್ದರು. ಇಷ್ಟೇ ಅಲ್ಲದೇ ಹಿಂದೆ ಕಿರುತೆರೆಯಲ್ಲೂ ಕಾಣಿಸಿಕೊಂಡಿದ್ದರು. ಹಿಂದಿಯಲ್ಲಿ 'ಚೋಟಿಮಾ' ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇನ್ನು 'ಮುಕ್ತ' ಧಾರಾವಾಹಿಯಲ್ಲಿ ಸ್ವಾಮೀಜಿ ಪಾತ್ರದಲ್ಲಿ ನಟಿಸಿದ್ದರು. ಇದಾದ ಬಳಿಕ ಅಜಿತ್ ಹಂದೆ ಅವರು ಯುಎಸ್‌ಗೆ ಹೊರಟು ಬಿಟ್ಟರು. ಅಲ್ಲಿ ಫಿಲ್ಮಂ ಮೇಕಿಂಗ್ ಕೋರ್ಸ್ ಮಾಡಿ ಬಂದರು.

ಬಣ್ಣದ ಲೋಕದಲ್ಲಿ ಸಕ್ರಿಯ
ಯುಎಸ್‌ನಿಂದ ಬಂದ ಬಳಿಕ ಅಜಿತ್ ಹಂದೆ ಅವರು ತೆರೆಮೇಲೆ ಕಾಣಿಸಿಕೊಳ್ಳುವುದಕ್ಕಿಂತಲೂ ಪರದೆಯ ಹಿಂದೆ ಇದ್ದದ್ದೇ ಹೆಚ್ಚು. ತಮ್ಮದೇ ಸ್ವಂತ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿದರು. ಇದರಲ್ಲಿ ಕಿರುಚಿತ್ರ ಮ್ಯೂಸಿಕ್ ಆಲ್ಬಂಗಳು, ಸಾಕ್ಷ್ಯ ಚಿತ್ರಗಳನ್ನು ನಿರ್ಮಿಸಿದರು. ಇದರ ಜೊತೆಗೆ 'ಅವಲಕ್ಕಿ ಪವಲಕ್ಕಿ' ಎಂಬ ಧಾರಾವಾಹಿಯನ್ನು ನಿರ್ದೇಶಿಸಿ, ನಿರ್ಮಿಸಿದ್ದರು ಕೂಡ. ಹಾಗೆ ನೋಡಿದರೆ, ಅಜಿತ್ ಹಂದೆ ಅವರ ಬಣ್ಣದ ಲೋಕದ ನಂಟು ಬಹಳ ದೊಡ್ಡದಿದೆ. ಆದರೆ, ಮೊದಲಿದ್ದ ಅಜಿತ್ ಹಂದೆಗೂ ಈಗ ನೋಡುವ ಮಾಧವನಿಗೂ ತುಂಬಾನೇ ವ್ಯತ್ಯಾಸ ಕಾಣುತ್ತದೆ. ಅಜಿತ್ ಹಂದೆ ಅವರ ಲುಕ್‌ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.

ಸಿನಿಮಾಗಳಲ್ಲೂ ಅಜಿತ್ ನಟನೆ
ಇನ್ನು ಧಾರಾವಾಹಿಗಳ ಜೊತೆಗೆ ಸಿನಿಮಾಗಳಲ್ಲೂ ಅಜಿತ್ ಹಂದೆ ಅವರು ನಟಿಸಿದ್ದಾರೆ. ಕನ್ನಡದ 'ಚಂಬಲ್', 'ಮಿನುಗು' ಹಾಗೂ '5 ಒಂದ್ಲಾ ಐದು' ಎಂಬ ಚಿತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಹಿಂದಿಯಲ್ಲಿ ಮೂಡಿ ಬಂದ 'ಏಕ್ ಅಲಗ್ ಮೌಸಮ್' ಎಂಬ ಸಿನಿಮಾದಲ್ಲೂ ಅಜಿತ್ ಹಂದೆ ಅವರು ನಟಿಸಿದ್ದಾರೆ. ಆದರೆ, ಅಜಿತ್ ಹಂದೆ ಅವರಿಗೆ ಹೆಸರು ತಂದುಕೊಟ್ಟದ್ದು 'ಶ್ರೀರಸ್ತು ಶುಭಮಸ್ತು' ಧಾರಾವಾಹಿ. ಈ ಧಾರಾವಾಹಿಯಲ್ಲಿ ಮಧ್ಯ ವಯಸ್ಕನ ಪಾತ್ರ ಮಾಡಿರುವ ಅಜಿತ್ ಹಂದೆ ಅವರಿಗೆ ನಾಲ್ಕು ವರ್ಷದ ಪುಟಾಣಿ ಮಗನು ಇದ್ದಾನೆ.


Click it and Unblock the Notifications











