'ಅಲಾ ವೈಕುಂಟಪುರಂಲೋ' ಹಿಂದಿ ಡಬ್ಬಿಂಗ್ ಸಿನಿಮಾ ಬಿಡುಗಡೆ ದಿನಾಂಕ ಪ್ರಕಟ
ಅಲ್ಲು ಅರ್ಜುನ್ ನಟನೆಯ 'ಅಲಾ ವೈಕುಂಟಪುರಂಲೋ' ಸಿನಿಮಾದ ಹಿಂದಿ ಡಬ್ಬಿಂಗ್ ಆವೃತ್ತಿಯ ಬಿಡುಗಡೆ ಬಾಲಿವುಡ್‌ನಲ್ಲಿ ಸಣ್ಣ ಮಟ್ಟಿನ ವಿವಾದ ಎಬ್ಬಿಸಿದೆ.
Recommended Video
ಅಲ್ಲು ಅರ್ಜುನ್ ನಟನೆಯ ಹೊಸ ಸಿನಿಮಾ 'ಪುಷ್ಪ' ಹಿಂದಿ ಆವೃತ್ತಿ ದೊಡ್ಡ ಹಿಟ್ ಆಗಿ 100 ಕೋಟಿಗೂ ಹೆಚ್ಚು ಹಣ ಗಳಿಸಿದ ಕಾರಣ, ಅಲ್ಲು ಅರ್ಜುನ್ ನಟನೆಯ ಈ ಹಿಂದಿನ ಸಿನಿಮಾ 'ಅಲಾ ವೈಕುಂಟಪುರಂಲೋ' ಹಿಂದಿ ಡಬ್ಬಿಂಗ್ ಹಕ್ಕು ಹೊಂದಿದ್ದ ಮನಿಶ್ ಗಿರಿ ಶಾ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದ್ದರು.
ಆದರೆ 'ಅಲಾ ವೈಕುಂಟಪುರಂಲೋ' ಸಿನಿಮಾವನ್ನು 'ಶೆಹಜಾದಾ' ಹೆಸರಿನಲ್ಲಿ ಹಿಂದಿಗೆ ರೀಮೇಕ್ ಮಾಡುತ್ತಿದ್ದು, ಈ ಸಿನಿಮಾದ ನಿರ್ಮಾಪಕರಲ್ಲಿ ಒಬ್ಬರಾದ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಮನೀಶ್ ಗಿರಿ ಶಾ ಅವರೊಟ್ಟಿಗೆ ಹಲವು ಸುತ್ತಿನ ಮಾತುಕತೆ ನಡೆಸಿ, 'ಅಲಾ ವೈಕುಂಟಪುರಂಲೋ' ಸಿನಿಮಾದ ಹಿಂದಿ ಆವೃತ್ತಿಗೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗದಂತೆ ತಡೆದಿದ್ದಾರೆ.

ಆದರೆ ಇದೀಗ ಮನೀಶ್ ಗಿರಿ ಶಾ 'ಅಲಾ ವೈಕುಂಟಪುರಂಲೋ' ಸಿನಿಮಾದ ಹಿಂದಿ ಆವೃತ್ತಿಯ ಟ್ರೇಲರ್ ಬಿಡುಗಡೆ ಮಾಡಿದ್ದು, ಬಿಡುಗಡೆ ದಿನಾಂಕ ಘೋಷಿಸಿದ್ದಾರೆ. ಆದರೆ ಸಿನಿಮಾ ಬಿಡುಗಡೆ ಆಗುತ್ತಿರುವುದು ಚಿತ್ರಮಂದಿರಗಳಲ್ಲಿ ಅಲ್ಲ ಬದಲಿಗೆ ಟಿವಿ ಚಾನೆಲ್‌ನಲ್ಲಿ.
ಮನೀಶ್ ಶಾ ಒಡೆತನದ 'ಡಿಂಚ್ಯಾಕ್'ಯಲ್ಲಿ 'ಅಲಾ ವೈಕುಂಟಪುರಂಲೋ' ಸಿನಿಮಾ ಹಿಂದಿ ಡಬ್ ಬಿಡುಗಡೆ ಆಗುತ್ತಿದೆ. ಸಿನಿಮಾದ ಟ್ರೇಲರ್ ಗೋಲ್ಡ್‌ಮೈನ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಆಗಿದ್ದು, ಸಿನಿಮಾದ ಹಿಂದಿ ಆವೃತ್ತಿಯು ಫೆಬ್ರವರಿ 13 ರ ಭಾನುವಾರದಂದು ಬಿಡುಗಡೆ ಆಗಲಿದೆ ಎಂದು ಪ್ರಕಟಿಸಲಾಗಿದೆ.
ಈ ಹಿಂದೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ನಿರ್ಮಾಪಕ ಮನೀಶ್ ಶಾ, ''ನಾನು 'ಅಲಾ ವೈಕುಂಟಪುರಂಲೋ' ಸಿನಿಮಾದ ಹಿಂದಿ ಡಬ್ಬಿಂಗ್ ಅನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದ್ದೆ. ಆದರೆ ಅದೇ ಸಿನಿಮಾದ ಹಿಂದಿ ರೀಮೇಕ್‌ನಲ್ಲಿ ನಟಿಸುತ್ತಿರುವ ಕಾರ್ತಿಕ್ ಆರ್ಯನ್, 'ಅಲಾ ವೈಕುಂಟಪುರಂಲೋ' ಸಿನಿಮಾದ ಹಿಂದಿ ಆವೃತ್ತಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆದರೆ 'ಶೆಹಜಾದ' ಸಿನಿಮಾದಿಂದ ಹೊರಗೆ ಹೋಗುವುದಾಗಿ ಬೆದರಿಕೆ ಹಾಕಿದ್ದಾರೆ. ಇದು ಅವರ ವೃತ್ತಿಪರತೆಯ ಕೊರತೆಯನ್ನು ತೋರಿಸುತ್ತದೆ. 'ಅಲಾ ವೈಕುಂಟಪುರಂಲೋ' ಸಿನಿಮಾ ಬಿಡುಗಡೆ ಮಾಡಲು ನಾನು ಎರಡು ಕೋಟಿ ಹಣ ಖರ್ಚು ಮಾಡಿದ್ದೆ. ಆದರೆ ನನ್ನ ನಿರ್ಮಾಪಕ ಗೆಳೆಯರಾದ ಅಲ್ಲು ಅರವಿಂದ್ ಅವರಿಗಾಗಿ ಸಿನಿಮಾವನ್ನು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುತ್ತಿಲ್ಲ'' ಎಂದಿದ್ದರು.


Click it and Unblock the Notifications











