'ಬಿಗ್ ಬಾಸ್' ಗ್ರ್ಯಾಂಡ್ ಫಿನಾಲೆ ತಲುಪಿರುವ ದೀಪಿಕಾ ಕಕ್ಕರ್ ಯಾರು.?
ಭಾರತೀಯ ಕಿರುತೆರೆ ಲೋಕದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್' ಹನ್ನೆರಡನೇ ಆವೃತ್ತಿ ಗ್ರ್ಯಾಂಡ್ ಫಿನಾಲೆ ಹಂತ ತಲುಪಿದೆ. ನಾಳೆ (ಭಾನುವಾರ, ಡಿಸೆಂಬರ್ 30) ಸಂಜೆ 'ಬಿಗ್ ಬಾಸ್-12' ವಿಜೇತರ ಘೋಷಣೆ ಆಗಲಿದೆ.
ನಿರೀಕ್ಷೆಯಂತೆ 'ಬಿಗ್ ಬಾಸ್-12' ಕಾರ್ಯಕ್ರಮದಲ್ಲಿ ಕಿರುತೆರೆ ನಟಿ ದೀಪಿಕಾ ಕಕ್ಕರ್ ಇಬ್ರಾಹಿಂ ಫಿನಾಲೆ ತಲುಪಿದ್ದಾರೆ. 'ಬಿಗ್ ಬಾಸ್' ಮನೆಯಲ್ಲಿ ಕ್ರಿಕೆಟರ್ ಶ್ರೀಶಾಂತ್ ಸಹೋದರಿಯಾಗಿ ಗುರುತಿಸಿಕೊಂಡಿರುವ ದೀಪಿಕಾ, ಇದೀಗ 'ಬಿಗ್ ಬಾಸ್' ಟ್ರೋಫಿ ಮೇಲೆ ಕಣ್ಣಿಟ್ಟಿದ್ದಾರೆ.
ಯಾರ ಬಗ್ಗೆಯೂ ಅವಹೇಳನಕಾರಿಯಾಗಿ ಮಾತನಾಡದೆ, ಘನತೆ-ಗೌರವದಿಂದ ಆಟ ಆಡಿದ ಸ್ಪರ್ಧಿ ದೀಪಿಕಾ ಕಕ್ಕರ್ ಇಬ್ರಾಹಿಂ. 'ಬಿಗ್ ಬಾಸ್' ಮನೆಯಲ್ಲಿ ಸೆಲೆಬ್ರಿಟಿ ಸ್ಪರ್ಧಿ ಆಗಿರುವ ದೀಪಿಕಾ ಗೆಲುವಿನ ನಗೆ ಬೀರುತ್ತಾರಾ.? ಗೊತ್ತಿಲ್ಲ. ಅದಕ್ಕೂ, ಮುನ್ನ ದೀಪಿಕಾ ಯಾರು, 'ಬಿಗ್ ಬಾಸ್' ಮನೆಯಲ್ಲಿ ಆಕೆಯ ಜರ್ನಿ ಹೇಗಿತ್ತು ಅಂತ ನೋಡಿಕೊಂಡು ಬರೋಣ ಬನ್ನಿ..

ಯಾರೀ ದೀಪಿಕಾ ಕಕ್ಕರ್ ಇಬ್ರಾಹಿಂ.?
ಕಲರ್ಸ್ ವಾಹಿನಿಯ 'ಸಸುರಾಲ್ ಸಿಮರ್ ಕಾ' ಧಾರಾವಾಹಿಯಲ್ಲಿ ಸಿಮರ್ ಭಾರದ್ವಾಜ್ ಪಾತ್ರದ ಮೂಲಕ ಜನಪ್ರಿಯತೆ ಪಡೆದುಕೊಂಡ ಕಿರುತೆರೆ ನಟಿ ದೀಪಿಕಾ ಕಕ್ಕರ್ ಇಬ್ರಾಹಿಂ. 'ಝಲಕ್ ದಿಖಲಾಜಾ-8', 'ನಚ್ ಬಲಿಯೇ-8' ಸೇರಿದಂತೆ ಕಿರುತೆರೆಯ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ ದೀಪಿಕಾ 'ಬಿಗ್ ಬಾಸ್-12'ನ ಸೆಲೆಬ್ರಿಟಿ ಸ್ಪರ್ಧಿ.

ಅಡುಗೆ ಮನೆಯಲ್ಲಿ ಹೆಚ್ಚು ಕಾಲ ಕಳೆದ ದೀಪಿಕಾ
ಕಳೆದ ಬಾರಿಯ 'ಬಿಗ್ ಬಾಸ್' ವಿನ್ನರ್ ಶಿಲ್ಪಾ ಶಿಂಧೆ ತರಹ ದೀಪಿಕಾ ಕಕ್ಕರ್ ಈ ಬಾರಿ ಹೆಚ್ಚು ಕಾಣಿಸಿಕೊಂಡಿದ್ದು ಅಡುಗೆ ಮನೆಯಲ್ಲಿ. 'ಬಿಗ್ ಬಾಸ್' ಮನೆಯ ಪವರ್ ಸೆಂಟರ್ ಆಗಿರುವ ಅಡುಗೆ ಮನೆಯಲ್ಲಿ ಇದ್ದುಕೊಂಡು, ಎಲ್ಲಾ ಸ್ಪರ್ಧಿಗಳಿಗೂ ಅಡುಗೆ ಮಾಡಿ ವೀಕ್ಷಕರ ಮನ ಗೆದ್ದಿದ್ದಾರೆ ದೀಪಿಕಾ ಕಕ್ಕರ್ ಇಬ್ರಾಹಿಂ.

ಮಾತಲ್ಲಿ ಎಲ್ಲರನ್ನೂ ಮೀರಿಸುವ ದೀಪಿಕಾ
ತಮ್ಮ ನಿಲುವುಗಳನ್ನು ಸ್ಪಷ್ಟವಾಗಿ ಹೊರಹಾಕುವ ದೀಪಿಕಾ ಕಕ್ಕರ್, ಯಾವತ್ತೂ ಡಬಲ್ ಗೇಮ್ ಆಡಿಲ್ಲ. ಮಾತಲ್ಲಿ ಎಲ್ಲರನ್ನೂ ಮೀರಿಸುವ ತಾಕತ್ತು ಇದ್ದರೂ, ವಾಕ್ಸಮರಗಳಿಗೆ ದೀಪಿಕಾ ಎಂದೂ ನಾಂದಿ ಹಾಡಿಲ್ಲ. ಯಾರ ಬಳಿಯೂ ಬಾಯಿಗೆ ಬಂದ ಹಾಗೆ ದೀಪಿಕಾ ಮಾತನಾಡಿಲ್ಲ. ಇದೇ ಕಾರಣಕ್ಕೆ ದೀಪಿಕಾ ಹಲವು ವೀಕ್ಷಕರ ಮೆಚ್ಚಿನ ಸ್ಪರ್ಧಿ ಆಗಿದ್ದಾರೆ.

ಘನತೆ ಕಾಪಾಡಿಕೊಂಡ ದೀಪಿಕಾ
ಇತರೆ ಸ್ಪರ್ಧಿಗಳ ಹಾಗೆ, ಟಿ.ಆರ್.ಪಿಗಾಗಿ ದೀಪಿಕಾ ಕೀಳು ಮಟ್ಟದ ಜಗಳಗಳನ್ನು ಮಾಡಿಕೊಳ್ಳಲಿಲ್ಲ. 'ಬಿಗ್ ಬಾಸ್' ಮನೆಯಲ್ಲಿ ಇಲ್ಲಿಯವರೆಗೂ ತಾಳೆ ಹಾಗೂ ಘನತೆಯನ್ನು ಕಾಪಾಡಿಕೊಳ್ಳುವಲ್ಲಿ ದೀಪಿಕಾ ಯಶಸ್ವಿ ಆಗಿದ್ದಾರೆ. ಹಾಗ್ನೋಡಿದ್ರೆ, ದೀಪಿಕಾ ಗೌರವಾನ್ವಿತ ಸ್ಪರ್ಧಿ ಅಂತ ಖುದ್ದು ಸಲ್ಮಾನ್ ಖಾನ್ ಹೊಗಳಿದ್ದರು.

ಟಾಸ್ಕ್ ಗಳಲ್ಲಿ ಪರ್ಫಾಮೆನ್ಸ್ ಹೇಗೆ.?
ದೈಹಿಕ ಚಟುವಟಿಕೆ ನೀಡಿದಾಗ, ಆಕ್ರಮಣಕಾರಿಯಾಗಿ ದೀಪಿಕಾ ನೂಕಾಡುತ್ತಿರಲಿಲ್ಲ. ಇತರೆ ಟಾಸ್ಕ್ ಗಳಲ್ಲಿ ತಮ್ಮ ಮಾನಸಿಕ ಸಾಮರ್ಥ್ಯವನ್ನ ತೋರಿಸಿ ದೀಪಿಕಾ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ.

ದೀಪಿಕಾ 'ಫೇಕ್'
ಸೀರಿಯಲ್ ನಲ್ಲಿ ನಟಿಸುವ ಹಾಗೆ ದೀಪಿಕಾ ಇಲ್ಲೂ ಆಕ್ಟಿಂಗ್ ಮಾಡುತ್ತಿದ್ದಾರೆ. ಆಕೆ ಫೇಕ್ ಎಂದು ಇತರೆ ಸ್ಪರ್ಧಿಗಳು ಆರೋಪಿಸಿದ್ದರು. ಅಲ್ಲದೇ ದೀಪಿಕಾ ತುಂಬಾ ಎಮೋಷನಲ್ ಎಂದೂ ಪದೇ ಪದೇ ಬೆಟ್ಟು ಮಾಡಿ ತೋರಿಸಲಾಗಿತ್ತು. ಎಲ್ಲವನ್ನೂ ಸಹಿಸಿಕೊಂಡು ದೀಪಿಕಾ ಗ್ರ್ಯಾಂಡ್ ಫಿನಾಲೆವರೆಗೂ ಬಂದಿದ್ದಾರೆ.

ಶ್ರೀಶಾಂತ್ ಗೆ 'ತಂಗಿ'
'ಬಿಗ್ ಬಾಸ್-12' ಕಾರ್ಯಕ್ರಮದಲ್ಲಿ ದೀಪಿಕಾ ಅತಿ ಹೆಚ್ಚಾಗಿ ಕಾಣಿಸಿಕೊಂಡಿದ್ದು ಶ್ರೀಶಾಂತ್ ಜೊತೆಗೆ. ಕ್ರಿಕೆಟರ್ ಶ್ರೀಶಾಂತ್ ಗೆ 'ಭಾಯ್' ಎಂದು ಕರೆಯುತ್ತಿದ್ದ ದೀಪಿಕಾ, ಆತ ಟೆಂಪರ್ ರೈಸ್ ಮಾಡಿಕೊಂಡೆಲ್ಲಾ ತಂಗಿಯಾಗಿ ಸಮಾಧಾನ ಮಾಡಿದ್ದಾರೆ. ಶ್ರೀಶಾಂತ್ ತಪ್ಪು ಮಾಡಿದಾಗೆಲ್ಲಾ ದೀಪಿಕಾ ತಿದ್ದಿ ತೀಡಿದ್ದಾರೆ. ಸದಾ ಶ್ರೀಶಾಂತ್ ಪರ ವಹಿಸುತ್ತಿದ್ದ ಕಾರಣಕ್ಕೆ, ದೀಪಿಕಾ ಇತರೆ ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.

'ಬಿಗ್ ಬಾಸ್' ವಿನ್ನರ್ ಅಗುತ್ತಾರಾ ದೀಪಿಕಾ.?
ನಟ ಶೋಯೆಬ್ ಇಬ್ರಾಹಿಂ ರನ್ನು ಮದುವೆ ಆದ ಕೆಲವೇ ತಿಂಗಳಲ್ಲಿ ದೀಪಿಕಾ ಕಕ್ಕರ್ 'ಬಿಗ್ ಬಾಸ್' ಮನೆ ಪ್ರವೇಶಿಸಿದರು. ಸೋಲು-ಗೆಲುವಿನ ಹಾದಿಯಲ್ಲಿ 'ಬಿಗ್ ಬಾಸ್-12' ಫಿನಾಲೆ ತಲುಪಿದ್ದಾರೆ ದೀಪಿಕಾ. ಹಲವು ವೀಕ್ಷಕರ ಹೃದಯ ಗೆದ್ದಿರುವ ದೀಪಿಕಾ 'ಬಿಗ್ ಬಾಸ್' ಟ್ರೋಫಿಯನ್ನೂ ಗೆಲ್ಲುತ್ತಾರಾ.? ನೋಡಬೇಕು.


Click it and Unblock the Notifications











