'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟ ದಯಾಳ್ ಪದ್ಮನಾಭನ್ ಕಿರು ಪರಿಚಯ
'ಬಿಗ್ ಬಾಸ್' ಮನೆಯೊಳಗೆ ''ನಿಮ್ಮನ್ನ ಏನಂತ ಕರೆಯಬೇಕು?'' ಎಂದು ಯಾರಾದರೂ ಕೇಳಿದಾಗ 'ಡ್ರಾಕುಲಾ' ಅಂತ ಕರೆಯಿರಿ ಎಂಬ ಮಾತು ದಯಾಳ್ ಪದ್ಮನಾಭನ್ ಬಾಯಿಂದ ಬರುತ್ತದೆ. ಇದಕ್ಕೆ ಕಾರಣವೂ ಇದೆ. ಸೂಪರ್ ಹಿಟ್ 'ಗಾಳಿಪಟ' ಚಿತ್ರದಲ್ಲಿ ದಯಾಳ್ ಪದ್ಮನಾಭನ್ ನಿರ್ವಹಿಸಿದ ಪಾತ್ರದ ಹೆಸರೇ 'ಡ್ರಾಕುಲಾ'.
ಹೌದು... ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ದಯಾಳ್ ಪದ್ಮನಾಭನ್ ಇದೀಗ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಸ್ಪರ್ಧಿ.
'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟಿರುವ ದಯಾಳ್ ಪದ್ಮನಾಭನ್ ರವರ ಕಿರು ಪರಿಚಯ ಇಲ್ಲಿದೆ, ನಿಮಗಾಗಿ....

ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದ ದಯಾಳ್
ಬಡ ಕುಟುಂಬದಲ್ಲಿ ತಮಿಳುನಾಡಲ್ಲಿ ಹುಟ್ಟಿ ಬೆಳೆದ ದಯಾಳ್ ಇಂದು ಸೆಲೆಬ್ರಿಟಿ ಸ್ಪರ್ಧಿಯಾಗಿ 'ಬಿಗ್ ಬಾಸ್' ಮನೆಗೆ ಕಾಲಿಟ್ಟಿದ್ದಾರೆ.

ವಿಜ್ಞಾನಿ ಆಗಿದ್ದವರು
ಬಿ.ಇ ಪದವಿ ಮುಗಿಸಿದ ಬಳಿಕ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಹದಿನೈದು ವರ್ಷಗಳ ಕಾಲ ಸೇವೆ ಸಲ್ಲಿಸಿದ ದಯಾಳ್ ಪದ್ಮನಾಭನ್ ನಂತರ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು.

ಹಲವಾರು ಸಿನಿಮಾಗಳಿಗೆ ಚಿತ್ರಕಥೆ ಬರೆದಿದ್ದಾರೆ
2000 ರಲ್ಲಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ದಯಾಳ್ ಪದ್ಮನಾಭನ್, 'ಓಂ ಗಣೇಶ್', 'ಹುಡುಗಿಗಾಗಿ', 'H20', 'ಗಟ್ಟಿಮೇಳ' ಸೇರಿದಂತೆ ಹಲವು ಚಿತ್ರಗಳಲ್ಲಿ ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ.

13 ಚಿತ್ರಗಳಿಗೆ ನಿರ್ದೇಶಕ
'ಓಕೆ ಸಾರ್ ಓಕೆ' ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟ ದಯಾಳ್ ಪದ್ಮನಾಭನ್, 'ಬಾ ಬಾರೋ ರಸಿಕ', 'ಸರ್ಕಸ್', 'ಯೋಗರಾಜ್ ಬಟ್', 'ಘರ್ಷಣೆ', 'ಆಕ್ಟರ್' ಸೇರಿದಂತೆ 13 ಚಿತ್ರಗಳಲ್ಲಿ ಆಕ್ಷನ್ ಕಟ್ ಹೇಳಿದ್ದಾರೆ. ದಯಾಳ್ ಪದ್ಮನಾಭನ್ ನಿರ್ದೇಶನದ 'ಸತ್ಯ ಹರಿಶ್ಚಂದ್ರ' ಸಿನಿಮಾ ಸದ್ಯದಲ್ಲಿಯೇ ಬಿಡುಗಡೆ ಆಗಲಿದೆ.

ಆರು ಚಿತ್ರಗಳ ನಿರ್ಮಾಪಕ
'ಸರ್ಕಸ್', 'ಹಗ್ಗದ ಕೊನೆ', 'ಆಕ್ಟರ್' ಸೇರಿದಂತೆ ಒಟ್ಟು 6 ಚಿತ್ರಗಳಿಗೆ ನಿರ್ಮಾಪಕರಾಗಿ ದಯಾಳ್ ಪದ್ಮನಾಭನ್ ಬಂಡವಾಳ ಹಾಕಿದ್ದಾರೆ.

ಖ್ಯಾತಿ ತಂದುಕೊಟ್ಟ 'ಗಾಳಿಪಟ' ಡ್ರಾಕುಲಾ
ನಟನಾಗಬೇಕು ಎಂದು ಸರ್ಕಾರಿ ನೌಕರಿ ಬಿಟ್ಟು ಚಿತ್ರರಂಗಕ್ಕೆ ಬಂದ ದಯಾಳ್ ಆಗಿದ್ದು ಮಾತ್ರ ನಿರ್ದೇಶಕ ಮತ್ತು ನಿರ್ಮಾಪಕ. 'ಗಾಳಿಪಟ' ಚಿತ್ರದ 'ಡ್ರಾಕುಲಾ' ಪಾತ್ರ ದಯಾಳ್ ಗೆ ಸಿಕ್ಕಾಪಟ್ಟೆ ಜನಪ್ರಿಯತೆ ತಂದುಕೊಟ್ಟಿದ್ದು ಸುಳ್ಳಲ್ಲ.

'ಬಿಗ್ ಬಾಸ್' ಮನೆಯಲ್ಲಿ ದಯಾಳ್ ಜರ್ನಿ ಹೇಗಿರುತ್ತೋ.?
99 ಕೆ.ಜಿ ತೂಗುವ ದಯಾಳ್, 'ಒಂದೊಳ್ಳೆ ಅನುಭವ'ಕ್ಕಾಗಿ 'ಬಿಗ್ ಬಾಸ್' ಮನೆಗೆ ಕಾಲಿಟ್ಟಿದ್ದಾರೆ. 'ಬಿಗ್ ಬಾಸ್' ಮನೆಯಲ್ಲಿ ದಯಾಳ್ ಜರ್ನಿ ಹೇಗಿರುತ್ತೆ ಅಂತ ನೋಡೋಣ.


Click it and Unblock the Notifications











