ಮುರಳಿಗೆ ಅಡುಗೆ ಮಾಡೋಕೆ ಬರಲ್ಲ, ಆದ್ರೂ 1500 ಶೋ ಹೇಗೆ ಸಾಧ್ಯ.?
'ಒಗ್ಗರಣೆ ಡಬ್ಬಿ' ಮುರಳಿ ಅವರಿಗೆ ಚೆನ್ನಾಗಿ ಅಡುಗೆ ಮಾಡೋಕೆ ಬರುತ್ತೆ. ಪ್ರತಿದಿನವೂ ಬಗೆ ಬಗೆಯ ತಿಂಡಿ ತಿನಿಸುಗಳನ್ನ ತಿನ್ನುತ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದ್ರೆ, ಇದು ಅಪ್ಪಟ ಸುಳ್ಳು ಎಂದು ಸ್ವತಃ ಮುರಳಿ ಅವರೇ ಹೇಳಿಕೊಂಡಿದ್ದಾರೆ. ಹೀಗಿದ್ದರೂ 1500 ಶೋ ನೀಡಲು ಹೇಗೆ ಸಾಧ್ಯವೆಂಬುದು ಕುತೂಹಲ.
ಬಿಗ್ ಬಾಸ್ ನ ಕಳೆದ ಮೂರ್ನಾಲ್ಕು ಆವೃತ್ತಿಗಳಿಂದ ಒಗ್ಗರಣೆ ಡಬ್ಬಿ ಖ್ಯಾತಿಯ ಮುರಳಿ ಅವರ ಹೆಸರು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿತ್ತು. ಈ ಆವೃತ್ತಿಗೂ ಮುಂಚೆಯೂ ಮುರಳಿ ಬರ್ತಾರೆ ಎನ್ನಲಾಗಿತ್ತು. ಈ ಸಲ ಅದು ನಿಜವಾಗಿದೆ.
ಪ್ರತಿ ಆವೃತ್ತಿಯಲ್ಲೂ ಅಡುಗೆ ವಿಭಾಗದಲ್ಲಿ ಖ್ಯಾತಿ ಹೊಂದಿದವರು ಅಥವಾ ಅಡುಗೆ ಪರಿಣಿತರು ಬಿಗ್ ಮನೆಗೆ ಹೋಗಿದ್ದಾರೆ. ಬಹುಶಃ ಅದೇ ನಿರೀಕ್ಷೆಯಲ್ಲಿ ಮುರಳಿ ಈ ಸಲ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಇನ್ನು ಅಡುಗೆ ಮಾಡೋಕೆ ಬರಲ್ಲ, ಆದ್ರೂ 1500 ಶೋ ಮಾಡಿರುವುದು ನಿಜಕ್ಕೂ ಸಾಧನೆಯೇ ಸರಿ. ಒಗ್ಗರಣೆ ಡಬ್ಬಿ ಮುರಳಿ ಬಗ್ಗೆ ಹೆಚ್ಚಿನ ಮಾಹಿತಿ ಮುಂದೆ ಓದಿ....

ಅಡುಗೆ ಮಾಡಲ್ಲ, ತಿನ್ನೋಕೆ ಬರುತ್ತೆ
ನೀವಂದುಕೊಂಡಂತೆ ಒಗ್ಗರಣೆ ಡಬ್ಬಿ ಮುರಳಿ ಅವರಿಗೆ ಅಡುಗೆ ಮಾಡೋಕೆ ಬರಲ್ಲ. ಆದ್ರೆ, ಮಾಡಿದ ಅಡುಗೆಯ ರುಚಿ ಹೇಗಿದೆ ಎಂಬುದನ್ನ ಹೇಳುವ ಅತ್ಯುತ್ತಮ ಸಾಮರ್ಥ್ಯ ಹೊಂದಿದ್ದಾರೆ. ಅಡುಗೆ ಮಾಡುವುದು ಒಂದು ಕಲೆ. ಆದ್ರೆ, ಮಾಡಿದ ಅಡುಗೆಯ ರುಚಿ ಸವಿಯುವುದು ಕೂಡ ಕಲೆ. ಇಂತಹ ಕಲೆ ಮುರಳಿ ಅವರಿಗಿದೆ.

6 ಸಾವಿರ ಬಗೆಯ ತಿಂಡಿ ತಿಂದಿದ್ದಾರೆ
ಇದುವರೆಗೂ 1500ಕ್ಕೂ ಹೆಚ್ಚು ಎಪಿಸೋಡ್ ಗಳನ್ನ ಮಾಡಿರುವ ಮುರಳಿ ಅವರು ಸುಮಾರು 6 ಸಾವಿರ ಬಗೆ ಬಗೆಯ ತಿಂಡಿ ತಿನಿಸುಗಳನ್ನ ತಿಂದಿರಬಹುದಂತೆ. ಇದೇ ಇಷ್ಟ, ಅದು ಇಷ್ಟ ಅಂತ ಏನೂ ಇಲ್ಲ. ಅಡುಗೆ ರುಚಿಯಾಗಿರಬೇಕು, ಚೆನ್ನಾಗಿದ್ರೆ ಯಾವ ರೀತಿಯ ಊಟ ಬೇಕಾದರೂ ಮಾಡ್ತಾರಂತೆ.

ಮನೆಯಲ್ಲೂ ಅದೇ ಮಾಡ್ತಾರೆ
ಮನೆಯಲ್ಲೂ ಕೂಡ ಪತ್ನಿ ಮಾಡಿದ ಅಡುಗೆಯನ್ನ ತಿಂದು ಅದು ಬೇಕಿತ್ತು, ಇದು ಬೇಕಿತ್ತು ಎಂದು ರುಚಿ ಹೇಳ್ತಾರಂತೆ. ಆದ್ರೆ, ಅಡುಗೆ ಮಾಡೋಕೆ ಬರಲ್ಲ ಎಂದು ಅವರ ಪತ್ನಿ ಹೇಳಿದ್ದಾರೆ. ಮುರಳಿ ಅವರಿಗೆ ಇಬ್ಬರು ಗಂಡು ಮಕ್ಕಳು. ಮುರಳಿ ಅವರು ಬಿಗ್ ಬಾಸ್ ಹೋಗೋದು ಮುರಳಿ ಪತ್ನಿಗೆ ಇಷ್ಟವಿಲ್ಲ. ಆದರೂ, ಕಳುಹಿಸಿಕೊಟ್ಟಿದ್ದಾರೆ.

ನಾನು ನಾನಾಗಿ ಇರ್ತೀನಿ
ಬಿಗ್ ಬಾಸ್ ಮನೆಯಲ್ಲಿ ಉಳಿಯಬೇಕಾದರೇ, ಗೆಲ್ಲಬೇಕಾದರೇ ಏನೂ ಮಾಡಬೇಕು ಎಂದು ಕೇಳಿದ್ದಕ್ಕೆ, ನಾನು ನಾನಾಗಿ ಇರ್ತೀನಿ, ಒಳಗೆ ಹೋದ ನಂತರ ನೋಡೋಣ. ಅಲ್ಲಿನ ಸಂದರ್ಭಗಳು, ಸಮಯ ಹೇಗೆ ಮಾಡಿಕೊಳ್ಳುತ್ತೋ ಹಾಗೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಇನ್ನು ಬಿಗ್ ಮನೆಯಲ್ಲಿ 'ಕನ್ನಡ ಹಾಡು' ಹಾಕಿಸಿಕೊಳ್ಳಲ್ಲ, ಆದ್ರೆ 'ಎದ್ದೇಳು ಮಂಜುನಾಥ' ಹಾಕಿಸಿಕೊಳ್ಳಬಹುದು ಎಂದು ಗೆಸ್ ಮಾಡಿದ್ದರು.


Click it and Unblock the Notifications











