'ಡ್ರಾಮಾ ಜೂನಿಯರ್ಸ್' ಸ್ಪರ್ಧಿ 'ವಂಶಿ'ಯ ಅಭಿನಯ ಯಾನ
Recommended Video

ಪಟ-ಪಟಾಂತ ಅರಳು ಹುರಿದಂತೆ ಹೊಡೆಯುವ ಡೈಲಾಗ್, ನಿರರ್ಗಳವಾದ ಮಾತು, ಮಾತಿಗೆ ತಕ್ಕಂತೆ ಬಾಡಿ ಲಾಂಗ್ವೆಜ್, ಹಾಡು, ನೃತ್ಯದ ಮೂಲಕ ಎಲ್ಲರ ಮನ ಗೆದ್ದಿರುವಾಕೆ ಈ ಪುಟ್ಟ ಪೋರಿ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಡ್ರಾಮಾ ಜ್ಯೂನಿಯರ್ಸ್' ಸೀಸನ್-2ರಲ್ಲಿ ಮಿಂಚುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಭೆ ವಂಶಿ ರತ್ನಕುಮಾರ್.
ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ ನಡೆದ ಆಡಿಷನ್ ನಲ್ಲಿ ಆಯ್ಕೆಯಾದ ವಂಶಿ, ತದನಂತರ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು. ಬೆಂಗಳೂರಿನಲ್ಲಿ ನಡೆದ ಆಡಿಷನ್ ನಲ್ಲಿ ಇಡೀ ಕರ್ನಾಟಕದ 30 ಸ್ಪರ್ಧಿಗಳಲ್ಲಿ 12 ಜನ ಸ್ಪರ್ಧಿಗಳು ಆಯ್ಕೆಯಾಗಿದ್ದರು. ಅದರಲ್ಲಿ ವಂಶಿ ಕೂಡ ಒಬ್ಬರಾದರು.
ಈಗ 'ಡ್ರಾಮಾ ಜೂನಿಯರ್ಸ್' ಫಿನಾಲೆ ಹಂತಕ್ಕೆ ತಲುಪಿದ್ದು, ಗೆಲ್ಲುವ ಭರವಸೆ ಮೂಡಿಸಿದ್ದಾರೆ. 'ಜೂನಿಯರ್ ಲಕ್ಷ್ಮಿ' ಎಂದೇ ಕರೆಸಿಕೊಳ್ಳುತ್ತಿರುವ ವಂಶಿಯ ಬಗ್ಗೆ ಸಂಪೂರ್ಣವಾದ ಮಾಹಿತಿ ಮುಂದಿದೆ.

ಗುರು ಇಲ್ಲದೇ ಗುರಿ ಮುಟ್ಟಲು ಪಣ
ಯಾವುದೇ ಗುರು ಇಲ್ಲದೆ 'ಡ್ರಾಮಾ ಜ್ಯೂನಿಯರ್ಸ್' ವೇದಿಕೆಗೆ ಕಾಲಿಟ್ಟ ವಂಶಿ ತನ್ನ ನಟನೆ, ನೃತ್ಯದ ಮೂಲಕ ಜಡ್ಜ್ ಗಳಿಂದ ಹಿಡಿದು, ಇಡೀ ಕರ್ನಾಟಕದ ಜನತೆ, 'ಎಲಾ ಇವಳಾ' ಅಂತ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವ ಹಾಗೆ ಮಾಡಿದ್ದಾರೆ ಅಂದ್ರೆ ತಪ್ಪಾಗಲಾರದು.

ಸಂಗೀತ ಕಡೆ ಒಲವು ಹೆಚ್ಚಿತ್ತು
ಪ್ರಾಥಮಿಕ ಶಿಕ್ಷಣದ ಜೊತೆಗೆ ಭರತನಾಟ್ಯ ಮತ್ತು ಸಂಗೀತ ಕ್ಲಾಸ್ ಸೇರಿಕೊಂಡಿದ್ದ ವಂಶಿಗೆ ಡ್ರಾಮಾ ಅನ್ನೋದರ ಗಂಧ-ಗಾಳಿ ಗೊತ್ತಿರಲಿಲ್ಲ. 'ಕನ್ನಡ ಮತ್ತು ಸಂಸ್ಕೃತಿ' ಇಲಾಖೆಯಲ್ಲಿ ಸುಗಮ ಸಂಗೀತ ಕಾರ್ಯಕ್ರಮ, ಜೊತೆಗೆ ಪಾಶ್ಚಾತ್ಯ ನೃತ್ಯದಲ್ಲಿ ಅಗಾಧ ಒಲವು ಇಟ್ಟುಕೊಂಡಿದ್ದ ವಂಶಿ ಅವರು ಮೈಸೂರಿನ ಡ್ಯಾನ್ಸಿಂಗ್ ಸ್ಟಾರ್ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದರು.

ಡ್ರಾಮಾ ಆರಂಭ ಮಾಡಿದ್ದು ಇಲ್ಲಿಂದ
ಹೀಗಿರುವಾಗ 'ಕೆ-ಸ್ಟಾರ್ಸ್ ಕನ್ನಡ' ಎಂಬ ಮಂಗಳೂರಿನ ಲೋಕಲ್ ಚಾನೆಲ್ ನ 'ಜ್ಯೂನಿಯರ್ಸ್ ಡ್ರಾಮಾ' ಸ್ಪರ್ಧೆಗೆ ವಂಶಿ ಆಯ್ಕೆಯಾಗಿದ್ದರು. ಅಲ್ಲಿ ಜೆ.ಪಿ.ತುಮಿನಾಡ್ ಎಂಬ 'ಡ್ರಾಮಾ ಟೀಚರ್ ಇವರಿಗೆ ಗೈಡ್ ಮಾಡುವ ಮೂಲಕ ನಟನೆಗೆ ಅಡಿಪಾಯ ಹಾಕಿಕೊಟ್ಟರು.

'ಡ್ರಾಮಾ ಜೂನಿಯರ್ಸ್' ವೇದಿಕೆಗೆ ಟಿಕೆಟ್
ತದನಂತರ ವಂಶಿ ಅವರು ಜೀ ಕನ್ನಡದ ಡ್ರಾಮಾ ಜ್ಯೂನಿಯರ್ಸ್ ಗೆ ನೇರವಾಗಿ ಎಂಟ್ರಿ ಪಡೆದುಕೊಂಡರು. ಇನ್ನು ಡ್ರಾಮಾ ವೇದಿಕೆಯಲ್ಲಿ ತಮ್ಮ ಅದ್ಭುತ ನಟನೆ, ಡೈಲಾಗ್ ಡೆಲಿವರಿ ಹಾಗೂ ತಮ್ಮದೇ ಮ್ಯಾನರಿಸಂ ಮೂಲಕ ಇಡೀ ಕರ್ನಾಟಕದ ಜನತೆಯ ಮನ ಗೆದ್ದಿರುವ ಇವರು ಸದ್ಯ ಗ್ರಾಂಡ್ ಫಿನಾಲೆಗೆ ಎಂಟ್ರಿ ಕೊಟ್ಟಿದ್ದಾರೆ.

ವಿಭಿನ್ನ ಪಾತ್ರಗಳಿಂದ ಮೋಡಿ
ಈವರೆಗೆ ಡ್ರಾಮಾ ವೇದಿಕೆಯಲ್ಲಿ ವಿಭಿನ್ನ ಪಾತ್ರಗಳನ್ನು ಮಾಡುತ್ತಾ ಬಂದಿರುವ ವಂಶಿ ಅವರು ಪ್ರತೀ ಎಪಿಸೋಡ್ ನಲ್ಲಿಯೂ ತೀರ್ಪುಗಾರರಿಂದ ಮೆಚ್ಚುಗೆ ಪಡೆಯುತ್ತಾ ಬಂದಿದ್ದಾರೆ. ಹುಬ್ಬಳ್ಳಿಯ ದೊಡ್ಡಾಟ, ಚಾರ್ಲಿ ಚಾಪ್ಲೀನ್ ತಾಯಿ ಪಾತ್ರ, ದ.ರಾ.ಬೇಂದ್ರೆ ಅವರ ಹೆಂಡತಿ ಪಾತ್ರ ಮುಂತಾದ ಪಾತ್ರಗಳು ಜನ ಮೆಚ್ಚುಗೆ ಜೊತೆಗೆ ತೀರ್ಪುಗಾರರನ್ನು ಮೂಕ ವಿಸ್ಮಿತರನ್ನಾಗಿಸಿತ್ತು.

ಜ್ಯೂನಿಯರ್ ಲಕ್ಷ್ಮಿ
ಅದರಲ್ಲಿಯೂ ನಟಿ ಜೂಲಿ ಲಕ್ಷ್ಮಿ ಅವರ ಜೊತೆ ಅವರ ಸೊಸೆಯ ಪಾತ್ರ ಮಾಡಿದ್ದು, ಎಲ್ಲರನ್ನು ನಿಬ್ಬೆರಗಾಗಿಸಿತ್ತು. ಈ ನಟನೆಗೆ ನಟಿ ಲಕ್ಷ್ಮಿ ಅವರು 'ಜ್ಯೂನಿಯರ್ ಲಕ್ಷ್ಮಿ' ಅನ್ನೋ ಬಿರುದನ್ನು ಕೂಡ ದಯಪಾಲಿಸಿದ್ದರು. ಅದರ ಜೊತೆಗೆ ಹಲವು ಕಡೆ ಸನ್ಮಾನ ಮಾಡಿಸಿಕೊಂಡಿರುವ ವಂಶಿ ಅವರು, ಇತ್ತೀಚೆಗೆ ಆಳ್ವಾಸ್ ವಿದ್ಯಾರ್ಥಿ ಸಿರಿ-2017 ಕಾರ್ಯಕ್ರಮದಲ್ಲಿ 'ಬಾಲ ಪ್ರತಿಭೆ' ಎಂಬುದಾಗಿ ಸನ್ಮಾನಿಸಿಕೊಂಡರು.

ವಂಶಿ ಕುಟುಂಬದ ಬಗ್ಗೆ
ಸುಳ್ಯ ತಾಲೂಕಿನ ಅಮರ ಮುದ್ದೂರು ಗ್ರಾಮದ ಹಿರಿಯಡ್ಕ ಎಂಬಲ್ಲಿನ ಶ್ರೀ ರತ್ನ ಕುಮಾರ್ ಮತ್ತು ಶ್ರೀಮತಿ ರೇವತಿ ಅವರ ಏಕೈಕ ಪುತ್ರಿಯಾಗಿರುವ ವಂಶಿ ಅವರು ಪ್ರಸ್ತುತ ವಿಶ್ವ ಮಂಗಳ ಪ್ರಾಥಮಿಕ ಶಾಲೆ ಕೊಣಾಜೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿದ್ದಾರೆ.

ವಂಶಿ ಜೀವನದ ಕನಸು
ಸಖತ್ ಹಾರ್ಡ್ ವರ್ಕ್ ಮಾಡುವ ವಂಶಿ ಅವರು 'ಮುಂದಕ್ಕೆ ದೊಡ್ಡ ಡಾಕ್ಟರ್ ಆಗಿ ಹಲವಾರು ರೋಗಿಗಳ ಶುಶ್ರೂಷೆ ಮಾಡಬೇಕೆಂದಿದ್ದೇನೆ. ಇದರ ಜೊತೆಗೆ ತಮಗೆ ಒಲಿದ ಕಲೆಯನ್ನು ಹವ್ಯಾಸನ್ನಾಗಿ ರೂಪಿಸಿಕೊಳ್ಳಬೇಕೆಂದಿದ್ದೇನೆ ಎನ್ನುತ್ತಾರೆ ವಂಶಿ.

ಡ್ರಾಮಾ ಜೂನಿಯರ್ಸ್ ಗೆಲ್ಲುವ ಭರವಸೆ
ಈಗಾಗಲೇ ಗ್ರ್ಯಾಂಡ್ ಫಿನಾಲೆಯಲ್ಲಿ ತಮ್ಮ ಪ್ರತಿಭಾ ಪ್ರದರ್ಶನವನ್ನು ತೋರಲು ಎಲ್ಲಾ ರೀತಿಯಲ್ಲಿ ಸಜ್ಜಾಗಿರುವ ವಂಶಿ ಅವರು 'ಡ್ರಾಮಾ ಜ್ಯೂನಿಯರ್ಸ್ ಸೀಸನ್-2' ಕಿರೀಟವನ್ನು ತಮ್ಮ ಮುಡಿಗೇರಿಸಿಕೊಳ್ಳುವ ಉತ್ಸಾಹದಲ್ಲಿದ್ದಾರೆ. ಕರ್ನಾಟಕದ ಜನ-ಮನ ಗೆದ್ದಿರುವ ವಂಶಿ ತನ್ನೊಳಗಿನ ಕಲಾ ಪ್ರತಿಭೆಯ ಕಾರಣಕ್ಕಾಗಿಯೇ ಅಂತಿಮ ಸುತ್ತಿನಲ್ಲಿ ಗೆಲುವಿನ ಗರಿ ಮುಡಿಗೇರಿಸಿಕೊಳ್ಳಬಹುದು ಎಂಬ ಭರವಸೆ ಮೂಡಿದೆ.


Click it and Unblock the Notifications











