ಕುರಿ ಕಾಯುವ ಹುಡುಗನಿಗೆ ಸಂಗೀತ ಕಲಿಸಲು ಮುಂದಾದ ವಿಜಯ ಪ್ರಕಾಶ್!
Recommended Video

ಕಲೆ ಎನ್ನುವುದು ಹಣ, ಐಶ್ವರ್ಯ, ವಯಸ್ಸು, ಅಂದ, ಚೆಂದ, ಜಾತಿ, ಧರ್ಮ ಯಾವುದು ಇಲ್ಲ ಅದ್ಭುತ ಜಗತ್ತು. ಅರಮನೆಗೆ ಮಾತ್ರವಲ್ಲ ಶ್ರಮವಿದ್ದರೆ, ಸರಸ್ವತಿ ಗುಡಿಸಲಿಗೆ ಕೂಡ ಬರುತ್ತಾಳೆ.
ಹೌದು, ಇಂತಹ ಮಾತನ್ನ ಈಗ ಮತ್ತೆ ನಿಜ ಮಾಡಿರುವುದು ಒಬ್ಬ ಕುರಿ ಕಾಯುವ ಹುಡುಗ. ಹಾವೇರಿ ಜಿಲ್ಲೆಯ ಒಂದು ಸಣ್ಣ ಹಳ್ಳಿಯಲ್ಲಿ ಕುರಿ ಕಾಯುತ್ತ ಇದ್ದ ಒಬ್ಬ ಹುಡುಗ ಈಗ ಕನ್ನಡಿಗರ ಮನಸ್ಸು ಗೆದ್ದಿದ್ದಾನೆ. 'ಸರಿಗಮಪ ಸೀಸನ್ 15' ಮೆಗಾ ಆಡಿಷನ್ ನಲ್ಲಿ ಆಯ್ಕೆ ಆಗಿದ್ದಾನೆ.
ಕಳೆದ ಶನಿವಾರ 'ಸರಿಗಮಪ' ಕಾರ್ಯಕ್ರಮ ಮತ್ತೆ ಶುರು ಆಗಿದೆ. ಈ ಬಾರಿಯೂ ಬೇರೆ ಬೇರೆ ರೀತಿಯ ಸ್ಪರ್ಧಿಗಳು ವೇದಿಕೆ ಏರಿದ್ದಾರೆ. ಅಂತಹ ಸ್ಪರ್ಧಿಗಳ ಪೈಕಿ ಎಲ್ಲಗಿಂತ ಭಿನ್ನವಾಗಿ ಒಬ್ಬ ಹುಡುಗ ಕಾಣಿಸಿಕೊಂಡ.
ಕುರಿ ಕಾಯುವ ಈ ಹುಡುಗನ ಪ್ರತಿಭೆ ನೋಡಿ ಗಾಯಕ ವಿಜಯ ಪ್ರಕಾಶ್ ತಾವೇ ಆತನಿಗೆ ಸಂಗೀತ ಕಲಿಸುವ ಭರವಸೆ ನೀಡಿದ್ದಾರೆ. ಅಂದಹಾಗೆ, ಸರಿಗಮಪ ವೇದಿಕೆ ಮೇಲೆ ಬಂದಿರುವ ಈ ಹಳ್ಳಿ ಹುಡುಗನ ವಿವರ ಮುಂದಿದೆ ಓದಿ...

ಕುರಿ ಕಾಯುವ ಹುಡುಗ ಹನುಮಂತ
ಹನುಮಂತ ಓದಿದ್ದು ಬರೀ 5 ಕ್ಲಾಸ್. ಆ ಬಳಿಕ ತನ್ನ ಊರಿನಲ್ಲಿ ಕುರಿ ಕಾಯುತ್ತಿದ್ದ ಈ ಹುಡುಗ ಈಗ 'ಸರಿಗಮಪ 15'ಗೆ ಆಯ್ಕೆ ಆಗಿದ್ದಾನೆ. ಹಾವೇರಿ ಜಿಲ್ಲೆ, ಸವಣೂರು ತಾಲ್ಲೂಕಿನ ಸಣ್ಣ ಹಳ್ಳಿಯಿಂದ ಈ ಹುಡುಗ ಬಂದಿದ್ದು, ಆಡಿಷನ್ ನ 10ನೇ ಸ್ಪರ್ಧಿಯಾಗಿದ್ದ. ಈತ ಮೇಘಪ್ಪ ಮತ್ತು ಶೀಲಮ್ಮ ಎಂಬ ದಂಪತಿಯ ಕೊನೆಯ ಮಗ.

ಹಂಸಲೇಖ ಹೆಗಲೆ ಮೇಲೆ ಕುರಿ ಕಾಯೋ ಹುಡುಗನ ಟವೆಲ್
ಹನುಮಂತ 'ನಿನ್ನೊಳಗ ನೀನು ತಿಳಿದು ನೋಡಣ್ಣ..' ಎಂಬ ಜನಪದ ಗೀತೆಯನ್ನ ಹಾಡಿದ. ಆತನ ಹಾಡು ಕೇಳಿ ತೀರ್ಪುಗಾರರು ಬೆರಗಾದರು. ಮಹಾ ಗುರುಗಳಾದ ಹಂಸಲೇಖ ತಮ್ಮ ಹೆಗಲ ಮೇಲೆ ಇದ್ದ ಕೌದಿಯನ್ನು ಆತನಿಗೆ ಹಾಕಿ, ಆ ಹುಡುಗನ ಟವೆಲ್ ಅನ್ನು ತಮ್ಮ ಹೆಗಲ ಮೇಲೆ ಹಾಕಿಕೊಂಡರು. ನಂತರ ಮೂರು ತೀರ್ಪುಗಾರರು ಹನುಮಂತನ ಪ್ರತಿಭೆ ಬಗ್ಗೆ ಮಾತನಾಡಿದರು.

ಜೀವನವನ್ನ ಜೀವಿಸುತ್ತಿರುವ ವ್ಯಕ್ತಿಯನ್ನು ಭೇಟಿ ಮಾಡಿದೆ
''ನನ್ನ ಜೀವನ ಪಯಣದಲ್ಲಿ ಅನೇಕ ಬಗೆಯ ಮನುಷ್ಯರನ್ನು ಭೇಟಿ ಮಾಡಿದ್ದೇನೆ. ಶ್ರೀಮಂತರು, ಶಕ್ತಿಶಾಲಿ ಇರುವವರು, ವ್ಯವಹಾರ ಜ್ಞಾನ ಇರುವವರು, ಚಾಣಕ್ಷರು ಹೀಗೆ ಎಲ್ಲರನ್ನು ನೋಡಿದ್ದೇನೆ. ಆದರೆ, ಜೀವನವನ್ನ ಜೀವಿಸುತ್ತಿರುವ ಒಬ್ಬ ವ್ಯಕ್ತಿಯನ್ನು ಇಂದು ಭೇಟಿ ಮಾಡಿದೆ. ಭಗವಂತನ ಸೃಷ್ಟಿಯಲ್ಲಿ ಬದುಕನ್ನ ಹೇಗೆ ಬದುಕಬೇಕು ಎಂದು ತೋರುಸುವ ಒಬ್ಬ ವ್ಯಕ್ತಿಯನ್ನ ಮೊದಲ ಬಾರಿಗೆ ಭೇಟಿಯಾಗುತ್ತಿದ್ದೇನೆ.'' - ವಿಜಯ ಪ್ರಕಾಶ್, ಗಾಯಕ

ಸಂಗೀತ ಕಲಿಸಲು ಮುಂದಾದ ವಿಜಯ ಪ್ರಕಾಶ್
''ಇಷ್ಟೊಂದು ಆಕರ್ಷಣೆ ಇರುವ ಪ್ರಪಂಚದಲ್ಲಿ ಮಾಯೆಗೆ ಸಿಲುಕದ ಹಾಲಿನ ಮನಸ್ಸಿನವರು ಇದ್ದಾರೆ ಎಂದರೆ ಬಹಳ ಸಂತೋಷ ಆಗುತ್ತದೆ. ನೀನು ಹಾಡಂತು ಅದ್ಭುತವಾಗಿ ಹಾಡಿದೆ. ನೀನು ಹಾಡು ಕಲಿಯುತ್ತಿದ್ದೀಯ ಎಂದು ಕೇಳುವುದು ಸರೀನಾ.. ಇಲ್ವಾ.. ಗೊತ್ತಿಲ್ಲ. ಆದರೆ, ನಾನು ನನಗೆ ಗೊತ್ತಿರುವಷ್ಟು ಸಂಗೀತವನ್ನು ನಿನ್ನ ಜೊತೆಗೆ ಹಂಚಿಕೊಳ್ಳುತ್ತೇನೆ.'' - ವಿಜಯ ಪ್ರಕಾಶ್, ಗಾಯಕ

ಮುಗ್ಧತೆಯನ್ನ ಎಂದೂ ಕಳೆದುಕೊಳ್ಳಬೇಡಿ
''ನಂಗೆ ನಾಲ್ಕೇ ಹಾಡು ಬರುವುದು ಎಂದು ನೀನು ಸುಲಭವಾಗಿ ಹೇಳಿ ಬಿಟ್ಟೆ. ಆದರೆ, ನೀನು ಹಾಡಿನ ಒಂದೇ ಹಾಡಿನಲ್ಲಿ ಎಷ್ಟೊಂದು ವಿಚಾರ ಇತ್ತು. ನೀನು ಇಲ್ಲಿವರೆಗೆ ಬಂದಿದ್ದೀಯ.. ಇದೇ ರೀತಿ ಮುಂದುವರೆ. ಒಳ್ಳೆದಾಗ್ಲಿ. ನಿಮ್ಮ ಮುಗ್ಧತೆಯನ್ನ ಎಂದೂ ಕಳೆದುಕೊಳ್ಳಬೇಡಿ.'' ಅರ್ಜುನ್ ಜನ್ಯ, ಸಂಗೀತ ನಿರ್ದೇಶಕ

ಇದು ಎಷ್ಟೋ ಜನಪದರ ಕನಸು
''ಈ ವೇದಿಕೆ ಮೇಲೆ ಬಹಳ ಗೌರವ ಬರುತ್ತಿದೆ. ಕುರಿ ಕಾಯಿಸುವ ಒಬ್ಬ ಹುಡುಗ ಈ ವೇದಿಕೆ ಮೇಲೆ ಬಂದಿದ್ದಾನೆ. ಇದು ಎಷ್ಟೋ ಜನಪದರ ಕನಸು. ಈ ಮಗು ಇಲ್ಲಿ ಬಂದು ಹಾಡಿದೆ, ಇವನು ಶೃತಿಯಲ್ಲಿ ಶುದ್ಧವಾಗಿದ್ದಾನೆ, ಹೃದಯದಲ್ಲಿ ಶ್ರೇಷ್ಠ ವಾಗಿದ್ದಾನೆ. ಜೀವಿಸಲು ಯೋಚನೆ ಮಾಡುವವನು ಬುದ್ದಿವಂತ, ಯೋಚನೆನೇ ಮಾಡದೆ ಜೀವಿಸುವವನು ಹನುಮಂತ.'' - ಹಂಸಲೇಖ, ಸಂಗೀತ ನಿರ್ದೇಶಕ


Click it and Unblock the Notifications











