ಮೊಟ್ಟ ಮೊದಲ ಬಾರಿಗೆ ಕಿರುತೆರೆಯಲ್ಲಿ 'ಅಮರ್' ಪ್ರಸಾರ
Recommended Video
ಕಿರುತೆರೆಯಲ್ಲಿ ಮೊಟ್ಟಮೊದಲ ಬಾರಿಗೆ ಉದಯ ಟಿವಿಯಲ್ಲಿ "ಅಮರ್" ಚಲನಚಿತ್ರ ನಾಳೆ ಸಂಜೆ 6ಕ್ಕೆ ಪ್ರಸಾರವಾಗಲಿದೆ. ಅಂಬರೀಷ್ ಅವರ ಪುತ್ರ ಅಭಿಷೇಕ್ ನಾಯಕನಾಗಿ ನಟಿಸಿರುವ ಮೊದಲ ಚಿತ್ರ ಇದಾಗಿದೆ.
ಅಂಬರೀಷ್ ಮೂಲ ಹೆಸರು ಅಮರನಾಥ್. ಈ ಸಿನಿಮಾದಲ್ಲಿ ನಾಯಕನ ಹೆಸರೂ ಕೂಡಾ ಅದೇ. ಈ ಅಮರ್(ಅಭಿಷೇಕ್) ಒಮ್ಮೆ ಮಾತು ಕೊಟ್ಟರೆ ಆ ಮಾತಿಗೆ ಬದ್ಧನಾಗಿರುತ್ತಾನೆ. ಇಂಥವನ ಬದುಕಿನಲ್ಲಿ ಬಾಬ್ಬಿ (ತಾನ್ಯ ಹೋಪ್) ಎಂಬ ಸುಂದರಿಯ ಎಂಟ್ರಿ. ಸಿನಿಮಾದ ಮಧ್ಯಂತರದಲ್ಲೇ ಈ ಪ್ರೇಮಕ್ಕೊಂದು ಟ್ವಿಸ್ಟ್. ಆ ತಿರುವಿನ ನಂತರ ಅಮರ್ ಬದುಕಿನಲ್ಲಿ ಅನೇಕ ಬದಲಾವಣೆಗಳು ಆಗುತ್ತವೆ. ಅದೇ ಸಿನಿಮಾದ ಕಥೆ.
ಸಂಗೀತದ ವಿಚಾರದಲ್ಲಿ ಅರ್ಜುನ್ ಜನ್ಯ ಉತ್ತಮ ಸ್ಕೋರ್ ಮಾಡಿದ್ದಾರೆ. ಬಹುತೇಕ ಹಾಡುಗಳು ಕಿವಿಗೆ ಇಂಪು ನೀಡುತ್ತವೆ. ಈ ಮೂಲಕ ಇದೊಂದು ಮ್ಯೂಸಿಕಲ್ ಲವ್ ಸ್ಟೋರಿ ಎಂಬುದನ್ನು ಸಾಬೀತು ಪಡಿಸುತ್ತವೆ. ಸಿನಿಮಾಟೋಗ್ರಾಫರ್ ಸತ್ಯ ಹೆಗಡೆ ಮಲೆನಾಡನ್ನು ಸುಂದರವಾಗಿ ತೋರಿಸಿದ್ದಾರೆ. ಸ್ವಿಟ್ಜಲ್ಯಾಂಡ್ ನ ಗಮ್ಯ ತಾಣಗಳನ್ನು ಅದ್ಭುತವಾಗಿ ಸೆರೆ ಹಿಡಿದಿದ್ದಾರೆ.

ತೆರೆಯ ಮೇಲೆ ಥೇಟ್ ಅಪ್ಪನಂತೆ ಅಭಿಷೇಕ್ ಕಂಡಿದ್ದಾರೆ. ಕಣ್ಣುಗಳಂತೂ ಅಂಬರೀಶ್ ಅವರೇ ಎದುರು ಬಂದು ನಿಂತಂತೆ ಮಿಟುಕುತ್ತವೆ. ತಾನ್ಯಾ ಹೋಪ್ ಸುಂದರವಾಗಿ ಕಾಣುವುದಲ್ಲದೇ, ಪರ್ಫಾಮೆನ್ಸ್ ನಲ್ಲಿಯೂ ಗಮನ ಸೆಳೆಯುತ್ತಾರೆ. ಚಿಕ್ಕಣ್ಣ ಮತ್ತು ಸಾಧುಕೋಕಿಲಾ ನಟನೆಯ ಹಾಸ್ಯ ದೃಶ್ಯಗಳಲ್ಲಿ ಕಷ್ಟಪಟ್ಟು ನಗಬೇಕಿದೆ.
ದರ್ಶನ್ ಅವರು ಅತಿಥಿಯಾಗಿ ಬಂದರೂ ಇಷ್ಟವಾಗುತ್ತಾರೆ. ನಾಗಶೇಖರ್ ನಿರ್ದೇಶನದ ಈ ಚಲನಚಿತ್ರವನ್ನು ಕಿರುತರೆರೆಯಲ್ಲಿ ನೋಡುವ ಅವಕಾಶವನ್ನು ಉದಯ ಟಿವಿ ಒದಗಿಸುತ್ತಿದೆ.


Click it and Unblock the Notifications











