5 ವರ್ಷಗಳ ಬಳಿಕ ಕಿರುತೆರೆಗೆ ಕಾಲಿಟ್ಟ 'ಅಮೆರಿಕಾ ಅಮೆರಿಕಾ' ಖ್ಯಾತಿಯ ಹೇಮಾ ಪ್ರಭಾತ್; ಧಾರಾವಾಹಿ ಯಾವ್ದು?
ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಅಮೆರಿಕಾ ಅಮೆರಿಕಾ' ಸಿನಿಮಾದಲ್ಲಿ ನಾಯಕಿ ಭೂಮಿಯಾಗಿ ನಟಿಸಿದ್ದ ಚೆಂದುಳ್ಳಿ ಚೆಲುವೆಯ ಹೆಸರು ಹೇಮಾ ಪ್ರಭಾತ್. 'ಸಂಭ್ರಮ', 'ದೊರೆ', 'ಗೋಲಿಬಾರ್' ಅಂತಹ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದ ಹೇಮಾ ಪ್ರಭಾತ್, ಇದೀಗ ಮತ್ತೆ ನಟನೆಯತ್ತ ಮರಳಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ಕರಿಮಣಿ'ಯಲ್ಲಿ ನಟಿ ಹೇಮಾ ಪ್ರಭಾತ್ ನಟಿಸುತ್ತಿದ್ದಾರೆ.
ಹೌದು.. 'ಕರಿಮಣಿ' ಧಾರಾವಾಹಿಯಲ್ಲಿ ನಾಯಕಿ ಸಾಹಿತ್ಯಾಳ ಮೇಡಂ ರಾಧಾಳಾಗಿ ನಟಿಸುವ ಮೂಲಕ ಹೇಮಾ ಪ್ರಭಾತ್ ಕಂ ಬ್ಯಾಕ್ ಮಾಡಿದ್ದಾರೆ. ಈ ಸಂತಸದ ವಿಚಾರವನ್ನು ಸ್ವತಃ ಅವರೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 'ನಮಸ್ಕಾರ.. ಸುಮಾರು ಐದಾರು ವರ್ಷಗಳ ನಂತರ ಮತ್ತೆ ಕಿರುತೆರೆಗೆ ನಾನು ಬರ್ತಾ ಇದ್ದೇನೆ. ಕಲರ್ಸ್ ಟಿವಿಯ ಕರಿಮಣಿ ಸೀರಿಯಲ್‌ನಲ್ಲಿ. ಮುಂಚೆ ನನಗೆ ಹೇಗೆ ನಿಮ್ಮ ಪ್ರೀತಿ, ವಿಶ್ವಾಸ ಸಿಗ್ತೋ ಮುಂದೆಯೋ ನಿಮ್ಮ ಪ್ರೀತಿ, ವಿಶ್ವಾಸ, ಪ್ರೋತ್ಸಾಹ ಬೇಕು"ಎಂದು ಹೇಳಿಕೊಂಡಿದ್ದಾರೆ.

ನೂರು ಜನ್ಮಕ್ಕೂ ನೂರಾರು ಜನ್ಮಕೂ ಎಂದು ಹಿರಿತೆರೆಯಲ್ಲಿ ಹಾಡಿ, ಸಿನಿಪ್ರಿಯರ ಮನ ಗೆದ್ದ ಹೇಮಾ ಅವರು ಕಿರುತೆರೆಗೆ ಕಾಲಿಟ್ಟಿರುವುದು ಕಿರುತೆರೆ ವೀಕ್ಷಕರಿಗೂ ಖುಷಿ ತಂದಿದೆ. ಮಾತ್ರವಲ್ಲ, ನಿಮ್ಮನ್ನು ಮತ್ತೆ ಕಿರುತೆರೆಯಲ್ಲಿ ನೋಡಿ ಖುಷಿಯಾಯಿತು. ನಿಮಗೆ ಶುಭವಾಗಲಿ, ಮತ್ತಷ್ಟು ಪ್ರಾಜೆಕ್ಟ್ ಗಳಲ್ಲಿ ನಟಿಸುವಂತಾಗಲಿ ಎಂಬ ಕಮೆಂಟ್ ಗಳ ಮೂಲಕ ಹೇಮಾ ಪ್ರಭಾತ್ ಅವರ ಕಂ ಬ್ಯಾಕ್ ಅನ್ನು ಸಂಭ್ರಮಿಸಿದ್ದಾರೆ.
ಅಂದ ಹಾಗೇ ಹೇಮಾ ಪ್ರಭಾತ್ ಅವರಿಗೆ ಇದು ಎರಡನೇ ಧಾರಾವಾಹಿ. ಈ ಮೊದಲು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಕ್ಷಾಬಂಧನ' ಧಾರಾವಾಹಿಯಲ್ಲಿ ನಾಯಕಿಯ ಅಮ್ಮ ಆಗಿ ಈಕೆ ನಟಿಸಿದ್ದರು. ಇದೀಗ ಐದು ವರ್ಷದ ಬಳಿಕ ಮತ್ತೆ ಕಿರುತೆರೆಗೆ ಹೇಮಾ ಮರಳಿದ್ದು, ಮತ್ತೊಮ್ಮೆ ತಮ್ಮ ಸಹಜ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯಲಿದ್ದಾರೆ.

'ಅಮೆರಿಕಾ ಅಮೆರಿಕಾ' ಸಿನಿಮಾದ ಬಳಿಕ ದಾಂಪತ್ಯ ಜೀವನಕ್ಕೆ ನಟಿ ಹೇಮಾ ಪ್ರಭಾತ್ ಕಾಲಿಟ್ಟಿದ್ದರು. ಸುಮೀಂದ್ರ ಪಂಚಮುಖಿ ಅವರೊಡನೆ ಸಪ್ತಪದಿ ತುಳಿದಿದ್ದ ಈಕೆ ಅಮೆರಿಕಾದಲ್ಲಿ ಸೆಟಲ್ ಕೂಡಾ ಆಗಿದ್ದರು. ಮುಂದೆ ಕೌಟುಂಬಿಕ ಕಲಹದಿಂದಾಗಿ ಡೈವೋರ್ಸ್ ಪಡೆದ ಹೇಮಾ ಭಾರತಕ್ಕೆ ಮರಳಿದ್ದರು. ಆ ನಂತರ ತಮ್ಮ ಹೆಸರಿನಿಂದ ಪಂಚಮುಖಿ ಅನ್ನೋ ಹೆಸರನ್ನು ತೆಗೆದು ಪ್ರಭಾತ್ ಅನ್ನುವ ಹೆಸರನ್ನು ಸೇರಿಸಿಕೊಂಡರು. ಬಳಿಕ ನಟ ಪ್ರಶಾಂತ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ ಹೇಮಾಗೆ ಇಬ್ಬರು ಮುದ್ದಾದ ಹೆಣ್ಣು ಮಕ್ಕಳಿದ್ದಾರೆ.
ಸಂಸಾರ, ಮನೆ, ಮಕ್ಕಳು ಹೀಗೆ ಸಹಜವಾಗಿ ನಟನೆಯಿಂದ ದೂರವಿದ್ದ ಹೇಮಾ ಕಿರುತೆರೆ ಮೂಲಕ ಮತ್ತೆ ಬಣ್ಣದ ಜಗತ್ತಿನ ನಂಟು ಬೆಳೆಸಿಕೊಂಡಿದ್ದಾರೆ. ಜೊತೆಗೆ ನಟನೆಯ ಹೊರತಾಗಿ ನೃತ್ಯಗಾರ್ತಿ ಆಗಿರುವ ಈಕೆ ತಮ್ಮದೇ ಆದ ನೃತ್ಯಶಾಲೆಯನ್ನು ನಡೆಸುತ್ತಿದ್ದಾರೆ. ಮಾತ್ರವಲ್ಲ ಇವರ ನೃತ್ಯತಂಡ ರಾಜ್ಯದ ಹಲವೆಡೆ ನೃತ್ಯ ಕಾರ್ಯಕ್ರಮಗಳನ್ನು ನೀಡಿದೆ ಮತ್ತು ನೀಡುತ್ತಿದೆ.


Click it and Unblock the Notifications











