ಕೌನ್ ಬನೇಗಾ ಕರೋಡ್‌ಪತಿಗೆ ಅಮಿತಾಬ್ ಬಚ್ಚನ್ ಗುಡ್ ಬೈ ? ಇವರಿಬ್ಬರಲ್ಲಿ ಮುಂದಿನ ನಿರೂಪಕ ಯಾರು ?
ಕೂತು ಉಣ್ಣುವವನಿಗೆ ಕುಡುಕೆ ಹೊನ್ನೂ ಸಾಲದು ಎಂಬ ಮಾತನ್ನ ಚೆನ್ನಾಗಿ ಅರಿತು ಬದುಕು ಕಟ್ಟಿಕೊಂಡವರು ಅಮಿತಾಬ್ ಬಚ್ಚನ್ . 81ರ ಪ್ರಾಯದಲ್ಲಿಯೂ ಕೂಡ ದುಡಿಮೆಯೇ ದುಡ್ಡಿನ ತಾಯಿ ಎಂದು ನಂಬಿ, ಕಾಯಕವೇ ಕೈಲಾಸ ಎಂಬ ಮಂತ್ರವನ್ನ ಪಠಿಸುತ್ತಿರುವ ಅಮಿತಾಬ್ ಬಚ್ಚನ್ ಕೇವಲ ಬೆಳ್ಳಿತೆರೆಯಲ್ಲಿ ಮಾತ್ರವಲ್ಲ ಕಿರುತೆರೆಯ ಸಕ್ರಿಯ ಸದಸ್ಯ ಕೂಡ ಹೌದು.
ಕಳೆದ 24 ವರ್ಷಗಳಿಂದ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದ ನಿರೂಪಣೆಯನ್ನು ಮಾಡುತ್ತಾ ಬಂದಿರುವ ಅಮಿತಾಬ್, ತಮ್ಮೆದುರು ಕುಳಿತ ವ್ಯಕ್ತಿಗೆ ಪ್ರಶ್ನೆಯನ್ನು ಕೇಳುವುದಷ್ಟೇ ಅಲ್ಲದೇ ಅವರ ಜೊತೆ ಮುಕ್ತವಾಗಿ ಮಾತನಾಡಿಕೊಂಡು ಬಂದಿದ್ದಾರೆ. ಸ್ಫರ್ಧಿಗಳ ಬದುಕಿನ ಸುಖ ದುಃಖವನ್ನೂ ಕೇಳುತ್ತಾ ಬಂದಿದ್ದಾರೆ. ತಾವೂ ನಕ್ಕಿದ್ದಾರೆ.ಸ್ಫರ್ಧಿಗಳನ್ನು ನಗಿಸಿದ್ದಾರೆ. ಸ್ಪರ್ಧಿಗಳು ಕಣ್ಣೀರಾದಾಗ ಅಮಿತಾಬ್ ಕೂಡ ಕಣ್ಣೀರಾಗಿದ್ದಾರೆ.

ಇಂಥಾ ಅಮಿತಾಬ್ ಈಗ ತಮ್ಮ ಬದುಕಿನ ದಿಕ್ಕು ಬದಲಿಸಿದ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮಕ್ಕೆ ಗುಡ್ ಬೈ ಹೇಳಲು ಮುಂದಾಗಿದ್ಧಾರೆ. ನಿರೂಪಕನ ಸ್ಥಾನದಿಂದ ಕೆಳಗಿಳಿಯಲಿದ್ದಾರೆ. ಹೀಗೊಂದು ಬ್ರೇಕಿಂಗ್ ನ್ಯೂಸ್ ಸದ್ಯ ಮುಂಬೈನೆಲ್ಲೆಡೆ ಕೇಳಿ ಬರುತ್ತಿದೆ. ಈ ಬಾರಿಯ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮ ಅಮಿತಾಬ್ ಬಚ್ಚನ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಕೊನೆಯ ಕಾರ್ಯಕ್ರಮ ಎಂದು ಅಲ್ಲಿನ ಮಾಧ್ಯಮಗಳು ವರದಿಯನ್ನು ಮಾಡಿವೆ.
ಇನ್ನು ಅಮಿತಾಬ್ ಬಚ್ಚನ್ ಇರದ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮವನ್ನು ಊಹಿಸಿಕೊಳ್ಳುವುದು ಅಸಾಧ್ಯ. ಹೀಗಾಗಿಯೇ ಅನೇಕರು ಈ ಸುದ್ದಿ ಸುಳ್ಳಾಗಲಿ ಎನ್ನುತ್ತಿದ್ಧಾರೆ. ಎಲ್ಲಿಯವರೆಗೆ ಸಾಧ್ಯವೋ ಅಲ್ಲಿಯವರೆಗೆ ಅಮಿತಾಬ್ ಬಚ್ಚನ್ ಅವರೇ ಮುಂದುವರೆಯಲಿ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಆದರೆ. ಮುಂಬೈನಲ್ಲಿ ಕೇಳಿ ಬರುತ್ತಿರುವ ಸುದ್ದಿಗಳ ಪ್ರಕಾರ ಅಮಿತಾಬ್‌ಗೆ ಈಗ ವಯಸ್ಸಾಗಿದೆ. ಮನಸು ಕಾರ್ಯಕ್ರಮ ನಡೆಸಿಕೊಡಲು ಅಣಿಯಾಗಿದ್ದರು ಕೂಡ ದೇಹ ಕೇಳುತ್ತಿಲ್ಲ.
ಹರಿದಾಡುತ್ತಿರುವ ಈ ಸುದ್ದಿಗಳಿಗೆ ಪೂರಕವಾಗಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಹ್ಯೂಮನ್ ಬ್ರಾಂಡ್ಸ್ ಮತ್ತು ಜಾಹೀರಾತು ಏಜೆನ್ಸಿ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮವನ್ನು ಅಮಿತಾಬ್ ಬದಲು ಯಾರು ನಿರೂಪಣೆ ಮಾಡಬೇಕು ಎಂಬ ಸಮೀಕ್ಷೆಯನ್ನು ಮಾಡಿದೆ. 408 ಪುರುಷರು ಮತ್ತು 360 ಮಹಿಳೆಯರ ಅಭಿಪ್ರಾಯಗಳನ್ನು ಸಂಗ್ರಹಿಸಿದೆ. ಹೀಗೆ ಮಾಡಲಾದ ಸಮೀಕ್ಷೆಯಲ್ಲಿ ಶೇಕಡಾ 63 % ಜನ ಅಮಿತಾಬ್ ಬಚ್ಚನ್ ಅವರ ಸ್ಥಾನದಲ್ಲಿ ಶಾರುಖ್ ಖಾನ್ ಅವರನ್ನು ನೋಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇನ್ನು, ಅಮಿತಾಬ್ ಅನುಪಸ್ಥಿತಿಯಲ್ಲಿ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದ ಮೂರನೇ ಸೀಸನ್‌ನ ಕಿಂಗ್ ಖಾನ್ ನಿರೂಪಣೆ ಮಾಡಿದ್ದರು. ಈ ಹಿನ್ನೆಲೆ ಅವರಿಗೆ ಕಾರ್ಯಕ್ರಮ ಮಾಡಿದ ಅನುಭವ ಇರುವ ಹಿನ್ನೆಲೆ ಅವರೇ ಸೂಕ್ತವೆನ್ನುವ ಅಭಿಪ್ರಾಯ ಇವರದ್ದು.
ಶಾರುಖ್ ಖಾನ್ ಅವರನ್ನು ಹೊರತು ಪಡಿಸಿದರೆ ಶೇಕಡಾ 51 % ಜನ ಅಮಿತಾಬ್ ಬಚ್ಚನ್ ಅವರ ಸೊಸೆ ಐಶ್ವರ್ಯ ರೈ ಬಚ್ಚನ್ ಅವರ ಪರ ಒಲವು ತೋರಿಸಿದ್ದಾರೆ. ಕೌನ್ ಬನೇಗಾ ಕರೋಡ್‌ಪತಿಯನ್ನು ಐಶ್ವರ್ಯ ರೈ ಮುಂದುವರೆಸಿಕೊಂಡು ಹೋದರೆ ಚೆನ್ನಾಗಿರುತ್ತೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ಧಾರೆ. ಇವರಿಬ್ಬರನ್ನು ಹೊರತು ಪಡಿಸಿ ಎಂ.ಎಸ್.ಧೋನಿ ಪರ ಶೇಕಡಾ 37 % ಮತಗಳು ಬಿದ್ದರೆ ಹರ್ಷ ಭೋಗ್ಲೆ ಪರ ಶೇಕಡಾ 32 % ಮತಗಳು ಬಿದ್ದಿವೆ. ಅನಿಲ್ ಕಪೂರ್ ಗೆ ಕೇವಲ ಶೇಕಡಾ 15 % ಜನ ಮಾತ್ರ ಜೈ ಎಂದಿದ್ಧಾರೆ.
ಅಂದ್ಹಾಗೇ ಕಾರ್ಯಕ್ರಮದಿಂದ ಹೊರ ಹೋಗುವ ಕುರಿತು ಅಮಿತಾಬ್ ಬಚ್ಚನ್ ಇನ್ನು ಮಾತನಾಡಿಲ್ಲ. ವಾಹಿನಿಯವರು ಕೂಡ ಈ ಮಾತನ್ನು ಹೇಳಿಲ್ಲ, ಹರಿದಾಡುತ್ತಿರುವ ಸುದ್ದಿಯನ್ನು ಒಪ್ಪಿಕೊಂಡಿಲ್ಲ. ಆದರೆ ಕಳೆದ ಕೆಲ ದಿನಗಳ ಹಿಂದೆ ಅಮಿತಾಬ್ ಬಚ್ಚನ್ ಹೊರಡುವ ಸಮಯ ಬಂತು ಎಂದು ಟ್ವಿಟ್ ಮಾಡಿದ್ದರು. ಅಮಿತಾಬ್ ಮಾಡಿದ್ದ ಟ್ವಿಟ್ ನೋಡಿದ್ದ ಅನೇಕರು ಅಮಿತಾಬ್ ಬಚ್ಚನ್ 'ಕೆಬಿಸಿ'ಯಿಂದ ನಿರ್ಗಮಿಸುತ್ತಿದ್ಧಾರೆ ಎಂದು ಅಂದುಕೊಂಡಿದ್ದರು. ಆ ನಂತರ ಆ ತರ ಏನು ಇಲ್ಲ ಎಂದು ಅಮಿತಾಬ್ ಹೇಳಿದರಾದರೂ ಕೂಡ ಮುಂದಿನ ಸೀಸನ್ ನ ನಿರೂಪಣೆಯಿಂದ ಅಮಿತಾಬ್ ಬಚ್ಚನ್ ಹಿಂದೆ ಸರಿಯಲಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಹಾಟ್‌ಸೀಟ್‌ನಲ್ಲಿ ಕುಳಿತುಕೊಳ್ಳುವ ಸ್ಫರ್ಧಿಗಳಿಗೆ ಮುಂದಿನ ಬಾರಿ ಪ್ರಶ್ನೆಯನ್ನು ಕೇಳವವರ ಹುಡುಕಾಟ ಕೂಡ ತೆರೆಮರೆಯಲ್ಲಿ ನಡೆಯುತ್ತಿದೆ ಎನ್ನುವ ಸುದ್ದಿ ಕೂಡ ಚಾಲ್ತಿಯಲ್ಲಿದೆ.


Click it and Unblock the Notifications











