'ಭರ್ಜರಿ ಬ್ಯಾಚುಲರ್ಸ್' ಜೊತೆ ಸೇರಿದ 'ಅಮೃತಧಾರೆ' ಪಾರ್ಥನಾ ಪ್ರೀತಿಯ ಮಡದಿ ಅಪೇಕ್ಷಾ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ಭರ್ಜರಿ ಬ್ಯಾಚುಲರ್ಸ್" ಶೋ ಯಶಸ್ವಿಯಾಗಿ ಮುಕ್ತಾಯಗೊಂಡಿರುವುದು ಕಿರುತೆರೆ ವೀಕ್ಷಕರಿಗೆ ತಿಳಿದೇ ಇದೆ. ಇದೀಗ 'ಭರ್ಜರಿ ಬ್ಯಾಚುಲರ್ಸ್' ಸೀಸನ್ 2 ಶುರುವಾಗಲಿದೆ. ಹೌದು, ಇದೇ ವಾರಾಂತ್ಯದಿಂದ ಭರ್ಜರಿ ಬ್ಯಾಚುಲರ್ಸ್ ಹೊಸ ಸೀಸನ್ ಶುರುವಾಗಲಿದೆ.
ನಿರಂಜನ್ ದೇಶಪಾಂಡೆ ನಿರೂಪಣೆಯಲ್ಲಿ ಮೂಡಿಬರಲಿರುವ ಈ ರಿಯಾಲಿಟಿ ಶೋವಿನಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹತ್ತು ಜನ ಬ್ಯಾಚುಲರ್ ಹುಡುಗರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಇವರಿಗೆ ಮೆಂಟರ್ ಗಳಾಗಿ ಕಿರುತೆರೆ ನಟಿಯರು ಕಾಣಿಸಿಕೊಳ್ಳುತ್ತಿರುವುದು ವಿಶೇಷ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಅಮೃತಧಾರೆ' ಧಾರಾವಾಹಿಯಲ್ಲಿ ನಾಯಕಿ ಭೂಮಿಕಾಳ ತಂಗಿ ಅಪೇಕ್ಷಾಳಾಗಿ ಅಭಿನಯಿಸುತ್ತಿರುವ ಅಮೃತಾ ನಾಯಕ್ ಅವರು ಮೆಂಟರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ವಿಚಾರ ಹೊರಬಿದ್ದಿದೆ. ಅಂದ ಹಾಗೇ ಆಕೆ ಯಾರಿಗೆ ಮೆಂಟರ್ ಎಂಬ ವಿಚಾರ ಇನ್ನು ಕೂಡಾ ಗೊತ್ತಾಗಬೇಕಿದೆ.
ಕರಾವಳಿ ಮೂಲಕ ಕುವರಿ ಅಮೃತಾ ನಾಯಕ್ 'ಅಮೃತಧಾರೆ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆಯಾದರೂ ಆಕೆಯ ನಟನಾ ಪಯಣ ಶುರುವಾಗಿದ್ದು ಸಿನಿಮಾದಿಂದ. ರಾಜ್ ಬಿ ಶೆಟ್ಟಿ ನಟನೆಯ 'ಒಂದು ಮೊಟ್ಟೆಯ ಕಥೆ' ಸಿನಿಮಾದಲ್ಲಿ ಈಕೆ ನಾಯಕಿಯಾಗಿ ನಟಿಸಿದ್ದರು ಎಂಬ ವಿಚಾರ ಅನೇಕರಿಗೆ ತಿಳಿದಿರಲಿಕ್ಕಿಲ್ಲ.
'ಒಂದು ಮೊಟ್ಟೆಯ ಕಥೆ' ಸಿನಿಮಾದಲ್ಲಿ ಎಕನಾಮಿಕ್ಸ್ ಲೆಕ್ಚರರ್ ಆಗಿ ಅಮೃತಾ ನಾಯಕ್ ಕಾಣಿಸಿದ್ದು ಒಂದೆರಡು ಸೀನ್‌ಗಳಲ್ಲಿ ಅಷ್ಟೇ ಆದರೂ ನಟನೆಯ ಮೂಲಕ ಮನೆ ಮಾತಾಗಿದ್ದರು. ಅದಕ್ಕಿಂತಲೂ ಹೆಚ್ಚಾಗಿ ಆಕೆ ಅಭಿನಯಿಸಿರುವ 'ಚೆಂದ ಅವಳ ಕಿರುಗೆಜ್ಜೆ' ಹಾಡು ಕೂಡಾ ಸಖತ್ ಹಿಟ್ ಆಗಿತ್ತು.

'ಒಂದು ಮೊಟ್ಟೆಯ ಕಥೆ' ಸಿನಿಮಾದ ನಂತರ ಕಥಾಸಂಗಮ ಸಿನಿಮಾದಲ್ಲಿ ಅಭಿನಯಿಸಿದ್ದರು ಅಮೃತಾ ನಾಯಕ್. ನಂತರ ಕವಚ ಸಿನಿಮಾದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ತಂಗಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದರು. ಮುಂದೆ ಅಪೇಕ್ಷಾಳಾಗಿ ಕಿರುತೆರೆಗೆ ಕಾಲಿಟ್ಟು, ಇದೀಗ ರಿಯಾಲಿಟಿ ಶೋವಿನಲ್ಲಿ ಕಮಾಲ್ ಮಾಡಲಿದ್ದಾರೆ ಕುಡ್ಲದ ಕುವರಿ.
ಹಿರಿತೆರೆ, ಕಿರುತೆರೆ ಎರಡರಲ್ಲೂ ಅಮೃತಾ ನಟನಾ ಕಂಪನ್ನು ಪಸರಿಸುತ್ತಿದ್ದಾರೆ ಎಂಬುದೇನೋ ನಿಜ. ಅದಕ್ಕೆ ಮೂಲ ಕಾರಣ ಆಕೆಯ ಸ್ನೇಹಿತರು. 'ಒಂದು ಮೊಟ್ಟೆಯ ಕಥೆ' ಸಿನಿಮಾದ ಆಡಿಶನ್ ನಲ್ಲಿ ಅಮೃತಾ ಭಾಗವಹಿಸಿದ್ದು ಸ್ನೇಹಿತರ ಒತ್ತಾಯವೇ ಕಾರಣ. ಆಡಿಶನ್‌ಗೆ ಹೋದ ಅಮೃತಾ ಆಯ್ಕೆಯೂ ಆದರು. ಹೀಗೆ ಆಕಸ್ಮಿಕವಾಗಿ ದೊರೆತ ಅವಕಾಶದಿಂದ ನಟನಾ ಲೋಕದ ನಂಟು ಬೆಳೆಸಿಕೊಂಡ ಈಕೆ ಹಿರಿತೆರೆ, ಕಿರುತೆರೆ ನಂತರ ರಿಯಾಲಿಟಿ ಶೋವಿನಲ್ಲಿ ಮೋಡಿ ಮಾಡುತ್ತಿದ್ದಾರೆ.


Click it and Unblock the Notifications











