ಮಗನ ಮೊದಲ ಫೋಟೊ ಹಂಚಿಕೊಂಡ ಅಮೃತಾ ನಾಯ್ಡು.. ಆದರೆ..
ಹಲವು ವರ್ಷಗಳಿಂದ ಕಿರುತೆರೆಯಲ್ಲಿದ್ದ ನಟಿ ಅಮೃತಾ ರೂಪೇಶ್ ಅವರು ಕಳೆದ ಒಂದೂವರೆ ವರ್ಷದಿಂದ ಮಾಯವಾಗಿದ್ದಾರೆ. ಅದಕ್ಕೆ ಕಾರಣವೂ ಎಲ್ಲರಿಗೂ ಗೊತ್ತಿದೆ. 2021 ರಲ್ಲಿ ತಮ್ಮ ಮಗಳು ಸಮನ್ವಿ ಜೊತೆಗೆ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಅಮೃತಾ ಅವರು ಅಪಘಾತವೊಂದರಲ್ಲಿ ಮಗಳನ್ನು ಕಳೆದುಕೊಂಡಿದ್ದರು. ಆಗ ಅಮೃತಾ ಅವರು 5 ತಿಂಗಳ ಗರ್ಭಿಣಿಯಾಗಿದ್ದರು.
ಮಗಳನ್ನು ಕಳೆದುಕೊಂಡು ದುಃಖದಲ್ಲಿದ್ದ ಕುಟುಂಬಕ್ಕೆ ಕೆಲವೇ ತಿಂಗಳಲ್ಲಿ ಮುದ್ದಾದ ಗಂಡು ಮಗುವಿನ ಆಗಮನ ಸಂತಸವನ್ನು ತಂದಿತ್ತು. ಹಾಗಾಗಿ ಅಮೃತಾ ಅವರು ಕೂಡ ಕಿರುತೆರೆಯನ್ನು ಬಿಟ್ಟು ದೂರವಿರಬೇಕಾಗಿತ್ತು. ನಟಿ ಅಮೃತಾ ಅವರು ಕನ್ನಡ ಮಾತ್ರವಲ್ಲದೇ ಪರಭಾಷೆಯಲ್ಲೂ ನಟಿಸಿದ್ದಾರೆ. 25ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿರುವ ಅಮೃತಾ ಅವರಿಗೆ 'ಗಂಗೋತ್ರಿ' ಸೀರಿಯಲ್ ಹೆಸರು ತಂದುಕೊಟ್ಟಿತ್ತು. ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬಂದ 'ಸತ್ಯ' ಧಾರಾವಾಹಿಯಲ್ಲಿ ಊರ್ಮಿಳಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಅಮೃತಾ ಅವರು ಹಲವು ವರ್ಷಗಳಿಂದ ಕಿರುತೆರೆ ಲೋಕದಲ್ಲಿದ್ದವರು. 'ಕುಸುಮಾಂಜಲಿ', 'ಮನೆಯೊಂದು ಮೂರು ಬಾಗಿಲು', 'ಪುಣ್ಯಕೋಟಿ', 'ಅಮೃತ ವರ್ಷಿಣಿ', 'ಗೀತಾ', 'ನಾಗಿಣಿ' ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಸದಾ ಸಾಫ್ಟ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಅಮೃತಾ ಅವರು ಪರಭಾಷೆಯಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ಮಗಳೊಂದಿಗೆ ರಿಯಾಲಿಟಿ ಶೋ
ಅಮೃತಾ ರೂಪೇಶ್ ಅವರ ತಂದೆ ಹರಿಕಥೆ ಹೇಳುತ್ತಾರೆ. ಈ ಕಲೆ ಅಮೃತಾ ಅವರೂ ಕಲಿತಿದ್ದು, ರೂಪೇಶ್ ಎಂಬುವರನ್ನು ವಿವಾಹವಾಗಿದ್ದಾರೆ. ಇನ್ನು ರಿಯಾಲಿಟಿ ಶೋನಲ್ಲೂ ಮಗಳ ಜೊತೆಗೆ ಕಾಣಿಸಿಕೊಂಡಿದ್ದರು. ಇವರ ಮಗಳು ಸಮನ್ವಿ ಜೊತೆಗೆ 'ನಮ್ಮಮ್ಮ ಸೂಪರ್ ಸ್ಟಾರ್' ಶೋನಲ್ಲಿ ಭಾಗವಹಿಸಿದ್ದರು. ಸಮನ್ವಿ ತುಂಬಾ ಆಕ್ಟಿವ್ ಆಗಿರುತ್ತಿದ್ದಳು. ತಾಯಿ ಮಗಳ ರಿಯಾಲಿಟಿ ಶೋನಲ್ಲಿ ಇವರಿಬ್ಬರೂ ಭಾಗವಹಿಸಿದ್ದರು. ಸಮನ್ವಿಗೆ ಹರಿಕಥೆ ಕೂಡ ಹೇಳಲು ಬರುತ್ತಿತ್ತು. ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಾಗ, ಸಮನ್ವಿ ಪರ್ಫಾಮೆನ್ಸ್‌ಗೆ ಎಲ್ಲರೂ ಫಿದಾ ಆಗಿದ್ದರು. ಮುಂದೊಂದು ದಿನ ದೊಡ್ಡ ನಟಿಯಾಗುತ್ತಾಳೆ ಎನ್ನುತ್ತಿದ್ದರು.

ಮಗು ಫೋಟೋ ರಿವೀಲ್ ಮಾಡದ ನಟಿ
ಆದರೆ, ಅಮೃತಾ ಹಾಗೂ ಸಮನ್ವಿ ಇಬ್ಬರೂ ಬೈಕ್‌ನಲ್ಲಿ ಹೋಗುವಾಗ ಲಾರಿಯೊಂದು ಬಂದು ಡಿಕ್ಕಿ ಹೊಡೆದಿತ್ತು. ಆಗ ಸಮನ್ವಿ ತಲೆಗೆ ಗಂಭೀರವಾಗಿ ಪೆಟ್ಟಾಗಿ ಸಾವನ್ನಪ್ಪಿದ್ದಳು. ಇದರಿಂದ ಅಮೃತಾ ಕುಟುಂಬದವರು ಶೋಕ ಸಾಗರದಲ್ಲಿ ಮುಳುಗಿದ್ದರು. ಸಮನ್ವಿ ತೀರಿಕೊಂಡಾಗ ಅಮೃತಾ 5 ತಿಂಗಳ ಗರ್ಭಿಣಿಯಾಗಿದ್ದರು. ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದಾಗಲೂ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದರು. ಆಗ ಸಮನ್ವಿನೇ ಮತ್ತೆ ಹುಟ್ಟಿ ಬರಲಿ ಎಂದು ಬಯಸಿದ್ದರು. ಕಳೆದ ವರ್ಷ ಅಮೃತಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ, ಮಗುವಿನ ಫೋಟೋವನ್ನು ರಿವೀಲ್ ಮಾಡಿರಲಿಲ್ಲ.
ಮಗನೊಂದಿಗೆ ಖುಷಿಯಾಗಿರುವ ಅಮೃತಾ
ಅಮೃತಾ ಅವರ ಮಗುವಿಗೆ ಒಂದು ವರ್ಷ ತುಂಬಿದೆ. ಮಗುವಿನ ಫೋಟೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದಾರೆ. ಆದರೆ, ಇದರಲ್ಲೂ ಅವರ ಮಗುವಿನ ಮುಖವನ್ನು ಕಾಣದಂತೆ ಮರೆ ಮಾಚಿದ್ದಾರೆ. ನಾನು ಬದುಕಿರುವುದಕ್ಕೆ ನೀನೇ ಕಾರಣ. ನಂಬಿಕೆಗಳನ್ನೆಲ್ಲಾ ಕಳೆದುಕೊಂಡ ಸಂದರ್ಭದಲ್ಲಿ ಆ ದೇವರು ನಿನ್ನನ್ನು ನನಗೆ ಕರುಣಿಸಿದರು ಎಂದು ಮುದ್ದಾಗಿ ಬರೆದುಕೊಂಡಿದ್ದಾರೆ. ಅಮೃತಾ ಅವರು ಅಪ್‌ಲೋಡ್ ಮಾಡಿರುವ ಈ ಫೋಟೋಗೆ ಎಲ್ಲರೂ ಖುಷಿಯಿಂದ ಕಮೆಂಟ್ ಮಾಡಿದ್ದಾರೆ.


Click it and Unblock the Notifications











