ರಘು ಬ್ಯುಸಿನೆಸ್ ಮಾಡಿ ಬಹಳ ನಷ್ಟವಾಗಿತ್ತು.. ಅದರಿಂದ ಹೊರ ಬರಲು ಬಹಳ ಕಷ್ಟವಾಯ್ತು; ಅಮೃತಾ ರಾಮಮೂರ್ತಿ
'ಕುಲವಧು', 'ಮಿಸ್ಟರ್ ಅಂಡ್ ಮಿಸಸ್ ರಂಗೇಗೌಡ,' 'ಕೆಂಡಸಂಪಿಗೆ', 'ಆಸೆ' ರೀತಿಯ ಧಾರಾವಾಹಿಗಳಲ್ಲಿ ನಟಿಸಿ ನಟಿ ಅಮೃತಾ ರಾಮಮೂರ್ತಿ ಮನೆ ಮಾತಾಗಿದ್ದಾರೆ. ಸಹ ನಟ ರಘು ಅವರನ್ನು ಕೈಹಿಡಿದ ಅಮೃತಾಗೆ ಒಬ್ಬ ಹೆಣ್ಣು ಮಗಳಿದ್ದಾಳೆ. ಮದುವೆ, ಮಗು ಅಂತ ಫ್ಯಾಮಿಲಿ ಜೀವನದಲ್ಲಿ ಬ್ಯುಸಿಯಾಗಿದ್ದ ಆಕೆ ಸೆಲ್ಫ್ ಲವ್ ಅನ್ನುವುದನ್ನು ಮರೆತುಬಿಟ್ಟಿದ್ದರಂತೆ. ಈಗ ಮತ್ತೆ ಕಂಬ್ಯಾಕ್ ಮಾಡಿದ್ದಾರೆ.
ಸುದ್ದಿ ವಾಹಿನಿಗಳಲ್ಲಿ ನಿರೂಪಕಿಯಾಗಿ ವೃತ್ತಿ ಜೀವನ ಆರಂಭಿಸಿದ ಅಮೃತಾ ಬಳಿಕ ಕಿರುತೆರೆ ಧಾರಾವಾಹಿ ಸೇರಿ ಕೆಲ ಸಿನಿಮಾಗಳಲ್ಲಿ ನಟಿಸಿದ್ದರು. 'ಕುಲವಧು' ಧಾರಾವಾಹಿ ದೊಡ್ಡ ಬ್ರೇಕ್ ಕೊಟ್ಟಿತ್ತು. ಬಳಿಕ ಕಿರುತೆರೆಯಲ್ಲಿ ಬ್ಯುಸಿ ಆಗಿಬಿಟ್ಟರು. ತಾಯಿಯಾದ ಬಳಿಕ ನನ್ನನ್ನು ನಾನು ಪ್ರೀತಿಸುವುದನ್ನು ಮರೆತುಬಿಟ್ಟಿದ್ದೆ. ಸೌಂದರ್ಯ, ಮಾನಸಿಕ ಆರೋಗ್ಯ ಎಲ್ಲವನ್ನು ಮರೆತು ಸದಾ ಗಂಡ, ಮಗು ಅಂತ ಇರುತ್ತಿದ್ದೆ. ಇದೇ ಕಾರಣಕ್ಕೆ ದೇಹದ ತೂಹ ಹೆಚ್ಚಾಗಿ ಶೇಪ್ ಕಳೆದುಕೊಂಡಿದ್ದೆ. ಆದರೆ ಈ ವರ್ಷದ ಆರಂಭದಲ್ಲಿ ಜಿಮ್, ಡಯೆಟ್ ಮಾಡಿ ಮೊದಲಿನಂತಾದೆ ಎಂದು ಅಮೃತಾ ಇತ್ತೀಚೆಗೆ ಪೋಸ್ಟ್ ಮಾಡಿದ್ದರು. ಇದೀಗ NewsO NewsU ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಸಾಕಷ್ಟು ವಿಚಾರ ಹಂಚಿಕೊಂಡಿದ್ದಾರೆ.

ಮದುವೆಯಾಗಿ ಕೆಲವೇ ದಿನಗಳಲ್ಲಿ ರಘು ಹಾಗೂ ಅಮೃತಾ ದಂಪತಿ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದರು. ಬ್ಯುಸಿನೆಸ್ ಮಾಡಿ ಭಾರೀ ನಷ್ಟವಾಗಿತ್ತು. ಹೇಗೋ ಮಾಡಿ ಎಲ್ಲಾ ಸಾಲ ತೀರಿಸಿದ್ದೀವಿ ಎಂದು ಅಮೃತಾ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮದ ವೇದಿಕೆಯಲ್ಲಿ ಹೇಳಿದ್ದರು. ಸದ್ಯ ಸಂದರ್ಶನದಲ್ಲಿ ಈ ಬಗ್ಗೆ ಸಂಪೂರ್ಣವಾಗಿ ಮಾತನಾಡಿದ್ದಾರೆ. ತಮ್ಮ ಫಿಟ್‌ನೆಸ್ ಜರ್ನಿ ಬಗ್ಗೆಯೂ ಬಹಳ ಮುಕ್ತವಾಗಿ ಮಾತನಾಡಿದ್ದಾರೆ. ಮುಂದೆ ಯಾವತ್ತು ಸೆಲ್ಫ್ ಲವ್ ಮರೆಯುವುದಿಲ್ಲ ಎಂದಿದ್ದಾರೆ.
ಇಂಡಸ್ಟ್ರಿಯಲ್ಲಿ ನಾವು ಹೇಗೆ ಕಾಣಿಸಿಕೊಳ್ತೀವಿ, ಹೇಗಿರ್ತೀವಿ ಎನ್ನುವುದು ಬಹಳ ಮುಖ್ಯ ಎಂದು ನಟಿ ಅಮೃತಾ ರಾಮಮೂರ್ತಿ ಹೇಳಿದ್ದಾರೆ. "ಎಷ್ಟೋ ಜನ ಹೆಣ್ಣು ಮಕ್ಲಕಳು ತಾಯ್ತನದಲ್ಲಿ ತಮ್ಮನ್ನು ತಾವು ಮರೆತುಬಿಡ್ತಾರೆ.. ಪೋಸ್ಟ್‌ಪಾರ್ಟಂ ಡಿಪ್ರೆಷನ್ ಅನ್ನು ನಾನು ಅನುಭವಿಸಿದ್ದೀನಿ. ಕಳೆದ ವರ್ಷ ನಾನು ಒಂದು ಧಾರವಾಹಿ ಮಾಡ್ತಿದ್ದೆ. ಆದ್ರೆ ಆ ಪಾತ್ರವನ್ನು ನಿಭಾಯಿಸುವುದು ಕಷ್ಟವಾಗ್ತಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಆಯಿತು. ಮಾನಸಿಕವಾಗಿ, ದೈಹಿಕವಾಗಿ ಬಹಳ ನೋವು ಅನುಭವಿಸಿದೆ. ಹಾಗಾಗಿ ಆ ಧಾರಾವಾಹಿಯಿಂದ ಹೊರಬಂದೆ" ಎಂದಿದ್ದಾರೆ.
ಪತಿ ರಘು ನನ್ನ ಸ್ನೇಹಿತನ ತರ.. ಬಹಳ ಬೆಂಬಲವಾಗಿ ನಿಲ್ತಾರೆ.. ನನ್ನ ದೈಹಿಕ, ಮಾನಸಿಕ ಆರೋಗ್ಯದ ಕಡೆ ಗಮನ ಕೊಡುವಂತೆ ರಘು ಎಷ್ಟೇ ಹೇಳಿದ್ರು ಕೇಳಲಿಲ್ಲ ಹಾಗಾಗಿ ಎಡವಟ್ಟಾಗಿತ್ತು ಎಂದು ಅಮೃತಾ ತಿಳಿಸಿದ್ದಾರೆ. "6 ತಿಂಗಳ ಕಾಲ ರಾತ್ರಿ ಸಿಹಿ ಪದಾರ್ಥಗಳನ್ನು ತಿಂದುಬಿಟ್ಟಿದ್ದೆ. ಒತ್ತಡ ಹೆಚ್ಚಾಗಿ ಬಹಳ ಸಿಹಿ ತಿನ್ನುತ್ತಿದ್ದೆ. ಆರೇಳು ಕೆಜಿ ತೂಕ ಹೆಚ್ಚಾಗಿತ್ತು.. ಬಹಳ ಮೂಡ್ ಸ್ವಿಂಗ್ಸ್ ಆಗ್ತಿತ್ತು. ತುಂಬಾ ಅಳ್ತಿದ್ದೆ.. ಅಷ್ಟೆಲ್ಲ ಇದ್ಮೇಲೆ ಯಾಕೆ ಕೆಲಸ ಮಾಡಬೇಕು ಎಂದು ಕೆಲವರು ಹೇಳಬಹುದು. ಆದ್ರೆ ನಮ್ಮ ಜೀವನದ ಜವಾಬ್ದಾರಿ, ಆಸೆಗಳು ಬೇರೆ ಇರ್ತಾವೆ. ಅದನ್ನು ಪೂರೈಸಲು ಕೆಲಸ ಮಾಡಬೇಕಾಗುತ್ತದೆ. ಕೊನೆಗೊಂದು ದಿನ ಜಿಮ್‌ಗೆ ಹೋಗ್ತೀನಿ ಎಂದೆ. ಅದಕ್ಕೆ ರಘು ಬೆಂಬಲ ಸೂಚಿಸಿದ್ರು.. ಆ ಬಳಿಕ ಎಲ್ಲವೂ ಬದಲಾಯಿತು" ಎಂದು ವಿವರಿಸಿದ್ದಾರೆ.
ಒಂದು ಸಮಯದಲ್ಲಿ ನಾನು ರಘು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದೆವು. ಕೂಡಿಟ್ಟ ಹಣ ಎಲ್ಲಾ ಖಾಲಿ ಆಗಿತ್ತು. ಆದರೆ ಅದು ಬರೀ ಹಣ.. ಅದನ್ನು ಮತ್ತೆ ಸಂಪಾದಿಸಬಹುದು.. ನಮಗೆ ವ್ಯಕ್ತಿ ಮುಖ್ಯ, ಹಣ ಅಲ್ಲ.. ಸಪ್ತಪದಿ ತುಳಿಯುವಾಗ ಹೆಣ್ಣು ಮಕ್ಕಳು ಪ್ರಾಮೀಸ್ ಮಾಡ್ತೀವಿ ಅಲ್ವಾ.. ನಿನಗೆ ಕಷ್ಟ ಬಂದಾಗ ಜೊತೆ ನಿಲ್ತೀನಿ ಅಂತ.. ನನ್ನ ಮದುವೆ ಆಗಿದ್ದು ಬಹಳ ಖುಷಿಯಿದೆ. ನಮ್ಮ ಅಂತರ್ಜಾತಿ ಮದುವೆ.. ಬಹಳ ಇಷ್ಟಪಟ್ಟು ಮದುವೆ ಆಗಿದ್ದೆವು.. ಹಾಗಾಗಿ ಯಾವುದನ್ನು ಬಿಟ್ಟು ಕೊಡಲು ಸಿದ್ಧರಿರಲಿಲ್ಲ ಎಂದು ಅಮೃತಾ ನೆನಪಿಸಿಕೊಂಡಿದ್ದಾರೆ.
ಬ್ಯುಸಿನೆಸ್‌ಗೆ ರಘು ಹಣ ಹೂಡಿಕೆ ಮಾಡಿದ್ರು.. ಬಹಳ ನಷ್ಟವಾಗಿತ್ತು.. ಕೂಡಿಟ್ಟ ಎಲ್ಲವನ್ನು ಮಾರಿ, ಅಡ ಇಟ್ಟು ಕಳೆದುಕೊಂಡಿದ್ದೆವು ಎಂದು ಅಮೃತಾ ಹೇಳಿದ್ದಾರೆ.. "3 ವರ್ಷಗಳ ಕಾಲ ಆರ್ಥಿಕ ಸಂಕಷ್ಟ ಇತ್ತು.. ಆಗ ನಾನು ಗರ್ಭಿಣಿ ಆಗಿದ್ದಾಗ ಸಮಸ್ಯೆ ಶುರುವಾಗಿತ್ತು.. ಆ ಸಮಯದಲ್ಲಿ ರಘು ಬಹಳ ಕಷ್ಟಪಟ್ರು.. ನೋವು ತಿಂದ್ರು.. ಆದ್ರೆ ಯಾವುದನ್ನು ಹೇಳಿಕೊಳ್ಳಲಿಲ್ಲ. ಬಹಳ ಕಷ್ಟ ಆಗ್ತಿತ್ತು. ಹಾಗಾಗಿ ಮಗಳು ಹುಟ್ಟಿದ 2 ತಿಂಗಳಿಗೆ ಮತ್ತೆ ಕೆಲಸ ಮಾಡಲು ಆರಂಭಿಸಿದೆ. ಈಗ ಇಬ್ಬರೂ ಸೇರಿ ಬಹುತೇಕ ಸಾಲ ತೀರಿಸಿದ್ದೀವಿ.. ಸೀರೆ ಬ್ಯುಸಿನೆಸ್ ಕೂಡ ಮಾಡ್ತಿದ್ದೀವಿ" ಎಂದಿದ್ದಾರೆ.


Click it and Unblock the Notifications