ಅಮೃತಧಾರೆಯ ಅಪೇಕ್ಷಾ 'ಒಂದು ಮೊಟ್ಟೆಯ ಕಥೆ' ಸಿನಿಮಾದ ನಟಿ; ಪಾತ್ರ ಯಾವುದು ಗೊತ್ತೇ?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ 'ಅಮೃತಧಾರೆ'ಯೂ ಒಂದು. ಕೌಟುಂಬಿಕ ಕಥಾ ಹಂದರವನ್ನೊಳಗೊಂಡಿರುವ 'ಅಮೃತಧಾರೆ' ಧಾರಾವಾಹಿಯು ತನ್ನ ವಿಭಿನ್ನ ಕಥೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿದೆ. ಪ್ರತಿ ಸಂಚಿಕೆಯೂ ರೋಚಕವಾಗಿರುವ ಕಾರಣದಿಂದ ಕಿರುತೆರೆ ವೀಕ್ಷಕರು ಕೂಡಾ ಇದನ್ನು ಮೆಚ್ಚುತ್ತಿದ್ದು ಟಿಆರ್‌ಪಿಯಲ್ಲೂ ಇದು ಮುಂದಿರುವುದು ಖುಷಿಯ ಸಂಗತಿ.
ಅಂದ ಹಾಗೇ 'ಅಮೃತಧಾರೆ' ಧಾರಾವಾಹಿಯಲ್ಲಿ ನಾಯಕಿ ಭೂಮಿಕಾ ತಂಗಿ ಅಪೇಕ್ಷಾ ಆಗಿ ಅಭಿನಯಿಸಿ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ಚೆಂದುಳ್ಳಿ ಚೆಲುವೆಯ ಹೆಸರು ಅಮೃತಾ ನಾಯಕ್. ನಾಯಕಿ ಭೂಮಿಕಾಳ ತಂಗಿ ಅಪೇಕ್ಷಾ ಮಂದಾಕಿನಿಯ ಮುದ್ದಿನ ಮಗಳು. ಮಂದಾಕಿನಿ ಮಿಸ್ ಮೈಸೂರು ಆಗಿದ್ದರೆ ತಾನು ಮಿಸ್ ಇಂಡಿಯಾ ಆಗಬೇಕು ಎಂದು ಕನಸು ಕಂಡವಳು. ಭಾವನಾ ತಮ್ಮ ಪಾರ್ಥನನ್ನು ಪ್ರೀತಿಸಿ ಮದುವೆಯಾಗಿರುವ ಅಪೇಕ್ಷಾಳಿಗೆ ಈಗ ಅಕ್ಕನನ್ನು ಕಂಡರೆ ಅಷ್ಟಕಷ್ಟೇ.

ತನ್ನ ಪ್ರೀತಿಯ ವಿಚಾರ ತಿಳಿದಿದ್ದು ಕೂಡಾ ತನ್ನ ಅಕ್ಕ ಪ್ರೀತಿಗೆ ಅಕ್ಕ ಆದವಳು ಎಂದು ನಂಬಿರುವ ಆಕೆ ಈಗ ಅಕ್ಕನನ್ನೇ ದ್ವೇಷಿಸುತ್ತಿರುತ್ತಾಳೆ. ಜೊತೆಗೆ ತನ್ನ ಮದುವೆಯನ್ನು ಒಪ್ಪದ ತವರು ಮನೆಯವರ ಮೇಲೂ ಆಕೆಗೆ ಕೋಪವಿದೆ. ಇದೆಲ್ಲಾ ಯಾವಾಗ ಅರಿವಾಗುತ್ತದೆ, ಮುನಿಸು ಯಾವಾಗ ಮರೆಯಾಗುತ್ತದೆ, ಮತ್ತೆ ಅಕ್ಕನನ್ನು ಈಕೆ ಪ್ರೀತಿಸುತ್ತಾಳಾ ಎಂಬ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಮಾತ್ರ ಮುಂದಿನ ದಿನಗಳಲ್ಲಿ ದೊರಕಬೇಕಿದೆ.
ಕರಾವಳಿ ಕುವರಿ ಅಮೃತಾ ನಾಯಕ್ ಅವರು ಬಾಲ್ಯದಿಂದಲೂ ನಟಿಯಾಗಬೇಕು ಎಂಬ ಕನಸು ಕಂಡವರು. ಬಣ್ಣದ ಲೋಕದಲ್ಲಿ ಬದುಕು ರೂಪಿಸಿಕೊಳ್ಳಬೇಕು ಎಂಬ ಮಹಾದಾಸೆ ಹೊಂದಿದ್ದ ಅಮೃತಾ ನಾಯಕ್ ಕಿರುತೆರೆಗೆ ಕಾಲಿಟ್ಟಿದ್ದು 'ಯಶೋಧೆ' ಧಾರಾವಾಹಿಯ ಮೂಲಕ. ವಿನೋದ್ ಧೊಂಡಾಳೆ ನಿರ್ದೇಶನದ 'ಯಶೋಧೆ' ಧಾರಾವಾಹಿಯಲ್ಲಿ ಅಭಿನಯಿಸುವ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು ಅಮೃತಾ ನಾಯಕ್.
ಅಂದ ಹಾಗೇ ತಮ್ಮ ಮುದ್ದಾದ ನಟನೆಯ ಮೂಲಕ ಅಮೃತಾ ನಾಯಕ್ ಅವರು ಕಿರುತೆರೆ ವೀಕ್ಷಕರ ಮನ ಸೆಳೆದಿದ್ದರೂ, ಆಕೆಗೆ ಕಿರುತೆರೆಗಿಂತಲೂ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳುವ ಮಹಾದಾಸೆಯಿತ್ತು. ರಾಜ್ ಬಿ ಶೆಟ್ಟಿ ಅವರ ಮೊದಲ ಸಿನಿಮಾ 'ಒಂದು ಮೊಟ್ಟೆಯ ಕಥೆ'ಯ ಮೂಲಕ ಬೆಳ್ಳಿತೆರೆಗೂ ಕಾಲಿಟ್ಟು ತನ್ನ ಮಹಾದಾಸೆಯನ್ನು ಈಕೆ ಈಡೇರಿಸಿಕೊಂಡಿದ್ದರು.
ಹೌದು, 'ಒಂದು ಮೊಟ್ಟೆಯ ಕಥೆ' ಸಿನಿಮಾದಲ್ಲಿ ಎಕಾನಾಮಿಕ್ಸ್ ಲೆಕ್ಚರರ್ ಆಗಿ ಅಮೃತಾ ನಾಯಕ್ ಕಾಣಿಸಿಕೊಂಡಿದ್ದರು. ಎರಡು ಮೂರು ಸೀನ್‌ಗಳಲ್ಲಷ್ಟೇ ಈಕೆ ಕಾಣಿಸಿಕೊಂಡಿದ್ದರೂ, ನಟನೆಯ ಮೂಲಕ ಸಿನಿ ಪ್ರಿಯರನ್ನು ಈಕೆ ರಂಜಿಸಿದ್ದರು. ಮಾತ್ರವಲ್ಲ ರಾಜ್ ಬಿ ಶೆಟ್ಟಿ ಹಾಗೂ ಅಮೃತಾ ನಾಯಕ್ ಜೊತೆಯಾಗಿ ಕಾಣಿಸಿಕೊಂಡಿರುವ 'ಚೆಂದ ಅವಳ ಕಿರು ಲಜ್ಜೆ' ಹಾಡು ಈಗಲೂ ಕೂಡಾ ಸಿನಿಪ್ರಿಯರ ಬಾಯಲ್ಲಿ ಗುನುಗುನುತ್ತಿರುವುದು ಕೇಳಬಹುದು. ಅಷ್ಟರ ಮಟ್ಟಿಗೆ ಅದು ಸಿನಿ ಪ್ರಿಯರ ಮನ ಸೆಳೆದಿದೆ.
'ಒಂದು ಮೊಟ್ಟೆಯ ಕಥೆ'ಯಲ್ಲಿ ಅಮೃತಾ ನಾಯಕ್ ಅವರು ಅಭಿನಯಿಸಿದ್ದಾರೆ ಎಂದರೆ ಅದಕ್ಕೆ ಮುಖ್ಯ ಕಾರಣ ಆಕೆಯ ಸ್ನೇಹಿತರು. ಹೌದು, ಸ್ನೇಹಿತರ ಒತ್ತಾಯದ ಮೇರೆಗೆ 'ಒಂದು ಮೊಟ್ಟೆಯ ಕಥೆ' ಸಿನಿಮಾದ ಆಡಿಶನ್‌ಗೆ ಹೋಗಿದ್ದರು ಅಮೃತಾ. ಆಡಿಶನ್‌ಗೆ ಹೋದ ಆಕೆಗೆ ತಾನು ಆಯ್ಕೆಯಾಗುತ್ತೇನೆ ಎಂಬ ಯಾವೊಂದು ಸುಳಿವಿರಲಿಲ್ಲ. ಮುಂದೆ ಆಕೆ ಆಯ್ಕೆಯಾದಾಗ ಆಕೆಗೆ ಆದ ಖುಷಿ ಅಷ್ಟಿಷ್ಟಲ್ಲ.
ತದ ನಂತರ 'ಕಥಾಸಂಗಮ' ಸಿನಿಮಾದಲ್ಲಿಯೂ ಅಮೃತಾ ನಾಯಕ್ ಬಣ್ಣ ಹಚ್ಚಿದ್ದರು. ಎಲ್ಲದಕ್ಕಿಂತಲೂ ಮುಖ್ಯವಾದ ಸಂಗತಿಯೆಂದರೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ 'ಕವಚ' ಸಿನಿಮಾದಲ್ಲಿ ಶಿವಣ್ಣ ತಂಗಿಯಾಗಿ ನಟಿಸುವ ಸುವರ್ಣಾವಕಾಶ ಪಡೆದ ಬೆಡಗಿ ಈಕೆ. ಇದೀಗ 'ಅಮೃತಧಾರೆ' ಧಾರಾವಾಹಿಯ ಅಪೇಕ್ಷಾ ಆಗಿ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಅಮೃತಾ ನಾಯಕ್ ಬಾಲ್ಯದ ಕನಸು ನನಸು ಮಾಡಿಕೊಂಡಿರುವ ಖುಷಿಯಲ್ಲಿದ್ದಾರೆ.


Click it and Unblock the Notifications











