Amruthadhaare ; ಅಜ್ಜಿ ಕೊನೆ ಆಸೆ,ಗೌತಮ್-ಭೂಮಿಕಾ ಕೊನೆಗೂ ಒಂದಾದ್ರಾ ? ಶಕುಂತಲಾ-ಜೈದೇವ್ ಕಥೆ ಏನಾಯ್ತು ?
"ಅಮೃತಧಾರೆ" ಧಾರಾವಾಹಿಯಲ್ಲಿ ಅಜ್ಜಿ ಇರುವ ವೃದ್ದಾಶ್ರಮದ ವಾಸ್ತುದಿಂದಾಗಿಯೋ ಏನೋ, ಆನೆ ನಡೆದಿದ್ದೇ ದಾರಿ ಎಂಬಂತೆ ಗೌತಮ್ ಪ್ರೀತಿಯನ್ನು ವಿರುದ್ಧ ದಿಕ್ಕಿನಲ್ಲಿದ್ದ ಭೂಮಿಕಾ ಮರಳಿ ವಾಸ್ತವ ಲೋಕಕ್ಕೆ ಬಂದಿದ್ದಾಳೆ. ಸಂಬಂಧಗಳ ಮಹತ್ವವನ್ನೇ ತಿಳಿಯದಂತೆ ಮಾತನಾಡಲು ಶುರು ಮಾಡಿದ್ದ ಭೂಮಿಕಾ ಈಗ ಅಜ್ಜಿಯ ಕೊನೆ ಆಸೆ ಈಡೇರಿಸಲು ಮುಂದಾಗಿದ್ದು ಗೌತಮ್ ಗೆ ಅಜ್ಜಿಯನ್ನು ನೋಡಲು ಜೊತೆಯಲ್ಲಿ ಬರುವುದಾಗಿ ಹೇಳಿದ್ದಾಳೆ.
ಭೂಮಿಕಾಳ ಈ ಮಾತು ಗೌತಮ್ ಗೆ ಖುಷಿಯನ್ನು ನೀಡಿದ್ದು ಅಚ್ಚರಿಗೆ ಕೂಡ ನೂಕಿದೆ. ಆದರೂ ಗೌತಮ್ ಕೂಡ ಭೂಮಿಕಾ ಜೊತೆ ಹೋಗಲು ಅಣಿಯಾಗಿದ್ದು ಕಿಲಾಡಿ ಮಕ್ಕಳು ಇಬ್ಬರ ಮಾತುಗಳನ್ನು ಕದ್ದು ಕೇಳಿಸಿಕೊಂಡಿದ್ದಾರೆ. ಗೌತಮ್ ಮತ್ತು ಭೂಮಿಕಾನ ತುಸು ಆಡಿಸಲು ಇಬ್ಬರು ಮುಂದಾಗಿದ್ದು ನಮ್ಮ ಮುತ್ತಜ್ಜಿ ನೋಡಲು ಭೂಮಿಕಾ ಮೇಡಂ ಮತ್ತು ಆಕಾಶ್ ಯಾಕೆ ಬರಬೇಕೆಂದು ಗೌತಮ್‌ಗೆ ಮಿಂಚು ಕೇಳಿದ್ದಾಳೆ. ಇನ್ನೊಂದು ಕಡೆ ಆಕಾಶ್ ಪರೀಕ್ಷೆ ಬೇರೆ ಇದೆ ಓದಿಕೊಳ್ಳಬೇಕು, ನಾನು ಬಂದರೆ ನನ್ನ ಪರೀಕ್ಷೆ ನೀವು ಬರೆಯುತ್ತೀರಾ ಎಂದು ಭೂಮಿಕಾಗೆ ಕೇಳುತ್ತಾನೆ.

ಹೀಗೆ ಸತಾಯಿಸುವ ಇಬ್ಬರು ಕೊನೆಯಲ್ಲಿ ಜೊತೆಯಲ್ಲಿ ಹೋಗಲು ಒಪ್ಪಿಕೊಂಡಿದ್ದಾರೆ. ಹೀಗಾಗಿ ಸದ್ಯ ನಾಲ್ವರು ಅಜ್ಜಿಯನ್ನು ನೋಡಲು ಹೋಗುತ್ತಿದ್ದು ಅಜ್ಜಿಯ ಎದುರು ಹೋಗುವ ಮುನ್ನ ತಾವೆಂಥ ಕಲಾಕಾರರು ಎಂದು ಆಕಾಶ್ ಮತ್ತು ಮಿಂಚು ತೋರಿಸಿದ್ದಾರೆ. ಪ್ರಮುಖ ಪರೀಕ್ಷೆ ಬರೆಯುವ ಮುನ್ನ ಪೂರ್ವಭಾವಿ ಪರೀಕ್ಷೆಯಲ್ಲಿ ಪಾಸಾಗುವುದು ಮುಖ್ಯ ಎಂಬಂತೆ ಇಬ್ಬರು ಗೌತಮ್ ಮತ್ತು ಭೂಮಿಕಾ ಎದುರು ತಮ್ಮಲ್ಲಿನ ಕಲೆಯ ಪ್ರದರ್ಶನ ಮಾಡಿದ್ದಾರೆ.
ಆಕಾಶ್ ಓಡೋಡಿ ಬಂದು ಅಪ್ಪ ಎಂದು ಗೌತಮ್ ನ ಅಪ್ಪಿಕೊಂಡರೆ ಮಿಂಚು ಮಮ್ಮೀ ಎಂದು ಭೂಮಿಕಾನ ಅಪ್ಪಿಕೊಂಡಿದ್ದಾಳೆ. ಮಕ್ಕಳ ಈ ಅಭಿನಯದಿಂದ ಭಾವುಕರಾಗಿರುವ ಇಬ್ಬರು ಈಗ ಅಜ್ಜಿಯ ಬಳಿ ತೆರಳಿದ್ದಾರೆ. ಮತ್ತೊಂದು ಕಡೆ ವೃದ್ಧಾಶ್ರಮದಲ್ಲಿರುವ ಅಜ್ಜಿ ಗೌತಮ್ ಮತ್ತು ಭೂಮಿಕಾ ಬರುತ್ತಿರುವ ಸುದ್ದಿ ಕೇಳಿ ಖುಷಿಯಾಗಿದ್ದಾಳೆ. ತೀವೃ ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವಂತೆ ಅಭಿನಯಿಸುತ್ತಾ ಮಲಗಿದ್ದಾಳೆ. ಇಷ್ಟೇ ಅಲ್ಲ ತನ್ನ ಸೊಸೆ ಭಾಗ್ಯಗೆ ಕೂಡ ಪಾತ್ರದ ಪರಕಾಯ ಪ್ರವೇಶ ಮಾಡುವಂತೆ ಅಜ್ಜಿ ಹೇಳಿದ್ದು ಸೆರಗನ್ನು ಹಲ್ಲಿನಿಂದ ಕಚ್ಚಿಟ್ಟುಕೊಂಡು ಅಳ್ತಾ ಇರುವಂತೆ ಅಭಿನಯಿಸುವಂತೆ ಹೇಳಿದ್ದಾಳೆ.
ಅಜ್ಜಿ ಹೇಳಿದಂತೆ ಭಾಗ್ಯಮ್ಮ ಕೂಡ ಆಕ್ಟ್ ಮಾಡುತ್ತಿದ್ದು ಬಿಕ್ಕಿ ಬಿಕ್ಕಿ ಅತ್ತಂತೆ ನಾಟಕ ಮಾಡುತ್ತಿದ್ದಾಳೆ. ಇದೇ ಸಮಯದಲ್ಲಿ ಗೌತಮ್ ಮತ್ತು ಭೂಮಿಕಾ ಮಕ್ಕಳ ಜೊತೆ ಬಂದಿದ್ದು ಅಜ್ಜಿಯ ಪರಿಸ್ಥಿತಿಯನ್ನು ಕಂಡು ಭಾವುಕನಾಗಿದ್ದಾನೆ. ಆಗ ಭೂಮಿಕಾ ಬಂದಿಲ್ವಾ ಎಂದು ಕೇಳುವ ಅಜ್ಜಿ ಆ ನಂತರ ಭೂಮಿಕಾನ ಕಂಡು ಖುಷಿಯಾಗುತ್ತಾಳೆ. ಮರಿ ಮೊಮ್ಮಕ್ಕಳು ಎಲ್ಲಿ ಎಂದು ಕೇಳುತ್ತಾಳೆ.

ಆಗ ಗೌತಮ್ ಮತ್ತು ಭೂಮಿಕಾ ಆಕಾಶ್ ಹಾಗೂ ಮಿಂಚುನ ಅಜ್ಜಿಗೆ ಪರಿಚಯ ಮಾಡಿಸಿದ್ದು ಅಜ್ಜಿ ಇಬ್ಬರನ್ನೂ ತಬ್ಬಿ ಮುದ್ದಾಡಿದ್ದಾಳೆ. ಇಬ್ಬರು ನೂರು ಕಾಲ ಖುಷಿಯಾಗಿರಿ ಎಂದು ಗೌತಮ್ ಮತ್ತು ಭೂಮಿಕಾನ ಆಶೀರ್ವಾದ ಮಾಡಿದ್ದಾಳೆ. ಸದ್ಯ ಅಜ್ಜಿಯ ಕಣ್ಣೆದುರು ಆಕಾಶ್, ಮಿಂಚು ಜೊತೆ ಗೌತಮ್ ಮತ್ತು ಭೂಮಿಕಾ ಇದ್ದು ಸದ್ಯ ಎಲ್ಲರು ಒಂದಾದಂತೆ ಆಕ್ಟ್ ಮಾಡಿದ್ದಾರೆ. ಇಬ್ಬರು ನಿಜಕ್ಕೂ ಒಂದಾದ್ರಾ..? ಒಂದಾಗ್ತಾರಾ..? ಅಜ್ಜಿ ಪ್ಲ್ಯಾನ್ ವರ್ಕ್ ಆಯ್ತಾ..? ಈ ಪ್ರಶ್ನೆಗಳಿಗೆ ಉತ್ತರ ಮುಂದೆ ಸಿಗಲಿದೆಯಾದರೂ ಹಲವರಲ್ಲಿ ಧಾರಾವಾಹಿ ಮುಕ್ತಾಯದ ಹಂತಕ್ಕೆ ತಲುಪಿದೆಯಾ ಎನ್ನುವ ಪ್ರಶ್ನೆ ಕಾಡುತ್ತಿದೆ. ಯಾಕೆಂದರೆ ಅಜ್ಜಿ ಆಶಯದಂತೆ ನಿಜಕ್ಕೂ ಇಬ್ಬರು ಒಂದು ವೇಳೆ ಒಂದಾದರೆ ಸೀರಿಯಲ್ ಕಥೆ ಬಹುತೇಕ ಮುಗಿದಂತೆಯೇ.
ಇನ್ನು ಇದೆಲ್ಲದರ ನಡುವೆ ಜೈದೇವ್ ಮತ್ತು ಶಕುಂತಲಾ ಕಥೆ ಕೂಡ ಇನ್ನೂ ಅಪೂರ್ಣವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಅಜ್ಜಿ ಇರುವುದು ಜೈದೇವ್ ಕಣ್ಗಾವಲಿನಲ್ಲಿ. ಹೀಗಿದ್ದರೂ ಕೂಡ ಭಾಗ್ಯಮ್ಮ ಮತ್ತು ಗೌತಮ್ ತನ್ನ ಮನೆಯವರ ಜೊತೆ ಬಂದಿರುವ ವಿಚಾರ ಇನ್ನು ಜೈದೇವ್‌ಗೆ ಗೊತ್ತಾಗಿಲ್ಲ. ಹೀಗಾಗಿ ''ಅಮೃತಧಾರೆ'' ಮುಕ್ತಾಯವಾಗುತ್ತಾ..? ಅಥವಾ ಬೇರೆ ತಿರುವನ್ನು ನೀಡಿ ಈ ಧಾರಾವಾಹಿಯನ್ನು ಈ ತಂಡ ಮುಂದುವರೆಸುತ್ತಾ..? ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











