ತಂಗಿಯಾಗಿ ನಟಿಸಿದ್ದ ಲಾವಣ್ಯ ಜೊತೆ ಶಶಿ ಹೆಗಡೆ ಪ್ರೇಮರಾಗ: 'ಅಮೃತಧಾರೆ' ನಟನ ಕಿರು ಪರಿಚಯ
'ಅಮೃತಧಾರೆ' ಧಾರಾವಾಹಿಯಲ್ಲಿ ಭೂಮಿಕಾ ತಮ್ಮ ಗೌತಮ್ ದಿವಾನ್ ಸಹೋದರಿ ಮಹಿಮಾಳನ್ನು ಪ್ರೀತಿಸುತ್ತಿದ್ದಾನೆ. ಮಹಿಮಾಳ ಹಠದ ಸ್ವಾಭಾವ ಗೊತ್ತಿದ್ದರೂ ಜೀವನ್ ಅವಳನ್ನು ಇಷ್ಟಪಟ್ಟಿದ್ದಾನೆ. ಮಹಿಮಾ ಜೀವನ್‌ನನ್ನು ಮದುವೆಯಾಗಬೇಕು ಎಂದು ಬಯಸಿದ್ದಕ್ಕೆ ಗೌತಮ್ ದಿವಾನ್ ನಿಶ್ಚಿತಾರ್ಥ ಮಾಡಿದ್ದಾನೆ. ಅಲ್ಲದೇ, ಜೀವನ್ ಹಾಗೂ ಮಹಿಮಾ ಮದುವೆಗೆ ಅಡ್ಡಲಾಗಿದ್ದ ಸಮಸ್ಯೆ ಅನ್ನು ಬಗೆ ಹರಿಸಿದ್ದಾನೆ.
ಜೀವನ್ ಅಕ್ಕ ಭೂಮಿಕಾಳನ್ನು ಗೌತಮ್ ದಿವಾನ್ ಮದುವೆಯಾಗಲು ಒಪ್ಪಿದ್ದಾನೆ. ಆದರೆ, ಇದರ ನಡುವೆಯೇ ದೊಡ್ಡ ಸಮಸ್ಯೆ ಎದುರಾಗಿದೆ. ಮಹಿಮಾ ಇದ್ದಕ್ಕಿದ್ದಂತೆ ಜೀವನ್ ಜೊತೆ ಮದುವೆಯಾಗಲು ನಿರಾಕರಿಸಿದ್ದಾಳೆ. ಇದರಿಂದ ಜೀವನ್ ಹಾಗೂ ಭೂಮಿಕಾಳಿಗೂ ಸಮಸ್ಯೆ ಎದುರಾಗಿದೆ. ಆದರೆ ಈಗ ಈ ಧಾರಾವಾಹಿಯ ಕತೆ ನಮಗೆ ಬೇಡ. ಬಟ್, ಆ ಕಥೆಯಲ್ಲಿ ಜೀವನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟನ ಬಗ್ಗೆ ತಿಳಿಯೋಣ.

'ಅಮೃತಧಾರೆ' ಧಾರಾವಾಹಿಯಲ್ಲಿ ಮಹಿಮಾ ಕಾಟ ತಡೆದುಕೊಂಡಿರುವ ಪಾಪದ ಹುಡುಗ ಬೇರೆ ಯಾರೂ ಅಲ್ಲ. ಇವರ ಹೆಸರು ಶಶಿ ಹೆಗಡೆ. ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿಯವರಾಗಿರುವ ಶಶಿ ಕೆಲ ವರ್ಷಗಳಿಂದ ಕಿರುತೆರೆಯಲ್ಲಿ ಇದ್ದಾರೆ. ಶಶಿ ಅವರ ಕುಟುಂಬ ಶಿರಸಿಯಲ್ಲೇ ನೆಲೆಸಿದ್ದು, ಇವರಿಗೆ ಶ್ವಾನ ಎಂದರೆ ಬಹಳ ಪ್ರೀತಿ. ಮನೆಯಲ್ಲಿ ಶ್ವಾನಗಳನ್ನು ಸಾಕಿದ್ದಾರೆ. ಆದರೆ, ಶಶಿ ಅವರು ಬೆಂಗಳೂರಿನಲ್ಲಿ ಹೆಂಡತಿ ಜೊತೆಗೆ ವಾಸವಿದ್ದಾರೆ. ಇವರ ಪತ್ನಿ ಕೂಡ ಕಿರುತೆರೆ ನಟಿಯಾಗಿದ್ದಾರೆ.
ಒಟ್ಟಿಗೆ ನಟಿಸಿ ಜೊತೆಯಾದ ಜೋಡಿ
ಕಳೆದ ವರ್ಷವಷ್ಟೇ ಇಬ್ಬರೂ ಸಪ್ತಪದಿ ತುಳಿದಿದ್ದು, ಇಬ್ಬರೂ ಇನ್ ಸ್ಟಾಗ್ರಾಂ ಪೇಜ್‌ನಲ್ಲಿ ರೀಲ್ಸ್ ಗಳನ್ನು ಹಾಕುತ್ತಿರುತ್ತಾರೆ. 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಪೂರ್ಣಿಮಾ ಪಾತ್ರವನ್ನು ನಿರ್ವಹಿಸುತ್ತಿರುವ ನಟಿ ಲಾವಣ್ಯ ಅವರನ್ನೇ ಶಶಿ ಅವರು ವಿವಾಹವಾಗಿದ್ದಾರೆ. ಇವರಿಬ್ಬರೂ 'ರಾಜಾ-ರಾಣಿ' ಧಾರಾವಾಹಿಯಲ್ಲಿ ಪರಿಚಯವಾಗಿ ನಂತರ ಪ್ರೀತಿಸಲು ಶುರು ಮಾಡಿದರು. ರಾಜ-ರಾಣಿ ಧಾರಾವಾಹಿಯಲ್ಲಿ ಅಣ್ಣ-ತಂಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಷ್ಟೇ ಅಲ್ಲದೇ, ಸಹವಾಸ ದೋಷ ಎಂಬ ಕಿರುಚಿತ್ರದಲ್ಲೂ ಒಟ್ಟಿಗೆ ನಟಿಸಿದ್ದರು. 'ಕಂಟೆಂಟ್ ಕಾರ್ಟ್' ಯೂಟ್ಯೂಬ್ ಚಾನೆಲ್‌ನಲ್ಲಿ ವೀಡಿಯೋಗಳನ್ನು ಮಾಡಿ ಅಪ್ ಲೋಡ್ ಮಾಡುತ್ತಿರುತ್ತಾರೆ.
ಡಿಫರೆಂಟ್ ಪ್ರೇಮ ಕಥೆ
ಇನ್ನು ಶಶಿ ಬಹಳ ವರ್ಕೌಟ್ ಮಾಡುತ್ತಿರುತ್ತಾರೆ. ಇದರ ವೀಡಿಯೋಗಳನ್ನು ಕೂಡ ಅಪ್ ಲೋಡ್ ಮಾಡುತ್ತಿರುತ್ತಾರೆ. ಇವರಿಬ್ಬರ ಪ್ರೇಮ ಕಥೆಯೇ ಡಿಫರೆಂಟ್ ಆಗಿದೆ. ಇಬ್ಬರೂ ಕಿರುತೆರೆ ಮೂಲಕ ಪರಿಚಯವಾಗಿ ಸ್ನೇಹಿತರಾಗಿಯೇ ಇದ್ದರಂತೆ. ಶಶಿಗೆ ಲಾವಣ್ಯ ಭಾರಧ್ವಜ್ ಮೇಲೆ ಲವ್ ಆದ ನಂತರ ಪ್ರಪೋಸ್ ಮಾಡಿದ್ದಾರೆ. ಆದರೆ, ಲಾವಣ್ಯ ಅವರಿಗೆ ಸ್ನೇಹಿತ ಪ್ರಪೋಸ್ ಮಾಡಿದ ಕೂಡಲೇ ಶಾಕ್ ಆಗಿ ಸ್ವಲ್ಪ ಸಮಯ ತೆಗೆದುಕೊಂಡಿದ್ದಾರೆ.

ಪ್ರೀತಿಸಿ ಮದುವೆಯಾದ ಜೋಡಿ
ಲಾವಣ್ಯ ಉತ್ತರಕ್ಕೆ ಕಾಯದ ಶಶಿ ಅವರು ಸೀದಾ ಲಾವಣ್ಯ ಅವರ ಪೋಷಕರಿಗೆ ವಿಷಯ ತಿಳಿಸಿ ಮದುವೆಗೆ ಒಪ್ಪಿಗೆ ಪಡೆದಿದ್ದಾರೆ. ಆದರೆ, ಕೊರೊನಾ ಹಾವಳಿ ಹಿನ್ನೆಲೆ ತಡವಾಗಿ ಮದುವೆ ಮಾಡಿಕೊಂಡಿದ್ದಾರೆ. ಇನ್ನು ಕೊರೊನಾ ಸಂದರ್ಭದಲ್ಲಿ ಲಾವಣ್ಯ, ಶಶಿ ಅವರ ಶಿರಸಿ ಮನೆಯಲ್ಲಿ ಕೆಲಕಾಲ ಲಾಕ್ ಆಗಿದ್ದರಂತೆ. ಸದ್ಯ ಇಬ್ಬರೂ ಕೂಡ ಜೀ ಕನ್ನಡ ವಾಹಿನಿಯಲ್ಲಿ ಬರುತ್ತಿರುವ ಬೇರೆ ಬೇರೆ ಧಾರಾವಾಹಿಗಳಲ್ಲಿ ಬ್ಯುಸಿಯಾಗಿದ್ದಾರೆ.


Click it and Unblock the Notifications











