Amruthadhaare ; ಲಕ್ಷ್ಮೀಕಾಂತ್ ಮುಂದೆ ಕಳಚಿ ಬಿತ್ತು ಜೈದೇವ್ ಮುಖವಾಡ, ಮಲ್ಲಿ ಮದುವೆ ನಿಂತೋಗುತ್ತಾ ?
"ಅಮೃತಧಾರೆ" ಧಾರಾವಾಹಿಯಲ್ಲಿ ಮಲ್ಲಿ ಮದುವೆ ಸಂಭ್ರಮ ನಡೆಯುತ್ತಿದೆ. ಆದರೆ ತಾನು ಮದುವೆಯಾಗುತ್ತಿರುವ ಹುಡುಗ ಸುನಿ ಬೇರೆ ಯಾರು ಅಲ್ಲ ಬದಲಿಗೆ ತನ್ನ ಗಂಡ ಜೈದೇವ್ ನ ಪೈಲ್ವಾನ್ ಎನ್ನುವ ವಿಷಯ ಮಲ್ಲಿಗೆ ಗೊತ್ತಿಲ್ಲ. ಈ ಮದುವೆಯ ಸಂಪೂರ್ಣ ಪ್ರಸಂಗ ಜೈದೇವ್ ರಚಿಸಿದ ಕಥೆ ಎನ್ನುವುದು ಕೂಡ ಗೌತಮ್ ಮತ್ತು ಭೂಮಿಕಾಗೆ ಗೊತ್ತಿಲ್ಲ.
ಸತ್ಯಾನ್ವೇಷಣೆಯನ್ನು ಸರಿಯಾಗಿ ಮಾಡದೇ ಎಲ್ಲರೂ ಮದುವೆಯಲ್ಲಿ ಮುಳುಗಿದ್ದಾರೆ. ಹೀಗಿರುವಾಗ ಇದೀಗ ಪಾರ್ಥ ಮತ್ತು ಅಪೇಕ್ಷಾ ಕೂಡಾ ಈ ಸಂಭ್ರಮದಲ್ಲಿ ಭಾಗಿಯಾಗಲು ಮುಂದಾಗಿದ್ದಾರೆ. ಬ್ಯಾಗ್ ಸಮೇತ ಮನೆಯ ಹೊರಗಡೆ ಕಾಲಿಡಲು ಅಣಿಯಾಗಿದ್ದಾರೆ. ಈ ಸಮಯದಲ್ಲಿ ಲಕ್ಷ್ಮೀಕಾಂತ್ ಅಡ್ಡಗಾಲು ಹಾಕಿದ್ದಾನೆ. ಎಲ್ಲಿಗೆ ಪಯಣ ಯಾವುದು ದಾರಿ ಎಂದು ಕೇಳಿದ್ದಾನೆ.

ಇದಕ್ಕೆ ಪಾರ್ಥ ಸುಳ್ಳು ಹೇಳಿದ್ದು ಮಲ್ಲಿ ಮದುವೆ ವಿಚಾರವನ್ನು ಲಕ್ಷ್ಮೀಕಾಂತ್ ಬಾಯಿ ಬಿಟ್ಟಿದ್ದಾನೆ. ಈ ಮಾತನ್ನು ದಿಯಾ ಕೇಳಿಸಿಕೊಂಡು ಶಾಕ್ ಆಗಿದ್ದಾಳೆ. ಗಾಬರಿಯಲ್ಲಿಯೇ ಜೈದೇವ್ ಬಳಿ ಈ ವಿಚಾರ ಚರ್ಚೆ ಮಾಡಿದ್ದಾಳೆ.
ಆದರೆ ತನ್ನ ಗಂಡ ಕಿಲಾಡಿ, ಇಡೀ ಕಥೆಯ ಸೂತ್ರಧಾರಿ ಎನ್ನುವ ವಿಚಾರ ದಿಯಾಗೆ ಗೊತ್ತಿಲ್ಲ. ಹೀಗಾಗಿ ದಿಯಾ ಹೇಳಿದ ಸುದ್ದಿ ಕೇಳಿ ವಿಚಲಿತವಾಗದ ಜೈದೇವ್ ಸಮಾಧಾನವಾಗಿದ್ದಾನೆ. ಮದುವೆ ವಿಷಯ ನನಗೆ ಗೊತ್ತು ಇಷ್ಟೇ ಅಲ್ಲ ಮದುವೆಯಾಗುತ್ತಿರುವ ಹುಡುಗ ಕೂಡ ನನಗೆ ಗೊತ್ತು ಎಂದು ಹೇಳಿದ್ದಾನೆ. ಜೈದೇವ್ ಆಡಿದ ಈ ಮಾತು ಕೇಳಿ ದಿಯಾ ಬೆಚ್ಚಿ ಬಿದ್ದಿದ್ದಾಳೆ.
ಇದೇ ಸಮಯದಲ್ಲಿ ಜೈದೇವ್ ಮತ್ತು ದಿಯಾ ಮಾತುಕತೆಯನ್ನು ಲಕ್ಷ್ಮೀಕಾಂತ್ ಕೇಳಿಸಿಕೊಂಡು ಗಾಬರಿ ಬಿದ್ದಿದ್ದಾನೆ. ಈ ವಿಚಾರವನ್ನು ಹೇಗಾದರೂ ಮಾಡಿ ಆನಂದಪ್ಪಗೆ ಹೇಳಬೇಕು ಎಂದು ಅಲ್ಲಿಂದ ತಲೆ ಕೆರೆದುಕೊಂಡು ಪೇರಿ ಕಿತ್ತಿದ್ದಾನೆ.
ಮುಂದೇನು..?
ಸದ್ಯ ಲಕ್ಷ್ಮೀಕಾಂತ್‌ಗೆ ಇದೆಲ್ಲವೂ ಜೈದೇವ್ ಪ್ಲಾನ್ ಎನ್ನುವ ವಿಚಾರ ಗೊತ್ತಾಗಿದೆ. ಈ ಹಿನ್ನೆಲೆ ಈಗ ಪ್ರೇಕ್ಷಕರಲ್ಲಿ ಕುತೂಹಲ ಗರಿಗೇದರಿದೆ. ಒಂದು ವೇಳೆ ಲಕ್ಷ್ಮೀಕಾಂತ್ ಸತ್ಯವನ್ನು ಆನಂದ್ ಗೆ ಹೇಳಿದರೆ ಆ ನಂತರ ಏನಾಗುತ್ತೆ..? ಎನ್ನುವ ಪ್ರಶ್ನೆ ಸದ್ಯ ಹಲವರಲ್ಲಿದೆ. ಸತ್ಯ ಗೊತ್ತಾದ ಮೇಲೂ ಕೂಡ ಮಲ್ಲಿಯ ಹೃದಯ ಮತ್ತೆ ನುಚ್ಚು ನೂರಾಗಬಾರದು ಎಂದು ಗೌತಮ್ ಎಲ್ಲವನ್ನೂ ಸಹಿಸಿಕೊಂಡು ಮದುವೆ ಮಾಡಿಸುತ್ತಾನಾ..? ಗೌತಮ್ ದಿವಾನ್‌ಗೆ ದ್ರೋಹ ಬಗೆಯುತ್ತಿರುವ ಸುನಿಗೆ ಜ್ಞಾನೋದಯವಾಗಿ ಎಲ್ಲ ಸತ್ಯವನ್ನು ಲಕ್ಷ್ಮೀಕಾಂತ್ ಹೇಳುವ ಮೊದಲೇ ಹೇಳುತ್ತಾನಾ..? ಮಲ್ಲಿ ಮತ್ತು ಸುನಿ ಮದುವೆ ನಡೆಯುತ್ತಾ..? ಅಥವಾ ಜೈದೇವ್ ಪ್ಲಾನ್ ವರ್ಕ್ ಆಗಿ ಮದುವೆ ಮುರಿದು ಬಿದ್ದು, ಮಲ್ಲಿಯ ಕನಸೆಲ್ಲವೂ ಭಗ್ನವಾಗುತ್ತಾ..? ಎನ್ನುವುದನ್ನು ಕಾದು ನೋಡಬೇಕಿದೆ.
ಪ್ರೇಕ್ಷಕರ ಅಭಿಪ್ರಾಯ
ಸದ್ಯ ಪ್ರೋಮೋ ನೋಡಿ ಹಲವರು ತಮ್ಮ ತಮ್ಮ ಮನದ ಮಾತುಗಳನ್ನು ಹಂಚಿಕೊಳ್ಳುತ್ತಿದ್ದು, ಮಲ್ಲಿ ಮದುವೆ ಆಗೋಲ್ಲ ಜೆಡಿ ಪ್ಲಾನ್ ಮತ್ತೆ ಪ್ಲಾಪ್ ಆಗುತ್ತೆ ಮದುವೆ ಗಂಡು ಎಲ್ಲಾ ನಿಜ ಹೆಳ್ತಾನೆ, ಮಲ್ಲಿ ಮದುವೆ ಸುನೀಲ್ ಜೊತೇಲಿ ಆಗುತ್ತೆ, ದಯವಿಟ್ಟು ಇನ್ನೂ ಧಾರಾವಾಹಿಯನ್ನು ಎಳೆಯಬೇಡಿ ಆದಷ್ಟು ಬೇಗ ಮಂಗಳ ಹಾಡಿ, ನಿನ್ನ ಮದುವೆಯಾಗಲ್ಲ, ಮಲ್ಲಿ ಮದುವೆ ಆದರೆ ಈ ದಿಯಾ ಗೆ ಏನು ಬಾಧೆ, ಮಲ್ಲಿ ಮದುವೆ ನಿಲ್ಲುತ್ತೆ ಮಲ್ಲಿ ಮದುವೆ ಗೆ ಬಂದವನು ಕೋಟ್ಯಧಿಪತಿ ಅವನು ತಾಳಿ ಕಟ್ಟಬೇಕು. ಆಗ ಜೆಡಿ ಹೊಟ್ಟೆ ಉರಿದು ಕೊಳ್ಳುತ್ತಾನೆ, ಎಂದೆಲ್ಲ ಹಲವರು ಕಾಮೆಂಟ್ ಮಾಡುತ್ತಿದ್ದಾರೆ. ಮುಂದೇನಾಗುತ್ತೆ..? ಎನ್ನುವುದನ್ನು ಕಾದು ನೋಡಬೇಕಿದೆ. ''ಅಮೃತಧಾರೆ'' ಸದ್ಯ ಕುತೂಹಲದ ಹಂತವನ್ನು ತಲುಪಿದೆ.


Click it and Unblock the Notifications











