Amruthadhaare ; ಕೊನೆಗೂ ಕಳಚಿತು ಶಕುಂತಲಾ ಮುಖವಾಡ - ಸೀರಿಯಲ್ ಮತ್ತೆ ರೀಸ್ಟಾರ್ಟ್?
ಬೇವಿನ ಗಿಡಕ್ಕೆ ದಿನವೂ ನೀರಿನ ಬದಲು ಜೇನುತುಪ್ಪ ಹಾಕಿದರೆ, ಬೇವಿನ ಗಿಡ ಅದರ ಕಹಿಯನ್ನು ಕಳೆದುಕೊಳ್ಳುವುದಿಲ್ಲ. ಸಿಹಿಯನ್ನು ನೀಡುವುದಿಲ್ಲ. ಹಾಗೆಯೇ ಮನುಷ್ಯನ ಹುಟ್ಟು ಗುಣ ಸುಟ್ಟರೂ ಹೋಗುವುದಿಲ್ಲ. ಇದಕ್ಕೆ ಸದ್ಯ ಕಿರುತೆರೆ ಪ್ರೇಕ್ಷಕರ ಕಣ್ಣೆದುರು ಇರುವಂತಹ ಪಾತ್ರವೇ ''ಅಮೃತಧಾರೆ''ಯ ಶಕುಂತಲಾಳದ್ದು.
ಹೌದು, ''ಅಮೃತಧಾರೆ'' ಧಾರಾವಾಹಿಯಲ್ಲಿ ಮಿಂಚು ಮತ್ತು ಆಕಾಶ್ ಬರ್ತ್‌ಡೇ ಸಂಭ್ರಮ ಮನೆ ಮಾಡಿತ್ತು. ಆದರೆ. ಅದೇ ಸಮಯದಲ್ಲಿ ಅಲ್ಲಿ ಜೋಕರ್ ವೇಷದಲ್ಲಿ ಕೇಡಿ ಜೈದೇವ್ ಬಂದಿದ್ದ. ಜ್ಯೂಸ್‌ನಲ್ಲಿ ನಿದ್ದೆ ಮಾತ್ರೆ ಹಾಕಿ ಎಲ್ಲರ ಪ್ರಜ್ಞೆ ತಪ್ಪಿಸಿ, ಮಿಂಚುನ ಮತ್ತೆ ಕಿಡ್ನಾಪ್ ಮಾಡುವ ಪ್ಲಾನ್ ಅವನದ್ದಾಗಿತ್ತು.

ಆದರೆ, ಈ ಲೆಕ್ಕಾಚಾರ ಬುಡಮೇಲಾಗಿತ್ತು. ಕೇಕ್‌ನಲ್ಲಿ ಬಾಂಬ್ ಇರುವ ವಿಚಾರ ಪೊಲೀಸರಿಂದ ಗೌತಮ್ ಗೆ ಗೊತ್ತಾಗಿತ್ತು. ಇದರಿಂದ ಕೆರಳಿದ್ದ ಶಕುಂತಲಾ ಮಕ್ಕಳ ಜನ್ಮದಿನ ಅಂತಲೂ ನೋಡದೆ ಅವರು ಕಟ್ ಮಾಡಬೇಕಾಗಿದ್ದ ಕೇಕ್‌ನಲ್ಲಿ ಬಾಂಬ್ ಇಟ್ಟಿದ್ದೀಯಲ್ಲ, ಎಷ್ಟು ಧೈರ್ಯ ನಿನಗೆ ಅಂತ ಜೈದೇವ್‌ಗೆ ಕಪಾಳಮೋಕ್ಷ ಮಾಡಲು ಮುಂದಾಗಿದ್ದಳು. ಪೊಲೀಸರನ್ನ ಕರೆದೊಯ್ದು ಇವನೇ ನಮ್ಮ ಮನೆಗೆ ಬಂದು ಬಾಂಬ್ ಇರಿಸಿದ್ದು, ನಾನೇ ಅದಕ್ಕೆ ಸಾಕ್ಷಿ ಅರೆಸ್ಟ್ ಮಾಡಿ ಅಂತ ಜೈಲಿಗೆ ಕಳಿಸಿದ್ದಳು.
ಆಗಲೇ ಹೇಳಿದಂತೆ ಹುಟ್ಟು ಗುಣ ಸುಟ್ಟರೂ ಹೋಗುವುದಿಲ್ಲ. ಶಕುಂತಲಾ ಕುರಿ ಚರ್ಮ ಹೊದ್ದ ತೋಳ. ಈ ಮಾತು ಮತ್ತೊಮ್ಮೆ ಸಾಬೀತಾಗಿದ್ದು ಪುತ್ರ ವ್ಯಾಮೋಹದಲ್ಲಿ ಶಕುಂತಲಾ ಕಣ್ಣು ಕುರುಡಾಗಿದೆ. ಗೌತಮ್-ಭೂಮಿಕಾ ಮೇಲಿನ ಸೇಡಿನ ಜ್ವಾಲೆ ಮಾತ್ರ ಆರದೇ ಇನ್ನೂ ಧಗಧಗಿಸುತ್ತಿದೆ. ಹಗೆತನ ಇಡೀ ಕುಟುಂಬವನ್ನೇ ಬಲಿಪಡೆಯುವ ಹಂತಕ್ಕೆ ಬಂದು ನಿಂತಿದೆ.

ಈ ರೋಚಕ ತಿರುವಿನೊಂದಿಗೆ ''ಅಮೃತಧಾರೆ'' ಈಗ ಹೊಸ ಆಯಾಮ ಪಡೆದುಕೊಂಡಿದೆ. ಸೀರಿಯಲ್ ಇನ್ನೇನು ಮುಗಿಯುತ್ತಾ ಬಂತು ಎಂದುಕೊಂಡವರಿಗೆ ಇದರಿಂದ ಅಚ್ಚರಿ ಕೂಡ ಆಗಿದೆ. ಮುಂದೆ ತಾನೇ ಜೈಲಿಗೆ ಕಳಿಸಿದ ಮಗನನ್ನು ಶಕುಂತಲಾ ಹೊರಗಡೆ ಕರೆತಂದು ಹೊಸ ಸಂಚು ರೂಪಿಸಲು ಶುರು ಮಾಡಿದರೆ ಅಚ್ಚರಿ ಇಲ್ಲ. ಹಾಗೊಂದು ವೇಳೆ ಅಮ್ಮ ಮತ್ತು ಮಗ ಮತ್ತೆ ಸೇರಿದರೆ ''ಅಮೃತಧಾರೆ'' ಮತ್ತೆ ಮೊದಲಿಂದ ಶುರುವಾದಂತೆ.
ಮೊದಲೇ ಊಹಿಸಿದ್ದ ಪ್ರೇಕ್ಷಕರು
ಹಾಗೇ ನೋಡಿದರೆ ಶಕುಂತಲಾಳ ಈ ನಡೆಯನ್ನು ಬುದ್ದಿವಂತ ಪ್ರೇಕ್ಷಕರು ಮೊದಲೇ ಊಹಿಸಿದ್ದರು. ನಾನು ಬದಲಾಗಿದ್ದೇನೆ ಎಂದು ಶಕುಂತಲಾ ಹೇಳಿದಾಗ ಪ್ರೇಕ್ಷಕರು ನಂಬಿರಲಿಲ್ಲ. ಶಕುಂತಲಾ ದೇವಿದು ನಾಟಕಾನೇ ಇರುತ್ತದೆ. ನಂಬಬೇಡಿ, ಯಾಕೋ ಶಕುಂತಲಾ ನಾಟಕ ಮಾಡ್ತಾ ಇದ್ದಾಳೆ ಅನ್ನಿಸುತ್ತಿದೆ ಯಾರು ಇದನ್ನ ನಂಬಬಾರದು ಹಾಗೇ ಮೋಸ ಹೋಗ್ಬಾರ್ದು ಅನ್ನೋದೇ ನನ್ನ ಸಲಹೆ. ಶಕುಂತಲಾ ಎರಡನೇಯ ಇನ್ನಿಂಗ್ಸ್ ಆರಂಭ ,ಗುಂಡು ಡಕ್ ಔಟ್ ಆಗೋದು ನಿಶ್ಚಿತ,ಚತುರ ನಿರ್ದೇಶಕ. ಶಕುಂತಲಾದು ಡ್ರಾಮಾ ಇನ್ನೂ ಹತ್ತು ವರ್ಷ ಸೀರಿಯಲ್ ಗ್ಯಾರಂಟಿ. ಶಕುಂತಲಾ ನಾಟಕ ನೋಡಿ ಮೋಸ ಹೋಗಬೇಡಿ ಹಾವುಗೆ ಹಾಲು ಹಾಕಿದ್ದಾರೆ ಅದು ಕಚ್ಚದೇ ಬಿಡುವದಿಲ್ಲ ಹಾಗೆ ಇವಳು ಆದಷ್ಟು ಹುಶಾರಾಗಿ ಇರಬೇಕು. ಹೀಗೆ ಹಲವರು ತಮ್ಮ ತಮ್ಮ ಮನದ ಮಾತುಗಳನ್ನು ಕಾಲ ಕಾಲಕ್ಕೆ ಹಂಚಿಕೊಳ್ಳುತ್ತಲೇ ಬಂದಿದ್ದರು. ಕೊನೆಗೂ ಪ್ರೇಕ್ಷಕರ ಲೆಕ್ಕಾಚಾರವೇ ನಿಜವಾಗಿದೆ.
ಒಟ್ನಲ್ಲಿ ಹಗೆತನ, ದ್ವೇಷ, ಸೇಡಿನ ಕಥೆ ''ಅಮೃತಧಾರೆ''ಯಲ್ಲಿ ಇನ್ನೂ ಮುಗಿದಿಲ್ಲ. ಅಮ್ಮ ಮತ್ತು ಮಗನ ಕುತಂತ್ರಕ್ಕೆ ಇನ್ನೂ ಬ್ರೇಕ್ ಬಿದ್ದಿಲ್ಲ. ಇನ್ನು ಮಾವ ಲಕ್ಷ್ಮೀಕಾಂತನಿಗಾದ ಜ್ಞಾನೋದಯವಾದರೂ ನಿಜಾನಾ..? ಅಥವಾ ಆತ ಕೂಡ ಬದಲಾಗಿಲ್ವಾ..? ಎನ್ನುವ ಪ್ರಶ್ನೆ ಕೂಡ ಈಗ ಮತ್ತೆ ಹಲವರಲ್ಲಿದೆ. ಮೊದಲಿಂದ ಗೌತಮ್ ಮತ್ತು ಭೂಮಿಕಾನ ಮೂರ್ಖರನ್ನಾಗಿಸುತ್ತಾ ಬಂದಿರುವ ಶಕುಂತಲಾ ಈ ಬಾರಿ ಎಂತಹ ಬಲೆ ಬೀಸುತ್ತಾಳೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications