Amruthadhaare ; ಜೈಲು ಸೇರ್ತಾನಾ ಜೈದೇವ್ : ದಿಯಾ, ಮಲ್ಲಿ ಇಬ್ಬರಿಗೂ ಅನ್ಯಾಯ..!
ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ತಮ್ಮ ಹಿಂದೆ ಅವಿತಿರುವ ಹಿತಶತ್ರುಗಳ ಬಗ್ಗೆಯೇ ಆಲೋಚಿಸುತ್ತಾ ಮುಳುಗಿ ಹೋಗಿದ್ದಾಳೆ. ಗೌತಮ್ ಮೈಕ್ ಇಟ್ಟವರು ಯಾರು. ಅಂತಹ ಅವಶ್ಯಕತೆ ಯಾರಿದ್ದಾರೆ ಎಂದು ಹುಡುಕಾಡುವ ಕೆಲಸ ಮಾಡುತ್ತಿದ್ದಾನೆ. ಅಲ್ಲದೇ, ಗೌತಮ್ ಗೆ ರಾಜೇಂದ್ರ ಭೂಪತಿ ಮೇಲೆ ಅನುಮಾನವಿದೆ.ಆದರೆ, ರಾಜೇಂದ್ರ ಭೂಪತಿಯ ಗುರಿಯೇ ಬೇರೆ ಇದೆ. ನೇರವಾಗಿ ಗುದ್ದಾಡಲು ಬಯಸುವ ರಾಜೇಂದ್ರನಿಗೂ ಮನೆಯಲ್ಲೇ ಇದ್ದುಕೊಂಡು ಮೋಸ ಮಾಡುತ್ತಿರುವ ಶಕುಂತಲಾಳಿಗೂ ಬಹಳ ವ್ಯತ್ಯಾಸವಿದೆ.
ಮದುವೆಯಾಗುವ ಧೈರ್ಯ ಮಾಡಿದ ಜೈದೇವ್
ದಿಯಾ ಒತ್ತಾಯಕ್ಕೆ ಮಣಿದು ಜೈದೇವ್ ಮದುವೆಯಾಗುವ ಧೈರ್ಯ ಮಾಡಿದ್ದಾನೆ. ಮನೆಯಲ್ಲಿ ಎಲ್ಲರ ಎದುರು ಮಲ್ಲಿ ತನಗಿಷ್ಟವಿಲ್ಲ ಎಂದು ಹೇಳಲು ಹೆದರುವ ಜೈದೇವ್, ಈಗ ಕದ್ದು ಮುಚ್ಚಿ ಪ್ರೀತಿಸುತ್ತಿರುವ ದಿಯಾಳನ್ನು ಮದುವೆಯಾಗಲು ಮುಂದಾಗಿದ್ದಾನೆ. ಮಲ್ಲಿಗೆ ಡಿವೋರ್ಸ್ ಕೊಡದೆಯೇ ಮತ್ತೊಂದು ಮದುವೆಯಾಗಿ ದೊಡ್ಡ ತಪ್ಪು ಮಾಡುತ್ತಿದ್ದಾನೆ. ಇರುವುದರಲ್ಲೇ ಖುಷಿ ಪಡುವ ಬದಲು, ತಾನು ಮಾಡಿದ ತಪ್ಪನ್ನು ಒಪ್ಪಿಕೊಳ್ಳುವ ಬದಲು ಜೈದೇವ್ ಪದೇ ಪದೇ ಅಡ್ಡೆ ದಾರಿ ಹಿಡಿಯುತ್ತಿದ್ದಾನೆ. ಜೈದೇವ್ ಗೆ ಎಷ್ಟು ಸಾರಿ ಬುದ್ಧಿ ಹೇಳಿದರೂ, ತಪ್ಪು ದಾರಿ ಹಿಡಿಯದಂತೆ ತಿಳಿ ಹೇಳಿದರೂ ಕೇಳುತ್ತಿಲ್ಲ. ತನ್ನದೇ ಆಲೋಚನೆಗಳು ಸರಿ ಎಂಬಂತೆ ನಡೆದುಕೊಳ್ಳುತ್ತಿದ್ದಾನೆ. ಗೌತಮ್ ಮಾಡಿದ ಎಲ್ಲಾ ಪ್ರಯತ್ನಗಳನ್ನೂ ವ್ಯರ್ಥವಾಗುವಂತೆ ಮಾಡಿದ್ದಾನೆ.

ಕ್ಷಮೆಯೇ ಇಲ್ಲದ ತಪ್ಪು ಮಾಡುತ್ತಿರುವ ಜೈದೇವ್
ಇಷ್ಟು ದಿನಗಳ ಕಾಲ ಜೈದೇವ್ ಬಹಳ ದೊಡ್ಡ ದೊಡ್ಡ ತಪ್ಪುಗಳನ್ನೇ ಮಾಡಿದ್ದಾನೆ. ಕ್ಷಮಿಸಲಾರದಂತಹ, ಶಿಕ್ಷಿಸುವಂತಹ ಕೆಲಸ ಮಾಡಿದ್ದಾನೆ. ಭೂಮಿಕಾಳನ್ನು ಕೊಲ್ಲಲು ಯತ್ನಿಸಿದ, ಮಲ್ಲಿಯ ಹೊಟ್ಟೆಯಲ್ಲಿರುವ ಮಗುವನ್ನು ಸಾಯಿಸಲು ಶತಪ್ರಯತ್ನ ಮಾಡಿದ. ಅಪೇಕ್ಷಾ ಮತ್ತು ಪಾರ್ತನ ಜೀವ ತೆಗೆಯಲು ಮುಂದಾದ, ಆನಂದ್ ಜೀವದ ಜೊತೆಗೆ ಆಡಬಾರದ ಆಟವಾಡಿದ. ಅಲ್ಲದೇ, ತಮ್ಮ ಮನೆಯ ಕಂಪನಿಯಲ್ಲೇ ಸಾಕಷ್ಟು ಗೋಲ್ ಮಾಲ್ ಗಳನ್ನು ಮಾಡಿದ. ಆದರೂ ಕೂಡ ತಮ್ಮ ಬುದ್ಧಿ ಕಲಿಯುತ್ತಾನೆ ಎಂದು ಗೌತಮ್ ಕ್ಷಮಿಸಿದ. ಆದರೆ, ಈಗ ಮತ್ತೊಂದು ಮದುವೆಯಾಗಿ ಇನ್ನೊಂದು ತಪ್ಪು ಮಾಡಲು ಮುಂದಾಗಿದ್ದಾನೆ.
ಮಲ್ಲಿ, ದಿಯಾ ಇಬ್ಬರಿಗೂ ಅನ್ಯಾಯವಾಗುತ್ತಾ..?
ಜೈದೇವ್ ನ ಈ ಮದುವೆ ನಿರ್ಧಾರದಿಂದ ಇಬ್ಬರ ಬದುಕಿಗೆ ತೊಂದರೆಯಾಗಲಿದೆ. ಒಂದು ಕಡೆ ಜೈದೇವ್ ನನ್ನೇ ನಂಬಿ ಪ್ರೀತಿಸಿ ಮದುವೆಯಾಗುತ್ತಿರುವ ದಿಯಾ ಮುಂದೆ ಬಹಳ ಕಷ್ಟ ಪಡಬೇಕಾಗುತ್ತದೆ. ಈಗಾಗಲೇ ಭೂಮಿಕಾ ಮತ್ತು ಗೌತಮ್ ನಿಂದ ಬುದ್ಧಿ ಹೇಳಿಸಿಕೊಂಡಿದ್ದರೂ ದಿಯಾ ಅವರ ಮಾತಿಗೆ ಕೊಂಚವೂ ಬೆಲೆ ಕೊಟ್ಟಿಲ್ಲ. ಇತ್ತ ತನ್ನ ದಡ್ಡತನದಿಂದ ಈಗಾಗಳೇ ಸಾಕಷ್ಟು ಸಂಕಷ್ಟವನ್ನು ಅನುಭವಿಸಿರುವ ಮಲ್ಲಿಗೂ ಜೈದೇವ್ ನ ನಡವಳಿಕೆಯಿಂದ ಅನ್ಯಾಯವಾಗಿದೆ. ಇವರಿಬ್ಬರಿಗೂ ಜೈದೇವ್ ನಿಂದ ಮೋಸವಾಗಿದ್ದು, ಗೌತಮ್ ಯಾವ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳಬಹುದು ಎಂಬ ಕುತೂಹಲ ಮೂಡಿದೆ.
ಜೈಲು ಪಾಲಾಗುತ್ತಾನಾ ಜೈದೇವ್..?
ದೇವಸ್ಥಾನದಲ್ಲಿ ಮದುವೆಯಾಗುತ್ತಿರುವ ಜೈದೇವ್ ಮತ್ತು ದಿಯಾಳನ್ನು ಕಂಡ ಮಲ್ಲಿ, ಶ್ರಾವಣಿಯನ್ನು ಕರೆಸಿ ಮದುವೆ ನಿಲ್ಲಿಸಿದ್ದಾಳೆ. ಈಗ ಜೈದೇವ್ ಜೈಲು ಪಾಲಾಗುವ ಎಲ್ಲಾ ಸಾಧ್ಯತೆಗಳು ಕಾಣುತ್ತಿದೆ. ಹಾಗೇನಾದರೂ ಆದರೆ, ಮಲ್ಲಿ ಗಂಡನಿಲ್ಲದೇ ಒಂಟಿಯಾದರೆ, ದಿಯಾ ಪ್ರಿಯಕರನಿಂದ ದೂರ ಉಳಿಯಬೇಕಾಗುತ್ತದೆ. ಇನ್ನು ಗೌತಮ್ ದಿವಾನ್ ಕುಟುಂಬಕ್ಕೆ ಇದರಿಂದ ದೊಡ್ಡ ಆಘಾತವಾಗಲಿದ್ದು, ಅವಮಾನವನ್ನು ಎದುರಿಸುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಇನ್ನು ಶಕುಂತಲಾ ಮಗನ ಸ್ಥಿತಿಯನ್ನು ಕಂಡು ಈ ಬಾರಿ ಏನು ಮಾಡುತ್ತಾಳೆ. ಹೇಗೆ ತನ್ನನ್ನು ಹಾಗೂ ತನ್ನ ಮಗನನ್ನು ಸೇವ್ ಮಾಡುತ್ತಾಳೆ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











