Amruthadhaare ; ಗೌತಮ್ ಮನದಲ್ಲಿ ಮನೆ ಮಾಡಿದ ಚಿಂತೆ : ಮಹಿಮಾಳನ್ನು ಕಾಡುತ್ತಿರುವ ದೀಪಾಂಶು..!
ಅಮೃತಧಾರೆ ಧಾರಾವಾಹಿಯಲ್ಲಿ ಜಾತಕ, ಶಾಸ್ತ್ರಗಳ ಮೇಲೆ ಹೆಚ್ಚಿನ ನಂಬಿಕೆ ಇಲ್ಲದ ಭೂಮಿಕಾ, ಮನುಷ್ಯರ ಮೇಲೆ ಅಪಾರವಾದ ವಿಶ್ವಾಸವನ್ನು ಹೊಂದಿದ್ದಾಳೆ. ಇನ್ನು ಮಹಿಮಾ ಸ್ನೇಹಿತರಿಗೆ ಹೆಚ್ಚಿನ ಆದ್ಯತೆಯನ್ನು ಕೊಟ್ಟು ಈಗ ಸಂಕಟದಲ್ಲಿ ಸಿಲುಕಿದ್ದಾಳೆ. ದೀಪಾಂಶು ಬ್ಲ್ಯಾಕ್ ಮೇಲ್ ಮಾಡುತ್ತಿರುವುದರಿಂದ ಆತಂಕಕ್ಕೆ ಒಳಗಾಗಿದ್ದಾಳೆ. ಮಹಿಮಾಳಲ್ಲಿನ ಆತಂಕವನ್ನು ಕಂಡು ಸದಾಶಿವ ಸಮಾಧಾನದ ಮಾತುಗಳನ್ನು ಆಡಿದ್ದಾನೆ. ನಿನಗೇನಾದರೂ ಸಮಸ್ಯೆ ಇದ್ದರೆ ನನ್ನ ಬಳಿ ಹೇಳಿಕೊಳ್ಳಬಹುದು ಎಂದು ಹೇಳುತ್ತಾನೆ.
ಮಹಿಮಾಳನ್ನು ಕಾಡುತ್ತಿರುವ ದೀಪಾಂಶು
ಆದರೆ, ಮಹಿಮಾಳಿಗೆ ತನಗೆ ಎದುರಾಗಿರುವ ಸಮಸ್ಯೆ ತೋರಿಸಿಕೊಳ್ಳಲು ಇಷ್ಟವಾಗುತ್ತಿಲ್ಲ. ಒಳಗೊಳಗೇ ಸಂಕಟವನ್ನು ಅನುಭವಿಸುತ್ತಿದ್ದಾಳೆ. ಆದರೆ, ದೀಪಾಂಶು ಸುಮ್ಮನಿರದೇ, ಮಹಿಮಾಳ ಮನೆಗೆ ಫೋನ್ ಮಾಡಿ ತಲೆ ತಿಂದಿದ್ದಾನೆ. ಅಲ್ಲದೇ ಜೀವನ್ ಗೂ ಫೋನ್ ಮೇಲೆ ಫೋನ್ ಮಾಡಿ ಕಾಟ ಕೊಟ್ಟಿದ್ದಾನೆ. ತಾನು ಹೇಳಿದಂತೆ ಕೇಳದೇ ಹೋದರೆ, ತನ್ನಿಷ್ಟದಂತೆ ನಡೆದುಕೊಳ್ಳದೇ ಹೋದರೆ, ಮಹಿಮಾಳ ಮನೆಯಲ್ಲಿ ಸತ್ಯ ಹೇಳುವುದಾಗಿ ಬೆದರಿಸಿದ್ದಾನೆ. ಮಹಿಮಾಳಿಗೆ ಈಗ ಏನು ಮಾಡಬೇಕು ಎನ್ನುವುದೇ ಅರ್ಥವಾಗುತ್ತಿಲ್ಲ. ದೀಪಾಂಶು ತನ್ನನ್ನು ಪ್ರೀತಿಸುತ್ತಿರುವುದು ತಿಳಿದಾಗಿನಿಂದ ಸಂಕಟದಲ್ಲಿ ಸಿಲುಕಿದ್ದಾಳೆ. ಈ ಪರಿಸ್ಥಿತಿಯಿಂದ ಹೇಗೆ ಹೊರಗೆ ಬರುವುದು ಎಂಬುದು ಕೂಡ ಗೊತ್ತಾಗುತ್ತಿಲ್ಲ.

ತಲೆ ನೋವು ತಂದ ಜಾತಕ
ಇತ್ತ ಮನೆಯನ್ನು ಒಡೆಯಬೇಕು. ಭೂಮಿಕಾ ಬಾಲವನ್ನು ಕಟ್ ಮಾಡಬೇಕು ಎಂದು ಶಕುಂತಲಾ ಮಾಸ್ಟರ್ ಪ್ಲಾನ್ ಮಾಡಿದ್ದಾಳೆ. ತಮ್ಮ ಮನೆಗೆ ಹಲವು ವರ್ಷಗಳಿಂದ ಭವಿಷ್ಯ ಹೇಳುವ ಜ್ಯೋತಿಷಿ ಅಲಿಯಾಸ್ ಗುರುಗಳನ್ನು ಮನೆಗೆ ಕರೆಸಿದ್ದಾಳೆ. ಅವರ ಕೈಗೆ ಹಣವಿಟ್ಟು, ತಾನು ಹೇಳಿಕೊಟ್ಟಂತೆ ಹೇಳಬೇಕು ಎಂದಿದ್ದಾಳೆ. ಗುರುಗಳು ಎಲ್ಲರ ಎದುರಿನಲ್ಲೂ ಜಾತಕವೆಲ್ಲಾ ಚೆನ್ನಾಗಿದೆ. ಯಾರಲ್ಲೂ ಸಮಸ್ಯೆ ಇಲ್ಲ ಎಂದು ಹೇಳಿ, ಗೌತಮ್ ಹಾಗೂ ಶಕುಂತಲಾ ಇಬ್ಬರೂ ಇರುವಾಗ ಮಹಾ ಸುಳ್ಳನ್ನು ಹೇಳಿದ್ದಾರೆ. ಭೂಮಿಕಾ ಹಾಗೂ ನೀನು ಒಟ್ಟಿಗೆ ಇರಬಾರದು. ಭೂಮಿಕಾಳಿಗೆ ಮಗುವಾದರೆ ಮನೆಗೆ ದೊಡ್ಡ ಕಂಟಕ ಎದುರಾಗುತ್ತದೆ. ಭೂಮಿಕಾ ಸಾವನ್ನು ಕರೆದಂತಾಗುತ್ತದೆ. ಇಷ್ಟೊತ್ತಿಗಾಗಲೇ ಭೂಮಿಕಾಳಿಗೆ ತೊಂದರೆ ಆಗಬೇಕಿತ್ತು. ಆದರೆ, ಗೌತಮ್ ಜಾತಕದ ಬಲದಿಂದ ಏನೂ ಸಮಸ್ಯೆ ಆಗಿಲ್ಲ ಎಂದು ಹೆದರಿಸಿದ್ದಾನೆ.

ಗೌತಮ್ ನನ್ನು ಯಾಮಾರಿಸುತ್ತಿರುವ ಶಕುಂತಲಾ
ಇದರಿಂದ ಚಿಂತೆಗೊಳಗಾದ ಗೌತಮ್ ತಾಯಿ ಶಕುಂತಲಾ ಬಳಿ ಸಮಸ್ಯೆ ಹಂಚಿಕೊಂಡಿದ್ದಾನೆ. ಗೌತಮ್ ಎದುರು ಶಕುಂತಲಾ ನಾಟಕ ಮಾಡಿದ್ದಾಳೆ. ಗೌತಮ್ ಇನ್ನೊಂದು ಕಡೆ ಭೂಮಿಕಾ ಜಾತಕವನ್ನು ತೋರಿಸೋಣ. ಏನಾದರೂ ಪರಿಹಾರವಿದ್ದಲ್ಲಿ ತಿಳಿದುಕೊಳ್ಳೋಣ ಎಂದು ಕೇಳುತ್ತಾನೆ. ಶಕುಂತಲಾ ಸರಿ ಎಂದು ಹೇಳುತ್ತಾಳೆ. ಆದರೆ, ಗೌತಮ್ ಗೆ ನೀನು ಬರಬೇಡ. ಅವರು ಹೇಳುವ ಕೆಲ ಮಾತುಗಳು ನಿನ್ನಲ್ಲಿ ಗಾಬರಿಯನ್ನುಂಟು ಮಾಡಬಹುದು. ನಾನು ಹೋಗಿ ಬರುತ್ತೇನೆ ಎಂದು ಪುಸಲಾಯಿಸುತ್ತಾಳೆ. ಗೌತಮ್ ಕೂಡ ಶಕುಂತಲಾ ಮಾತನ್ನು ನಂಬಿದ್ದು, ಸದ್ಯ ಆಕೆಯ ಪ್ಲಾನ್ ಕಂಪ್ಲೀಟ್ ಸಕ್ಸಸ್ ಆಗಿದೆ.

ಚಿಂತೆಗೊಳಗಾದ ಗೌತಮ್
ಗುರುಗಳು ಹೇಳಿದ ಮಾತುಗಳು ಗೌತಮ್ ಕಿವಿಯಲ್ಲಿ ಗುಯ್ ಗುಡುತ್ತಿವೆ ಭೂಮಿಕಾಳಿಗೆ ತೊಂದರೆ ಆಗಬಾರದು ಎಂದು ಚಿಂತೆ ಮಾಡುತ್ತಿದ್ದಾನೆ. ಇತ್ತ ಗೌತಮ್ ಗೆ ಇಷ್ಟವೆಂದು ಭೂಮಿಕಾ ಮ್ಯಾಚ್ ನೋಡುತ್ತಾಳೆ. ಆದರೆ, ಗೌತಮ್ ಮನಸೆಲ್ಲಾ ಬೇರೆ ಏನೋ ಯೋಚಿಸುತ್ತಿದೆ. ಭೂಮಿಕಾ ಗೌತಮ್ ನಲ್ಲಿ ಆಗಿರುವ ಬದಲಾವಣೆಯನ್ನು ಗಮನಿಸಿದ್ದು, ಯಾಕೆ ಗೌತಮ್ ಹೀಗಿದ್ದಾನೆ ಎಂಬುದು ಅರ್ಥವಾಗುತ್ತಿಲ್ಲ. ಈ ಪರಿಸ್ಥಿತಿಯಿಂದ ಗೌತಮ್ ಸುಧಾರಿಸುತ್ತಾನಾ..? ಇಲ್ಲ ಸತ್ಯ ತಿಳಿದು ಶಕುಂತಲಾ ಮೇಲೆ ಕಿಡಿಕಾರುತ್ತಾನಾ ಎಂಬ ಕುತೂಹಲವಂತೂ ಮೂಡಿದೆ.


Click it and Unblock the Notifications











