Amruthadhaare ; ಕಹಿ ಸುದ್ದಿ ಕೇಳಿ ಕಂಗಾಲಾದ ಗೌತಮ್ : ಅಣ್ಣನ ಬಗ್ಗೆ ಸಹೋದರಿ ಹೇಳಿದ್ದೇನು..?
ಅಮೃತಧಾರೆ ಧಾರಾವಾಹಿಯಲ್ಲಿ ತಾಯಿ ಮತ್ತು ಸಹೋದರಿ ಮನೆಗೆ ಬರುತ್ತಾರೆ ಎಂದು ಖುಷಿಯಿಂದ ಇದ್ದ ಗೌತಮ್ ಗೆ ಇದ್ದಕ್ಕಿದ್ದ ಹಾಗೆಯೇ ಬರ ಸಿಡಿಲು ಬಡಿದಂತೆ ಆಗಿದೆ. ಧನ್ಯ ತನ್ನ ತಾಯಿ ಬದುಕಿರುವ ಸುದ್ದಿ ಹೇಳಿದ್ಯಾಕೆ ಎಂದು ಗೌತಮ್ ಪೊಲೀಸರನ್ನು ಪ್ರಶ್ನೆ ಮಾಡುತ್ತಾನೆ. ಆಗ ಪೊಲೀಸರು ತುಮಕೂರಿನಿಂದ ನಿಮ್ಮ ತಾಯಿ ಹಾಗೂ ಸಹೋದರಿ ಹೊರಟಿದ್ದರು. ಈ ವಿಚಾರ ತಿಳಿದ ಧನ್ಯಾ ಅವರು ನಿಮ್ಮ ತಾಯಿ ಹಾಗೂ ಸಹೋದರಿ ಬದುಕಿದ್ದಾರೆ ಎಂದಷ್ಟೇ ಭಾವಿಸಿದ್ದರು. ನಾವು ಸರಿಯಾಗಿ ವಿಚಾರಿಸಿದಾಗ ಮಾತ್ರವೇ ಸತ್ಯ ಗೊತ್ತಾಯ್ತು.
ಗೌತಮ್ ಬಳಿ ತಾಯಿಗೆ ಸೇರಿದ ವಸ್ತುಗಳು
ಪೊಲೀಸರು ಅಪಘಾತವಾದ ಸ್ಥಳಕ್ಕೆ ತೆರಳಿ ಅಲ್ಲಿ ವಿಚಾರಣೆ ನಡೆಸಿದ್ದು, ಪೊಲೀಸ್ ಠಾಣೆಯಲ್ಲಿ ನಿಮ್ಮ ತಾಯಿ ಹಾಗೂ ಸಹೋದರಿ ಸಾವನ್ನಪ್ಪಿರುವ ವಿಚಾರ ದಾಖಲಾಗಿದೆ. ಇನ್ನು ಮೃತದೇಹವನ್ನು ಬಹಳ ಸಮಯ ಇಟ್ಟಿದ್ದ ಪೊಲೀಸರಿಗೆ ಯಾರೂ ಬಾರದ ಕಾರಣ ಅನಾಥ ಶವಗಳೆಂದು ಪರಿಗಣಿಸಿ ದಫನ್ ಮಾಡಿದರು. ಇನ್ನು ಅವರು ದೇಹದಲ್ಲಿ ಸಿಕ್ಕ ವಸ್ತುಗಳು ಇವು ಎಂದು ಸರ, ಓಲೆ, ಬಟ್ಟೆಯನ್ನು ಕೊಡುತ್ತಾರೆ. ಗೌತಮ್ ಗೆ ನಿಂತ ಸ್ಥಳದಲ್ಲೇ ಕುಸಿದು ಬೀಳುವಂತಾಗುತ್ತದೆ. ಪ್ರಪಂಚವೇ ಮುಳುಗಿದಂತೆ ದಂಗಾಗುತ್ತಾನೆ. ಮುಂದೆ ಏನು ಮಾತನಾಡಬೇಕು. ಈ ಸಂಗತಿಯನ್ನು ಹೇಗೆ ಸ್ವೀಕರಿಸಬೇಕು ಎಂಬುದು ಗೊತ್ತಾಗುವುದಿಲ್ಲ.

ಶಾಕಿಂಗ್ ಸುದ್ದಿ ಕೇಳಿ ಗೌತಮ್ ಮೌನ
ಶಾಕಿಂಗ್ ಸುದ್ದಿ ಕೇಳಿದ ಗೌತಮ್ ಅಲ್ಲಿಂದ ಮನೆಯೊಳಕ್ಕೆ ಪ್ರವೇಶಿಸುತ್ತಾನೆ. ಮಲ್ಲಿ ಗೌತಮ್ ಪರಿಸ್ಥಿತಿಗೆ ಮರುಗುತ್ತಾಳೆ. ಹೀಗೆಲ್ಲಾ ಆಗಬಾರದಿತ್ತು. ಗೌತಮ್ ಭಾವ ತುಂಬಾ ಒಳ್ಳೆಯವರು ಎಂದು ದುಃಖಿಸುತ್ತಾಳೆ. ಇತ್ತ ಪಾರ್ಥ ಕೂಡ ನಿಸ್ವಾರ್ಥ ವ್ಯಕ್ತಿ ಗೌತಮ್ ಅಣ್ಣ. ತಮಗೋಸ್ಕರ ಅವರ ತಾಯಿಯನ್ನು ಬಿಟ್ಟು ಬೇರೆ ಏನನ್ನೂ ಬಯಸಲಿಲ್ಲ. ಹಾಗಿರುವಾಗ ಅಣ್ಣನಿಗೆ ಹೀಗಾಗಬಾರದಿತ್ತು ಎಂದು ಬೇಸರ ಮಾಡಿಕೊಳ್ಳುತ್ತಾನೆ. ಇತ್ತ ಗೌತಮ್ ತಾನಿದ್ದೂ ಕೂಡ ತನ್ನ ತಾಯಿ ಹಾಗೂ ಸಹೋದರಿ ಅನಾಥರಂತೆ ಸಾಯಬೇಕಾಯ್ತು ಎಂದು ಅಳುತ್ತಾನೆ. ಗೌತಮ್ ಗೆ ಭೂಮಿಕಾ ಸಮಾಧಾನ ಮಾಡಲು ಯತ್ನಿಸುತ್ತಾಳೆ. ತಾನು ಯಾರಿಗೂ ಅನ್ಯಾಯ ಮಾಡದಿದ್ದರೂ ಕೂಡ ತನಗೇ ಯಾಕೆ ಹೀಗೆಲ್ಲಾ ಆಗುತ್ತದೆ ಎಂದು ನೊಂದುಕೊಳ್ಳುತ್ತಾನೆ. ಭೂಮಿಕಾಳಿಗೆ ಮಾತೇ ಬರುವುದಿಲ್ಲ.
ಗೌತಮ್ ಬಗ್ಗೆ ಸುಧಾ ಮಾತು
ಇತ್ತ ಸುಧಾ ತನ್ನ ತಾಯಿಯನ್ನು ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿರುತ್ತಾಳೆ. ಮನೆ ಬೇರೆ ಸುಟ್ಟು ಹೋಗಿದ್ದು, ಅಮ್ಮನಿಗೆ ಡಿಸ್ಚಾರ್ಜ್ ಆದ ಬಳಿಕ ಎಲ್ಲಿಗೆ ಹೋಗುವುದು ಎಂಬ ಚಿಂತೆ ಸುಧಾಳನ್ನು ಕಾಡುತ್ತಿದೆ. ಇದರೊಂದಿಗೆ ಸುಧಾ ತನಗೂ ಸಂಬಂಧಿಕರಿದ್ದಾರೆ ಎಂದು ತನ್ನ ತಾಯಿ ಬಳಿ ಮಾತನಾಡಿದ್ದಾಳೆ. ನನಗೆ ಅಣ್ಣ-ಅತ್ತಿಗೆ ಸಿಕ್ಕಿದ್ದಾರೆ. ಇಷ್ಟು ವರ್ಷ ಅದೆಷ್ಟೋ ಮನೆಗಳಲ್ಲಿ ಕೆಲಸ ಮಾಡಿದ್ದೇನೆ. ಎಲ್ಲರೂ ಕೆಲಸದಾಕೆ ಅನ್ನೋ ರೀತಿ ನೋಡುತ್ತಾರೆ. ಆದರೆ, ಗೌತಮ್ ಅಣ್ಣನ ಮನೆಯವರು ಹಾಗಲ್ಲ, ನಾನು ಆ ಮನೆಯ ಮಗಳು ಎಂಬಂತೆ ನೋಡಿಕೊಳ್ಳುತ್ತಾಳೆ. ಒಂದು ದಿನ ನಿನ್ನನ್ನೂ ಭೇಟಿ ಮಾಡಿಸುತ್ತೇನೆ. ಅವರು ಬಹಳ ಒಳ್ಳೆ ಜನ ಎಂದು ಸುಧಾ ಮಾತನಾಡುತ್ತಾಳೆ.
ಮಾಸ್ಟರ್ ಪ್ಲಾನರ್ ಜೈದೇವ್
ಇನ್ನು ಶಕುಂತಲಾ ಹ್ಯಾಪಿ ಆಗಿರುತ್ತಾಳೆ. ಬೆಟ್ಟದಂತೆ ಬಂದ ಕಷ್ಟ ಇಷ್ಟು ಸುಲಭವಾಗಿ ತೀರಿ ಹೋಯ್ತು ಎಂದು ನೆಮ್ಮದಿಯ ನಿಟ್ಟುಸಿರು ಬಿಡುತ್ತಾಳೆ. ಆದರೆ, ಲಕ್ಷ್ಮೀಕಾಂತನಿಗೆ ಅನುಮಾನ ಮೂಡುತ್ತದೆ. ನಿನ್ನೆಯಷ್ಟೇ ಭಾಗ್ಯ ಬದುಕಿರುವುದನ್ನು ನೋಡಿದ್ದೇವೆ. ಆದರೆ ಈಗ ಅದು ಹೇಗೆ ಬದಲಾಯ್ತು ಎಂದು ಯೋಚಿಸುವ ವೇಳೆಗೆ ಜೈದೇವ್ ಎಂಟ್ರಿ ಕೊಟ್ಟು ಇದೆಲ್ಲಾ ನನ್ನ ಪ್ಲಾನ್ ಎನ್ನುತ್ತಾನೆ. ಅಣ್ಣ ಬಂದು ಅಮ್ಮನ ಬಗ್ಗೆ ಮಾಹಿತಿ ಸಿಕ್ಕಿದೆ ಎಂದಕೂಡಲೇ ನಾನು ಪೊಲೀಸರನ್ನು ಭೇಟಿ ಮಾಡಿ ಡೀಲ್ ಮಾಡಿಕೊಂಡೆ ಎನ್ನುತ್ತಾನೆ.


Click it and Unblock the Notifications











