ಬಂದ ಅವಕಾಶ ಕೈ ಬಿಟ್ಟ ಅಪೇಕ್ಷಾ : ರಸ್ತೆಯಲ್ಲಿ ಆಟೋಗಾಗಿ ಕಾಯುತ್ತಿರುವ ಮದುಮಗಳು!
ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್ ಕಷ್ಟಪಟ್ಟು ಹೆಸರು ಗಳಿಸಿದ್ದು, ಹಣ, ಯಶಸ್ಸು ಸಂಪಾದಿಸಿದ್ದಾನೆ. ಮನೆಯವರ ಸುಖಕ್ಕೋಸ್ಕರ ಏನು ಬೇಕಾದರೂ ಮಾಡಲು ತಯಾರಿದ್ದಾನೆ. ಆದರೆ, ಶಕುಂತಲಾ ಆಗಲೀ ಅವಳ ಮಕ್ಕಳಾಗಲೀ ಗೌತಮ್ ಬಗ್ಗೆ ಕೊಂಚವೂ ಯೋಚಿಸುವುದಿಲ್ಲ.
ಗೌತಮ್ ಮನೆಯವರಿಗೆ ತಮ್ಮ ಸುಖ ಜೀವನವೇ ಬಹಳ ಮುಖ್ಯವಾಗಿದೆ. ಎಲ್ಲರೂ ಸ್ವಾರ್ಥದಿಂದಲೇ ನಡೆದುಕೊಳ್ಳುತ್ತಾರೆ. ಗೌತಮ್ ದಿವಾನ್ ಮದುವೆ ಇದ್ದರೂ ಕೂಡ ಮಹಿಮಾ ಹನಿಮೂನ್‌ಗೆ ಹೋಗಿದ್ದಾಳೆ. ಜಯದೇವ ತನ್ನದೇ ಕೆಲಸದಲ್ಲಿ ಬ್ಯುಸಿ ಇದ್ದಾನೆ.

ದೊಡ್ಡ ಸಮಸ್ಯೆ ಮಾಡಿಕೊಂಡಿರುವ ಜಯದೇವ!
ಜಯದೇವ ಪ್ರತೀ ಸಲ ಗೌತಮ್‌ಗೆ ಸುಳ್ಳು ಹೇಳುತ್ತಾ ಮೋಸ ಮಾಡುತ್ತಿರುತ್ತಾನೆ. ಗೌತಮ್ ಸಂಪಾದಿಸಿರುವ ಹಣವನ್ನು ತೆಗೆದುಕೊಂಡು ತನಗೆ ಬೇಕಾದ ಹಾಗೆ ಮಜಾ ಮಾಡುತ್ತಿರುತ್ತಾನೆ. ಮೀಟಿಂಗ್ ಹೆಸರಲ್ಲಿ ಊರೂರು ತಿರುಗುತ್ತಾ ಇರುತ್ತಾನೆ. ಅಷ್ಟೇ ಅಲ್ಲದೇ ಈಗ ಜಯದೇವ ಯಾವುದೋ ದೊಡ್ಡ ಸಮಸ್ಯೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾನೆ. ಕೊನೆಗೆ ಮಾವ ಹಾಗೂ ತಾಯಿಯನ್ನು ಕೇಳಿಕೊಂಡು ಐವತ್ತು ಲಕ್ಷ ರೂಪಾಯಿಯನ್ನು ಪಡೆದುಕೊಂಡಿರುತ್ತಾನೆ.
ಯಾವುದೋ ಸಮಸ್ಯೆ ಎದುರಾದ ಕಾರಣ ಈಗ ಮತ್ತೆ ಜಯದೇವನಿಗೆ ಹಣ ಬೇಕಾಗಿದೆ. ಗೌತಮ್ ಮದುವೆಯ ಸಂಭ್ರಮವನ್ನು ಬಿಟ್ಟು ಈಗ ಅಸೋಸಿಯೇಷನ್ ದುಡ್ಡಿಗೆ ಕಣ್ಣು ಹಾಕಿದ್ದಾನೆ. ಐದು ಕೋಟಿ ಹಣವನ್ನೂ ತನ್ನ ಅಕೌಂಟ್‌ಗೆ ಹಾಕಿಸಿಕೊಳ್ಳಲು ಮುಂದಾಗಿದ್ದಾನೆ. ಜಯದೇವ ಬಹಳ ಆತಂಕದಲ್ಲಿದ್ದಾನೆ. ಆದರೆ, ಯಾಕೆ, ಯಾವ ಸಮಸ್ಯೆಯಲ್ಲಿದ್ದಾನೆ ಎಂಬುದು ಇನ್ನೂ ಗೊತ್ತಾಗಿಲ್ಲ.

ಅಕ್ಕನಿಗಾಗಿ ಬಂದ ಅವಕಾಶವನ್ನು ಕೈ ಬಿಟ್ಟ ತಂಗಿ
ಇತ್ತ ಅಪೇಕ್ಷಾಳಿಗೆ ಮಾಡೆಲಿಂಗ್‌ನಲ್ಲಿ ಇಂದೆಂದೂ ಸಿಗದ ಅವಕಾಶವೊಂದು ಸಿಕ್ಕಿದೆ. ಆದರೆ, ಅದಕ್ಕಾಗಿ ಈಗ ಅಪೇಕ್ಷಾ ಹೊರಡಬೇಕಿದೆ. ಆದರೆ ಅಪೇಕ್ಷಾ ಅಕ್ಕನ ಮದುವೆಗಿಂತಲೂ ತನಗೆ ಬೇರೆಯಾವುದೂ ಇಲ್ಲ ಎಂದು ಹೇಳಿದ್ದಾಳೆ. ಹೀಗಾಗಿ ತನಗೆ ಸಿಕ್ಕ ಅದೃಷ್ಟವನ್ನೂ ಕೂಡ ದೂರ ತಳ್ಳಿದ್ದಾಳೆ. ಅದೃಷ್ಟ ಇದ್ದರೆ ಮತ್ತೆ ಸಿಗುತ್ತೆ. ಆದರೆ, ಅಕ್ಕನ ಮದುವೆ ಪದೇ ಪದೇ ಬರುವುದಿಲ್ಲ. ಜೀವನದಲ್ಲಿ ಒಂದೇ ಸಲ ಸಿಗುವುದು ಎಂದು ಹೇಳಿದ್ದಾಳೆ.
ಮದುವೆಗೆ ಹೊರಟ ಭೂಮಿಕಾ
ಇನ್ನು ಭೂಮಿಕಾಳಿಗೆ ಮದುವೆ ಆಗುತ್ತಿರುವುದಕ್ಕೆ ಅಪಾರ್ಟ್ಮೆಂಟ್‌ನಲ್ಲಿ ಇರುವವರೆಲ್ಲಾ ಖುಷಿ ಪಟ್ಟಿದ್ದಾರೆ. ಕೊನೆಗೆ ಭೂಮಿಕಾಳಿಗೆ ಒಳ್ಳೆಯ ಸಂಬಂಧವೇ ಬಂದಿದೆ ಎಂದು ಸಂತಸ ಪಡುತ್ತಾರೆ. ಭೂಮಿಕಾಳಿಗೆ ಈಗ ಮದುವೆಯಾಗಿ ಬೇರೆ ಮನೆಗೆ ಹೋಗುತ್ತಿದ್ದೇನೆ ಎಂಬ ಸಂಕಷ್ಟ. ದುಃಖ ತುಂಬಿಕೊಂಡು ಭೂಮಿಕಾ ಅಳುತ್ತಾ ಕಾರನ್ನು ಹತ್ತುತ್ತಾಳೆ. ಹೇಗಪ್ಪ ಇನ್ನು ಮುಂದೆ ಅನ್ನೋದು ಭೂಮಿಕಾಳ ಯೋಚನೆ. ಆದರೆ, ಅವರ ಅಜ್ಜಿ ಹಾಗೂ ಮಂದಾಕಿನಿ ಇಬ್ಬರೂ ಆಗಾಗ ಭೂಮಿಕಾಳಿಗೆ ತಮಾಷೆ ಮಾಡಿ, ಅವಳ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ.
ಕೆಟ್ಟು ನಿಂತ ಸದಾಶಿವನ ಕಾರು
ಗೌತಮ್ ಮನೆಯವರು ಕೂಡ ಮದುವೆ ಮನೆಗೆ ಹೊರಟಿದ್ದಾರೆ. ಒಬ್ಬೊಬ್ಬರು ಒಂದೊಂದು ಕಾರಿನಲ್ಲಿ ಹೊರಟಿದ್ದರೆ, ಇತ್ತ ಭೂಮಿಕಾ ಮನೆಯಲ್ಲಿ ಎಲ್ಲರೂ ಕೂಡ ಒಂದೇ ಕಾರು ಅದೂ ಹಳೆಯ ಕಾರನ್ನೇ ಸಿಂಗರಿಸಿಕೊಂಡು ಹೋಗುತ್ತಿದ್ದಾರೆ. ದಾರಿ ಮಧ್ಯೆ ಭೂಮಿಕಾ ಅವರಿಗೆ ಸಮಸ್ಯೆ ಒಂದು ಆಗುತ್ತದೆ. ಅದೇನೆಂದರೆ, ಭೂಮಿಕಾರ ಕಾರು ದಾರಿಯಲ್ಲಿ ಕೆಟ್ಟು ನಿಲ್ಲುತ್ತದೆ.
ಈಗ ಈ ಕಾರು ಸರಿ ಹೋಗುವುದಿಲ್ಲ. ನಾವೆಲ್ಲಾ ಆಟೋದಲ್ಲೇ ಹೋಗಬೇಕು ಎಂದು ಹೊರಡುತ್ತಾರೆ. ಆದರೆ ಅವರಿಗೆ ಯಾವ ಆಟೋಗಳೂ ಸಿಗುವುದಿಲ್ಲ. ಮದುಮಗಳನ್ನು ಈ ಸಂದರ್ಭದಲ್ಲಿ ದಾರಿ ಮಧ್ಯೆ ನಿಲ್ಲಿಸಿಕೊಂಡಿದ್ದೇವೆ ಎಂದು ಅಜ್ಜಿ ಪಿಂಕಿ ಗೊಣಗುತ್ತಿರುತ್ತಾರೆ. ಸಿಕ್ಕ ಆಟೋದಲ್ಲೇ ಭೂಮಿಕಾ ಮನೆಯವರು ಕಲ್ಯಾಣ ಮಂಟಪ ತಲುಪಿದ್ದಾರೆ.


Click it and Unblock the Notifications











