Amruthadhaare ; ಇಕ್ಕಟ್ಟಿಗೆ ಸಿಲುಕಿದ ಸುಧಾ : ಮನೆಯವರ ಮನಸ್ಸು ಗೆದ್ದವಳು ಮುಂದೇನು ಮಾಡಬಹುದು..?
ಅಮೃತಧಾರೆ ಧಾರಾವಾಹಿಯಲ್ಲಿ ಲಕ್ಷ್ಮೀಕಾಂತನಿಗೆ ನಿತ್ಯ ರಾತ್ರಿ ಭಾಗ್ಯ ಕನಸಿನಲ್ಲಿ ಕಾಡುತ್ತಿದ್ದಾಳೆ. ಧನ್ಯಾ ಭಾಗ್ಯ ಇನ್ನು ಬದುಕಿದ್ದಾಳೆ ಎಂದು ಹೇಳಿದಾಗಿನಿಂದ ಲಕ್ಷ್ಮೀಕಾಂತನಿಗೆ ನೆಮ್ಮದಿ ಇಲ್ಲದಂತಾಗಿದೆ. ಇದರಿಂದ ಲಕ್ಷ್ಮೀಕಾಂತ ಹಗಲು ರಾತ್ರಿ ಭಾಗ್ಯಳ ಜಪ ಮಾಡುತ್ತಿದ್ದಾನೆ. ಭಾಗ್ಯಳನ್ನು ಹುಡುಕಿಸೋಣ ಎಂದು ಶಕುಂತಲಾಳಿಗೆ ಹೇಳಿದರೆ, ಆ ಕೆಲಾವನ್ನೂ ನಾವೇ ಮಾಡಬೇಕು ಎಂದು ಹೇಳಿದ್ದಾಳೆ. ರಾತ್ರಿ ನಿದ್ದೆ ಮಾಡಿದಾಗ ಕನಸಿನಲ್ಲಿ ಬಂದು ಕಾಡುವ ಭಾಗ್ಯಳಿಂದ ದೂರ ಉಳಿಯಲು ಲಕ್ಷ್ಮೀಕಾಂತ ನಿತ್ಯ ಶಕುಂತಲಾಳನ್ನು ಪೀಡಿಸುತ್ತಿದ್ದು, ಈಗ ಇದೇ ವಿಚಾರ ದೊಡ್ಡ ತಲೆ ನೋವಾಗಿದೆ.
ಗೌತಮ್ ಮನೆ ಸೇರಿದ ಸುಧಾ
ಯಾರದೋ ಕೈಯಾಳಾಗಿರುವ ಸುಧಾ ತನ್ನ ತಾಯಿಗಾಗಿ ಆನಂದ್ ಮನೆಗೆ ಕೆಲಸಕ್ಕೆ ಸೇರಿದಳು. ಅಲ್ಲಿಂದ ಗೌತಮ್ ಮನೆಯನ್ನು ಸೇರಲು ಸಾಕಷ್ಟು ಪ್ರಯತ್ನವನ್ನು ಮಾಡಿದಳು. ಸಾಧ್ಯವಾಗದಿದ್ದಾಗ, ಗೌತಮ್ ಮನೆಗೆ ಬಾಂಬ್ ಇಟ್ಟ ಅಪರಿಚಿತ ವ್ಯಕ್ತಿ ಸುಧಾ ಗೌತಮ್ ಮನೆ ಸೇರುವಂತೆ ಮಾಡಿದ್ದಾನೆ. ಭೂಮಿಕಾಳನ್ನು ನೋಡಿಕೊಳ್ಳುವ ಸಲುವಾಗಿ ಸುಧಾ ಈಗ ಗೌತಮ್ ಮನೆಗೆ ಬಂದಿದ್ದಾಳೆ. ಅರಮನೆಯಂತಹಾ ಮನೆಯನ್ನು ಕಂಡು ಸುಧಶ ಬೆರಗಾಗಿದ್ದಾಳೆ. ಅದೇ ಆ ಮನೆಯಲ್ಲಿ ಇರುವವರೆಲ್ಲಾ ಮೃದು ಮನಸ್ಸಿನವರು ಎಂದು ತಿಳಿದು ಇನ್ನಷ್ಟು ಆಶ್ಚರ್ಯಗೊಂಡಿದ್ದಾಳೆ. ಮನೆಗೆ ತೆರಳಿದ ಮೊದಲ ದಿನವೇ ಭೂಮಿಕಾ ಮನಸ್ಸನ್ನು ಗೆದ್ದ ಸುಧಾಳನ್ನು ಸ್ವಂತದವರಂತೆ ನೋಡಿಕೊಳ್ಳುವಂತೆ ಮಾಡಿದ್ದಾಳೆ.

ಸುಧಾ ಗುಣಕ್ಕೆ ಭೂಮಿಕಾ ಫಿದಾ
ಭೂಮಿಕಾ ಸುಧಾಳನ್ನು ಮಾತನಾಡಿಸುತ್ತಾ ಅವಳ ಮಾತಿಗೆ ಫಿದಾ ಆಗಿದ್ದಾಳೆ. ಹಾಗಾಗಿ ಭೂಮಿಕಾ ಸುಧಾಳಿಗೆ ತನ್ನನ್ನು ಅತ್ತಿಗೆ ಎಂದು ಕರೆಯುವಂತೆ ಹೇಳಿದ್ದಾಳೆ. ಸುಧಾ ಕೂಡ ಭೂಮಿಕಾ ಬಗ್ಗೆ ಕಾಳಜಿ ವಹಿಸಿದ್ದು, ಎಲ್ಲೂ ಭೂಮಿಕಾಳಿಗೆ ತೊಂದರೆಯಾಗದಂತೆ ನೋಡಿಕೊಂಡಿದ್ದಾಳೆ. ಸಮಯಕ್ಕೆ ಸರಿಯಾಗಿ ಔಷಧಿ ಕೊಡುವುದು, ಊಟ ತಿನಿಸುವುದು, ಮಸಾಜ್ ಮಾಡುವುದು ಪ್ರತಿಯೊಂದು ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದಾಳೆ. ಭೂಮಿಕಾ ಸುಧಾಳ ಬಗ್ಗೆ ಹೆಮ್ಮೆಯಿಂದ ಗೌತಮ್ ಬಳಿ ಮಾತನಾಡಿದ್ದಾಳೆ. ಆದರೆ, ಸುಧಾ ಮನದಲ್ಲಿ ಅಳುಕೊಂದು ಕಾಡುತ್ತಿದೆ.
ಅಪೇಕ್ಷಾಳಿಗೆ ಪಾರ್ಥನ ಮಾತುಗಳೇ ಇರಿಟೇಷನ್
ಮನೆಗೆ ಭೂಮಿಕಾಳನ್ನು ನೋಡಿಕೊಳ್ಳಲು ಹೊಸ ಕೆಲಸದವರನ್ನು ನೇಮಿಸಿರುವ ವಿಚಾರ ತಿಳಿದ ಪಾರ್ಥ ಬೇಸರ ಮಾಡಿಕೊಂಡಿದ್ದಾನೆ. ಅಪೇಕ್ಷಾ ಬಳಿ ತೆರಳಿದ ಪಾರ್ಥ ಜಗಳ ಮಾಡಿದ್ದಾನೆ. ನಿಮ್ಮ ಅಕ್ಕನನ್ನು ನೋಡಿಕೊಳ್ಳಲು ಕೆಲಸದವರು ಬೇಕಾ. ಮನೆಯಲ್ಲಿ ಏನು ಮಾಡುತ್ತೀಯಾ. ಮನೆಯವರ ಆರೋಗ್ಯ ನೋಡಿಕೊಳ್ಳಲು ಕೆಲಸದವರಿಗಿಂತಲೂ ಮನೆಯವರೇ ನೋಡಿಕೊಂಡರೆ ಒಳ್ಳೆಯದಲ್ಲವೇ ಎಂದು ಪಾರ್ಥ ಪ್ರಶ್ನಿಸುತ್ತಾನೆ. ಇದನ್ನು ಕೇಳಿದ ಅಪೇಕ್ಷಾಳಿಗೂ ಕೋಪ ಬರುತ್ತದೆ. ಪದೇ ಪದೇ ಮನೆಯವರ ಬಗ್ಗೆಯೇ ಯೋಚಿಸುತ್ತೀಯಾ ಎಂದು ಅಪೇಕ್ಷಾ ಕೂಡ ಮುನಿಸಿಕೊಂಡಿದ್ದಾಳೆ. ಪಾರ್ಥನ ಮಾತುಗಳನ್ನು ಅರ್ಥ ಮಾಡಿಕೊಳ್ಳದ ಅಪೇಕ್ಷಾ ದಾರಿ ತಪ್ಪುತ್ತಿದ್ದಾಳೆ ಎಂಬುದಂತೂ ಸ್ಪಷ್ಟವಾಗಿದೆ.
ಗೊಂದಲ, ಆತಂಕಗಳ ನಡುವಲ್ಲಿ ಸುಧಾ
ಇನ್ನು ಸುಧಾ ಮಗಳ ಬಳಿ ತಾನು ಕೆಲಸಕ್ಕೆ ಹೋಗುತ್ತಿರುವ ಜಾಗದ ಬಗ್ಗೆ ಮಾತನಾಡಿದ್ದಾಳೆ. ಗೌತಮ್ ದಿವಾನ್ ಎಂದು ಹೆಸರು ಹೇಳುತ್ತಿದ್ದಂತೆ ಅವರ ತಾಯಿ ಗುಂಡು ಗುಂಡು ಎಂದು ಕನವರಿಸುವುದನ್ನು ಹೆಚ್ಚಿಸಿದ್ದಾರೆ. ಸುಧಾಳಿಗೆ ಮತ್ತೆ ಅಪರಿಚಿತನ ಕರೆ ಬಂದಿದ್ದು, ಇನ್ನು ಮುಂದೆ ತಾವು ಹೇಲಿದ ಕೆಲಸಗಳನ್ನು ಚಾಚೂ ತಪ್ಪದೇ ಮಾಡಬೇಕು. ಮಾಡದೇ ಹೋದರೆ ನಿನ್ನ ನೆಮ್ಮದಿ ಹಾಳಾಗುತ್ತದೆ. ನಿಮ್ಮ ತಾಯಿಯನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಬೆದರಿಸಿದ್ದಾನೆ. ಈ ಮಾತುಗಳನ್ನು ಕೇಳಿದ ಸುಧಾ ಮತ್ತಷ್ಟು ಗೊಂದಲಕ್ಕೆ ಒಳಗಾಗಿದ್ದಾಳೆ. ಒಳ್ಳೆಯ ಮನಸ್ಸುಳ್ಳ ಮನೆಯವರನ್ನು ಸಂಕಷ್ಟಕ್ಕೆ ತಳ್ಳಬೇಕಾ ಎಂದು ಸುಧಾ ಆತಂಕಕ್ಕೆ ಒಳಗಾಗಿದ್ದಾಳೆ.


Click it and Unblock the Notifications











