Amruthadhaare ; ಮಗುವನ್ನು ಕಳೆದುಕೊಂಡ ಮಲ್ಲಿ : ಗೌತಮ್ ಗೆ ಜೈದೇವ್ ಬಣ್ಣ ತಿಳಿಯುತ್ತಾ..?
ಅಮೃತಧಾರೆ ಧಾರಾವಾಹಿಯಲ್ಲಿ ಜೈದೇವ್ ಆಡಿದ ಸುಳ್ಳು ಮಾತುಗಳನ್ನು ನಂಬಿ ಗೌತಮ್ ಅವನ ಜೊತೆಗೆ ಮಲ್ಲಿಯನ್ನು ಕಳಿಸಿಕೊಟ್ಟಿದ್ದಾನೆ. ಮಲ್ಲಿಯೂ ಕೂಡ ಜೈದೇವ್ ಮೇಲೆ ಅಪಾರವಾದ ನಂಬಿಕೆಯನ್ನು ಇಟ್ಟಿದ್ದಾಳೆ. ತನ್ನ ಊರಿನಲ್ಲಿ ನೆಲದ ಮೇಲೆ ಮಲಗಬೇಕು, ಸೊಳ್ಳೆಗಳ ಕೈಯಲ್ಲಿ ಕಚ್ಚಿಸಿಕೊಳ್ಳಬೇಕು ಎಂದು ಜೈದೇವ್ ನೆಪವೊಟ್ಟಿದ್ದು, ಮಲ್ಲಿ ಪತಿಯ ಸ್ಥಿತಿಯನ್ನು ನೆನೆದು ಬೇಸರವನ್ನು ಮಾಡಿಕೊಂಡಿದ್ದಾಳೆ. ಹಾಗಾಗಿ ನೀವು ಇಲ್ಲೇ ಸ್ನೇಹಿತರೊಂದಿಗೆ ಉಳಿದುಕೊಳ್ಳಿ. ನಾನು ಊರಿನಲ್ಲಿ ತಾತನ ಜೊತೆಗೆ ಇದ್ದು ಬರುತ್ತೇನೆ ಎಂದು ಹೇಳಿ ತನ್ನ ಪಾಡಿಗೆ ತಾನು ಊರಿನ ದಾರಿ ಹಿಡಿದು ಹೊರಟಿದ್ದಾಳೆ.
ತಮ್ಮ ಮಗುವಿನ ಆಸೆಯಲ್ಲಿ ದಂಪತಿ
ಇತ್ತ ಭೂಮಿಕಾ ಮತ್ತು ಗೌತಮ್ ಕೂಡ ತಮಗೂ ಒಂದು ಮಗು ಬೇಕು ಎಂದು ನಿರ್ಧಾರ ಮಾಡಿದ್ದಾರೆ. ತಾವೊಂದು ಮಗುವನ್ನು ಮಾಡಿಕೊಳ್ಳೋಣ ಎಂದು ಆಲೋಚಿಸಿದ್ದು ವೈದ್ಯರನ್ನು ಕಂಡಿದ್ದಾರೆ. ಭೂಮಿಕಾಳನ್ನು ಪರಿಶೀಲಿಸಿದ ವೈದ್ಯರು ಎಲ್ಲ ನಾರ್ಮಲ್ ಇದೆ. ಕೆಲ ಬ್ಲಡ್ ಟೆಸ್ಟ್ ಮಾಡಬೇಕು ಎಂದು ಹೇಳಿದ್ದಾರೆ. ಭೂಮಿಕಾ ಮತ್ತು ಗೌತಮ್ ಇಬ್ಬರೂ ಎಲ್ಲಾ ಒಳ್ಳೆಯದೇ ಆಗುತ್ತೆ. ತಮಗೂ ಮಗು ಆಗುತ್ತದೆ ಎಂದು ಆಸೆಯಲ್ಲಿದ್ದಾರೆ. ಇದನ್ನೇ ಆನಂದ್ ಮತ್ತು ಅಪರ್ಣಾ ಕೂಡ ಬಯಸುತ್ತಿದ್ದಾರೆ. ಗೆಳೆಯನಿಗೆ ಒಂದು ಮಗುವಾದರೆ, ಅವನ ಕುಟುಂಬವೂ ಕಂಪ್ಲೀಟ್ ಆಗುತ್ತದೆ ಎಂದು ಆಲೋಚಿಸಿದ್ದಾರೆ.

ಸತ್ಯ ಮುಚ್ಚಿಟ್ಟ ಜೈದೇವ್
ಮಲ್ಲಿ ಹೊರಡುವಾಗ ಜೈದೇವ್ ಫೋನ್ ತೆಗೆದುಕೊಂಡು ಹೋಗಿದ್ದು, ಅದನ್ನು ವಾಪಸ್ ಮಾಡಲು ಬಂದ ಮಲ್ಲಿಗೆ ದೊಡ್ಡ ಶಾಕ್ ಕಾದಿತ್ತು. ಜೈದೇವ್ ದಿಯಾ ಜೊತೆಗೆ ಕಾರಿನಲ್ಲಿ ಲಲ್ಲೆ ಹೊಡೆಯುತ್ತಿದ್ದು, ಒಬ್ಬರಿಗೊಬ್ಬರು ಚುಂಬಿಸಿದ್ದನ್ನು ಮಲ್ಲಿ ನೋಡುತ್ತಾಳೆ. ಇದೇ ಗಾಬರಿಯಲ್ಲಿ ಭೂಮಿಕಾ ಆಡಿದ ಮಾತುಗಳನ್ನೆಲ್ಲಾ ನೆನೆದು ತಾನು ತಪ್ಪು ಮಾಡಿಕೊಂಡ ಭಾವದಲ್ಲಿ ರಸ್ಥೆ ಮಧ್ಯೆ ನಿಂತಿದ್ದು, ಗಾಡಿ ಬಂದು ಅವಳ ಮಲೆ ಎರಗಿದೆ. ಇದರಿಂದ ಮಲ್ಲಿ ಪ್ರಜ್ಞೆ ಕಳೆದುಕೊಂಡಿದ್ದಾಳೆ. ಮಲ್ಲಿಗೆ ಆಕ್ಸಿಡೆಂಟ್ ಆಗಿದ್ದನ್ನು ನೋಡಿದ ಜೈದೇವ್ ಗಾಬರಿಯಾಗಿ ಆಸ್ಪತ್ರೆಗೆ ಸೇರಿಸಿದ್ದಾನೆ. ಮನೆಗೆ ವಿಷಯ ತಿಳಿಸಲೇ ಬೇಕು ಎಂದು ಗೌತಮ್ ಗೆ ಫೋನ್ ಮಾಡಿ ಆಸ್ಪತ್ರೆಗೆ ಕರೆಸಿಕೊಂಡಿದ್ದಾನೆ. ಅಲ್ಲದೇ, ತಾನು ನೀರು ತರಲು ಹೋದಾಗ ಮಲ್ಲಿ ಕಾರಿನಿಂದ ಇಳಿದಿದ್ದೇ ಇದಕ್ಕೆಲ್ಲಾ ಕಾರಣ ಎಂದು ಸುಳ್ಳು ಹೇಳಿದ್ದಾನೆ.
ಬೇಸರ ಮಾಡಿಕೊಂಡ ಭೂಮಿಕಾ-ಗೌತಮ್
ಡಾಕ್ಟರ್ ಮಲ್ಲಿಗೆ ಪ್ರಥಮ ಚಿಕಿತ್ಸೆಯನ್ನು ನೀಡಿದ್ದು, ಮಗುವಮನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ತೀವ್ರ ರಕ್ತ ಸ್ರಾವದಿಂದಾಗಿ ಮಲ್ಲಿಯ ಹೊಟ್ಟೆಯಲ್ಲಿಯೇ ಮಗು ತೀರಿಕೊಂಡಿದೆ ಎಂದು ಹೇಳಿದ್ದಾರೆ. ಈ ಮಾತನ್ನು ಕೇಳಿದ ಜೈದೇವ್ ನೊಂದುಕೊಂಡವನಂತೆ ನಟಿಸಿದ್ದಾನೆ. ಗೌತಮ್ ಮತ್ತು ಭೂಮಿಕಾ ಮಲ್ಲಿಗೆ ಹೀಗಾಗಬಾರದಿತ್ತು ಎಂದು ನೊಂದು ಕೊಂಡು ಕಣ್ಣೀರು ಹಾಕಿದ್ದಾರೆ. ಇತ್ತ ಅಪೇಕ್ಷಾ ಮಲ್ಲಿಯನ್ನು ನೋಡಲು ಆಸ್ಪತ್ರೆಗೆ ಹೊರಟಿದ್ದರೆ, ಶಕುಂತಲಾ ಸೊಸೆಯನ್ನು ತಡೆದಿದ್ದಾಳೆ. ಇದರಿಂದ ಭೂಮಿಕಾ ಮತ್ತು ಅಪ್ಪಿ ನಡುವಿನ ಅಂತರ ಇನ್ನಷ್ಟು ಹೆಚ್ಚಾಗಲಿ ಎಂದು ಪ್ಲಾನ್ ಮಾಡಿದ್ದಾಳೆ.

ಗಾಬರಿಯಾಗಿರುವ ದಿಯಾ
ಇನ್ನು ದಿಯಾ ಮಲ್ಲಿಗೆ ಅಪಘಾತವಾಗಿದ್ದನ್ನು ನೋಡಿ ಗಾಬರಿಯಾಗಿದ್ದಾಳೆ. ಜೈದೇವ್ ಗೆ ಫೋನ್ ಮಾಡಿ ಮಾತನಾಡಿದ್ದಾಳೆ. ನಾನು ಮತ್ತು ನೀನು ಕಾರಿನಲ್ಲಿದ್ದಿದ್ದನ್ನು ಮಲ್ಲಿ ನೋಡಿರಬಹುದಾ ಎಂದು ಗಾಬರಿಯಾಗಿದ್ದಾಳೆ. ಜೈದೇವ್ ಹಾಗೆಲ್ಲಾ ಆಗಿರುವುದಕ್ಕೆ ಸಾಧ್ಯವಿಲ್ಲ ಎಂದು ದಿಯಾಳಿಗೆ ಸಮಾಧಾನ ಮಾಡಿದ್ದಾನೆ. ಇನ್ನು ಮಲ್ಲಿಗೆ ಎಚ್ಚರವಾದ ಬಳಿಕ ಏನೆಲ್ಲಾ ಆಗುತ್ತದೆ. ಮಲ್ಲಿ ಜೈದೇವ್ ಬಣ್ಣವನ್ನು ಬಯಲಿಗೆಳೆಯುತ್ತಾಳಾ ಇಲ್ಲ ಎಲ್ಲಾ ಮರೆತು ಹೋಗಿರುತ್ತಾಳಾ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











