Amruthadhaare: ಗೌತಮ್ ಮನೆಯವರಿಗೆ ಆತಂಕ ತಂದಿರುವ ಮಾನ್ಯ
ಇದೀಗ ಗೌತಮ್ ದಿವಾನ್ ಸಹೋದರ ಜಯದೇವ ಬಿಸಿನೆಸ್ ಟ್ರಿಪ್ ಹೆಸರಲ್ಲಿ ಲಾಂಗ್ ಟ್ರಿಪ್ ಮುಗಿಸಿಕೊಂಡು ಮನೆಗೆ ಬಂದಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ಮೀಟಿಂಗ್‌ನಲ್ಲೂ ಭಾಗವಹಿಸಿಲ್ಲ. ಅಣ್ಣನ ಆಸ್ತಿಯನ್ನು ತಿಂದು ತೇಗುತ್ತಾ, ಜೀವನ ಎಂಜಾಯ್ ಮಾಡುವ ಜಯದೇವನಿಗೆ, ಬಿಸಿನೆಸ್, ಜವಾಬ್ದಾರಿ ಯಾವುದೂ ಬೇಕಿಲ್ಲ. ಹಣವೊಂದು ಮಾತ್ರವೇ ಬೇಕಿರುವುದು.
ಜಾಲಿಯಾಗಿ ತನ್ನ ಬದುಕನ್ನು ತನಗೆ ಬೇಕಾದಂತೆ ನಡೆಸುತ್ತಿರುವ ಜಯದೇವ, ಅಣ್ಣನಿಗೆ ಮಾತ್ರ ಪದೇ ಪದೇ ಸುಳ್ಳು ಹೇಳುತ್ತಾನೆ. ಆದರೆ, ಇದು ಎಷ್ಟು ದಿನ ನಡೆಯುತ್ತದೋ ಗೊತ್ತಿಲ್ಲ. ಹೈದರಾಬಾದ್‌ನಲ್ಲಿ ನಡೆದ ಮೀಟಿಂಗ್‌ಗೆ ಹೋಗಿದ್ದೆ ಎಂದು ಗೌತಮ್ ಬಳಿ ಜಯದೇವ ಸುಳ್ಳು ಹೇಳುತ್ತಾನೆ. ಆದರೆ, ಆನಂದ್‌ಗೆ ಜಯದೇವ ಹೇಳುತ್ತಿರುವುದು ಸುಳ್ಳು ಎಂದು ಗೊತ್ತಿದ್ದರೂ ಗೌತಮ್ ಬಳಿ ಹೇಳಲಾಗದೇ ಸುಮ್ಮನಿರುತ್ತಾನೆ.

ಗೌತಮ್ ಮನೆಯವರೆಲ್ಲಾ ಆತನ ಬಳಿ ಇರುವ ಹಣಕ್ಕಾಗಿ ಬದುಕುತ್ತಿರುವುದು. ಗೌತಮ್ ಇಲ್ಲದೇ, ಹೋದರೆ, ಎಲ್ಲವನ್ನೂ ಗುಡಿಸಿಗುಂಡಾಂತರ ಮಾಡುತ್ತಾರೆ. ಗೌತಮ್‌ಗೆ ನೆಮ್ಮದಿ ಖುಷಿ ಸಿಗುವುದೇನಿದ್ದರೂ ಆತ ಮದುವೆಯಾಗುವ ಭೂಮಿಕಾಳಿಂದ ಎಂಬುದನ್ನು ಆನಂದ್ ಸ್ಪಷ್ಟವಾಗಿ ತಿಳಿದುಕೊಂಡಿದ್ದಾನೆ. ಆದರೆ, ಗೌತಮ್ ತನ್ನ ತಮ್ಮ ಜಯದೇವ ಕಂಪನಿಯನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಾನೆ ಎಂದು ಭಾವಿಸಿದ್ದಾನೆ. ಅದೆಲ್ಲವೂ ಸುಳ್ಳು ಎಂಬುದು ಯಾವಾಗ ತಿಳಿಯುತ್ತದೋ ಗೊತ್ತಿಲ್ಲ.

ಮಾನ್ಯಳನ್ನು ನೋಡಿದ ಲಕ್ಷ್ಮೀಕಾಂತ
ಇತ್ತ ಲಕ್ಷ್ಮೀಕಾಂತ ಹೋಟೆಲ್‌ಗೆ ಬಂದು ರೂಮ್‌ಗಳು ಎಷ್ಟು ಬುಕ್ ಆಗಿವೆ. ಬರುವ ಗೆಸ್ಟ್‌ಗಳಿಗೆ ಯಾವುದೇ ಸಮಸ್ಯೆ ಆಗದಿರಲಿ ಎಂದು ವಿಚಾರಿಸಲು ಬಂದಿರುತ್ತಾನೆ. ಅಲ್ಲಿ ರೂಮ್‌ಗಳು ಕನ್ಫರ್ಮ್ ಆಗದೇ ಇರುವುದಕ್ಕೆ ಗಲಾಟೆಯನ್ನೂ ಮಾಡುತ್ತಾನೆ. ಅಷ್ಟರಲ್ಲಿ ಅದೇ ಹೋಟೆಲ್‌ನಲ್ಲಿ ಮಾನ್ಯಳನ್ನು ಲಕ್ಷ್ಮೀಕಾಂತ ನೋಡಿ ಬಿಡುತ್ತಾನೆ. ತಕ್ಷಣವೇ ಹೋಗಿ ಅಲ್ಲಿ ಇರಕೂಡದು, ಗೌತಮ್‌ಗೆ ತೊಂದರೆ ಕೊಡಬಾರದು ಎಂದು ತಾಕೀತು ಮಾಡುತ್ತಾನೆ.
ಲಕ್ಷ್ಮಿಕಾಂತನ ಮಾತುಗಳೊಗೆ ಮಾನ್ಯ ಹೆಸರುವುದಿಲ್ಲ. ನಾನು ಗೌತಮ್ ಬಳಿ ಎಲ್ಲಾ ಸತ್ಯವನ್ನು ಹೇಳುತ್ತೇನೆ ಎಂದು ಬ್ಲ್ಯಾಕ್ ಮೇಲ್ ಮಾಡುತ್ತಾಳೆ. ಹೆದರಿಕೊಂಡು ಮನೆಗೆ ಬರುವ ಲಕ್ಷ್ಮೀಕಾಂತ ಶಕುಂತಲಾಳಿಗೆ ಎಲ್ಲವನ್ನು ವಿವರಿಸಿ ಹೇಳುತ್ತಾನೆ. ಇದರಿಂದ ಶಕುಂತಲಾ ಕೂಡ ಗಾಬರಿಯಾಗುತ್ತಾಳೆ. ಯಾವುದೇ ಸಂದರ್ಭದಲ್ಲೂ ಗೌತಮ್ ಹಾಗೂ ಮಾನ್ಯ ಭೇಟಿ ಆಗಬಾರದು ಎಂದು ಹೇಳುತ್ತಾಳೆ. ಆದರೆ, ಮಾನ್ಯ ಯಾರು? ಆಕೆಗೂ ಗೌತಮ್ ಮನೆಗೂ ಇರುವ ಸಂಬಂಧವೇನು? ಎಂಬುದು ಇನ್ನು ಮುಂದಷ್ಟೇ ತಿಳಿದು ಬರಬೇಕಿದೆ.
ಟೆನ್ಷನ್ ಮಾಡಿಕೊಂಡಿರುವ ಗೌತಮ್
ಮಾನ್ಯ, ಗೌತಮ್ ಮದುವೆ ನಿಶ್ಚಯವಾದಾಗಿನಿಂದಲೂ ಪದೇ ಪದೇ ಫೋನ್ ಮಾಡುತ್ತಿದ್ದಾಳೆ. ಆದರೆ, ಗೌತಮ್, ಮಾನ್ಯ ಫೋನ್ ನೋಡುತ್ತಿದ್ದಂತೆ ಹೆದರಿಕೊಂಡು ಗಾಬರಿಯಾಗುತ್ತಾನೆ. ಟೆನ್ಷನ್ ಆಗಿ ಬೆವರುತ್ತಿದ್ದಾನೆ. ಮಾನ್ಯ ಯಾವ ಕಾರಣಕ್ಕೆ ಗೌತಮ್‌ಗೆ ಫೋನ್ ಮಾಡುತ್ತಿದ್ದಾಳೆ? ಗೌತಮ್ ಯಾಕೆ ಮಾನ್ಯಳ ಮೇಲೆ ಕೋಪ ಮಾಡಿಕೊಳ್ಳುತ್ತಾನೆ ಎಂಬ ಕುತೂಹಲ ಮೂಡಿದೆ. ಇದೇ ಟೆನ್ಷನ್‌ನಲ್ಲಿ ಗೌತಮ್, ಆನಂದ್ ಮೇಲೂ ಕೋಪ ಮಾಡಿಕೊಳ್ಳುತ್ತಾನೆ. ಆದರೆ, ಆನಂದ್ ಇದ್ಯಾವ ವಿಚಾರ ತಿಳಿಯದಿದ್ದರೂ, ಗೌತಮ್ ಜೊತೆಗೆ ಸದಾ ಒಳ್ಳೆಯ ಗೆಳಯನಾಗಿ ನೆರಳಿನಂತಿದ್ದಾನೆ.ಇತ್ತ ಪ್ರಶ್ನೆ ಕೇಳುವ ಶಾಸ್ತ್ರ ನಡೆಸುವ ಸಲುವಾಗಿ ಭೂಮಿಕಾ ಮನೆಯವರೆಲ್ಲಾ ಗೌತಮ್ ಮನೆಗೆ ಆಗಮಿಸಿದ್ದಾರೆ. ಭೂಮಿಕಾ ಅವರ ಅಮ್ಮಮ್ಮ ಈಗಿನ ಕಾಲದ ಯುವತಿಯರು ಡ್ರೆಸ್ ಮಾಡಿಕೊಳ್ಳುವಂತೆ ರೆಡಿಯಾಗಿ ಬಂದಿದ್ದಾರೆ. ಇನ್ನು ಈ ಶಾಸ್ತ್ರ ನಡೆಯುವ ಸಂದರ್ಭದಲ್ಲಿ ಯಾವುದೇ ರೀತಿಯ ಎಡವಟ್ಟು ಆಗದಿರಲಿ ಎಂದು ಗೌತಮ್ ಮನದಲ್ಲೇ ಪ್ರಾರ್ಥಿಸಿದ್ದಾನೆ. ಪ್ರಶ್ನೇ ಕೇಳುವ ಶಾಸ್ತ್ರದಲ್ಲಿ ಯಾವೆಲ್ಲಾ ಪ್ರಶ್ನೆಗಳನ್ನು ಕೇಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











