Amruthadhaare: ತಮ್ಮ ತಮ್ಮ ತಪ್ಪನ್ನು ಮುಚ್ಚಿಕೊಂಡು ನಾಟಕ ಮಾಡಿದ ಅಣ್ಣ-ತಂಗಿ
ಅಮೃತಧಾರೆ ಧಾರಾವಾಹಿಯಲ್ಲಿ ಮಗ ಮೂಲೆಯಲ್ಲಿ ಕೂರುವಂತಾಯಿತಲ್ಲ ಎಂದು ಶಕುಂತಲಾ ನೊಂದುಕೊಂಡಿದ್ದಾಳೆ. ಭೂಮಿಕಾ ಮತ್ತು ಆನಂದ್ ಇಬ್ಬರನ್ನು ಸುಮ್ಮನೆ ಬಿಡಬಾರದು ಎಂದು ಲೆಕ್ಕಾಚಾರ ಹಾಕುತ್ತಿದ್ದಾಳೆ.
ಇದೀಗ ಜೈದೇವ ಮಾಸ್ಟರ್ ಪ್ಲಾನ್ ಮಾಡಿದ್ದಾನೆ. ಮನೆಯವರ ಮುಂದೆ ನಿಂತು ಗೌತಮ್ ಬಳಿ ಕ್ಷಮೆ ಕೇಳಿದ್ದಾನೆ. ತನ್ನ ತಪ್ಪಿಗೆ ಇಷ್ಟು ದೊಡ್ಡ ಶಿಕ್ಷೆ ಬೇಡ ಎಂದು ಕೇಳಿಕೊಂಡಿದ್ದಾನೆ.

ಗೌತಮ್, ಜೈದೇವನ ಮಾತಿಗೆ ಕಿವಿ ಕೊಡುವುದಿಲ್ಲ. ಇದರಿಂದ ಶಕುಂತಲಾಳಿಗೆ ಬಹಳ ಬೇಸರವಾಗುತ್ತದೆ. ಗೌತಮ್ ಮೇಲಿನ ಕೋಪ ಹೆಚ್ಚಾಗುತ್ತದೆ.
ಅತ್ತಿಗೆ ಮೇಕಪ್ ಕಿಟ್ ಬಳಸಿದ ಅಪೇಕ್ಷಾ
ಇತ್ತ ಅಪೇಕ್ಷಾ, ಮಹಿಮಾಳ ಮೇಕಪ್ ಕಿಟ್ ಅನ್ನು ತನ್ನ ಶೂಟಿಂಗ್‌ಗೆ ತೆಗೆದುಕೊಂಡು ಹೋಗಿದ್ದಾಳೆ. ಇದನ್ನು ಗಮನಿಸಿದ ಮಹಿಮಾಳಿಗೆ ಕೋಪ ಬಂದಿದೆ. ಮಂದಾಕಿನಿ ಬಳಿ ಅಪೇಕ್ಷಾ ತನ್ನ ಮೇಕಪ್ ಕಿಟ್ ಅನ್ನು ಕದ್ದಿದ್ದಾಳೆ ಎಂದು ದೂರಿದ್ದಾಳೆ. ಆದರೆ, ಅಪೇಕ್ಷಾ ಹಾಗೆಲ್ಲಾ ಮಾಡುವುದಿಲ್ಲ ಎಂದು ಮೊದಲು ಮಂದಾಕಿನಿ ವಹಿಸಿಕೊಂಡು ಮಾತನಾಡುತ್ತಾಳೆ. ಆದರೆ, ಅಪೇಕ್ಷಾ ನಿಜವಾಗಿಯೂ ಮೇಕಪ್ ಕಿಟ್ ಬಳಸಿರುತ್ತಾಳೆ.

ಮಹಿಮಾ ಕೂಗಾಟ
ಮನೆಗೆ ಅಪೇಕ್ಷಾ ಬಂದ ಕೂಡಲೇ ಮೇಕಪ್ ಕಿಟ್ ನೋಡಿದ ಮಹಿಮಾ ಇನ್ನಷ್ಟು ಕೂಗಾಡುತ್ತಾಳೆ. ಮಿಡಲ್ ಕ್ಲಾಸ್ ಫ್ಯಾಮಿಲಿಗಳು ಎಂದೆಲ್ಲಾ ಹೀಯಾಳಿಸುತ್ತಾಳೆ. ಮಂದಾಕಿನಿಗೆ ಈ ಮಾತುಗಳೆಲ್ಲವೂ ಹರ್ಟ್ ಮಾಡುತ್ತದೆ. ಹಾಗಾಗಿ ಅಪೇಕ್ಷಾಳ ಕೆನ್ನೆಗೆ ಹೊಡೆಯುತ್ತಾಳೆ. ಅಪೇಕ್ಷಾಳಿಗೆ ತನ್ನ ಮನೆಯವರ ವಸ್ತುವನ್ನು ಬಳಸಿದ್ದಲ್ಲಿ ತಪ್ಪೇನು ಎಂಬ ಭಾವನೆ ಇದ್ದು, ಅದನ್ನೇ ಪ್ರಶ್ನೆ ಮಾಡುತ್ತಾಳೆ.
ತನ್ನ ತಪ್ಪನ್ನು ಮುಚ್ಚಿಟ್ಟ ಮಹಿಮಾ
ಬಹಳ ಬೇಸರಗೊಂಡ ಅಪೇಕ್ಷಾ ತನಗಾಗಿ ಮನೆಯಲ್ಲಿ ಯಾರೂ ಇಲ್ಲ. ಎಲ್ಲರೂ ತಮ್ಮ ತಮ್ಮ ಬದುಕಿನಲ್ಲಿ ಬ್ಯುಸಿಯಾಗಿದ್ದಾರೆ ಎಂದು ಅಳುತ್ತಾ ಕುಳಿತಿರುತ್ತಾಳೆ. ಮಂದಾಕಿನಿ ಎಷ್ಟೇ ಸಮಾಧಾನ ಮಾಡಿದರೂ ಅಪೇಕ್ಷಾ ಸಮಾಧಾನವಾಗುವುದಿಲ್ಲ. ಇದೇ ಸಮಯಕ್ಕೆ ಜೀವ ಮನೆಗೆ ಬರುತ್ತಾನೆ. ಮಹಿಮಾಳಿಗೆ ಈಗ ತಾನು ಮಾತನಾಡಿದ ರೀತಿ ಜೀವನಿಗೆ ಗೊತ್ತಾದರೆ, ಕಷ್ಟವಾಗುತ್ತದೆ. ಮತ್ತೆ ತನ್ನ ಮೇಲೆ ಜೀವ ಬೇಸರ ಮಾಡಿಕೊಂಡು ಜಗಳ ಮಾಡುತ್ತಾನೆ ಎಂದು ಹೆದರುತ್ತಾಳೆ. ತನ್ನ ತಪ್ಪನ್ನು ಮುಚ್ಚಿಡಲು ಜೀವ ಮನೆಗೆ ಬಂದ ಕೂಡಲೇ ನಡೆದ ಘಟನೆಯನ್ನು ಸಿಂಪಲ್ ಆಗಿ ವಿವರಿಸಿ, ಅಪೇಕ್ಷಾಳಿಗೆ ಮೇಕಪ್ ಕಿಟ್ ಅನ್ನು ನೀನೇ ಬಳಸು ಎಂದು ಕೊಟ್ಟು ಪರಿಸ್ಥಿತಿ ನಿಭಾಯಿಸುತ್ತಾಳೆ.
ಜೈದೇವ ಪರ ಮಾತನಾಡಿದ ಭೂಮಿಕಾ
ಇನ್ನು ಜೈದೇವ, ಗೌತಮ್ ತನ್ನ ಮಾತನ್ನು ಕೇಳಲಿಲ್ಲ ಎಂದು ಭೂಮಿಕಾ ಕಾಲಿಗೆ ಬಿದ್ದು ಕ್ಷಮಾಪಣೆ ಕೇಳುತ್ತಾನೆ. ಅಣ್ಣನಿಗೆ ಹೇಳಿ, ನಾನು ಇನ್ಯಾವತ್ತೂ ಹೀಗೆ ಮಾಡುವುದಿಲ್ಲ ಎಂದು ಗೋಳಾಡುತ್ತಾನೆ. ಭೂಮಿಕಾ ಜೈದೇವನ ಮಾತನ್ನು ನಂಬಿ ಗೌತಮ್ ಬಳಿ ಮಾತನಾಡುತ್ತಾಳೆ. ತಮ್ಮನಿಗೆ ಒಂದು ಬಾರಿ ಅವಕಾಶ ಮಾಡಿಕೊಡಿ, ಅವನನ್ನು ಕ್ಷಮಿಸಿ ಆಫಿಸಿನಲ್ಲಿ ಕೆಲಸ ಕೊಡಿ ಎಂದು ಕೇಳುತ್ತಾಳೆ. ಗೌತಮ್, ಭೂಮಿಕಾ ಮಾತುಗಳನ್ನು ಅರ್ಥ ಮಾಡಿಕೊಳ್ಳುತ್ತಾನೆ.
ಮತ್ತೆ ಆಫೀಸಿಗೆ ಬಂದ ಜೈದೇವ
ಮನೆಯವರ ಮುಂದೆ ಗೌತಮ್, ಜೈದೇವನನ್ನು ಕ್ಷಮಿಸುತ್ತಾನೆ. ಮತ್ತೆ ಇಂತಹ ಕೆಟ್ಟ ಕೆಲಸಗಳಿಗೆ ಕೈ ಹಾಕಬೇಡ ಎಂದು ಬುದ್ಧಿ ಹೇಳುತ್ತಾನೆ. ಪುನಃ ಜೈದೇವನನ್ನು ಆಫೀಸಿಗೆ ಸೇರಿಸಿಕೊಳ್ಳುತ್ತಾನೆ. ಆನಂದ್‌ಗೆ ಗೌತಮ್ ತನ್ನ ನಿರ್ಧಾರವನ್ನು ಬದಲಾಯಿಸಿದ್ದು ನೋಡಿ ಆಶ್ಚರ್ಯವಾಗುತ್ತದೆ. ಆಗ ಗೌತಮ್ ಇದಕ್ಕೆಲ್ಲಾ ಭೂಮಿಕಾ ಕಾರಣ ಎಂದು ಹೇಳಿದ ಮಾತು ಕೇಳಿ ಖುಷಿಯಾಗುತ್ತದೆ. ಆದರೆ, ಜೈದೇವ ಇದೆಲ್ಲಾ ನಾಟಕ ಮಾಡಿದ್ದು, ಮತ್ತೆ ತನ್ನ ಆಟವನ್ನು ಯಾವಾಗ ಹೇಗೆ ಪ್ರಾರಂಭಿಸುತ್ತಾನೋ ಕಾದು ನೋಡಬೇಕಿದೆ.


Click it and Unblock the Notifications











