Amruthadhaare ; ಭೂಮಿಕಾ ಸೀಮಂತ ಸಂಭ್ರಮಕ್ಕೆ ಕೊಳ್ಳಿ ಇಡ್ತಾಳಾ ಶಕುಂತಲಾ, ಮೊಗ್ಗು ಅರಳುವ ಮುನ್ನವೇ ಬಾಡಿ ಹೋಗುತ್ತಾ ?
ಅಮೃತಧಾರೆಯಲ್ಲಿ ಈಗ ಆಸ್ತಿ ಕಲಹ ಶುರುವಾಗಿದೆ. ಗೌತಮ್ ದಿವಾನ್ ಹೆಸರಘಟ್ಟದಲ್ಲಿರುವ ತನ್ನ ಫಾರ್ಮ್‌ಹೌಸ್‌ನ್ನು ಜೈದೇವ್ ಹೆಸರಿಗೆ ಮಾಡಿದ್ದು ಸದಾಶಿವನಗರದ ಮನೆ ಪಾರ್ಥನ ಹೆಸರಿಗೆ ಬರೆದಿದ್ದಾನೆ. ರಾಜಸ್ತಾನದಲ್ಲಿರುವ ಮನೆಯನ್ನು ತನ್ನ ತಂಗಿ ಅಶ್ವಿನಿ ಹೆಸರಿಗೆ ಮಾಡಿರುವ ಗೌತಮ್ ದುಬೈನಲ್ಲಿರುವ ಅಪಾರ್ಟ್‌ಮೆಂಟ್‌ನ ಮಹಿಮಾಗೆ ಕೊಟ್ಟಿದ್ದಾನೆ.
ಸಮಬಾಳು ಸಮಪಾಲು ಎಂಬ ಮಂತ್ರವನ್ನು ಗೌತಮ್ ಪಠಿಸುತ್ತಾನೆ ಎಂದುಕೊಂಡ ಶಕುಂತಲಾ ಮತ್ತು ಜೈದೇವ್ ಗೆ ಗೌತಮ್ ಶಾಕ್ ನೀಡಿದ್ದು ತನ್ನ ಹೆಸರಿನಲ್ಲಿರುವ 51 % ಶೇರ್ ಹಾಗೂ ತನ್ನ ಹೆಸರಿನಲ್ಲಿ ಏನೆಲ್ಲ ಆಸ್ತಿ ಇದೆಯೋ ಅದೆಲ್ಲವನ್ನು ತನ್ನ ಮಗು ಮತ್ತು ಭೂಮಿಕಾ ಹೆಸರಿಗೆ ಮಾಡಿದ್ದಾನೆ.

ಆತಂಕ ವ್ಯಕ್ತಪಡಿಸುವ ಭೂಮಿಕಾ
ಗೌತಮ್ ಎದುರು ಭೂಮಿಕಾ ಸದ್ಯ ತನ್ನ ಆತಂಕ ವ್ಯಕ್ತಪಡಿಸಿದ್ದಾಳೆ. ಈ ವಿಲ್.. ಆಸ್ತಿಯಿಂದ ನಮ್ಮ ನಡುವೆ ನಾವು ಗೋಡೆ ಕಟ್ಟಿಕೊಳ್ತಿದ್ದೀವಿ ಎಂದು ನನಗೆ ಅನಸುತ್ತಿದೆ ಎಂದು ಹೇಳುತ್ತಾಳೆ. ಇದಕ್ಕೆ ಅದನ್ನು ಗೋಡೆ ಎಂದು ಯಾಕೆ ಅಂದುಕೊಳ್ತೀರಾ ಸೇತುವೆ ಅಂದುಕೊಳ್ಳಿ ಎಂದು ಗೌತಮ್ ಹೇಳುತ್ತಾನೆ.
ನಾವು ಯಾವುದನ್ನೂ ಡಿವೈಡ್ ಮಾಡ್ತಿಲ್ಲ ಭದ್ರತೆಯ ದೃಷ್ಟಿಯಿಂದ ಅವರಿಗೆ ಏನು ಸಲ್ಲಬೇಕೋ ಅದನ್ನು ಕೊಡ್ತಿದೀವಿ, ಯಾಕೆ ನೆಗೆಟಿವ್ ಯೋಚನೆ ಮಾಡ್ತೀರಾ ಎನ್ನುತ್ತಾನೆ. ಇದೆಲ್ಲ ಕರೆಕ್ಟ್ ಆಗಿ ಮಾಡಿ ಇಡಬೇಕು ಯಾಕೆಂದರೆ ಈ ಆಸ್ತಿ ದುಡ್ಡು ಎಲ್ಲ ವಿಷ ಇದ್ದಂತೆ ಸಂಬಂಧಗಳನ್ನು ಹಾಳು ಮಾಡುತ್ತೆ ಎನ್ನುತ್ತಾನೆ.
ಒಂದೇ ರಕ್ತ ಹಂಚಿಕೊಂಡವರೇ ಆಸ್ತಿಗಾಗಿ ರಕ್ತ ಹರಿಸ್ತಾರೆ, ಹೀಗಾಗಿ ನಾವು ಚೆನ್ನಾಗಿದ್ದಾಗಲೇ ಯಾರ್ಯಾರಿಗೆ ಏನೇನು ಬೇಕೋ ಅದನ್ನು ಕೊಟ್ಟು ಬಿಡಬೇಕು ಎಂದು ಹೇಳುವ ಮೂಲಕ ತನ್ನ ನಿರ್ಧಾರ ಸಮರ್ಥಿಸಿಕೊಳ್ತಾನೆ.
ಸಾವಿನ ಬಗ್ಗೆ ಮಾತನಾಡುವ ಗೌತಮ್
ಒಂದು ವೇಳೆ ನಾನು ಇಲ್ಲ ಅಂದರೆ ನಿಮ್ಮೆಲ್ಲರ ಬದುಕು ಸುರಕ್ಷಿತವಾಗಿ ಇರಬೇಕು, ಹೀಗಾಗಿ ಈ ನಿರ್ಧಾರ ಅಗತ್ಯವಾಗಿತ್ತು ಎಂದು ಗೌತಮ್ ಹೇಳುತ್ತಾನೆ. ಇದಕ್ಕೆ ಭಾವುಕಳಾಗುವ ಭೂಮಿಕಾ ನೀವು ಇಲ್ಲ ಅಂದರೆ ನಾವು ಖುಷಿಯಾಗಿ ಇರ್ತಿವಿ ಎಂದು ನೀವು ಹೇಗೆ ಅಂದುಕೊಂಡ್ರಿ ಮತ್ತೆ ಈ ತರ ಎಲ್ಲಾ ಮಾತನಾಡಬೇಡಿ ಎನ್ನುತ್ತಾಳೆ
ಸೀಮಂತ ಬೇಡ ಅಂದ ಗೌತಮ್
ಮತ್ತೊಂದೆಡೆ ಗೌತಮ್ ಮನೆಗೆ ಬಂದ ಭೂಮಿಕಾ ತಂದೆ ಸೀಮಂತದ ಬಗ್ಗೆ ಮಾತನಾಡುತ್ತಾರೆ. ಇದಕ್ಕೆ ಸೀಮಂತ ಮಾಡೋದು ಬೇಡ ಅನ್ಸುತ್ತೆ ಎಂದು ಗೌತಮ್ ಹೇಳುತ್ತಾನೆ. ಇದರಿಂದ ಭೂಮಿಕಾ ಸೇರಿ ಎಲ್ಲರಿಗೂ ಆಘಾತವಾಗುತ್ತೆ.
ಈ ಹಿಂದೆ ಮಲ್ಲಿ ಮತ್ತು ಮಹಿಮಾಗೆ ಸೀಮಂತ ಮಾಡಿದೀವಿ ಆದರೆ ಖುಷಿಗಿಂತ ನಮಗೆ ದುಖನೇ ಜಾಸ್ತಿ ಸಿಕ್ತು ಅದು ನನ್ನ ಮನಸಿನಲ್ಲಿ ಹಾಗೇ ಉಳಿದಿದೆ ಸೀಮಂತ ಬೇಡ ಎಂದು ಗೌತಮ್ ಹೇಳುತ್ತಾನೆ.
ತಂಗಿಯ ಮಾತಿಗೆ ಕೊನೆಗೂ ತಲೆಯಾಡಿಸುವ ಗೌತಮ್
ಮಹಿಮಾ ಈ ಚರ್ಚೆ ನಡುವೆ ಮಧ್ಯೆ ಪ್ರವೇಶಿಸುತ್ತಾಳೆ. ನನ್ನ ಗರ್ಭಪಾತವಾಗಿದ್ದು ನನ್ನ ತಪ್ಪಿಂದ, ಮಲ್ಲಿಗೆ ಅಪಘಾತದಿಂದಾಗಿದ್ದು, ಅದಕ್ಕೂ ಇದಕ್ಕೂ ಏನು ಸಂಬಂಧ ಇಲ್ಲ ಸುಮ್ನೆ ಲಾಜಿಕ್ ಇಲ್ಲದೇ ಏನೇನೋ ಮಾತನಾಡಬೇಡ ಎನ್ನುತ್ತಾಳೆ. ಗೌತಮ್ ಸಮಜಾಯಿಷಿ ನೀಡುವ ಪ್ರಯತ್ನ ಮಾಡಿದರು ಕೂಡ ಮಹಿಮಾ ನಮ್ಮೆಲ್ಲರ ಭಾವನೆ ಅರ್ಥ ಮಾಡಿಕೋ ಎನ್ನುತ್ತಾಳೆ. ಬೇರೆ ವಿಧಿಯಿಲ್ಲದೇ ಗೌತಮ್ ಸೀಮಂತ ಶಾಸ್ತ್ರಕ್ಕೆ ಒಪ್ಪಿಕೊಳ್ಳುತ್ತಾನೆ.
ಕೆರಳಿ ಕೆಂಡವಾಗಿರುವ ಜೈದೇವ್
ಆಸ್ತಿ ತಮಗೆ ಸಿಕ್ಕಿಲ್ಲ ಎಂದು ಮತ್ತೊಂದು ಕಡೆ ಜೈದೇವ್ ಕೆರಳಿ ಕೆಂಡವಾಗಿದ್ದಾನೆ. ನಮ್ಮ ತಲೆಯ ಮೇಲೆ ಟವಲ್ ಹಾಕಿ ಇನ್ನೂ ಭೂಮಿಗೆ ಬಾರದಿರುವ ಆ ಮಗುಗೆ ರೆಡ್ ಕಾರ್ಪೆಟ್ ಹಾಸಿ ಅವನು ಕಾಯುತ್ತಿದ್ದಾನೆ ಎನ್ನುವ ಜೈದೇವ್, ಇನ್ನೂ ಹುಟ್ಟದಿರುವ ಆ ಮಗುಗೆ ಇಷ್ಟೊಂದು ಬಿಲ್ಡಪ್ ಬೇಕಾ ಎಂದು ಶಕುಂತಲಾಗೆ ಪ್ರಶ್ನೆ ಕೇಳುತ್ತಾನೆ. ಯಾವುದೇ ಕಾರಣಕ್ಕೂ ಆಸ್ತಿ ಆ ಮಗುಗೆ ಹೋಗಬಾರದು, ಆಸ್ತಿ ಇರಲಿ ಆ ಮಗು ಭೂಮಿಗೆ ಬರಬಾರದು ಎಂದು ಹೇಳುತ್ತಾನೆ. ಆಗ ಶಕುಂತಲಾ ನೀನೇನೂ ತೋಚನೆ ಮಾಡಬೇಡ ಜೈ ನಾನು ಇನ್ನೂ ಬದುಕಿದ್ದೀನಿ ನನ್ನ ಕಣ್ಮುಂದೆಯೇ ನನ್ನ ಮಕ್ಕಳಿಗೆ ಅನ್ಯಾಯವಾಗುವುದಕ್ಕೆ ನಾನು ಬಿಡುವುದಿಲ್ಲ ಎನ್ನುತ್ತಾಳೆ.
ಸದ್ಯ ಶಕುಂತಲಾ ಮತ್ತು ಜೈದೇವ್ ಕಣ್ಣು ಭೂಮಿಕಾ ಮಗನ ಮೇಲೆ ಬಿದ್ದಿದೆ. ಸೀಮಂತ ಸಂಭ್ರಮದಲ್ಲಿರುವ ಗೌತಮ್ ಮತ್ತು ಭೂಮಿಕಾ ಅವರಿಗೆ ಶಕುಂತಲಾ ಮತ್ತು ಜೈದೇವ್ ಕಂಟಕವಾಗುತ್ತಾರಾ ? ಇವರಿಬ್ಬರ ಮುಂದಿನ ಪ್ಲಾನ್ ಏನು ಎನ್ನುವುದನ್ನು ಈಗ ಕಾದು ನೋಡಬೇಕಿದೆ.


Click it and Unblock the Notifications











