Amruthadhaare ; ಇದ್ಯಾಕೋ ಅತಿಯಾಯ್ತು, ಗೌತಮ್-ಭೂಮಿಕಾ 'ಅಮೃತ ಘಳಿಗೆ'- ಹಿಡಿಶಾಪ ಹಾಕಿದ ಪ್ರೇಕ್ಷಕರು
''ಅಮೃತಧಾರೆ'' ಧಾರಾವಾಹಿಯಲ್ಲಿ ತನ್ನ ಮನದರಸಿ ಭೂಮಿಕಾಳನ್ನು ಹುಡುಕುತ್ತಾ ಗೌತಮ್ ಕುಶಾಲನಗರಕ್ಕೆ ಬಂದಿದ್ದಾನೆ. ಆನಂದ್ ಕೂಡ ಗೌತಮ್‌ನ ಜೊತೆಯಾಗಿದ್ದು ಮಾತನಾಡಿಕೊಂಡು ಹೋಗುವ ಸಮಯದಲ್ಲಿ ಗೌತಮ್ ಕಣ್ಣಿಗೆ ಭೂಮಿಕಾ ಬಿದ್ದಿದ್ದಾಳೆ. ಆಟೋದಲ್ಲಿ ಭೂಮಿಕಾಳನ್ನು ಕಂಡು ಅವಕ್ಕಾದ ಗೌತಮ್ ಆಟೋ ಹಿಂದೆ ಓಡಿ ಹೋಗುತ್ತಾನೆ. ಆದರೆ ಭೂಮಿಕಾ ಸಿಗುವುದಿಲ್ಲ. ಆದರೇನಂತೆ ಗೌತಮ್‌ಗೆ ಈಗ ಭೂಮಿಕಾ ಕೆಲಸ ಮಾಡುವ ಜಾಗ ಗೊತ್ತಾಗಿದೆ.
ವಿದ್ಯಾರ್ಥಿನಿ ಬಳಿ ಗೌತಮ್ ಹೂ ಜೊತೆಯಲ್ಲಿ ಪತ್ರವನ್ನು ಭೂಮಿಕಾಗೆ ತಲುಪಿಸಿದ್ದಾನೆ. ಪತ್ರವನ್ನು ಭೂಮಿಕಾ ಓದಲು ತೆರೆದಿದ್ದು, ನಿಮಗೆ ಹೂ ಕೊಡೋ ಧೈರ್ಯ ಯಾರಿಗಿದೆ? ನಾನು, ನಿಮ್ಮ ಗೌತಮ್ ಎಂದು ಪತ್ರದಲ್ಲಿ ಗೌತಮ್ ಬರೆದಿದ್ದಾನೆ. ಪತ್ರದಲ್ಲಿ ಬರೆದ ಸಾಲನ್ನು ಓದಿ ಭೂಮಿಕಾ ಕೂಡ ಖುಷಿಯಾಗಿದ್ದು, ಗೌತಮ್ ಮತ್ತು ಭೂಮಿಕಾ ಮುಖಾಮುಖಿಯಾಗಿದ್ದಾರೆ.

ಈ ಹಿನ್ನೆಲೆ ಐದು ವರ್ಷದ ನಂತರ ಈ ಜೋಡಿ ಒಂದಾಗಲಿದೆ. ಅಮೃತಧಾರೆ ಅಮೃತ ಘಳಿಗೆಗೆ ಸಾಕ್ಷಿಯಾಗಲಿದೆ ಎಂದು ಪ್ರೇಕ್ಷಕರು ಅಂದುಕೊಂಡಿದ್ದರು. ಆದರೆ ಮತ್ತೊಮ್ಮೆ ಅಮೃತಧಾರೆ ಪ್ರೇಕ್ಷಕರಿಗೆ ನಿರಾಸೆ ಮಾಡಿದೆ. ಲೆಕ್ಕಾಚಾರ ತಲೆಕೆಳಗಾಗಿಸಿದೆ.
ಭೂಮಿಕಾಗೆ ಪ್ರಶ್ನೆ ಕೇಳುವ ಗೌತಮ್
ಭೂಮಿಕಾಳನ್ನು ಕಂಡು ಭಾವುಕಗೊಳ್ಳುವ ಗೌತಮ್, ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಾನೆ. ನೀವು ಮಾಡಿದ್ದು ಸರಿ ಅಂತ ನಿಮಗೆ ಈಗಲೂ ಅನಿಸುತ್ತಿದೆಯಾ..? ಒಟ್ಟಿಗೆ ಬದುಕೋಕೆ ಸಾವಿರು ಕಾರಣಗಳಿದ್ದವು ಎಂದು ಹೇಳುತ್ತಾನೆ. ಬೆಳೆದು ನಿಂತ ಮರ ಒಂದೇ ಸಲ ಬೀಳಿಸಿದಂತೆ ಸಂಬಂಧ ಕಡಿದುಕೊಂಡು ಹೋದ್ರಲ್ಲ,
ನನ್ನ ಪರಿಸ್ಥಿತಿ ನೀವು ಅರ್ಥ ಮಾಡಿಕೊಳ್ಳದೇ ಹೋದ್ರಲ್ಲ ಎಂದು ತನ್ನ ಮನದ ನೋವನ್ನು ಹೊರ ಹಾಕುವ ಗೌತಮ್ ಒಂದೇ ಒಂದು ಕ್ಷಣ ನೀವು ನನ್ನ ಜಾಗದಲ್ಲಿ ನಿಂತು ಯೋಚನೆ ಮಾಡಿದ್ದರೆ ಈ ರೀತಿ ಅಪರಿಚಿತರಂತೆ ನಾವು ಈಗ ಭೇಟಿಯಾಗುವ ಪ್ರಮೇಯ ಬರುತ್ತಿರಲಿಲ್ಲ ಎಂದು ಹೇಳುತ್ತಾನೆ.
ಪ್ರೀತಿಸಿದ್ದೇ ತಪ್ಪಾ ?
ಮುಂದುವರೆದು ನಿಮ್ಮ ನೆನಪಲ್ಲಿನಲ್ಲಿಯೇ ನಾನು ಇಲ್ಲಿಯವರೆಗೆ ಜೀವನ ಸವೆಸಿದೀನಿ, ಸಾಯೋದ್ರೋಳಗೆ ನಿಮ್ಮನ್ನು ಒಂದು ಸಲ ಆದರೂ ನೋಡ್ತೀನಾ..? ಇಲ್ಲವಾ..? ಎನ್ನುವುದೇ ನನಗೆ ಯೋಚನೆ ಇತ್ತು ಎಂದು ಹೇಳುವ ಗೌತಮ್ ಯಾವ ತಪ್ಪಿಗೆ ನನಗೆ ನೀವು ಈ ಶಿಕ್ಷೆ ನೀಡಿದ್ದೀರಾ..? ನಿಮ್ಮನ್ನು ನಾನು ಅತಿಯಾಗಿ ಪ್ರೀತಿಸಿದ್ದೇ ತಪ್ಪಾ...? ಭೂಮಿಕಾ ಬಳಿ ಗೌತಮ್ ಕೇಳುತ್ತಾನೆ. ಕಣ್ಣೀರು ಹಾಕುತ್ತಾನೆ.
ಕರಗದ ಭೂಮಿಕಾ
ಗೌತಮ್ ಮಾತುಗಳಿಗೆ ಕಣ್ಣೀರು ಹಾಕುವ ಭೂಮಿಕಾಗೆ ಶಕುಂತಲಾ ಆಡಿದ ಮಾತುಗಳು ನೆನಪಾಗುತ್ತಾವೆ. ಇಡೀ ಕುಟುಂಬ ನಾಶ ಮಾಡ್ತೀನಿ ಎಂದು ಶಕುಂತಲಾ ನೀಡಿದ್ದ ಎಚ್ಚರಿಕೆಯಿಂದ ಮತ್ತೆ ಹೆದರುವ ಭೂಮಿಕಾ, ಗೌತಮ್ ಪ್ರೀತಿಯನ್ನು ಎಡಗಾಲಿನಲ್ಲಿ ಒದೆಯುವ ನಿರ್ಧಾರ ಮಾಡುತ್ತಾಳೆ. ಭಾರವಾದ ಮನಸ್ಸಿನಿಂದಲೇ ಕಣ್ಣೀರು ಹಾಕುತ್ತಾ ನನ್ನನ್ನು ಪ್ರೀತಿ ಮಾಡ್ತೀನಿ ಅಂತ ಹೇಳ್ತೀರಲ್ಲ. ಆದರೆ ನಿಮಗೆ ನಿಮ್ಮ ಪ್ರೀತಿ ಮೇಲೆ ನಂಬಿಕೆ ಇರಲಿಲ್ವಾ ಎಂದು ಕೇಳುತ್ತಾಳೆ. ನೀವು ನನಗೆ ಪ್ರೀತಿಯಿಂದ ಎಲ್ಲವೂ ಹೇಳಬಹುದಿತ್ತಲ್ವಾ ಎನ್ನುತ್ತಾಳೆ. ಆದರೆ ನೀವು ಹಾಗೇ ಮಾಡಲಿಲ್ಲ. ನೀವು ನನಗೆ ಮೋಸ ಮಾಡಿದ್ರೀ ಎನ್ನುವ ಭೂಮಿಕಾ ದ್ರೋಹ ಮಾಡಿದ್ರೀ ಎಂದು ಹೇಳುತ್ತಾಳೆ.

ಭೂಮಿಕಾ ಮಾತು ಕೇಳಿ ಇನ್ನೂ ನೊಂದುಕೊಳ್ಳುವ ಗೌತಮ್ ಮನಸಿನಲ್ಲಿ ಯಾಕೆ ಇಷ್ಟು ಕಹಿ ತುಂಬಿಕೊಂಡಿದ್ದೀರಾ ಭೂಮಿಕಾ ನಾನು ನಿಮಗೆ ದ್ರೋಹ ಮಾಡಿಲ್ಲ ಎಂದು ಹೇಳುತ್ತಾನೆ. ಆದರೂ ಕೂಡ ಕೇಳಲು ಒಪ್ಪದ ಭೂಮಿಕಾ ಕಣ್ಣೀರು ಹಾಕುತ್ತಲೇ ಹೌದು ಕಹಿ ತುಂಬಿಕೊಂಡಿದ್ದೀನಿ ನಿಮ್ಮ ವಿಷಯದಲ್ಲಿ ನನ್ನ ಮನಸ್ಸು ಮುರಿದು ಹೋಗಿದೆ. ಈಗ ಉಳಿದಿರೋದು ದ್ವೇಷ ಮಾತ್ರ. ನಿಮ್ಮನ್ನು ಬಿಟ್ಟು ನಾನು ತುಂಬ ಮುಂದೆ ಬಂದಿದ್ದೀನಿ. ನಾನು ನನ್ನ ಮಗನನ್ನು ಕರೆದುಕೊಂಡು ತುಂಬ ದೂರ ಬಂದಿದ್ದೀನಿ. ನಮ್ಮಿಂದ ದೂರ ಹೋಗಿ, ಮತ್ತೆ ಭೇಟಿ ಮಾಡುವ ಪ್ರಯತ್ನ ಮಾಡಬೇಡಿ ಎಂದು ಹೇಳುತ್ತಾಳೆ. ಗೌತಮ್ ನೀಡಿದ್ದ ಗುಲಾಬಿ ಹೂಗಳನ್ನು ನೆಲಕ್ಕೆ ಬಿಸಾಕಿ ಹೊರಟು ಹೋಗುತ್ತಾಳೆ.
ಸದ್ಯ ಅಮೃತ ಘಳಿಗೆಯ ಈ ಎಪಿಸೋಡ್ ಕಂಡು ನಿರಾಸೆಗೊಂಡಿರುವ ಅನೇಕ ಪ್ರೇಕ್ಷಕರು, ಹಿಡಿಶಾಪ ಹಾಕುತ್ತಿದ್ದಾರೆ. ಇದ್ಯಾಕೋ ಅತಿಯಾಯ್ತು. ಭೂಮಿಕಾ ಇಷ್ಟೊಂದು ಹಠ ಮಾಡಬಾರದಿತ್ತು. ಇಬ್ಬರು ಒಂದಾಗಬೇಕಿತ್ತು ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಡುಮ್ಮಾ ಸಾರ್ ಅವರನ್ನು ನೋಡಲು ಆಗುತ್ತಿಲ್ಲ ಎಂದೆಲ್ಲಾ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.


Click it and Unblock the Notifications











