Amruthadhaare ; ಗೌತಮ್‌ಗೆ ಸಿಕ್ಕಾಯ್ತು ಮಗನ ಸಿಹಿ ಅಪ್ಪುಗೆ, ಸಿಗಬೇಕಿದೆ ಈಗ ಭೂಮಿಕಾ ಒಪ್ಪಿಗೆ..!
''ಅಮೃತಧಾರೆ'' ಧಾರಾವಾಹಿಯಲ್ಲಿ ಗೌತಮ್ ಪ್ರೀತಿಯನ್ನು ಭೂಮಿಕಾ ಮತ್ತೆ ತಿರಸ್ಕರಿಸಿದ್ದಾಳೆ. ಮನಸಿನಲ್ಲಿ ಯಾಕೆ ಇಷ್ಟು ಕಹಿ ತುಂಬಿಕೊಂಡಿದ್ದೀರಾ ಭೂಮಿಕಾ ನಾನು ನಿಮಗೆ ದ್ರೋಹ ಮಾಡಿಲ್ಲ ಎಂದು ಗೌತಮ್ ಹೇಳಿದರೂ ಕೂಡ ಕೇಳಲು ಒಪ್ಪದ ಭೂಮಿಕಾ ಕಣ್ಣೀರು ಹಾಕುತ್ತಲೇ ಹೌದು ಕಹಿ ತುಂಬಿಕೊಂಡಿದ್ದೀನಿ ನಿಮ್ಮ ವಿಷಯದಲ್ಲಿ ನನ್ನ ಮನಸ್ಸು ಮುರಿದು ಹೋಗಿದೆ. ಈಗ ಉಳಿದಿರೋದು ದ್ವೇಷ ಮಾತ್ರ.
ನಿಮ್ಮನ್ನು ಬಿಟ್ಟು ನಾನು ತುಂಬ ಮುಂದೆ ಬಂದಿದ್ದೀನಿ. ನಾನು ನನ್ನ ಮಗನನ್ನು ಕರೆದುಕೊಂಡು ತುಂಬ ದೂರ ಬಂದಿದ್ದೀನಿ. ನಮ್ಮಿಂದ ದೂರ ಹೋಗಿ, ಮತ್ತೆ ಭೇಟಿ ಮಾಡುವ ಪ್ರಯತ್ನ ಮಾಡಬೇಡಿ ಎಂದು ಹೇಳಿದ್ದಾಳೆ. ಗೌತಮ್ ನೀಡಿದ್ದ ಗುಲಾಬಿ ಹೂಗಳನ್ನು ನೆಲಕ್ಕೆ ಬಿಸಾಕಿ ಹೋಗಿದ್ದಾಳೆ.

ಮಗನಿಗಾಗಿ ಕಪೌಂಡ್ ಹಾರಿದ ಗೌತಮ್
ಭೂಮಿಕಾಳ ಈ ನಡೆಯಿಂದ ಗೌತಮ್ ನೊಂದುಕೊಂಡಿದ್ದು ಆನಂದ್ ಎದುರು ತನ್ನ ನೋವು ಹಂಚಿಕೊಂಡಿದ್ದಾನೆ. ಹಿಂದೆ ಬರದಂತೆ ಎಚ್ಚರಿಕೆ ನೀಡಿದ್ದಾರೆ. ಭೂಮಿಕಾಳನ್ನೇನೋ ನೋಡಿದೆ ಆದರೆ ಮಗನನ್ನು ನೋಡಲು ಆಗಲಿಲ್ಲವಲ್ಲಾ ಎಂದು ಕೊರಗುತ್ತಾನೆ. ಆಗ ಆನಂದ್ ಕದ್ದು ಮುಚ್ಚಿ ಮನೆಯ ಕಪೌಂಡ್ ಹಾರಿ ಮಗು ಮುಖ ನೋಡುವ ಐಡಿಯಾ ನೀಡಿದ್ದು ಈ ಐಡಿಯಾ ಕೂಡ ಫ್ಲಾಪ್ ಆಗಿದೆ.
ಅಪ್ಪು ಸಹಾಯ ಕೇಳಿದ ಗೌತಮ್, ಷರತ್ತು ಹಾಕಿದ ಆಕಾಶ್
ಸದ್ಯ ತನ್ನ ಮಗ ಆಕಾಶ್ ಕಣ್ಣೇದುರು ಇದ್ದರೂ ಕೂಡ ಸತ್ಯ ಅರಿಯದ ಗೌತಮ್ ತನ್ನ ಮಗನನ್ನು ಹುಡುಕುತ್ತಾ ಆನಂದ್ ಜೊತೆ ಶಾಲೆಗೆ ಬಂದಿದ್ದಾನೆ. ಆಗ ಆಕಾಶ್ ಮತ್ತೆ ಎದುರಾಗಿದ್ದು ಮಗನನ್ನು ಹುಡುಕಲು ಸಹಾಯ ಮಾಡುವಂತೆ ತನ್ನ ಮಗನ ಬಳಿ ಮನವಿ ಮಾಡಿದ್ದಾನೆ.

ಇನ್ನೊಂದು ಕಡೆ ಪ್ರಿನ್ಸಿಪಾಲ್ ಪೋಷಕರನ್ನು ಕರೆತರುವಂತೆ ಆಕಾಶ್‌ಗೆ ಹೇಳಿದ ಹಿನ್ನೆಲೆ ನಾನು ನಿಮಗೆ ಸಹಾಯ ಮಾಡುತ್ತೇನೆ ಆದರೆ ನೀವು ನನ್ನ ತಂದೆಯಂತೆ ಇವತ್ತು ಆಕ್ಟ್ ಮಾಡಬೇಕೆನ್ನುವ ಷರತ್ತು ಹಾಕಿದ್ದಾನೆ. ಇದಕ್ಕೆ ಆರಂಭದಲ್ಲಿ ಹಿಂದೇಟು ಹಾಕುವ ಗೌತಮ್ ಆ ನಂತರ ಒಪ್ಪಿಕೊಂಡಿದ್ದು ಬಟ್ಟೆ ಬದಲಿಸಿಕೊಂಡು ಹಳೆಯ ಗೌತಮ್ ದಿವಾನ್‌ನಂತೆ ಸೂಟು ಬೂಟು ಹಾಕಿಕೊಂಡು ಬಂದಿದ್ದಾನೆ.
ಗೌತಮ್‌ಗೆ ಗೊತ್ತಾಯ್ತು ಮಗನ ಸತ್ಯ
ಇದೇ ಸಮಯದಲ್ಲಿ ಗೌತಮ್ ಜೊತೆ ನಡೆದುಕೊಂಡು ಹೋಗುವಾಗ ಅಪ್ಪು ಗಾಬರಿ ಬಿದ್ದಿದ್ದು ಗೌತಮ್ ಯಾಕೋ ಏನಾಯ್ತು ಎಂದು ಕೇಳುತ್ತಾನೆ. ಆಗ ತನ್ನ ತಾಯಿ ಭೂಮಿಕಾಳನ್ನು ಅಪ್ಪು ತೋರಿಸಿದ್ದು ಭೂಮಿಕಾಳನ್ನು ನೋಡಿ ಗೌತಮ್ ಶಾಕ್ ಆಗಿದ್ದಾನೆ. ನಿಮ್ಮ ತಾಯಿ ಇವ್ರೇನಾ ಎಂದು ತನ್ನ ಮಗನ ಬಳಿ ಕೇಳಿದ್ದಾನೆ. ಆಗ ನೂರಕ್ಕೆ ನೂರು ಅವರೇ ನನ್ನ ರಿಯಲ್ ಅಮ್ಮ ಎಂದು ಆಕಾಶ್ ಹೇಳಿದ್ದು ಈ ವಿಚಾರ ಕೇಳಿ ಗೌತಮ್ ಭಾವುಕಗೊಂಡಿದ್ದಾನೆ. ತನ್ನ ಮಗನನ್ನು ಅಪ್ಪಿಕೊಂಡಿದ್ದಾನೆ.
ಸದ್ಯ ಗೌತಮ್‌ಗೆ ತನ್ನ ಮಗ ಯಾರೆಂದು ಗೊತ್ತಾಗಿದ್ದು ಗೌತಮ್ ತನ್ನ ತಂದೆ ಎಂದು ಆಕಾಶ್‌ಗೆ ಯಾವತ್ತು ಗೊತ್ತಾಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ. ಗೌತಮ್ ಪ್ರೀತಿಯನ್ನು ಈಗ ಭೂಮಿಕಾ ಅರ್ಥ ಮಾಡಿಕೊಂಡು ಒಪ್ಪಬೇಕಿದೆ.
ಖುಷಿಯಾದ ಪ್ರೇಕ್ಷಕರು
ಗೌತಮ್ ಮತ್ತು ಭೂಮಿಕಾ ಒಂದಾಗುವ ಕಾಲ ಯಾವತ್ತು ಬರುತ್ತೆ ಎನ್ನುವುದು ಸದ್ಯ ಗೊತ್ತಿಲ್ಲವಾದರು ಗೌತಮ್‌ಗೆ ಮಗ ಇಷ್ಟು ಬೇಗ ಸಿಕ್ಕಿದ್ದಕ್ಕೆ ಹಲವು ಪ್ರೇಕ್ಷಕರು ಅಚ್ಚರಿಗೊಂಡಿದ್ದಾರೆ. ಧಾರಾವಾಹಿ ಸಾಗುತ್ತಿರುವ ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಬ್ಬಾ ಈ ವಾರದ ಕಿಚ್ಚನ ಚಪ್ಪಾಳೆ ನಮ್ಮ ಅಮೃತಧಾರೆ ಸೀರಿಯಲ್ ಡೈರೆಕ್ಟರ್ ಗೆ!!! ಕಥೆ ಅಂತೂ ತುಂಬಾ ಚೆನ್ನಾಗಿ ಮೂಡಿ ಬರ್ತಿದೆ ಎಂದು ಒಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರೆ ಇದೇ ಬೇಕಾಗಿದ್ದು, ಸೂಪರ್ ಖುಷಿ ಅಯ್ತು, ಎಂದೆಲ್ಲಾ ಹಲವರು ಕಾಮೆಂಟ್ ಮಾಡಿದ್ದಾರೆ. ಇದು ಕನಸಾಗದಿದ್ದರೆ ಸಾಕು ಎಂದು ಹೇಳಿದ್ದಾರೆ.


Click it and Unblock the Notifications











